ಕೇರಳ ಸರ್ಕಾರದ ನಿರ್ಲಕ್ಷ್ಯ

7

ಕೇರಳ ಸರ್ಕಾರದ ನಿರ್ಲಕ್ಷ್ಯ

Published:
Updated:

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನವಾದ ಬಳಿಕ ಸಂಭವಿಸಿದ ಕಾಲ್ತುಳಿತದಿಂದ 102 ಮಂದಿ ಭಕ್ತರು ಸಾವಿಗೀಡಾಗಿ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದುರಂತ ಅತ್ಯಂತ ದುರದೃಷ್ಟಕರ ಘಟನೆ. ದೇವರ ಸೇವೆಗೆಂದು 41 ದಿನ ವ್ರತಾಚರಣೆ ಮಾಡಿ ಹೋದ ಭಕ್ತರಿಗೆ ಈ ದಾರುಣ ಸ್ಥಿತಿ ಬರಬಾರದಿತ್ತು. ಶಬರಿಮಲೆಯಲ್ಲಿ ಸಾಮೂಹಿಕ ಅನಾಹುತ ಆಗುತ್ತಿರುವ ದುರಂತ ಇದು ಎರಡನೆಯದು. 1999ರಲ್ಲಿ ಮಕರ ಜ್ಯೋತಿ ದರ್ಶನದಂದೇ ಪಂಪಾ ಗುಡ್ಡದ ಪ್ರದೇಶವನ್ನು ಏರಿ ಸಾವಿರಾರು ಜನರು ಕುಳಿತಿದ್ದರು. ಆಗ ಗುಡ್ಡ ಕುಸಿದು 55 ಮಂದಿ ಭಕ್ತರು ಕಂದಕಕ್ಕೆ ಮತ್ತು ಒಬ್ಬರ ಮೇಲೊಬ್ಬರು ಬಿದ್ದು ಪ್ರಾಣ ಕಳೆದುಕೊಂಡರು, ನೂರಾರು ಮಂದಿ ಗಾಯಗೊಂಡಿದ್ದರು. ಈ ಎರಡೂ ತಪ್ಪಿಸಬಹುದಾಗಿದ್ದ ದುರಂತಗಳು. ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆಂದು ಪ್ರತಿ ವರ್ಷವೂ ಒಂದೂವರೆ ತಿಂಗಳು ಲಕ್ಷಾಂತರ ಮಂದಿ ಬಂದು ಹೋಗುತ್ತಾರೆ. ಮಕರ ಜ್ಯೋತಿಯ ದಿನದಂದು ಸಹಜವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಮೂಹ ಸೇರುವುದು ಹೊಸದೇನಲ್ಲ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಸಂಭ್ರಮದ ದಿನದಂದು ಲಕ್ಷಗಟ್ಟಲೆ ಭಕ್ತರು ಸೇರುವ ಸ್ಥಳದಲ್ಲಿ ರಾಜ್ಯ ಸರ್ಕಾರ ಬಿಗಿ ಬಂದೋಬಸ್ತ್ ಮಾಡಬೇಕಿತ್ತು. ಆದರೆ ಶನಿವಾರ ಸಂಭವಿಸಿದ ದುರಂತವನ್ನು ಗಮನಿಸಿದರೆ ಅಲ್ಲಿ ಯಾವುದೇ ಬಂದೋಬಸ್ತ್ ವ್ಯವಸ್ಥೆ ಇದ್ದಂತೆ ಕಾಣುವುದಿಲ್ಲ. ಇದು ಸರ್ಕಾರದ ವೈಫಲ್ಯ ಮಾತ್ರವಲ್ಲ ಬೇಜವಾಬ್ದಾರಿಯ ಕೃತ್ಯ.

ಪಂಪಾ ಗುಡ್ಡ ಕುಸಿತದ ದುರಂತದ ಬಗೆಗೆ ಕೇರಳ ಸರ್ಕಾರ ನ್ಯಾಯಮೂರ್ತಿ ಟಿ.ಚಂದ್ರಶೇಖರ ಮೆನನ್ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ನೇಮಿಸಿತ್ತು. ಆ ಆಯೋಗ ನೀಡಿದ ವರದಿಯ ಪ್ರಕಾರ, ‘ಆಗಲೂ ಸರಿಯಾದ  ಬಂದೋಬಸ್ತ್ ವ್ಯವಸ್ಥೆ ಇರಲಿಲ್ಲ. ಈ ದುರಂತಕ್ಕೆ ರಾಜ್ಯ ಸರ್ಕಾರದ ಬೇಜಾವಾಬ್ದಾರಿ ಮತ್ತು ಕರ್ತವ್ಯ ಲೋಪವೇ ಕಾರಣ. ದೇಶದ ವಿವಿಧ ಭಾಗಗಳಿಂದ ಬರುವ ಸಾವಿರಾರು ಭಕ್ತರು ಸುರಕ್ಷಿತವಾಗಿ ಬಂದು ಹೋಗಲು ಸೂಕ್ತ ರಸ್ತೆ ನಿರ್ಮಾಣ, ಗಿರಿಕಂದರದ ದಾರಿಗಳಲ್ಲಿ ಕಬ್ಬಿಣದ ಸಲಾಕೆಯ ತಡೆಗೋಡೆ ನಿರ್ಮಾಣ ಮತ್ತು ಯಾವುದೇ ಸ್ಥಳದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಕಾಲ್ತುಳಿತ ಮತ್ತು ನೂಕು ನುಗ್ಗಲಾಗದಂತೆ ಭಕ್ತರನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು’ ಎಂದು ಆಯೋಗ ತನ್ನ ವರದಿಯಲ್ಲಿ ಸಲಹೆ ಮಾಡಿದೆ. ಆದರೆ ಅವ್ಯವಸ್ಥೆ ಮತ್ತು ಸೂಕ್ತ ಪೊಲೀಸ್ ಬಂದೋಬಸ್ತ್ ಇಲ್ಲದೆ ಶನಿವಾರ ನಡೆದ ದುರಂತವನ್ನು ಗಮನಿಸಿದರೆ, ಚಂದ್ರಶೇಖರ ಮೆನನ್ ಆಯೋಗದ ವರದಿಯನ್ನು ಕೇರಳ ಸರ್ಕಾರ ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಹಾಗಾಗಿ ಮತ್ತೆ ಅವ್ಯವಸ್ಥೆಯಿಂದಾಗಿ ಕಾಲ್ತುಳಿತದ ದುರಂತ ಮರುಕಳಿಸಿದೆ. ಇದು ಕೇರಳ ಸರ್ಕಾರದ ಅತ್ಯಂತ ಬೇಜವಾಬ್ದಾರಿಯ ಮುಖವನ್ನು ಮತ್ತೊಮ್ಮೆ ಪ್ರದರ್ಶಿಸಿದೆ. ಬೇರೆ ಬೇರೆ ರಾಜ್ಯಗಳಿಂದ ಬರುವ ಸಾವಿರಾರು ಭಕ್ತರ ರಕ್ಷಣೆಗೆ ಕೇರಳ ಸರ್ಕಾರ ಇನ್ನಾದರೂ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದುದು ಅಗತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry