ಕೇಸರಿಯಾ : ಎತ್ತರದಲ್ಲಿ ನಂ.1

7

ಕೇಸರಿಯಾ : ಎತ್ತರದಲ್ಲಿ ನಂ.1

Published:
Updated:

ಬೌದ್ಧರ ವಿಶಿಷ್ಟ ವಿನ್ಯಾಸದ ಸ್ತೂಪಗಳಲ್ಲಿ ಕೇಸರಿಯಾ ಕೂಡ ಒಂದು. ಅದು ಬಿಹಾರ ರಾಜ್ಯದ ಚಂಪಾರಣ ಜಿಲ್ಲೆಯಲ್ಲಿದೆ. ವಿಶ್ವದಲ್ಲಿಯೇ ಅತ್ಯಂತ ಎತ್ತರದ ಸ್ತೂಪ ಎಂಬ ಖ್ಯಾತಿ ಅದರದು. ಈ ಸ್ತೂಪಕ್ಕೆ ತಲುಪಲು ಪಟ್ನಾದಿಂದ (110 ಕಿಮೀ) ಬಸ್ ಸೌಕರ್ಯ ಇದೆ.ಕ್ರಿಸ್ತಪೂರ್ವದಲ್ಲಿ ಅಶೋಕ ಚಕ್ರವರ್ತಿ ಈ ಸ್ತೂಪವನ್ನು ಕಟ್ಟಿಸಿದ ಎನ್ನಲಾಗುತ್ತದೆ. ಈ ಜಾಗದಲ್ಲಿ ಬುದ್ಧ ನೆಲೆಸಿದ್ದ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ ಎಂದೂ ಹೇಳಲಾಗಿದೆ. ಬುದ್ಧ ಇಲ್ಲಿ ನೆಲೆಸಿದ್ದಾಗ ತನ್ನ ಅನುಯಾಯಿಗಳಿಗೆ ಕೆಸಪುಟ್ಟಿಯಾ ಎಂಬ ಸೂತ್ರಗಳನ್ನು ಬೋಧಿಸಿದ್ದನಂತೆ. ಅದರಿಂದಲೇ ಈ ತಾಣಕ್ಕೆ ಕೇಸರಿಯಾ ಎಂಬ ಹೆಸರು ಪ್ರಾಪ್ತವಾಗಿದೆಯಂತೆ.ಹಸಿರು ಬಯಲಿನಲ್ಲಿ ತಲೆ ಎತ್ತಿನಿಂತಿರುವ ಈ ತಾಣ ನೋಡುಗರನ್ನು ಮಂತ್ರಮುಗ್ಧಗೊಳಿಸುವಂತಿದೆ. ದೂರದಿಂದ ಈಜಿಪ್ಟಿನ ಮಮ್ಮಿಯಂತೆ ಕಾಣುವ ಇದು ಹತ್ತಿರ ಹೋದಂತೆ ತನ್ನ ವಿಶಿಷ್ಟ ವಿನ್ಯಾಸದಿಂದ ಕಂಗೊಳಿಸುತ್ತದೆ. ಇದರ ಎತ್ತರ 104 ಅಡಿ. ಮೂಲರೂಪದಲ್ಲಿ ಸುಮಾರು 150 ಅಡಿಯಷ್ಟು ಎತ್ತರವಾಗಿದ್ದ ಇದರ ಆಕಾರ, ಪ್ರಾಕೃತಿಕ ವಿಕೋಪಗಳಿಂದ ಕಡಿಮೆ ಆಗಿದೆಯಂತೆ. ಆದರೂ ವಿಶ್ವದ ಅತ್ಯಂತ ಎತ್ತರದ ಸ್ತೂಪ ಎನ್ನುವ ಅಗ್ಗಳಿಕೆಯೇನೂ ಮುಕ್ಕಾಗಿಲ್ಲ.1998ರಲ್ಲಿ ವಿಶ್ವದಲ್ಲಿಯೇ ಅತಿ ಎತ್ತರದ ಮತ್ತು ಅತಿ ವಿಸ್ತಾರವಾದ ಈ ಸ್ತೂಪವನ್ನುಶೋಧಿಸಲಾಯಿತು. ಆರು ಮಹಡಿಯಲ್ಲಿ ತ್ರಿಭುಜಾಕಾರದಲ್ಲಿ ಕಟ್ಟಲಾಗಿರುವ ಈ ಸ್ತೂಪ ಬೌದ್ಧರ ವಾಸ್ತುಶಿಲ್ಪಕಲೆಯನ್ನು ಒಳಗೊಂಡಿದೆ. ಅಲಂಕೃತ ಇಟ್ಟಿಗೆಗಳಿಂದ ಕಟ್ಟಲಾಗಿರುವ ಸ್ತೂಪದ ಪ್ರತಿಯೊಂದು ಮಹಡಿಯಲ್ಲಿಯೂ ಧ್ಯಾನ ಮಾಡಲು ಸೂಕ್ತವಾದ ಜಾಗಗಳನ್ನು ಕೊರೆಯಲಾಗಿದೆ. ಇಲ್ಲಿ ಭೂಮಿ ಸ್ಪರ್ಶ ಮುದ್ರೆಯಲ್ಲಿ ಕುಳಿತಿರುವ ಅಪರೂಪದ ಬುದ್ಧನ ಕಲಾಕೃತಿ ದೊರಕಿದೆ. ಹಲವು ಕಲಾಕೃತಿಗಳು ಮತ್ತು ಬುದ್ಧನ ವರ್ಣಚಿತ್ರಗಳನ್ನೂ ಇಲ್ಲಿ ನೋಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry