ಭಾನುವಾರ, ಜೂನ್ 13, 2021
23 °C
ನಿನ್ನೆ ಶಿವನ ಜಪ, ಇಂದು ಮೋದಿ ಜಪ

ಕೇಸರಿ ಅಲೆಯಲ್ಲಿ ಮಿಂದೆದ್ದ ಗುಲ್ಬರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ‘ಗುಲ್ಬರ್ಗದ ಬಂಧು ಭಗಿನಿಯರೇ ನಿಮಗೆಲ್ಲ ನನ್ನ ನಮಸ್ಕಾರಗಳು’ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳುತ್ತಿದ್ದಂತೆಯೇ ಇಡೀ ರ್‍ಯಾಲಿಯಲ್ಲಿ ಸಂಚಲನ ಮೂಡಿತು.ವಿಶಾಲ ಪ್ರದೇಶದಲ್ಲಿ ಸುನಾಮಿ ಅಲೆ­ಗಳಂತೆ ಸೇರಿದ್ದ ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿ ವೇದಿಕೆಗೆ ಆಗಮಿಸು­ತ್ತಿದ್ದಂ­ತೆಯೇ ‘ಮೋದಿ, ಮೋದಿ, ಮೋದಿ..’ ಎಂದು ಘೋಷಣೆ ಕೂಗಿದರು. ‘ದೇಶ್‌ ಕಿ ಪ್ರಧಾನಿ ಕೈಸಾ ಹೋ.. ನರೇಂದ್ರ ಮೋದಿ ಜೈಸಾ ಹೋ..’ ಎಂಬ ಘೋಷಣೆ­ಗಳು ಮುಗಿಲು ಮುಟ್ಟಿದವು.ನೆತ್ತಿ ಸುಡುವ ಬಿಸಿಲನ್ನೂ ಲೆಕ್ಕಿಸದೇ ಬೆಳಿಗ್ಗೆ 8 ರಿಂದಲೇ ನಗರ ಹೊರವಲಯದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಭಾರತ ಗೆಲ್ಲಿಸಿ ರ್‍ಯಾಲಿ’ಯಲ್ಲಿ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆ­ಯಲ್ಲಿ ಸೇರಿದ್ದ ಕಾರ್ಯಕರ್ತರು ಮೋದಿ ಅವ­ರನ್ನು ಹತ್ತಿರದಿಂದ ನೋಡಿ ಪುಳಕಿ­ತರಾದರು. ಇಡೀ ರ್‍ಯಾಲಿ ಅಕ್ಷರಶಃ ಕೇಸರಿಮಯ­ವಾಗಿತ್ತು. ಬಿಜೆಪಿ ಬಾವುಟ, ಕೇಸರಿ ಕ್ಯಾಪ್, ಹೋ­ರ್ಡಿಂಗ್, ಬಂಟಿಂಗ್ಸ್ ಹಾಗೂ ಬ್ಯಾನರ್‌ಗಳು ತುಂಬಿ ತುಳುಕುತ್ತಿದ್ದವು.ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವರಾದ ರೇವುನಾಯಕ ಬೆಳಮಗಿ, ಶೋಭಾ ಕರಂದ್ಲಾಜೆ ಹಾಗೂ ಶಾಸಕಿ ತಾರಾ ಅನೂರಾಧ ಅವರು, ಸಬ್‌ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ನಡೆದುಕೊಂಡ ರೀತಿಯನ್ನು ತೀವ್ರ­ವಾಗಿ ಖಂಡಿಸಿದರು. ಈಗಲಾದರೂ ಪ್ರಕ­ರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.ಮಾಜಿ ಸಚಿವ ಗುರುಪಾದಪ್ಪ ನಾಗಮಾರ­ಪಳ್ಳಿ, ಜಿಲ್ಲಾ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ, ರಘುನಾಥ ಮಲ್ಕಾ­ಪುರೆ, ಕೆ.ಬಿ.ಶಾಣಪ್ಪ, ತಿಪ್ಪರಾಜು, ಹಾಲಪ್ಪ ಆಚಾರ್ಯ,ಪ್ರಕಾಶ್ಖಂಡ್ರೆ, ಪ್ರಭು ಚವ್ಹಾಣ, ಬಸವರಾಜ ಪಾಟೀಲ ಅಷ್ಟೂರ, ವಿದ್ಯಾ­ಸಾಗರ ಶಾಬಾದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಮಲ ಅರಳಿಸಿ

ಕಮಲ ಅರಳಿದ ಉತ್ತರ ಭಾರತದ ಐದು ರಾಜ್ಯಗಳಲ್ಲಿ ಅಭಿವೃದ್ಧಿಗಾಗಿ ಹಣದ ಹೊಳೆಯೇ ಹರಿದಿದೆ. ಕಮಲ ಎಂದರೆ ಲಕ್ಷ್ಮೀ. ದೇಶದಾದ್ಯಂತ ಕಮಲವನ್ನು ಅರಳಿಸುವ ಮೂಲಕ ಲಕ್ಷ್ಮೀಯನ್ನು ಬರಮಾಡಿಕೊಳ್ಳಬೇಕು.

–ಅರವಿಂದ ಲಿಂಬಾವಳಿ, ಶಾಸಕಬಿದಾಯಿ ಹೋರಾಟ..

ಬಿದಾಯಿ ಯೋಜನೆ ಎಲ್ಲರಿಗೂ ವಿಸ್ತರಿಸುತ್ತೇನೆ ಎಂದು ಭರವಸೆ ನೀಡಿದ್ದ ಕಾಂಗ್ರೆಸ್ ಹುಸಿಗೊಳಿಸಿದೆ. ಅಭಿವೃದ್ಧಿಗಾಗಿ ಮೋದಿ ಬೆಂಬಲಿಸಬೇಕು. ಮೃತ ಪಿಎಸ್‌ಐ ಮಲ್ಲಿಕಾರ್ಜನ ಬಂಡೆ ಪ್ರಕರಣದ ಸತ್ಯಾಂಶ ಬಚ್ಚಿಟ್ಟಿರುವ ಕಾಂಗ್ರೆಸ್‌ ಅನ್ನು ಸೋಲಿಸಬೇಕು.

–ಶೋಭಾ ಕರಂದ್ಲಾಜೆ, ಮಾಜಿ ಸಚಿವೆಅಭಿವೃದ್ಧಿಗಾಗಿ ಮೋದಿ


ದೇಶದ ಗಡಿ ರಕ್ಷಣೆ, ಅರ್ಥ ವ್ಯವಸ್ಥೆ, ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಮೋದಿ ಬೆಂಬಲಿಸಬೇಕು. ತೃತೀಯ ರಂಗದ ಎಲ್ಲರಿಗೂ ಪ್ರಧಾನಿಯಾಗುವ ಬಯಕೆ. ಆದ್ದರಿಂದ, ಬಿಜೆಪಿ ಬೆಂಬಲಿಸಬೇಕು.

–ತಾವರ್‌ಚಂದ್ ಗೆಹ್ಲೋಟ್, ರಾಜ್ಯ ಉಸ್ತುವಾರಿದನ ಕಾಯ್ತಾ ಇದೀರಾ?


ಮಹಿಳಾ ಅಭಿವೃದ್ಧಿ ಬಗ್ಗೆ ಮಾತನಾಡುವ ಕಾಂಗ್ರೆಸ್ 50 ವರ್ಷ ಸುಮ್ಮನಿದ್ದಿದ್ದು ಏಕೆ? ಇಲ್ಲಿನ ಮಂತ್ರಿಗಳೇನು ದನ ಕಾಯ್ತಾ ಇದ್ದರಾ? ಕಾಂಗ್ರೆಸ್‌ನಲ್ಲಿ ಪ್ರಧಾನಿ ಆಗಲು ನೆಹರೂ ಮತ್ತು ಗಾಂಧಿ ಕುಟುಂಬದಲ್ಲೇ ಜನಿಸಿರಬೇಕು. ಆದರೆ, ಬಿಜೆಪಿಯಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗಲಿದ್ದಾರೆ.

–ತಾರಾ ಅನೂರಾಧ, ಶಾಸಕಿಖರ್ಗೆ ಕುತಂತ್ರ


ತಿಂಗಳ ಹಿಂದೆಯೇ ಮೋದಿ ರ್‍ಯಾಲಿ ದಿನಾಂಕ ನಿಗದಿ ಪಡಿಸಲಾಗಿದೆ. ಈ ವಿಷಯ ಗೊತ್ತಿದ್ದರೂ ಖರ್ಗೆ, ಸಿದ್ದರಾಮಯ್ಯ ಅವರು ವಾಡಿಯಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಕುತಂತ್ರ ಮಾಡಿದ್ದಾರೆ. ಖರ್ಗೆ, ಧರ್ಮಸಿಂಗ್ ನಿಮ್ಮ ಆಟ ಮುಗಿಯಿತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲಾಗುವುದು.

–ರೇವುನಾಯಕ ಬೆಳಮಗಿ, ಮಾಜಿ ಸಚಿವತಪ್ಪು ಮಾಡಿದ್ದೆ..


2013ರಲ್ಲಿ ಜೆಡಿಎಸ್ ಸೇರಿ ತಪ್ಪು ಮಾಡಿದ್ದೆ. ಈಗ ತಪ್ಪಿನ ಅರಿವಾಗಿದೆ. ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಮೊದಲು ಎಲ್ಲೆಡೆ ಸಚಿನ್ ಸಚಿನ್ ಎಂಬ ಅಲೆ ಇತ್ತು. ಈಗ ಮೋದಿ ಮೋದಿ ಎಂಬ ಅಲೆ ಜೋರಾಗಿದೆ.

–ರಾಜೂಗೌಡ (ನರಸಿಂಹ ನಾಯಕ), ಮಾಜಿ ಸಚಿವಮೂವರನ್ನು ಗೆಲ್ಲಿಸಿ


ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು 272 ಸೀಟು ಬೇಕು. 270ನೇ ಸೀಟು ರಾಯಚೂರು, 271ನೇ ಸೀಟು ಬೀದರ್ ಹಾಗೂ 272ನೇ ಸೀಟು ಗುಲ್ಬರ್ಗದಿಂದ ಆರಿಸಿ ಬರಬೇಕು. ಸಿದ್ದರಾಮಯ್ಯ ರಾಜ್ಯದ ಹಿಂದುಳಿದ ನಾಯಕನಾದರೆ, ಮೋದಿ ದೇಶದ ಹಿಂದುಳಿದ ನಾಯಕರಾಗಿದ್ದಾರೆ.

–ಆರ್.ಅಶೋಕ್, ಮಾಜಿ ಉಪ ಮುಖ್ಯಮಂತ್ರಿಸಚಿನ್ ಬ್ಯಾಟಿಂಗ್‌ನಂತೆ..


ಮೋದಿ ಅಲೆ ಸಚಿನ್ ಬ್ಯಾಟಿಂಗ್‌ನಂತೆ ರಾರಾಜಿಸುತ್ತಿದೆ. ದೇಶದಾದ್ಯಂತ ಮೋದಿ ಗಾಳಿ ಜೋರಾಗಿದೆ. ಬ್ರಿಟಿಷರ ಪ್ರತಿರೂಪದಂತಿರುವ ಕಾಂಗ್ರೆಸ್ ಅನ್ನು ಓಡಿಸಬೇಕು. ದೇಶ ಉಳಿಸಲು ಸಿಕ್ಕಿರುವ ಕೊನೆಯ ಅವಕಾಶವನ್ನು ಮತದಾರರು ಬಳಸಿಕೊಳ್ಳಬೇಕು. ಬಿಜೆಪಿ ಗೆಲ್ಲಿಸಬೇಕು.

–ಶಿವನಗೌಡ ನಾಯಕ್, ಮಾಜಿ ಸಚಿವಇವ ನಮ್ಮವ ಎಂದೆನಿಸಿರಯ್ಯ..


‘ಇವನಾರವ ಇವನಾರವ ಎಂದೆನಿಸದಿರಯ್ಯ..ಇವ ನಮ್ಮ ಇವ ನಮ್ಮವ ಎಂದೆನಿಸಿರಯ್ಯ..’ ಎಂಬ ಬಸವಣ್ಣನವರ ವಚನದಂತೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಗುಲ್ಬರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಮತದಾರರು ಹರಿಸಬೇಕು.

–ದತ್ತಾತ್ರೇಯ ಪಾಟೀಲ ರೇವೂರ, ಶಾಸಕ

ಅಶೋಕ್, ಕಲ್ಲೂರ ಉಸ್ತುವಾರಿ ನರೇಂದ್ರ

ಮೋದಿ ಗುಲ್ಬರ್ಗ ರ್‍ಯಾಲಿಯ ಉಸ್ತುವಾರಿ ಹೊಣೆಯನ್ನು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ರಾಜ್ಯ ಕಾರ್ಯದರ್ಶಿ ಶಿವಾನಂದ ಕಲ್ಲೂರ ಅವರಿಗೆ ವಹಿಸಲಾಗಿತ್ತು. ಮೂರು ಬಾರಿ ನಗರಕ್ಕೆ ಭೇಟಿ ನೀಡಿ ಪೂರ್ವ­ಭಾವಿ ಸಭೆ ನಡೆಸಿದ ಅಶೋಕ್, ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಮಾರ್ಗದರ್ಶನ ನೀಡಿದರು. ಶಿವಾನಂದ ಕಲ್ಲೂರ ಅವರು ಕಳೆದ 10 ದಿನಗಳದಿಂದ ನಗರದಲ್ಲೇ ಬೀಡು ಬಿಟ್ಟು ರ್‍ಯಾಲಿ ಯಶಸ್ವಿಗೆ ದುಡಿದರು.

ಎರಡು ಸಾವಿರ ಜನರೂ ಇಲ್ಲ!

ಉತ್ಸಾಹದಿಂದಲೇ ಮಾತು ಆರಂಭಿಸಿದ ಮಾಜಿ ಸಚಿವ ರೇವುನಾಯಕ ಬೆಳಮಗಿ, ‘ವಾಡಿಯಲ್ಲಿ ನಡೆಯುತ್ತಿರುವ ಖರ್ಗೆ ಹಾಗೂ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ 2 ಸಾವಿರ ಜನರೂ ಇಲ್ಲ’ ಎಂದು ಲೇವಡಿ ಮಾಡಿದರು. ‘ಖರ್ಗೆ–ಧರ್ಮಸಿಂಗ್ 50 ವರ್ಷ ಏನು ಮಾಡಿದ್ದೀರಿ, ಇನ್ನು ನಿಮ್ಮ ಆಟ ಮುಗಿಯಿತು. ಖರ್ಗೆ ನೀನು ಇದನ್ನು ತಿಳಿದುಕೋ’ ಎಂದು ಏಕವಚನದಲ್ಲೇ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.