ಕೈಕಟ್ಟಿ ಕುಳಿತ ಸ್ಥಾಯಿ ಸಮಿತಿ

7

ಕೈಕಟ್ಟಿ ಕುಳಿತ ಸ್ಥಾಯಿ ಸಮಿತಿ

Published:
Updated:
ಕೈಕಟ್ಟಿ ಕುಳಿತ ಸ್ಥಾಯಿ ಸಮಿತಿ

ಬೆಂಗಳೂರು: ನಗರದಲ್ಲಿ ನಿಯಮಗಳನ್ನು ಉಲ್ಲಂಘಿಸಿ ರಾಜಾರೋಷವಾಗಿ ನಿರ್ಮಿಸುತ್ತಿರುವ ಕಟ್ಟಡಗಳ ಸಂಖ್ಯೆಗೇನೂ ಕಡಿಮೆಯಿಲ್ಲ! ವಿಚಿತ್ರವೆಂದರೆ, ನಿಯಮಗಳನ್ನು ಗಾಳಿಗೆ ತೂರಿ ನಿರ್ಮಿಸುವಂತಹ ಕಟ್ಟಡಗಳಿಗೆ ಪಾಲಿಕೆ ಎಂಜಿನಿಯರ್‌ಗಳು ನೋಟಿಸ್ ನೀಡಿದರೂ ಕಾಮಗಾರಿ ಮಾತ್ರ ನಿಲ್ಲುವುದಿಲ್ಲ.

ನೋಟಿಸ್ ತಲುಪಿದ ತಕ್ಷಣ    ಮಾಲೀಕ ಕಟ್ಟಡದ ಕೆಲಸವನ್ನು ನಿಲ್ಲಿಸುವುದೂ ಇಲ್ಲ. ಬದಲಿಗೆ, ನೋಟಿಸ್‌ಗೆ ಉತ್ತರ ನೀಡದೆಯೇ ಕಟ್ಟಡ ನಿರ್ಮಾಣ ಕೆಲಸ ಪೂರ್ಣಗೊಳಿಸುತ್ತಾನೆ. ಇಂತಹ ಲೆಕ್ಕವಿಲ್ಲದಷ್ಟು ಉದಾಹರಣೆಗಳು ಬಿಬಿಎಂಪಿ ಮುಂದಿವೆ. ಆದರೆ, ನೇರವಾಗಿ ಕಾನೂನನ್ನು ಉಲ್ಲಂಘಿಸುವವರ ವಿರುದ್ಧ ಎಂಜಿನಿಯರ್‌ಗಳು ಎಷ್ಟು ಪ್ರಕರಣಗಳಲ್ಲಿ ಕ್ರಮ ಜರುಗಿಸಲು ಆಯುಕ್ತರಿಗೆ ಶಿಫಾರಸು ಮಾಡಿದ್ದಾರೆ.

ಎಷ್ಟು ಪ್ರಕರಣಗಳಲ್ಲಿ ಆಯುಕ್ತರು ಕ್ರಮ ಜರುಗಿಸಿದ್ದಾರೆ? ನಗರ ಯೋಜನೆಯ ನಿಯಮಗಳನ್ನು ಪಾಲಿಸುವುದಕ್ಕಾಗಿ ರಚನೆಯಾದ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಕ್ರಮಗಳಿಗೆ ಕಡಿವಾಣ ಹಾಕುವ ಬದಲು ಇನ್ನೇನು ಕೆಲಸ ಮಾಡುತ್ತಿದೆ? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಸಿಗದೆ ಪ್ರಶ್ನೆಗಳು ಪ್ರಶ್ನೆಗಳಾಗಿವೆಯೇ ಉಳಿದಿವೆ.ಹಾಗಾದರೆ, ನಗರ ಯೋಜನೆ ಸ್ಥಾಯಿ ಸಮಿತಿ ಏನೂ ಕೆಲಸ ಮಾಡುತ್ತಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಅಕ್ರಮ ಕಟ್ಟಡಗಳ ನಿರ್ಮಾಣದ     ಬಗ್ಗೆ ಸಮಿತಿಗೆ ಮಾಹಿತಿ ಸಿಕ್ಕರೂ ಬಹುತೇಕ ಪ್ರಕರಣಗಳಲ್ಲಿ ಯಾರಿಗೂ ಗೊತ್ತಾಗದಂತೆ ಮುಚ್ಚಿ ಹೋಗುತ್ತಿವೆ ಎಂಬ ಮಾತನ್ನು ಪಾಲಿಕೆ ಸದಸ್ಯರೇ        ಒಪ್ಪಿಕೊಳ್ಳುತ್ತಾರೆ.ಎಂಜಿನಿಯರ್‌ಗಳಿಂದಲೇ ಶುರು: ನಕ್ಷೆ ಮಂಜೂರಾತಿ ನೀಡಿದ ನಂತರ ಕಟ್ಟಡ ನಿರ್ಮಾಣದ ಪ್ರತಿ ಹಂತದಲ್ಲೂ ಉಪ ವಿಧಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವುದು ಪಾಲಿಕೆ ಎಂಜಿನಿಯರ್‌ಗಳ ಕರ್ತವ್ಯ. ಆದರೆ, ಇಂತಹ ಉಲ್ಲಂಘನೆ ಪ್ರಕರಣಗಳು ಎಂಜಿನಿಯರ್‌ಗಳ ಗಮನಕ್ಕೆ ಬಂದರೂ ಕೆಲವು ಎಂಜಿನಿಯರ್‌ಗಳ ಹಂತದಲ್ಲೇ ಮುಚ್ಚಿ ಹೋದರೆ, ಇನ್ನೂ ಕೆಲವಕ್ಕೆ ನೋಟಿಸ್ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಮಾಲೀಕರು ಹಾಗೂ ಎಂಜಿನಿಯರ್‌ಗಳ `ಒಳ ಒಪ್ಪಂದ~ದಿಂದಾಗಿ ಅಕ್ರಮ     ಕಟ್ಟಡಗಳಿಗೆ ಕಡಿವಾಣ ಹಾಕಲು    ಬಿಬಿಎಂಪಿಗೆ ಸಾಧ್ಯವಾಗುತ್ತಿಲ್ಲ.ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸುವ ಮಾಲೀಕರ ವಿರುದ್ಧ ಕೆಎಂಸಿ ಕಾಯ್ದೆ 321 ಪ್ರಕಾರ, ಎಂಜಿನಿಯರ್‌ಗಳು ನೋಟಿಸ್ ಜಾರಿಗೊಳಿಸಿ ಕ್ರಮ       ಜರುಗಿಸಲು ಆಯುಕ್ತರಿಗೆ ಶಿಫಾರಸು ಮಾಡಬಹುದು. ಆದರೆ, ಬೈಲಾ ಉಲ್ಲಂಘಿಸಿದ ಕಟ್ಟಡ ಮಾಲೀಕರ ವಿರುದ್ಧ ಪಾಲಿಕೆ ಎಂಜಿನಿಯರ್‌ಗಳಾಗಲೀ ಅಥವಾ ಆಯುಕ್ತರಾಗಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿಲ್ಲ ಎಂಬ ಆರೋಪ ಸಹಜವಾಗಿ ಕೇಳಿ ಬರುತ್ತಿದೆ.ಹೊಸ ವಾರ್ಡ್‌ಗಳಲ್ಲಿ ಉಲ್ಲಂಘನೆ ಹೆಚ್ಚು:ಬಿಬಿಎಂಪಿಯ ಹಳೇ ವಾರ್ಡ್‌ಗಳಿಗಿಂತ ಹೊಸದಾಗಿ ಸೇರ್ಪಡೆಯಾದಂತಹ ಪ್ರದೇಶಗಳಲ್ಲಿಯೇ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಿರುವುದು ಹೆಚ್ಚು. ಏಕೆಂದರೆ, ಭೂ ಪರಿವರ್ತನೆಯಾಗದಂತಹ ನಿವೇಶನಗಳಲ್ಲಿ ಖಾತೆ ಪಡೆಯದೆ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡಗಳು ಇನ್ನೂ ಕಂದಾಯ ವ್ಯಾಪ್ತಿಗೊಳಪಟ್ಟಿಲ್ಲ.ಬಿಬಿಎಂಪಿ ಅಥವಾ ಬಿಡಿಎ ಜಾಗ ಹೊರತುಪಡಿಸಿ ವ್ಯವಸಾಯ ಭೂಮಿಯಲ್ಲಿಯೂ ಯಥೇಚ್ಛವಾದ ಕಟ್ಟಡಗಳು ತಲೆ ಎತ್ತಿವೆ. ಇಂತಹ ಕಟ್ಟಡಗಳನ್ನು ಅಕ್ರಮ-ಸಕ್ರಮದ ಮೂಲಕ ಸಕ್ರಮಗೊಳಿಸಲು ಅವಕಾಶವಿದೆ. ಖಾತೆ ಇಲ್ಲದ ನಿವೇಶನಗಳಲ್ಲಿ ನಕ್ಷೆ ಮಂಜೂರು    ಸಹ ಆಗುವುದಿಲ್ಲ. ನೀರು ಮತ್ತು ವಿದ್ಯುತ್ ಸಂಪರ್ಕವೂ ದೊರಕದು.

ಆದರೆ, ಇಂತಹ ಪ್ರದೇಶಗಳಲ್ಲಿಯೂ ಕಾನೂನು ಉಲ್ಲಂಘಿಸಿ ಕಟ್ಟಡಗಳನ್ನು ರಾಜಾರೋಷವಾಗಿ ನಿರ್ಮಿಸಲು    ಅಧಿಕಾರಿಗಳ ` ಕೃಪಾಕಟಾಕ್ಷ~ ಇರುವುದು ಎದ್ದು   ಕಾಣುತ್ತದೆ.ಆಯುಕ್ತರ ಜವಾಬ್ದಾರಿ ಹೆಚ್ಚು: ಕಟ್ಟಡ ಉಲ್ಲಂಘನೆ ಪ್ರಕರಣಗಳಲ್ಲಿ ಸಾರ್ವಜನಿಕರು ನೀಡಿದ ದೂರಿನ ಅನ್ವಯ   ಪಾಲಿಕೆ ಆಯುಕ್ತರಿಗೆ ಕಾನೂನುರೀತ್ಯ ಕ್ರಮ ಜರುಗಿಸುವ ಅಧಿಕಾರ ಇದೆ. ಆದರೆ, ಇಂತಹ ಪ್ರಕರಣಗಳಲ್ಲಿ ಎಷ್ಟು ಕಟ್ಟಡ ಮಾಲೀಕರ ವಿರುದ್ಧ ದೂರುಗಳು ಬಂದಿವೆ? ಮಾಲೀಕರ ಜತೆ ಶಾಮೀಲಾಗಿರುವ ಎಷ್ಟು ಎಂಜಿನಿಯರ್‌ಗಳ ವಿರುದ್ಧ ಆಯುಕ್ತರು ಕ್ರಮ ಜರುಗಿಸಿದ್ದಾರೆ ಎಂಬ ಬಗ್ಗೆ ವಿಷಯ ಬಹಿರಂಗಗೊಳ್ಳುವುದೇ ಇಲ್ಲ.ಅಕ್ರಮ ಕಟ್ಟಡಗಳ ವಿಚಾರದಲ್ಲಿ   ದೂರು ಯಾರೇ ನೀಡಲಿ, ನಿಯಮ ಉಲ್ಲಂಘನೆ ಎಂಬುದು ದೊಡ್ಡ ಪ್ರಮಾಣದಲ್ಲಾಗಲಿ ಅಥವಾ ಚಿಕ್ಕ ಪ್ರಮಾಣದಲ್ಲಾಗಲೀ, ಉಲ್ಲಂಘನೆ ಉಲ್ಲಂಘನೆಯೇ. ಒಂದು ವೇಳೆ ಪಾಲಿಕೆ ಸದಸ್ಯರು ಇದರಲ್ಲಿ ಶಾಮೀಲಾಗಿದ್ದರೂ ಆಯುಕ್ತರು ಕ್ರಮ ಜರುಗಿಸಬಹುದು. ಆದರೆ, ಇಂತಹ ಪ್ರಕರಣಗಳಲ್ಲಿ ಆಯುಕ್ತರು ಕೂಡ ಶಾಸಕರ ಅಥವಾ ಸಚಿವರ ಒತ್ತಡಕ್ಕೆ ಮಣಿದು ಕ್ರಮ ಜರುಗಿಸುವಂತಹ ಪ್ರಯತ್ನಕ್ಕೆ    ಕೈ ಹಾಕಿಲ್ಲ ಎಂಬ ಆರೋಪಗಳೂ   ಕೇಳಿ ಬರುತ್ತಿವೆ.ಇಂತಹ ಲೋಪಗಳಿಂದಾಗಿಯೇ ಹೈಕೋರ್ಟ್ ಆಗಾಗ್ಗೆ ಆಯುಕ್ತರನ್ನು ನ್ಯಾಯಾಲಯಕ್ಕೆ ಕರೆಸಿ ತರಾಟೆಗೆ ತೆಗೆದುಕೊಳ್ಳುತ್ತಿದೆ. ಆದರೆ, ಅಧಿಕಾರಿಗಳು ಚಾಪೆ ಕೆಳಗೆ ತೂರಿದರೆ ಜನರು ರಂಗೋಲಿ ಕೆಳಗೆ ತೂರುತ್ತಿರುವುದರಿಂದ ನಗರದಲ್ಲಿ ಅಕ್ರಮ ಕಟ್ಟಡಗಳಿಗೆ ಕಡಿವಾಣ  ಇಲ್ಲದಂತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry