ಕೇಳುವವರಾರು ಪ್ರಯಾಣಿಕರ ಗೋಳು

7

ಕೇಳುವವರಾರು ಪ್ರಯಾಣಿಕರ ಗೋಳು

Published:
Updated:

ಮೈಸೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಯಬಿಟ್ಟಿರುವುದನ್ನು ವಿರೋಧಿಸಿ ಮೈಸೂರು- ಮಂಡ್ಯ ಜಿಲ್ಲೆಯಲ್ಲಿ ರೈತರು, ವಿವಿಧ ಸಂಘಟನೆಗಳು ಪ್ರತಿಭಟನೆ ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಮೈಸೂರು-ಬೆಂಗಳೂರು ನಡುವೆ ಸೋಮವಾರ ಬಸ್ ಹಾಗೂ ರೈಲು ಸಂಚಾರ ಸ್ಥಗಿತಗೊಂಡಿತ್ತು.ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆ ವರೆಗೆ ಮದ್ದೂರು, ಮಂಡ್ಯದಲ್ಲಿ ರೈತರು ಹೆದ್ದಾರಿ ತಡೆ ನಡೆಸಿದ್ದರಿಂದ ಈ ಮಾರ್ಗದ ಮೂಲಕ ಬೆಂಗಳೂರಿಗೆ ತೆರಳುವ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪರ್ಯಾಯ ಮಾರ್ಗವಾದ ಮೈಸೂರು- ಬನ್ನೂರು- ಮಳವಳ್ಳಿ-ಕನಕಪುರ ಮೂಲಕ ಅರ್ಧ ಗಂಟೆಗೆ ಒಂದರಂತೆ ಬಸ್ಸುಗಳು ಸಂಚರಿಸಿದವು. ಸಂಜೆ 6 ಗಂಟೆ ನಂತರ ಮೈಸೂರು-ಮಂಡ್ಯ-ಮದ್ದೂರು ಮಾರ್ಗದಲ್ಲಿ ಬಸ್ ಸಂಚಾರ ಆರಂಭವಾಯಿತು. ಹೆದ್ದಾರಿ ತಡೆಯಿಂದ ಪ್ರಯಾಣಿಕರು ಪರದಾಡುವಂತಾಯಿತು.486 ಬಸ್ ಸಂಚಾರ: ವಿವಿಧ ಡಿಪೋಗಳಿಗೆ ಸೇರಿದ 486 ಬಸ್ಸುಗಳು ಪ್ರತಿ ನಿತ್ಯ ಮೈಸೂರು-ಬೆಂಗಳೂರು ನಡುವೆ ಸಂಚರಿಸುತ್ತವೆ. ಇದರಲ್ಲಿ ಕರ್ನಾಟಕ ಸಾರಿಗೆ ಬಸ್ಸು-352, ರಾಜಹಂಸ-73, ವೈಭವ-7, ವೊಲ್ವೋ-52 ಹಾಗೂ ಐರಾವತ (ಮಲ್ಟಿಆ್ಯಕ್ಸಲ್) 2 ಬಸ್ಸುಗಳು ಸಂಚರಿಸುತ್ತಿದ್ದು, ಸರಾಸರಿ 20 ಸಾವಿರ ಮಂದಿ ಪ್ರತಿ ನಿತ್ಯ ಪ್ರಯಾಣ ಮಾಡುತ್ತಿದ್ದಾರೆ.`ಮಂಡ್ಯ, ಮದ್ದೂರಿನಲ್ಲಿ ಮಂಗಳವಾರವೂ ಪ್ರತಿಭಟನೆ ಮುಂದುವರಿಯಲಿದ್ದು, ಬಸ್ ಸಂಚಾರ ಸ್ಥಗಿತಗೊಳ್ಳಲಿದೆ~ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.ರೈಲು ಸಂಚಾರವೂ ವ್ಯತ್ಯಯ: ಮೈಸೂರು ರೈಲು ನಿಲ್ದಾಣದಿಂದ ಬೆಳಿಗ್ಗೆ 6.45 ಗಂಟೆಗೆ ಹೊರಟ ಚಾಮುಂಡಿ ಎಕ್ಸ್‌ಪ್ರೆಸ್ ರೈಲನ್ನು ಮದ್ದೂರಿನಲ್ಲಿ ಪ್ರತಿಭಟನಾಕಾರರು ತಡೆದರು. ಹೀಗಾಗಿ ಈ ರೈಲು ವಾಪಸು ಮೈಸೂರಿಗೆ ಆಗಮಿಸಿತು. ಪ್ರತಿಭಟನೆ ತೀವ್ರಗೊಂಡಿದ್ದರಿಂದ ವಿಭಾಗೀಯ ರೈಲ್ವೆ ಅಧಿಕಾರಿಗಳು ಮೈಸೂರು-ಬೆಂಗಳೂರು ಮಧ್ಯೆ ಸಂಚರಿಸುವ ರೈಲುಗಳ ಸಂಚಾರವನ್ನು ರದ್ದುಪಡಿಸಿದರು.ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಮೈಸೂರು-ಚಾಮರಾಜನಗರ ಪ್ಯಾಸೆಂಜರ್ ಮೈಸೂರು-ತಿರುಪತಿ ಪ್ಯಾಸೆಂಜರ್, ಟಿಪ್ಪು ಎಕ್ಸ್‌ಪ್ರೆಸ್, ಶತಾಬ್ದಿ ರೈಲು, ಮೈಸೂರು-ಯಶವಂತಪುರ ಹಾಗೂ ರಾಜ್ಯರಾಣಿ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸಂಜೆ 6 ಗಂಟೆ ಬಳಿಕ ಎಲ್ಲ ರೈಲುಗಳು ಎಂದಿನಂತೆ ಸಂಚರಿಸಿದವು.ಖಾಸಗಿ ವಾಹನಗಳ ಮೊರೆ: ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿತ್ತು. ನಿತ್ಯ ಜನಜಂಗುಳಿಯಿಂದ ಕೂಡಿರುತ್ತಿದ್ದ ರೈಲು ನಿಲ್ದಾಣದ ಆವರಣ ಬಿಕೋ ಎನ್ನುತ್ತಿತ್ತು. ದೂರದ ಊರುಗಳಿಗೆ ತೆರಳಲು ಆಗಮಿಸಿದ್ದ ಪ್ರಯಾಣಿಕರು ರೈಲು ಸಂಚಾರ ಸ್ಥಗಿತಗೊಂಡಿದ್ದ ವಿಷಯ ತಿಳಿದು ಆತಂಕಕ್ಕೆ ಒಳಗಾದರು. ಕೆಲವರು ರೈಲು ನಿಲ್ದಾಣದ ಆವರಣದಲ್ಲೇ ನಿದ್ದೆಗೆ ಜಾರಿದರು. ಬೆಂಗಳೂರಿಗೆ ತೆರಳಬೇಕಿದ್ದ ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ವಾಹನಗಳ ಮೊರೆ ಹೋದರು.ಪ್ರತಿಭಟನೆ ಹಿನ್ನೆಲೆಯಲ್ಲಿ ರೈಲು ನಿಲ್ದಾಣದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. `ಮೈಸೂರು-ಬೆಂಗಳೂರು ನಡುವೆ  ವಿದ್ಯಾರ್ಥಿಗಳು, ಉದ್ಯೋಗಿಗಳು ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ರೈಲು ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬಹುತೇಕರು ಖಾಸಗಿ ವಾಹನಗಳ  ಮೊರೆ ಹೋಗಿದ್ದಾರೆ.ಪ್ರತಿಭಟನೆಯ ಕಾವು ಮಂಗಳವಾರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಆದಾಗ್ಯೂ, ಮುಂದಿನ ಬೆಳವಣಿಗೆಗಳನ್ನು ಗಮನಿಸಿ ಅ.2 ರಂದು ಸಂಚರಿಸುವ ರೈಲುಗಳ ಬಗ್ಗೆ ಮಾಹಿತಿ ನೀಡಲಾಗುವುದು~ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮಂಡ್ಯ ವರದಿ: ರೈಲು ಹಾಗೂ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಬೆಂಗಳೂರು ಹಾಗೂ ಮೈಸೂರಿಗೆ ತೆರಳುವ ಪ್ರಯಾಣಿಕರು ಪರದಾಡಬೇಕಾಯಿತು.ಭಾನುವಾರ ರಸ್ತೆ ತಡೆ ಮಾಡಿದ್ದರಿಂದ ಬಹುತೇಕರು ಸೋಮವಾರ ಬೆಳಿಗ್ಗೆ ರೈಲಿನಲ್ಲಿ ಬೆಂಗಳೂರು, ಮೈಸೂರಿಗೆ ತೆರಳಲು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ, ಸೋಮವಾರ ರೈಲು ಸಂಚಾರವನ್ನೂ ತಡೆದದ್ದರಿಂದ ಗೊಂದಲಕ್ಕೆ ಒಳಗಾದರು.ಮಂಡ್ಯ ರೈಲ್ವೆ ನಿಲ್ದಾಣದಿಂದ ಹೊರಟವರು ಹನಕೆರೆ ರೈಲ್ವೆ ನಿಲ್ದಾಣದಲ್ಲಿಯೇ ನಿಲ್ಲಬೇಕಾಯಿತು. ಕೆಲವರು ಅಲ್ಲಿಂದ ಇಳಿದು ಮರಳಿ ಖಾಸಗಿ ವಾಹನದಲ್ಲಿ ಮನೆಗಳಿಗೆ ತೆರಳಿದರೆ, ಇನ್ನು ಕೆಲವರು ಮಳವಳ್ಳಿ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.ಬಸ್ ಸಂಚಾರ ಸ್ಥಗಿತಗೊಳ್ಳುವ ಸೂಚನೆ ಮೊದಲೇ ಸಿಕ್ಕಿದ್ದರಿಂದ, ಬಹುತೇಕರು ಖಾಸಗಿ ಬಸ್, ಟ್ಯಾಕ್ಸಿ, ಟೆಂಪೋಗಳನ್ನು ಆಶ್ರಯಿಸಿ ವಿವಿಧ ಮಾರ್ಗಗಳ ಮೂಲಕ ಮೈಸೂರು ಹಾಗೂ ಬೆಂಗಳೂರು ತಲುಪಿದರು.ಪ್ರತಿಭಟನಾಕಾರರು ವಾಹನಗಳನ್ನು ಗಂಟೆಗಟ್ಟಲೇ ತಡೆಹಿಡಿಯುತ್ತಿದ್ದರಿಂದ ಪ್ರಯಾಣಿಕರು ಊಟಕ್ಕಾಗಿ ಪರದಾಡುವಂತಾಯಿತು. ಜತೆಗೆ ತುರ್ತು ಕೆಲಸದ ಮೇಲೆ ಹೋಗುವವರ ಸ್ಥಿತಿ ಹೇಳತೀರದ್ದಾಗಿತ್ತು.ಪರ್ಯಾಯ ಮಾರ್ಗ: ಮಂಡ್ಯ-ಕೆ.ಎಂ.ದೊಡ್ಡಿ ಅಥವಾ (ಹನಿಯಂಬಾಡಿ) -ಮಳವಳ್ಳಿ-ಕನಕಪುರ-ಬೆಂಗಳೂರು. ಮಂಡ್ಯ-  ಕೆ.ಎಂ.ದೊಡ್ಡಿ- ಹಲಗೂರು-ಚನ್ನಪಟ್ಟಣ-ರಾಮನಗರ- ಬೆಂಗಳೂರು ಮೂಲಕ ಪ್ರಯಾಣ ಬೆಳೆಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry