ಕೈಕಾಲು ಆಡಿಸುವುದೇ ನೃತ್ಯವಲ್ಲ

7

ಕೈಕಾಲು ಆಡಿಸುವುದೇ ನೃತ್ಯವಲ್ಲ

Published:
Updated:
ಕೈಕಾಲು ಆಡಿಸುವುದೇ ನೃತ್ಯವಲ್ಲನೃತ್ಯವೆಂದರೆ ಕೈಕಾಲುಗಳನ್ನು ಆಡಿಸುವುದಲ್ಲ, ನೃತ್ಯವೆಂದರೆ ಮನಸ್ಸನ್ನು ಆಹ್ಲಾದಗೊಳಿಸುವುದು, ಅಲ್ಲಿ ಲಾಸ್ಯವಿರಬೇಕು. ಲಜ್ಜೆ ಕಡ್ಡಾಯ ಎಂದು ಸರೋಜ್ ಖಾನ್ ಹೇಳುತ್ತಿದ್ದರು.ನಗರದ ಜೈನ್ ಸಂಸ್ಥೆ ಹಮ್ಮಿಕೊಂಡಿದ್ದ `ಲಾಸ್ಯ~ ಉತ್ಸವದಲ್ಲಿ ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಸರೋಜ್ ಖಾನ್ ಬಂದಿದ್ದರು. ಮಾಸ್ಟರ್‌ಜಿ ಮುಖದ ಮೇಲೆ ಕಾಠಿಣ್ಯವಿತ್ತು. ಮೂರು ಹರಳಿನ ಮೂಗುತಿಯ ಮೇಲೆ ಲೈಟಿನ ಬೆಳಕು ಬಿದ್ದು ಪ್ರತಿಫಲನಗೊಳ್ಳುತ್ತಿತ್ತು.ಆ ವಜ್ರದಷ್ಟೇ ಕಠಿಣ, ಆದರೆ ಬೆಳಕು ಬೀರುವ ಮಾತುಗಳೇ ಅವರು ಆಡಿದ್ದು. ಗಾಢ ಹಳದಿ ವರ್ಣದ ಚೂಡಿದಾರ್‌ನಲ್ಲಿ ಸರೋಜ್ ಖಾನ್ ಮೆಲುಧ್ವನಿಯಲ್ಲಿ ಆದರೆ ದೃಢವಾಗಿ ಮಾತನಾಡುತ್ತಿದ್ದರು.`ಏ... ಬಚ್ಚೋಂಕೆ ಪಾಸ್ ಶ್ರದ್ಧಾ ನಾಮ್‌ಕಿ ಚೀಜ್ ಹೀ ನಹಿ ಹೈ~ (ಈ ಮಕ್ಕಳ ಬಳಿ ಶ್ರದ್ಧೆ ಎಂಬುದೇ ಇಲ್ಲ) ಇವರೆಲ್ಲ ಕೈಕಾಲಾಡಿಸುವುದು, ಮೈ ಕುಲುಕಾಡಿಸುವುದು ಇದನ್ನೇ ನೃತ್ಯ ಎಂದುಕೊಂಡಂತೆ ಇದೆ...ದೇಶವಿಡೀ `ನಚ್‌ವೇ ವಿತ್ ಸರೋಜ್ ಖಾನ್~ ಕಾರ್ಯಕ್ರಮದಿಂದ ಮಾಸ್ಟರ್‌ಜಿ ಎಂದೇ ಪ್ರಸಿದ್ಧರಾಗಿರುವ ಬಾಲಿವುಡ್ ನೃತ್ಯ ಸಂಯೋಜಕಿ   ಕಾಲೇಜೊಂದರ ನೃತ್ಯ ತಂಡದ ಕಳಪೆ ಪ್ರದರ್ಶನ ನೋಡಿದ ಅವರು ಮಾತಿಗಿಳಿದಿದ್ದೇ ಇಂಥ ಅಸಮಾಧಾನದಿಂದ. ಮಕ್ಕಳ ಕಲಿಕೆಯ ಬಗ್ಗೆ ಹೇಳುವುದೇನು? ಪೋಷಕರ ನಿರೀಕ್ಷೆಯೂ ಬದಲಾಗಿದೆ. ನೃತ್ಯ ಕಲಿಯಲು ಬಂದ ಒಂದೆರಡು ತಿಂಗಳಲ್ಲಿಯೇ ತಮ್ಮ ಮಕ್ಕಳು ಸ್ಟೇಜ್ ಶೋ ನೀಡಬಹುದೇ ಎಂದು ಪ್ರಶ್ನಿಸುತ್ತಾರೆ.`ನೃತ್ಯ ಕೇವಲ ಪ್ರದರ್ಶನಕ್ಕೆ, ಹೆಸರು ಮಾಡಲು ಅಥವಾ ಹಣ ಮಾಡಲು ಅಲ್ಲ. ಅದು ಕಲೆ. ಇಲ್ಲಿ ಮೈಮನಸುಗಳ ಸುಳಿಯಲ್ಲಿ ನಾವು ಸುಳಿದಾಡಬೇಕು. ಆಗ ನಮ್ಮಿಡೀ ದೇಹವೇ ನಾದದೊಂದಿಗೆ ಓಲಾಡುತ್ತದೆ. ಅದು ತಪಸ್ಸು. ತಪಸ್ಸಿಗೆ ಬೇಕಿರುವ ಏಕಾಗ್ರ ಚಿತ್ತ, ನಾದ, ಭಾವಗಳ ಅರಿವು ಇರಲೇಬೇಕು.

 

ಆಗಲೇ ನವಿಲಿನ ನರ್ತನ ಬರುವುದು. ಇಲ್ಲದಿದ್ದರೆ ಚಾಟಿಯೇಟು ನೀಡಿದರೆ ಮಂಗವೂ ಕುಣಿಯುತ್ತದೆ ಅಲ್ಲವೇ?~ ಎಂದು ಬಲಗಡೆಯ ಹುಬ್ಬೇರಿಸಿ, ತುಟಿ ಕೊಂಕಿಸಿ ಮಾತಿನ ಚಾಟಿ ಏಟು ಕೊಟ್ಟರು.ಹಕ್ಕಿ ಹಾರುವುದನ್ನು ಮಕ್ಕಳಾದಿಯಾಗಿ ಎಲ್ಲರೂ ಕೈ ಬೀಸಿ ತೋರುತ್ತಾರೆ. ಯಾಕೆಂದರೆ ಆಗ ಅವರ ಮನ ಹಾರಾಡುತ್ತದೆ. ಅದೇ ರೀತಿ, ಒಂದು ಹಾಡು ಅಥವಾ ವಾದ್ಯಕ್ಕೆ ತನ್ನದೇ ಆದ ಭಾವಲಹರಿ ಇರುತ್ತದೆ. ಅದನ್ನು ಅನುಭವಿಸುವವರೆಗೂ ಕ್ರಿಯೆಗಿಳಿಸುವುದು ಕಷ್ಟವೇ ಎನ್ನುತ್ತಾರೆ ಅವರು.ಸರೋಜ್ ಖಾನ್ ಅವರು ಶ್ರೀದೇವಿಯಿಂದ ಅನುಷ್ಕಾ ಶರ್ಮಾವರೆಗೂ ಎಲ್ಲ ನಟಿಯರಿಗಾಗಿ ನೃತ್ಯ ಸಂಯೋಜಿಸಿದ್ದಾರೆ. ಎಲ್ಲ ಬಗೆಯ ನೃತ್ಯಗಳನ್ನೂ ಸಂಯೋಜಿಸಿದ್ದಾರೆ. ಇವರಲ್ಲಿ ಶ್ರೀದೇವಿ, ಮಾಧುರಿ ದೀಕ್ಷಿತ್ ನೃತ್ಯಗಳಲ್ಲಿ ಒಂದು ಲಾಲಿತ್ಯವಿದೆ. ಅವರಿಗೆ ಹೆಣ್ತನ ನೋಡಲು ಅಲ್ಲ ಎಂಬ ಅರಿವಿದೆ.ಅದರೊಂದಿಗೆ ದೇಹವನ್ನು ಬಳಕುವಂತೆ, ಬಾಗುವಂತೆ ಮಾಡಿದರೂ ಇಡೀ ದೃಷ್ಟಿ ಕೇವಲ ನೃತ್ಯದ ಭಾವದ ಮೇಲೆ ಕೇಂದ್ರೀಕರಿಸುವಂತೆ ಮಾಡುವ ಕಲೆ ಇದೆ. ಇದು ನೃತ್ಯಪಟುಗಳಿಗೆ ಬೇಕಿರುವ ಚಾತುರ್ಯ. ನೃತ್ಯದ ಪಟ್ಟುಗಳು ನಮ್ಮಲ್ಲಿ ಅಂತರ್ಗತವಾಗಬೇಕು. ರಕ್ತದೊಂದಿಗೆ ಪ್ರವಹಿಸಬೇಕು. ಆಗ ಲಾಲಿತ್ಯ ಬರುತ್ತದೆ ಎನ್ನುತ್ತಾರೆ ಅವರು.64ರ ಹರೆಯದ ಸರೋಜ್ ಇವತ್ತಿಗೂ ಹೇಳುವುದು ಒಂದೇ ಮಾತು, ದೇಹವನ್ನು ಕುಲುಕಾಡಿಸಬೇಡಿ. ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಭಾವವನ್ನು ಹರಿಯಬಿಡಿ. ಇದನ್ನು ಮಾಧುರಿ ದೀಕ್ಷಿತ್ ತುಂಬಾ ಚೆನ್ನಾಗಿ ಮಾಡುತ್ತಾರೆ.`ಶಾಗಿರ್ದ್ ಹೋ ತೊ ಐಸಾ~ ಎಂಬ ಮೆಚ್ಚುಗೆಯನ್ನೂ ನೀಡುತ್ತಾರೆ. ದಿನಾ ಬೆಳಗ್ಗೆ ಎದ್ದು ಚಹ ಕುಡಿದು, ಸ್ಯಾಂಡ್‌ವಿಚ್ ತಿಂದು ತಮ್ಮ ನೃತ್ಯ ಕ್ಲಾಸುಗಳಿಗೆ ಹೊರಡುತ್ತಾರೆ. 

ಇವರ ಬದುಕೇನೂ ನೃತ್ಯದಷ್ಟೇ ಸರಳವಾಗಿರಲಿಲ್ಲ.ಅದನ್ನು ಅವರು ಎಲ್ಲರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಈಗಿರುವ ಸರೋಜ್‌ಖಾನ್ ಚಿತ್ರಣ ಸಾಕು. ಹೆಜ್ಜೆ ಹಾಕಿಕೊಂಡು, ಮುಗಳ್ನಗುತ್ತ ಇರುವ ಸರೋಜ್ ಬಗ್ಗೆ ಮಾತ್ರ ಮಾತಾಡಿ. ಸರೋಜ್ ಹಿಂದಿನ ನೆನಪು, ಕಹಿ, ಕಷ್ಟಗಳನ್ನೆಲ್ಲ, ಹೆಜ್ಜೆಗಳೊಂದಿಗೆ ತೂರಿ ಬಿಟಿದ್ದೇನೆ ಎನ್ನುವ ಅವರಿಗೆ ಸೂತ್ರಧಾರ ಕಡು ಕಷ್ಟದ ಬದುಕನ್ನೇ ನೀಡಿದ್ದಾನೆ. ಭಾರತ-ಪಾಕ್ ವಿಭಜನೆಯ ಸಮಯದಲ್ಲಿ ಅವರ ಕುಟುಂಬ ಭಾರತಕ್ಕೆ ಬಂದಿತು. ಬಾಲ್ಯದಲ್ಲಿಯೇ ಅಪ್ಪನನ್ನು ಕಳೆದುಕೊಂಡರು. `ನಜರಾನಾ~ ಚಿತ್ರದ ಮೂಲಕ ಕೆರಿಯರ್ ಆರಂಭಿಸಿದರು. ಆಗ ಅವರ ವಯಸ್ಸು ಮೂರೇ ವರ್ಷ.

 

ಮದುವೆಯಾದದ್ದು 13ನೇ ವಯಸ್ಸಿನಲ್ಲಿ! ಯಜಮಾನರಿಗೆ ಆಗಲೇ 43 ವರ್ಷ. ಮೊದಲ ಮಗ ಹುಟ್ಟಿದ್ದು ಅವರ 14ನೇ ವಯಸ್ಸಿನಲ್ಲಿ.  1988ರಲ್ಲಿ ತೇಜಾಬ್ ಚಿತ್ರಕ್ಕೆ ಫಿಲ್ಮ್‌ಫೇರ್ ಪ್ರಶಸ್ತಿ ಬಂತು.  ಈವರೆಗೆ 200 ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

-

ಸರೋಜ್ ಖಾನ್‌ಗೆ ಏನಿಷ್ಟ?- ಮಾಧುರಿ ದೀಕ್ಷಿತ್ ಜೊತೆ ಕೆಲಸ ಮಾಡುವುದು-ಹಸಿರು ಸೊಪ್ಪಿನ ಸಲಾಡ್ ತಿನ್ನುವದು-ನೃತ್ಯದ ತರಗತಿಗಳಿಂದ ಬಿಡುಗಡೆ ಸಿಕ್ಕರೆ ಎಚ್ಚರವಿಲ್ಲದಂತೆ ಸಕ್ಕರೆ ನಿದ್ದೆ ಮಾಡುವುದು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry