ಗುರುವಾರ , ಜೂನ್ 24, 2021
29 °C

ಕೇರೂರ, ಯಲ್ಪಾರಟ್ಟಿಯಲ್ಲಿ ವಿಜೃಂಭಣೆಯ ಅರಣ್ಯ ಸಿದ್ಧೇಶ್ವರ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ತಾಲ್ಲೂಕಿನ ಸುಕ್ಷೇತ್ರ ಕೇರೂರ ಗ್ರಾಮದಲ್ಲಿ ಫೆ. 25 ರಿಂದ ನಡೆದ  ಅರಣ್ಯ ಸಿದ್ಧೇಶ್ವರ ಜಾತ್ರಾ ಮಹೋತ್ಸವದ ಕಡೆಯ ದಿನವಾದ  ಗುರುವಾರ ನಿವ್ವಾಳಕಿ ಮತ್ತು ದೇವವಾಣಿ ಸಂದರ್ಭದಲ್ಲಿ ಅಸಂಖ್ಯಾತ ಭಕ್ತಾದಿಗಳು ಪಾಲ್ಗೊಂಡಿದ್ದರು. ಜಾತ್ರೆಯ  ಆರು ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಮನರಂಜನಾ ಕಾರ್ಯಕ್ರಮಗಳು ನಡೆದವು.ಗುರುವಾರ ನಿವ್ವಾಳಕಿ ಹಾಗೂ ದೇವವಾಣಿ, ಅಭಿಷೇಕ  ಮತ್ತು ರಾತ್ರಿ ಪಲ್ಲಕ್ಕಿ ಬನದಿಂದ ಗದ್ದುಗೆ ಮನೆಗೆ ಬರುವ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಕರ್ನಾಟಕ ಮತ್ತು ಮಹಾರಾಷ್ಟ್ರಗಳಿಂದ ಲಕ್ಷಾಂತರ ಜನ ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.ಜಾತ್ರೆ ಪ್ರಯುಕ್ತ ಫೆ.25 ರಂದು ರಾತ್ರಿ ಮಾದಿಗರ ಓಣಿಯಿಂದ ಚಮ್ಮಾಳಿಗೆಯನ್ನು ಗದ್ದುಗೆ ಮನೆಗೆ ತರುವ ಮೂಲಕ ಜಾತ್ರೆಗೆ ಚಾಲನೆ ದೊರಕಿತು. 26 ರಂದು ಪಲ್ಲಕ್ಕಿಯು ವಾದ್ಯ ಮೇಳಗಳೊಂದಿಗೆ ಗದ್ದುಗೆ ಮನೆಯಿಂದ ಬನಕ್ಕೆ ತಲುಪಿತು. ಅಂದು ಕರಿ ಕಟ್ಟಲಾಯಿತು. 27 ರಂದು ಓಡುವ ಶರ್ಯತ್ತು, ಕುದುರೆ ಗಾಡಿ ಶರ್ಯತ್ತು, ಜನರಲ್ ಸಾಯಕಲ್ ಶರ್ಯತ್ತು, ಸ್ಲೋ ಸೈಕಲ್ ಶರ್ಯತ್ತು, ಹಾಗೂ ರಾತ್ರಿ ಶಿವಭಜನಾ ಸ್ಪರ್ಧೆಗಳು ನಡೆದವು.28 ರಂದು ತಾಲ್ಲೂಕಿನ ಗಾವಗಾನ ಜೋಡೆತ್ತಿನ ಗಾಡಿ ಶರ್ಯತ್ತು, ಒಂದು ಕುದುರೆ ಮತ್ತು ಒಂದು ಎತ್ತಿನ ಗಾಡಿ ಶರ್ಯತ್ತು, ಜೋಡು ಕುದುರೆ ಗಾಡಿ ಶರ್ಯತ್ತು, ಬಡಿಗೆ ಬಾರಕೋಲು ರಹಿತ ಜೋಡೆತ್ತಿನ ಗಾಡಿ ಶರ್ಯತ್ತು, ಹಗ್ಗಜಗ್ಗಾಟ ಸ್ಪರ್ಧೆಗಳು ಹಾಗೂ ರಾತ್ರಿ ಶಾಹೀರಕಿ ಗಾನಾ ಪ್ರದರ್ಶನ ನಡೆದವು.ಮುಂಬಯಿನ ಅರಣ್ಯಸಿದ್ಧೇಶ್ವರ ಕಾಮಗಾರ ಕಮಿಟಿ ವತಿಯಿಂದ ಅನ್ನಸಂತರ್ಪಣೆ ನಡೆಯಿತು. 29 ರಂದು ಮಹಾನೈವೇದ್ಯ ಮತ್ತು ರಾತ್ರಿ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು.ರಾಯಬಾಗ ವರದಿ

  ಯಲ್ಪಾರಟ್ಟಿ ಗ್ರಾಮದ ಅರಣ್ಯಸಿದ್ಧೇಶ್ವರರ ಜಾತ್ರೆಯು ಕಳೆದ ಐದು ದಿನಗಳಿಂದ ಸಡಗರದಿಂದ ಜರುಗಿ ಗುರುವಾರ ನಿವಾಳಕಿ ಮಾಡುವ ಮೂಲಕ ದೇವರ ಜೋಡಿ ಪಾಲಕಿಗಳ ಉತ್ಸವ ವೈಭವದಿಂದ ಜರುಗಿತು.ಜಾತ್ರಾ ಅಂಗವಾಗಿ ಬುಧವಾರ ದೇವರ ಮಹಾ ನೈವೇದ್ಯ ಹಾಗೂ ಪ್ರಸಾದ ಏರ್ಪಡಿಸಲಾಗಿತ್ತು. `ಅರಣ್ಯ ಸಿದ್ಧನ ಜಾತ್ರಿ ಒಂದ ದಿನ ರಾತ್ರಿ~ ಎಂಬಂತೆ ಹೆಚ್ಚಿನ ಜಾತ್ರೆ ಬುಧವಾರ ರಾತ್ರಿಯೇ ಜರುಗಿತು.ಜಾತ್ರೆಗೆ ಸಾಂಗಲಿ, ಕೊಲ್ಲಾಪುರ, ಮೀರಜ್, ಜಮಖಂಡಿ, ಬಾಗಲಕೋಟೆ, ಮಹಾಲಿಂಗಪುರ, ಅಥಣಿಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಮತ್ತು ಆಶೀರ್ವಾದ ಪಡೆದರು. ತಾಲ್ಲೂಕಿನ ಬೆಂಡವಾಡ, ಬೂದಿಹಾಳ, ಮೇಖಳಿ, ಕೇರೂರ, ಹಾರೂಗೇರಿ ಹಿಡಕಲ್, ಮುಗಳಖೋಡ ಗ್ರಾಮಗಳಿಂದ ಭಕ್ತರು ಎತ್ತಿನ ಚಕ್ಕಡಿ ಹಾಗೂ ಟ್ರಾಕ್ಟ್ರರ್‌ಗಳಲ್ಲಿ ಜಾತ್ರೆಗೆ ಆಗಮಿಸುತ್ತಾರೆ.ದೇವರ ಕರಿಕಟ್ಟಿದ ನಂತರ ಆಗಮಿಸುವ ಭಕ್ತರು ಐದು ದಿನ ಜಾತ್ರೆಯಲ್ಲಿ ಬೀಡಾರ ಹೂಡಿ ದೇವರಿಗೆ ನೈವೇದ್ಯ ಅರ್ಪಿಸಿ ತಮ್ಮ ಊರುಗಳಿಗೆ ತೆರಳಿದರು.ಜಾತ್ರಾ ನಿಮಿತ್ತ  ದನಗಳ ಪ್ರದರ್ಶನವೂ ನಡೆಯಿತು.

ನೀರಿನ ಸಮಸ್ಯೆ:
ಈ ಸಲದ ಜಾತ್ರೆಯಲ್ಲಿ ದನಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಪ್ರತಿ ವರ್ಷ ಜಾತ್ರೆಯ ಸಂದರ್ಭದಲ್ಲಿ ಜಿ.ಎಲ್.ಬಿ.ಸಿ. ಕಾಲುವೆಗೆ ನೀರು ಬಿಡುತ್ತಿದ್ದರು. ಆದರೆ ಈ ಸಲ  ನೀರು ಬಿಡದ ಕಾರಣ ಸಮಸ್ಯೆಯಾಯಿತು. ಆದರೂ ಸುತ್ತಮುತ್ತಲಿನ ತೋಟಪಟ್ಟಿಯ ರೈತರು ನೀರಿನ ಸೌಕರ್ಯ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.