ಬುಧವಾರ, ಏಪ್ರಿಲ್ 21, 2021
25 °C

ಕೇಬಲ್ ಟಿವಿ, ಡಿಟಿಎಚ್ನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ: ಗೃಹ ಸಚಿವಾಲಯ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭದ್ರತೆ ದೃಷ್ಟಿಯಿಂದ ಕೇಬಲ್ ಟಿವಿ, ದೂರಸಂಪರ್ಕ ಮತ್ತು `ಡಿಟಿಎಚ್~ ಸೇವೆಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಪ್ರಸ್ತಾವಕ್ಕೆ ಗೃಹ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ.

ಕೈಗಾರಿಕಾ ನೀತಿ ಮತ್ತು ಉತ್ತೇಜನ ಮಂಡಳಿ(ಡಿಐಪಿಪಿ) ಉಪಗ್ರಹದಿಂದ ನೇರ ಮನೆಗೆ(ಡಿಟಿಎಚ್) ಮತ್ತು ಕೇಬಲ್ ಟಿವಿ ಕ್ಷೇತ್ರದಲ್ಲಿ ಶೇ 74ರಷ್ಟು `ಎಫ್‌ಡಿಐ~ ಹೂಡಿಕೆಗೆ ಶಿಫಾರಸು ಮಾಡಿದೆ. ಆದರೆ, ಈ ಎರಡೂ ಸಚಿವಾಲಯಗಳು ಇದಕ್ಕೆ ಸಂಬಂಧಿಸಿದಂತೆ ಆಕ್ಷೇಪ ಸಲ್ಲಿಸಿವೆ. ಹೂಡಿಕೆದಾರರ ಅಭಿಪ್ರಾಯ ಸಂಗ್ರಹಿಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ಭಾನುವಾರ ತಿಳಿಸಿದರು.

`ಜಾಗತಿಕ ಮಾಧ್ಯಮಗಳ ಒತ್ತಡ ಎದುರಿಸುವುದೇ ದೊಡ್ಡ ಸವಾಲು. ಇವು ದೇಶದ ನೀತಿ ನಿರೂಪಣೆ ಮೇಲೂ ಪರಿಣಾಮ ಬೀರಬಲ್ಲವು~ ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ಹಣಕಾಸು ಮತ್ತು ವಿದೇಶಾಂಗ ಸಚಿವಾಲಯ ಸೇರಿದಂತೆ ಹಲವು ಪ್ರಮುಖ ಸಚಿವಾಲಯಗಳು ಈ ಪ್ರಸ್ತಾವಕ್ಕೆ ಈಗಾಗಲೇ ಒಪ್ಪಿಗೆ ನೀಡಿವೆ. ಸದ್ಯ ಕೇಬಲ್ ಟಿವಿ ಮತ್ತು `ಡಿಟಿಎಚ್~ ಸೇವೆಗಳಲ್ಲಿ ಶೇ 49ರಷ್ಟು `ಎಫ್‌ಡಿಐ~ಗೆ ಅವಕಾಶ ಇದೆ. 2010ರಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ಪ್ರಸಾರ ಸೇವೆಗಳಲ್ಲಿ `ಎಫ್‌ಡಿಐ~ ಮಿತಿಯನ್ನು ಶೇ 74ಕ್ಕೆ ಹೆಚ್ಚಿಸಬೇಕು ಎಂಬ ಪ್ರಸ್ತಾವ ಸಲ್ಲಿಸಿತ್ತು.

ಟಿವಿ ಸುದ್ದಿವಾಹಿನಿಗಳು, ಎಫ್‌ಎಂ ರೇಡಿಯೊ ಕ್ಷೇತ್ರದಲ್ಲಿನ `ಎಫ್‌ಡಿಐ~ ಮಿತಿಯನ್ನ ಶೇ 24ರಷ್ಟಕ್ಕೆ `ಡಿಐಪಿಪಿ~ ನಿಗದಿ ಮಾಡಿದೆ.ಒಂದು ಅಂದಾಜಿನಂತೆ ದೇಶದಲ್ಲಿ 10.60 ಕೋಟಿ ಕುಟುಂಬಗಳು ಕೇಬಲ್‌ಮತ್ತು ಉಪಗ್ರಹ ಟಿವಿ ಸಂಪರ್ಕ ಹೊಂದಿವೆ. 2.60 ಕೋಟಿ ಜನರು `ಡಿಟಿಎಚ್~ ಮತ್ತು 8ಕೋಟಿ ಜನರು ಕೇಬಲ್ ಟಿವಿ ಬಳಸುತ್ತಿದ್ದಾರೆ.

ರಫ್ತು ಕ್ಷೇತ್ರದ `ಡಿಪ್ಲೊಮಾ~

ನವದೆಹಲಿ(ಪಿಟಿಐ): ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟ(ಎಫ್‌ಐಇಒ), ವಿದೇಶ ವ್ಯಾಪಾರ ಶಿಕ್ಷಣದಲ್ಲಿ ಆರು ತಿಂಗಳ ಡಿಪ್ಲೊಮಾ ಆರಂಭಿಸಿದೆ.

ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಜತೆಗೂಡಿ ಹೊಸ ಕೋರ್ಸ್ ಆರಂಭಿಸಲಾಗಿದ್ದು, ಇದು ಯುವ ಉದ್ಯಮಿಗಳು ವಿದೇಶ ವ್ಯಾಪಾರದಲ್ಲಿ ಹೆಚ್ಚಿನ ದಕ್ಷತೆ ಪಡೆಯಲು ನೆರವಾಗಲಿದೆ ಎಂದು ಕೇಂದ್ರ ವಿದೇಶ ವ್ಯಾಪಾರ ಇಲಾಖೆಯ ಮಹಾ ನಿರ್ದೇಶಕ ಎ.ಕೆ.ಪೂಜಾರಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.