ಮಂಗಳವಾರ, ನವೆಂಬರ್ 12, 2019
28 °C
ಭಾಗಮಂಡಲ: ಜೇನು ಸಾಕಾಣಿಕೆಗೆ ನೆರೆರಾಜ್ಯದ ರೈತರ ಪೈಪೋಟಿ

ಕೇರಳ ಕೃಷಿಕರಿಗೆ ಸಿಹಿ; ಕೊಡಗಿನವರಿಗೆ ಕಹಿ

Published:
Updated:

ನಾಪೋಕ್ಲು: ಕೊಡಗು ಜಿಲ್ಲೆಯ ಜೇನು ನಾಡಿನೆಲ್ಲೆಡೆ ಪ್ರಸಿದ್ಧಿ ಪಡೆದಿದೆ. ಸಮೀಪದ ಭಾಗಮಂಡಲ ವ್ಯಾಪ್ತಿಯಲ್ಲಿ ತಯಾರಾಗುವ ಜೇನಂತೂ `ಸವಿಜೇನು' ಎಂದೇ ಕರೆಯಲಾಗುತ್ತದೆ. ಆದರೆ, ಈಗ ಜೇನು ಕೃಷಿಕರು ಹಲವಾರು ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದ್ದಾರೆ.ಭಾಗಮಂಡಲ ವ್ಯಾಪ್ತಿಯಲ್ಲಿ ಜೇನು ಸಾಕಾಣಿಕೆಗೆ ವಿಫುಲ ಅವಕಾಶಗಳಿವೆ. ಅಂತೆಯೇ ಅಧಿಕ ಸಂಖ್ಯೆಯ ಕೃಷಿಕರು ಜೇನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನೆರೆಯ ಕೇರಳದಿಂದ ಕೃಷಿಕರು ಜೇನು ಪೆಟ್ಟಿಗೆಗಳನ್ನು ಭಾಗಮಂಡಲ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ತಂದಿರಿಸಿ, ಜೇನು ಸಂಗ್ರಹಿಸಿ ಕೇರಳಕ್ಕೆ ಕೊಂಡೊಯ್ಯುತ್ತಿ ರುವುದು ಇಲ್ಲಿನ ಬೆಳೆಗಾರರಿಗೆ ಕಹಿಯಾಗಿ ಪರಿಣಮಿಸಿದೆ.ಜೇನುಕೃಷಿಯ ಇತಿಹಾಸ

ಭಾಗಮಂಡಲ ವ್ಯಾಪ್ತಿಯಲ್ಲಿ 1990ರವರೆಗೆ ಜೇನುಕೃಷಿ ಪ್ರವರ್ಧಮಾನದ ಸ್ಥಿತಿಯಲ್ಲಿತ್ತು. 1990ರಲ್ಲಿ ಮೊದಲಬಾರಿಗೆ ಕೇರಳದಿಂದ ಮಲ್ಲಿಫೆರಸ್ ಎಂಬ ಸಂತತಿಯ ಜೇನು ನೊಣವನ್ನು ತಂದು ಸಾಕಾಣಿಕೆ ಮಾಡಲಾಯಿತು. ಬಳಿಕ ಸೆರಾನ್ ಸಂತತಿಯ ಜೇನು ನೊಣಗಳನ್ನು ತಂದಿರಿಸಲಾಯಿತು. ನಂತರದ ದಿನಗಳಲ್ಲಿ ಸ್ಥಳೀಯ ಜೇನುನೊಣಗಳಿಗೆ ತಾಯ್ ಸಾಕ್ ಬ್ರೂಡ್ ಕಾಯಿಲೆ ಬಂದು ಕೊಡಗಿನ ಜೇನು ಕೃಷಿ ಅವನತಿಯತ್ತ ಸಾಗಿತು.ಇದೀಗ ಜೇನು ಕೃಷಿ ಪುನಃಶ್ಚೇತನಗೊಳ್ಳುತ್ತಿದೆ. ಕೃಷಿಕರು ಖುಷಿಪಡುವ ಹಂತದಲ್ಲಿ ಕೇರಳದಿಂದ ಬೆಳೆಗಾರರು ಜೇನು ಪೆಟ್ಟಿಗೆಗಳನ್ನು ಭಾಗಮಂಡಲ ವ್ಯಾಪ್ತಿಯಲ್ಲಿ ತಂದಿರಿಸುತ್ತಿದ್ದಾರೆ. ಇಲ್ಲಿನ ತೋಟದ ಮಾಲೀಕರ ಅನುಮತಿ ಪಡೆದು ಒಂದೊಂದು ತೋಟಗಳಲ್ಲಿ 100 ರಿಂದ 150 ಪೆಟ್ಟಿಗೆಗಳನ್ನು ಇರಿಸಲಾಗುತ್ತಿದೆ. ಈ ಅವಧಿಯಲ್ಲಿ ಮರ- ಗಿಡಗಳಲ್ಲಿ ಹೂಗಳು ಅರಳುತ್ತಿದ್ದು, ಪರಾಗಸ್ಪರ್ಶಕ್ಕೆ ಸೂಕ್ತ ಸಮಯವಾಗಿದೆ.

ಆದ್ದರಿಂದ ಕೇರಳದ ದೊಡ್ಡ ಜೇನು ನೊಣಗಳಿಂದ ಅಧಿಕ ಪ್ರಮಾಣದ ಜೇನು ಸಂಗ್ರಹಗೊಳ್ಳುತ್ತಿದೆ. ಕೇರಳದಲ್ಲಿ ರಬ್ಬರ್ ಮರದ ಹೂಗಳಿಂದ ಮಾತ್ರ ಜೇನು ಉತ್ಪತ್ತಿಯಾಗುತ್ತಿದ್ದು, ಅದಕ್ಕೆ ಬೇಡಿಕೆ ಇಲ್ಲದ ಕಾರಣ ಸಾಕಷ್ಟು ನೈಸರ್ಗಿಕ ಹೂಗಳು ಲಭ್ಯವಿರುವ ಭಾಗಮಂಡಲ ವ್ಯಾಪ್ತಿಗೆ ಲಗ್ಗೆ ಇಡುತ್ತಿದ್ದಾರೆ ಎಂಬುದು ಇಲ್ಲಿನ ಕೃಷಿಕರ ಆರೋಪ.ಕೊಡಗಿನ ಜೇನಿಗೆ ಭಾರೀ ಬೇಡಿಕೆ

ಇಲ್ಲಿ ಉತ್ಪತ್ತಿಯಾಗುವ ಜೇನನ್ನು `ಕೊಡಗಿನ ಜೇನು' ಎಂದೇ ಮಾರಾಟ ಮಾಡಲಾಗುತ್ತಿದೆ. ಈಚೆಗೆ ಕಲಬೆರಕೆ ಕೂಡ ಹೆಚ್ಚಾಗಿದೆ. ಆದರೂ ಕೊಡಗಿನ ಜೇನಿಗೆ ಎಲ್ಲೆಡೆ ಬೇಡಿಕೆ ಇದೆ.ಭಾಗಮಂಡಲ ವ್ಯಾಪ್ತಿಯ ಚೇರಂಗಾಲ, ತಣ್ಣಿಮಾನಿ, ತಾವೂರು ಮೊದಲಾದ ಗ್ರಾಮಗಳಲ್ಲಿ ಕೇರಳದ ಜೇನು ಪೆಟ್ಟಿಗೆಗಳು ಕಂಡು ಬರುತ್ತಿವೆ. ಹಿಂದೆ ಒಂದು ಪೆಟ್ಟಿಗೆಯಿಂದ 25 ಕೆ.ಜಿ.ಗಿಂತಲೂ ಅಧಿಕ ಜೇನು ಸಿಗುತ್ತಿತ್ತು. ಇದೀಗ ಆ ಪ್ರಮಾಣ 3 ಕೆ.ಜಿ.ಗೆ ಇಳಿದಿದೆ ಎನ್ನುತ್ತಾರೆ ಜೇನು ಕೃಷಿಕರು.ಸರ್ಕಾರದ ಸಹಾಯಧನದೊಂದಿಗೆ ಅನುದಾನ ಪಡೆದು, ಬ್ಯಾಂಕ್‌ಗಳಿಂದ ಸಾಲ ಪಡೆದು ರೈತರು ಜೇನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಇದೀಗ ಕೇರಳದ ಜೇನುನೊಣ ಹಾಗೂ ಪೆಟ್ಟಿಗೆಗಳ ಮೂಲಕ ಜೇನು ಕೃಷಿಗೆ ಲಗ್ಗೆ ಇಟ್ಟಿರುವುದರಿಂದ ಜೇನು ಕೃಷಿಕರು ಕಂಗಾಲಾಗಿದ್ದು, ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ರೈತರ ಆಗ್ರಹ.

ಪ್ರತಿಕ್ರಿಯಿಸಿ (+)