ಕೇರಳ ಮೀನುಗಾರರ ಹತ್ಯೆ ಪ್ರಕರಣ: ಹಡಗಿನ ಭದ್ರತಾ ಸಿಬ್ಬಂದಿ ಬಂಧನ

7

ಕೇರಳ ಮೀನುಗಾರರ ಹತ್ಯೆ ಪ್ರಕರಣ: ಹಡಗಿನ ಭದ್ರತಾ ಸಿಬ್ಬಂದಿ ಬಂಧನ

Published:
Updated:

ಕೊಚ್ಚಿ/ನವದೆಹಲಿ (ಪಿಟಿಐ): ಕೇರಳ ಸಮುದ್ರ ತೀರದಲ್ಲಿ ಗುಂಡು ಹಾರಿಸಿ ಮೀನುಗಾರರಿಬ್ಬರನ್ನು ಹತ್ಯೆ ಮಾಡಿದ ಇಟಲಿ ಸರಕು ಸಾಗಣೆ ಹಡಗಿನ ಇಬ್ಬರು ಭದ್ರತಾ ಸಿಬ್ಬಂದಿಯನ್ನು ನಾಲ್ಕು ದಿನಗಳ ತೀವ್ರ ಸಂಧಾನ ಪ್ರಕ್ರಿಯೆ ನಂತರ ಕೊಚ್ಚಿಯಲ್ಲಿ ಭಾನುವಾರ ಬಂಧಿಸಿ, ಕೊಲೆ ಮೊಕದ್ದಮೆ ದಾಖಲಿಸಲಾಯಿತು.

ಈ ಪ್ರಕರಣದ ಹಿನ್ನೆಲೆಯಲ್ಲಿ ಇಟಲಿಯಿಂದ ಆಗಮಿಸಿರುವ ತಂಡವೊಂದು ನವದೆಹಲಿಯಲ್ಲಿ ವಿದೇಶಾಂಗ ವ್ಯವಹಾರ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿತು. ಇಟಲಿಯ ಕಾನೂನು ಮತ್ತು ವಿದೇಶಾಂಗ ಇಲಾಖೆ ಅಧಿಕಾರಿಗಳು ತಂಡದಲ್ಲಿದ್ದರು.

ಮತ್ತೊಂದೆಡೆ ರಾಜತಾಂತ್ರಿಕ ಸ್ತರದಲ್ಲೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ರಾಷ್ಟ್ರದ ಕಾನೂನು ತನ್ನದೇ ಕ್ರಮವನ್ನು ಕೈಗೊಳ್ಳಲಿದ್ದು ಇಟಲಿ ಅದಕ್ಕೆ ಸಂಪೂರ್ಣ ಸಹಕರಿಸಲಿದೆ ಎಂಬ ವಿಶ್ವಾಸ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ವ್ಯಕ್ತಪಡಿಸಿದ್ದಾರೆ.

`ಎನ್‌ರಿಕಾ ಲೆಕ್ಸೀ~ ಹಡಗಿನಲ್ಲಿದ್ದ ಇಟಲಿಯ ನೌಕಾಪಡೆಗೆ ಸೇರಿದ 6 ಭದ್ರತಾ ಸಿಬ್ಬಂದಿ ಪೈಕಿ ಗುಂಡು ಹಾರಿಸಿದ ಲ್ಯಾಟೊರ್ ಮ್ಯಾಸಿಮಿಲಿಯಾನೊ ಮತ್ತು ಸಲ್ವಟೋರ್ ಗಿರೊನೆ ಭಾನುವಾರ ಸಂಜೆ ಬಂಧನಕ್ಕೆ ಒಳಗಾದವರು. ಬಂಧಿತರ ವಿರುದ್ಧ ಕೊಲೆ ಮೊಕದ್ದಮೆ ದಾಖಲಾಗಿದ್ದು, ತನಿಖೆಗಾಗಿ ವೆಲಿಂಗ್ಟನ್ ದ್ವೀಪದ ಬಳಿಯ ಸಿಐಎಸ್‌ಎಫ್ ಅತಿಥಿ ಗೃಹಕ್ಕೆ ಕರೆದುಕೊಂಡು ಹೋಗಿರುವುದಾಗಿ ಮೂಲಗಳು ತಿಳಿಸಿವೆ.

ಹಡಗಿನಲ್ಲಿದ್ದ ಆರೋಪಿಗಳನ್ನು ದಡಕ್ಕೆ ಕರೆದುಕೊಂಡ ಬಂದ ಸಂದರ್ಭದಲ್ಲಿ ಎರ್ನಾಕುಲಂ ವಲಯದ ಐಜಿಪಿ ಕೆ.ಪದ್ಮಕುಮಾರ್, ಕೊಚ್ಚಿ ಪೊಲೀಸ್ ಆಯುಕ್ತ ಎಂ.ಆರ್.ಅಜಿತ್ ಕುಮಾರ್, ಕೊಲ್ಲಂ ಪೊಲೀಸ್ ವರಿಷ್ಠಾಧಿಕಾರಿ ಸ್ಯಾಮ್ ಕ್ರಿಸ್ಟಿ ಡೇನಿಯಲ್, ಸಹಾಯಕ ಆಯುಕ್ತ ಎಂ.ಎನ್.ರಮೇಶ್, ಮುಂಬೈನಲ್ಲಿ ಇಟಲಿಯ ಕಾನ್ಸುಲ್ ಜನರಲ್ ಆಗಿರುವ ಗಿಯಾನ್ ಪಾಒಲೊ ಕಟಿಲೊ ಮತ್ತಿತರರು ಇದ್ದರು.

ಹಡಗಿನಲ್ಲಿ ಇದ್ದ ದಾಖಲೆಗಳನ್ನು ಪರಿಶೀಲಿಸಿ 20ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಸಿಬ್ಬಂದಿ ಹಾಗೂ ಕ್ಯಾಪ್ಟನ್ ಹೇಳಿಕೆಗಳನ್ನು ದಾಖಲಿಸಿಕೊಂಡಿರುವುದಾಗಿ ಐಜಿಪಿ ಪದ್ಮಕುಮಾರ್ ತಿಳಿಸಿದ್ದಾರೆ.

ಈ ಮುನ್ನ ಹಡಗಿನ ಮೇಲ್ವಿಚಾರಕರು ಇಬ್ಬರು ಭದ್ರತಾ ಸಿಬ್ಬಂದಿಯನ್ನು ಭಾನುವಾರ ಬೆಳಿಗ್ಗೆ 8ರ ವೇಳೆಗೆ ಪೊಲೀಸರ ವಶಕ್ಕೆ ನೀಡುವುದಾಗಿ ಮಾತು ನೀಡಿದ್ದರು. ಆದರೆ ಅವರನ್ನು ಅದಕ್ಕಿಂತ ಎಂಟು ಗಂಟೆ ತಡವಾಗಿ ಅಂದರೆ ಸಂಜೆ 4ಕ್ಕೆ ಪೊಲೀಸರಿಗೆ ಒಪ್ಪಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry