ಶನಿವಾರ, ಏಪ್ರಿಲ್ 17, 2021
32 °C

ಕೇರಳ ವಿಧಾನಸಭಾ ಚುನಾವಣೆ: ರಾಜಧಾನಿ ಮೌನ, ಬದಲಾವಣೆಯ ಮೋಡ!

ಪ್ರಜಾವಾಣಿ ವಾರ್ತೆ/ ಬಾಲಕೃಷ್ಣ ಪುತ್ತಿಗೆ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಕೇರಳದ ರಾಜಧಾನಿಯಲ್ಲಿ ಶನಿವಾರ ರಾತ್ರಿ ಹದವಾದ ಮಳೆ ಸುರಿಯಿತು. ಆರ್ಯ ನಗರಿ ತಣ್ಣಗಾಯಿತು. ಚುನಾವಣೆಯ ಭರಾಟೆ ಕೂಡ ರಾಜ್ಯದ ಇತರ ಜಿಲ್ಲೆಗಳಿಗೆ ಹಾಗೂ ದಕ್ಷಿಣ ಕೇರಳಕ್ಕೆ ಹೋಲಿಸಿದರೆ ಇಲ್ಲಿ ಸಪ್ಪೆಯಾಗಿದೆ.

ರ್ಯಾಲಿಗಳಿಲ್ಲ, ಪ್ರಚಾರದ ಆರ್ಭಟ ಇಲ್ಲ. ಕೆಂಬಾವುಟ, ಕಾಂಗ್ರೆಸ್ ಹಾಗೂ ಬಿಜೆಪಿ ಬಾವುಟಗಳು ಮಾತ್ರ ಇಲ್ಲಿನ ವೃತ್ತಗಳಲ್ಲಿ ಮತ್ತು ಗಲ್ಲಿಗಳಲ್ಲಿ ತುಂಬಿಕೊಂಡಿವೆ. ಅವೂ ಮಳೆಗೆ ಜೋತು ಬಿದ್ದಿವೆ. ಚುನಾವಣೆ ಕಾವು ಕೂಡ ಹಾಗೆಯೇ. ಚುನಾವಣಾ ಆಯೋಗದ ಕಣ್ಗಾವಲು ಕೂಡ ಇದಕ್ಕೆ ಮುಖ್ಯ ಕಾರಣ.

ಇಲ್ಲಿ ಆಯೋಗವೇ ಹೀರೊ: ಹೊರಗೆ ಶಾಂತವಾಗಿದ್ದರೂ ಒಳಗೊಳಗೆ ಬಿರುಸಿನ ಕಾರ್ಯಾಚರಣೆಗಳು ನಡೆಯುತ್ತಿವೆ ಎಂಬುದನ್ನು  ಮತದಾರರೇ ಒಪ್ಪಿಕೊಳ್ಳುತ್ತಾರೆ. ಸಾರ್ವಜನಿಕ ಸಭೆಗಳ ಬದಲಿಗೆ ‘ಕುಟುಂಬ ಸಭೆ’ ಎಂಬ ಸಣ್ಣಪುಟ್ಟ ಕೂಟಗಳು ಅಲ್ಲಲ್ಲಿ ಬಿರುಸಾಗಿಯೇ ನಡೆಯುತ್ತಿವೆ. ಗ್ರಾಮೀಣ ಭಾಗಗಳಲ್ಲಿ ಇದು ಅತ್ಯಂತ ಪ್ರಭಾವಶಾಲಿ ವಿಧಾನವಾಗಿದೆ.

ಸುಮಾರು 50 ಮನೆಗಳಿಗೆ ಒಂದರಂತೆ ಈ ಕುಟುಂಬ ಸಭೆಗಳು ನಡೆಯುತ್ತಿವೆ. ಎಡರಂಗದ ಪ್ರಧಾನ ಅಸ್ತ್ರ ಇದು. ಮಹಿಳಾ ಮತದಾರರು ಈ ರಾಜ್ಯದಲ್ಲಿ ಹೆಚ್ಚಾಗಿ ಇರುವುದರಿಂದ ಇಂತಹ ಸಂಘಟನಾ ವಿಧಾನವನ್ನು ಅನುಸರಿಸಲಾಗಿದೆ. ಬಿಜೆಪಿಯೂ ಇದೇ ತಂತ್ರವನ್ನು ಬಳಸಿಕೊಂಡಿದೆ. ಒಂದು ಮತಗಟ್ಟೆಗೆ ಮೂರು ಕುಟುಂಬ ಸಭೆಗಳನ್ನು ಸಂಘಟಿಸುವ ಮೂಲಕ ಮತದಾರರ ಮನ ಒಲಿಸಲು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಲೇ ಬಂದಿದೆ.

ಆದರೆ ತಿರುವನಂತಪುರ ನಗರ ಮಾತ್ರ ಬಹುತೇಕ ಶಾಂತವಾಗಿದೆ. ಈ ನಗರವೇ ಹಾಗೆ. ರಾಜಧಾನಿ ಆದರೂ ಅಭಿವೃದ್ಧಿಯಲ್ಲಿ ಬಹಳ ಹಿಂದೆ ಉಳಿದಿದೆ. ಎರ್ನಾಕುಳಂ ನಗರವನ್ನು ಹೋಲಿಸಿದರೆ ಇಲ್ಲಿನ ಅಭಿವೃದ್ಧಿ ಏನೇನೂ ಸಾಲದು. ಶಾಂತಿ-ಸುವ್ಯವಸ್ಥೆಯ ದೃಷ್ಟಿಯಿಂದಲೂ ಇದು ಸದಾ ಸಹನೆಯ ತಾಣ.

ಅದಕ್ಕೊಂದು ಉತ್ತಮ ಉದಾಹರಣೆ ಇಲ್ಲಿನ ಪಾಲಯಂ ಜಂಕ್ಷನ್. ವಿಧಾನಸೌಧದ ಕೂಗಳತೆ ದೂರದಲ್ಲಿ ಇರುವ ಈ ವೃತ್ತದ ಆಜೂ ಬಾಜಿನಲ್ಲಿ ಪಾಲಯಂ ಚರ್ಚ್, ಮಸೀದಿ ಹಾಗೂ ಶ್ರೀ ಶಕ್ತಿ ವಿನಾಯಕ ಮಂದಿರ ಇದೆ. ಮತೀಯ ಸೌಹಾರ್ದಕ್ಕೆ ಒಂದು ಮಾದರಿಯಾಗಿ ಈ ವೃತ್ತ ಇದೆ. ಈ ನಗರಿಯೂ ಇದೇ ರೀತಿ. ರಾಜ್ಯದ ಇತರ ಹಲವೆಡೆ ಗಲಭೆ, ಸಂಘರ್ಷಗಳಾದರೂ ರಾಜಧಾನಿ ಮಾತ್ರ ಸದಾ ಮೌನ.

ಈ ರಾಜ್ಯದ ರಾಜಕೀಯಕ್ಕೆ ಸಂಬಂಧಿಸಿದ ಮಾತು ಇಲ್ಲಿ ಬಹಳ ಪ್ರಚಲಿತ. ಅನ್ನ ಬೆಂದಿದೆಯೇ ಎಂದು ನೋಡಲು ಒಂದಗಳು ನೋಡಿದರೆ ಸಾಕು. ಅಂತೆಯೇ ಚುನಾವಣೆಯಲ್ಲಿ ಕೇರಳ ಹೇಗೆ ಯೋಚಿಸುತ್ತದೆ ಎಂಬುದನ್ನು ಅರಿಯಲು ತಿರುವನಂತಪುರ ಜಿಲ್ಲೆಯ ಮತ ಪೆಟ್ಟಿಗೆ ತೆರೆದರೆ ಸಾಕು ಎಂಬುದು.

ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೋ ಅದೇ ಪಕ್ಷದ ಪರವಾಗಿ ಈ ಜಿಲ್ಲೆಯೂ ಸ್ಪಂದಿಸುತ್ತಲೇ ಬಂದಿರುವುದು ವಿಶೇಷ. ಕೇರಳದ 14 ಜಿಲ್ಲೆಗಳ ಪ್ರತಿರೂಪವಾಗಿ ತಿರುವನಂತಪುರ ಜಿಲ್ಲೆಯಲ್ಲಿ 14 ವಿಧಾನಸಭಾ ಕ್ಷೇತ್ರಗಳಿರುವುದೂ ಗಮನಾರ್ಹ.

ರಾಜ್ಯದ ರಾಜಕೀಯ ಬದಲಾವಣೆಗಳಿಗೆ ಪೂರಕವಾಗಿ ರಾಜಧಾನಿಯೂ ಹೊಂದಿಕೊಳ್ಳುತ್ತಿರುವುದು ಇಲ್ಲಿ ನಡೆದುಕೊಂಡು ಬಂದಿರುವ ಸ್ಥಿತಿ-ಗತಿ. ಆಯಾ ಕಾಲದ ಬದಲಾವಣೆಗಳಿಗೆ ಅನುಸಾರವಾಗಿ ಇಲ್ಲಿನ ಮತದಾರೂ ಸ್ಪಂದಿಸುತ್ತಲೇ ಬಂದಿದ್ದಾರೆ. ಈ ಬದಲಾವಣೆಯ ಗಾಳಿಯನ್ನು ನೋಡಿಯೇ ಈ ಬಾರಿ ಯುಡಿಎಫ್‌ಗೆ ಮುನ್ನಡೆ ಸಾಧ್ಯತೆಯನ್ನು ಬಿಂಬಿಸಲಾಗುತ್ತಿದೆ.

1987ರಲ್ಲಿ ಇಲ್ಲಿ ಎಲ್‌ಡಿಎಫ್ 13 ಸ್ಥಾನ ಗೆದ್ದಾಗ ರಾಜ್ಯದ ಅಧಿಕಾರ ಎಲ್‌ಡಿಎಫ್‌ಗೆ ಬಂತು. 91ರಲ್ಲಿ ಸರಿಸಮನಾಗಿ ಗೆದ್ದಾಗ ಯುಡಿಎಫ್ ಅಧಿಕಾರ ಹಿಡಿಯಿತು. 1996 ಹಾಗೂ 2006ರಲ್ಲಿ 9 ಮಂದಿ ಎಲ್‌ಡಿಎಫ್ ಅಭ್ಯರ್ಥಿಗಳು ಗೆದ್ದಾಗ ಅಧಿಕಾರ ಎಲ್‌ಡಿಎಫ್ ಪಾಲಾಯಿತು. 2001ರಲ್ಲಿ ಯುಡಿಎಫ್ ಗೆದ್ದಾಗ ಈ ಜಿಲ್ಲೆಯಲ್ಲೂ 9 ಮಂದಿ ಆಯ್ಕೆಯಾಗಿದ್ದರು. ರಾಜ್ಯದ ಜನತೆಯ ಒಟ್ಟಭಿಪ್ರಾಯ ಈ ಜಿಲ್ಲೆಯಲ್ಲಿ ವ್ಯಕ್ತವಾಗುತ್ತ ಬಂದಿದೆ. ಈ ಬಾರಿಯೂ ಅದೇ ಸ್ಥಿತಿ ಇದೆ. ಬದಲಾವಣೆಯ ಮೋಡವಂತೂ ಕವಿದಿದೆ. ಚುನಾವಣೆ ಮುಗಿದು ಫಲಿತಾಂಶ ಬಂದಾಗಲೇ ಮಳೆ ಪ್ರಮಾಣ ತಿಳಿಯುವುದು! ಪಕ್ಕದ ಕೊಲ್ಲಂ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಇದೆ. ಯಾವತ್ತೂ ಅಧಿಕಾರ ಹಿಡಿಯುವ ಪಕ್ಷ ಅಥವಾ ಒಕ್ಕೂಟದ ಜೊತೆಗೇ ನಿಲ್ಲುವ ಈ ಜಿಲ್ಲೆಯಲ್ಲಿ ಈ ಬಾರಿ ಪೈಪೋಟಿ ಬಿರುಸಾಗಿದೆ. ಕೆಂಬಾವುಟ ಹಾಗೂ ತ್ರಿವರ್ಣ ಬಾವುಟಗಳನ್ನು ಸರಿಸಮಾನವಾಗಿ ಹಿಡಿದ ಜಿಲ್ಲೆ ಇದು. ತಿರುವಾಂಕೂರು ಭಾಗದ ಈ ಜಿಲ್ಲೆಗಳಲ್ಲಿ ಉತ್ತಮ ಸಾಧನೆ ತೋರಿದ ಒಕ್ಕೂಟ ಅಧಿಕಾರ ಹಿಡಿಯುತ್ತಲೇ ಬಂದಿರುವುದು ವಿಶೇಷ.

ಕೊಲ್ಲಂಗೆ ಶನಿವಾರ ಪ್ರಧಾನಮಂತ್ರಿಯವರೇ ಬಂದು ಹೋದರು. ರಾಹುಲ್ ಗಾಂಧಿ ಅವರು ಭಾನುವಾರವೂ ಈ ಭಾಗದಲ್ಲಿ ಪ್ರವಾಸ ಕೈಗೊಂಡರು. ತಿರುವನಂತಪುರದ ಪೂಜಾಪುರ ಮೈದಾನದಲ್ಲಿ ಅವರು ಯುಡಿಎಫ್ ಪರವಾಗಿ ಪ್ರಚಾರ ಭಾಷಣ ಮಾಡಿದರು. ಪೂಜಾಪುರ ಮೈದಾನ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ವೇದಿಕೆ ಆದ್ದರಿಂದ ಮೈದಾನದ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ಕಂಡುಬಂತು. ಕಾಂಗ್ರೆಸ್ಸಿನ ಹಲವು ಪ್ರಮುಖ ನಾಯಕರು ರಾಜ್ಯದ ವಿವಿಧ ಕಡೆ ಪ್ರಚಾರ ಕೈಗೊಂಡರು. ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲು ಕ್ಷಣ ಗಣನೆ ಪ್ರಾರಂಭ ಆಗುತ್ತಿದ್ದಂತೆಯೇ ಕೊನೆಯ ಹಂತದ ಪ್ರಚಾರ ತಂತ್ರಗಳು ರಾಜ್ಯದ ಬಹುತೇಕ ಕಡೆ ಬಿರುಸಾಗಿವೆ. ‘ಮುದ್ರಾವಾಕ್ಯ’ಗಳು (ಘೋಷಣೆ) ಮೊಳಗುತ್ತಿವೆ. 

ನೇಮಂ: ತಿರುವನಂತಪುರ ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡ ನೇಮಂ ಕ್ಷೇತ್ರ ಈ ಬಾರಿ ಗಮನ ಸೆಳೆದಿದೆ. ಕೇಂದ್ರದ ಮಾಜಿ ಸಚಿವ ಬಿಜೆಪಿಯ ಒ.ರಾಜಗೋಪಾಲ್ ಅವರು ಇಲ್ಲಿ ಪ್ರಬಲ ಸ್ಫರ್ಧಿ. ಕೇಂದ್ರ ಸಚಿವರಾಗಿದ್ದಾಗ ತಿರುವನಂತಪುರವನ್ನು ರೈಲ್ವೆ ವಿಭಾಗೀಯ ಕೇಂದ್ರವಾಗಿ ಮಾಡಿದ ಬಗ್ಗೆ ಇಲ್ಲಿನ ಜನರಿಗೆ ಅಭಿಾನ ಇದೆ.

 ಅಮುಲ್ ಬೇಬಿ...: 93 ವರ್ಷದ ವೃದ್ಧರು ಕೇರಳದ ಅಧಿಕಾರ ಚುಕ್ಕಾಣಿ ಹಿಡಿಯಬೇಕೇ ಎಂಬ ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಭಾನುವಾರ ಮುಖ್ಯಮಂತ್ರಿ ವಿ.ಎಸ್. ಅಚ್ಚುತಾನಂದನ್ ಅವರು ಟಿ.ಎಸ್. ಸುಬ್ರಹ್ಮಣ್ಯಂ ಅವರ ಕವಿತೆಯ ಸಾಲುಗಳ ಮೂಲಕ ತಿರುಗೇಟು ನೀಡಿದ್ದಾರೆ. ‘ತಲ ನರಕ್ಕುಗಯಲ್ಲ ಎಂಡೆ ವೃದ್ಧತ್ವಂ..’ (ತಲೆಗೂದಲು ಬಿಳಿಯಾಗುವುದಲ್ಲ ನನ್ನ ವೃದ್ಧಾಪ್ಯ) ಎಂದು ಹೇಳುತ್ತಲೇ ರಾಹುಲ್ ಅವರನ್ನು ‘ಅಮುಲ್ ಬೇಬಿ’ ಎಂದು ಜರೆದರು.

ತಾರೆಯರೂ ಪ್ರಚಾರಕ್ಕೆ..:  ಕೇರಳದಲ್ಲಿ ಸಾಮಾನ್ಯವಾಗಿ ಚಿತ್ರ ನಟ-ನಟಿಯರು, ನಿರ್ದೇಶಕರು ಚುನಾವಣಾ ಪ್ರಚಾರ ರಂಗಕ್ಕೆ ಧುಮುಕುವುದಿಲ್ಲ. ಆದರೆ ಈ ಬಾರಿ ಅವರೂ ಸಕ್ರಿಯರಾಗಿದ್ದಾರೆ. ಹಲವರು ತಾರೆಗಳು ಯುಡಿಎಫ್ ಮತ್ತು ಎಲ್‌ಡಿಎಫ್ ಬೆಂಬಲಕ್ಕೆ ಬಹಿರಂಗವಾಗಿ ನಿಂತಿದ್ದಾರೆ. ಜಯರಾಮ್, ಸುರೇಶ್ ಗೋಪಿ, ಜಗದೀಶ್, ಸತ್ಯನ್ ನಂದಿಕ್ಕಾಡ್, ಲೆನಿನ್ ರಾಜೇಂದ್ರನ್, ಒಎನ್‌ವಿ ಕುರುಪ್ ಮತ್ತಿತರ ಪ್ರಮುಖರು ಈ ಸಾಲಿನಲ್ಲಿ ಇದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.