ಬುಧವಾರ, ಏಪ್ರಿಲ್ 14, 2021
24 °C

ಕೇ ಕೇ ಕುಮಾರರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತಲ ಪತಲ ಧೂಂ ತಲಕ್ಕಾ ಹೂ..ಹಾ... ಹೂ..ಹಾ..., ಹೌಲಾ.. ಹೌಲಾ... ಏನುಂಟು ಏನಿಲ್ಲ. ಕಾಲೇಜ್ ಫಂಕ್ಷನ್ನು, ಫೆಸ್ಟ್‌ಗಳ ಸೀಸನ್ ಶುರುವಾಗೇ ಬಿಟ್ಟಿದೆ. ಯಾರು ಯಾರಿಗಾದ್ರು ಸನ್ಮಾನ ಮಾಡಲಿ, ಯಾರು ಯಾರನ್ನಾದ್ರು ಹೊಗಳಲಿ, ಇವರು ಮಾತ್ರ ಸದಾನಂದರು. ಅವರ ಕೂಗು, ಕಿರುಚಾಟ, ಅರಚಾಟ ಕೇಕೆ ಇಲ್ಲ ಅಂದ್ರೆ ಕಾಲೇಜ್ ಡೇಗೆ ಮಜಾನೇ ಬರಲ್ಲ. ಕಾಲೇಜುಗಳಲ್ಲಿ ನಡೆಯುವ ವಿಶೇಷ ಕಾರ್ಯಕ್ರಮ ಕ್ರಮಗಳಲ್ಲಿ ಮಾತ್ರ ಇವರು ಹೆಚ್ಚು ಕ್ರಿಯಾಶೀಲರು. ಅದೇನೋ ಏನೊ ಅಂದು ಇವರದ್ದು ವಿಚಿತ್ರ ವರ್ತನೆ. ಇವರೆಲ್ಲಾ ಕೇ ಕೇ ಕುಮಾರರು, ಸರೌಂಡ್ ಸೌಂಡ್ ಹುಡುಗರು ಎಂದೇ ಫೇಮಸ್!ಕಾಲೇಜ್ ಡೇ, ಫೆಸ್ಟ್‌ಗಳಲ್ಲಿ ಸಾಮಾನ್ಯವಾಗಿ ಸಭಿಕರ ಮುಂದಿನ ಸಾಲುಗಳು ವಿ.ಐ.ಪಿಗಳಿಗೆ ಮಹಿಳೆಯರಿಗೆ ಅರ್ಥಾರ್ಥ ಹುಡುಗಿಯರಿಗೆ ಮೀಸಲು. ಮಿಕ್ಕ ಜಾಗವೆಲ್ಲ ಹುಡುಗರದ್ದೆ. ಸುಮ್ಮನೆ ಕುಳಿತು ನೋಡುವ ಹುಡುಗರು ಲಂಚ ಪಡೆಯದ ಈಗಿನ ರಾಜಕಾರಣಿಗಳಷ್ಟೆ ವಿರಳ.ಅವರ ಕೂಗಾಟ, ಹಾರಾಟ, ವಿಚಿತ್ರ ನೃತ್ಯ, ಕರ್ಕಶ ಶಬ್ದಗಳು, ಕೆಲವೊಮ್ಮೆ ಖುಷಿಕೊಟ್ಟರೆ, ಕೆಲವೊಮ್ಮೆ ಬೇಜಾರು ಮೂಡಿಸುತ್ತವೆ. ಈ ಅಬ್ಬರಕ್ಕಾಗಿಯೇ ಅವರಲ್ಲಿ ತಯಾರಿಗಳಾಗ್ತಾವೆ. ಬೇಕಾದ ತಮಟೆ, ಪೀಪಿ  ಎಲ್ಲವನ್ನೂ ತರುತ್ತಾರೆ. ಈ ಗುಂಪನ್ನು ಮುನ್ನಡೆಸುವವನ್ನೊಬ್ಬ ಇರುತ್ತಾನೆ. ಮಿಕ್ಕವರೆಲ್ಲ ಹಿಂಬಾಲಕರು. ಅವನ್ನೆದರಿಸುವ ಲೆಕ್ಚರರ್‌ಗಳು (ಕೆಲವೊಮ್ಮೆ ಪೋಲಿಸರು) ಅವರ ಬಳಿಗೆ ಬರುವ ಅವಕಾಶ ಕಡಿಮೆ ಇದ್ದರೆ ಮುಗೀತು. ವೇದಿಕೆ ಎದುರೇ ಶುರು. ಯಾರ ಮುಲಾಜಿಗೂ ಸೊಪ್ಪು ಹಾಕೋಲ್ಲ.ಕಾರಣಗಳು ಹಲವು, ಹುಡುಗಿಯರ ಗುಂಪಿನ ಗಮನ ತಮ್ಮತ್ತ ಸೆಳೆಯಲು, ಫೋಟೊ ವಿಡಿಯೋಗಳಲ್ಲಿ ಮಿಂಚಲು, ಈ ರೀತಿ ಮಾಡುತ್ತಾರೆ.

ಆದರೆ, ಇತ್ತೀಚಿನ ಕೆಲ ಯುವಕರ ಪ್ರಕಾರ ಲೆಕ್ಚರರ್‌ಗಳನ್ನು ರೇಗಿಸುವ ಒಂದು ಪರಿ ಇದು! ಇವೆಲ್ಲಕ್ಕೂ ಮಿಗಿಲಾದ ವಿಚಿತ್ರ, ವಿಭಿನ್ನ ಕಾರಣ ಒಂದಿದೆ. ಅದೇನು ಅಂದರೆ, ಕಾಲೇಜು ಜೀವನ ಕ್ಷಣಿಕ, ಇಂತಹ ಸಂಭ್ರಮ, ಸಮಾರಂಭಗಳಲ್ಲಿ ಹೀಗೆಲ್ಲಾ ಆಡಿ ಒಂದು ನೆನಪಾಗಿ ಉಳಿಸಿಕೊಳ್ಳುವ ಇರಾದೆ ಕೆಲವರದ್ದು.ಎಲ್ಲರೂ ಅವರವರ ವರ್ತನೆಗೆ ಸ್ವಭಾವತಃ ಸ್ವತಂತ್ರರು. ಈಗೀಗ ಹುಡುಗಿಯರು ಕೂಡ ಇದೇ ರೀತಿ ಕುಣಿದು ಕುಪ್ಪಳಿಸಿ ಆನಂದಿಸುವುದು, ಹುಡುಗರ ಜೊತೆ ಸೇರಿ ಕೂಗಾಡುವುದು, ಎಂಜಾಯ್ ಮಾಡುವುದು ಹೈಟೆಕ್ ಸಿಟಿಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಅದೊಂದು ಟ್ರೆಂಡ್ ಆಗಿಯೂ ಬದಲಾಗಿದೆ.ಎಲ್ಲವೂ ಚಂದವೇ. ಆದರೆ ಇದೇ ನೆಪದಲ್ಲಿ ಅವಾಚ್ಯ ಶಬ್ದಗಳನ್ನು ಬಳಸುವುದು, ಅಸಭ್ಯವಾಗಿ ವರ್ತಿಸುತ್ತ ಅಶ್ಲೀಲ ಸನ್ನೆಗಳನ್ನು ಮಾಡುವುದು ಅಷ್ಟು ಚೆನ್ನಾಗಿ ಕಾಣಿಸುವುದಿಲ್ಲ. ಹಾಗೆ ಮಾಡುವುದರಿಂದ ಬಂದ ಅತಿಥಿಗಳ ಮುಂದೆ ಕಾಲೇಜಿನ ಮರ್ಯಾದೆ ಹಾಳು ಮಾಡಿದಂತಾಗುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ತಮ್ಮ ಮಾನವನ್ನೇ ಹರಾಜು ಹಾಕಿಕೊಂಡಂತೆ ಆಗುತ್ತದೆ. ಹುಡುಗಿಯರನ್ನು, ಲೆಕ್ಚರರ್‌ಗಳನ್ನು ರೇಗಿಸುವುದು ತಪ್ಪಲ್ಲ. ಅದು ಒಂದು ಮಿತಿಯಲ್ಲಿದ್ದರೆ ಚೆನ್ನಾಗಿರುತ್ತೆ. ನಮ್ಮ ಕೂಗಾಟ, ಕುಣಿದಾಟ ಭಾಗವಹಿಸಿರುವ ಸ್ಪರ್ಧಿಗಳಿಗೆ, ಕಲಾವಿದರಿಗೆ ಹೆದರಿಸುವಂತೆ ಇರಬಾರದು. ವೇದಿಕೆ ಮೇಲೆ ಕುಣಿಯುವವರ ಹೆಜ್ಜೆಗೆ ಹೆಜ್ಜೆ ಹಾಕೋಣ, ಅವರನ್ನು ಪ್ರೋತ್ಸಾಹಿಸುತ್ತ ಶಿಳ್ಳೆ, ಚಪ್ಪಾಳೆಯ ಮಳೆ ಸುರಿಸೋಣ, ಗೆಳೆಯರ ಬಳಗದಲ್ಲಿ ಮ್ಯೂಸಿಕ್ ಬೀಟ್‌ಗೆ ಕುಣಿದು ಮಜಾ ಮಾಡೋಣ ಹಾಗಂತ ಯಾರಿಗೂ ತೀರ ಕಿರಿಕಿರಿ ಉಂಟುಮಾಡುವುದು ಬೇಡ. ಯಾರ ವೈರತ್ವವನ್ನು ಬೆಳೆಸಿಕೂಳ್ಳುವುದು ಬೇಡ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.