ಭಾನುವಾರ, ಜನವರಿ 26, 2020
28 °C

ಕೈಕಾಲು ಕಟ್ಟಿ ಈಜಿ ಗಿನ್ನೆಸ್‌ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕೈ– ಕಾಲುಗಳನ್ನು ಕಟ್ಟಿಕೊಂಡು ಅರಬ್ಬಿ ಸಮುದ್ರದ ಸೇಂಟ್‌ ಮೆರೀಸ್‌ ದ್ವೀಪದಿಂದ ಮಲ್ಪೆ ಕಡಲ ಕಿನಾರೆವರೆಗೆ ಒಟ್ಟು 3.07 ಕಿ.ಮೀ. ದೂರವನ್ನು 2ಗಂಟೆ 43ನಿಮಿಷ 35 ಸೆಕೆಂಡ್‌ನಲ್ಲಿ ಕ್ರಮಿಸುವ ಮೂಲಕ ಕೋಡಿ ಕನ್ಯಾನದ ಗೋಪಾಲ ಖಾರ್ವಿ ಅವರು ಭಾನುವಾರ ಗಿನ್ನೆಸ್‌ ದಾಖಲೆ ಮಾಡಿದ್ದಾರೆ.ಗಿನ್ನೆಸ್‌ ದಾಖಲೆ ಪರವಾಗಿ ಲಂಡನ್‌ನಿಂದ ಆಗಮಿಸಿದ್ದ ಪ್ರವೀಣ್‌ ಪಟೇಲ್‌ ಅವರು ಇದನ್ನು ಅಧಿಕೃತವಾಗಿ ಘೋಷಿಸಿ ಪ್ರಮಾಣಪತ್ರ ನೀಡಿದರು.ಉಡುಪಿ ಇನ್‌ಸ್ಪೆಕ್ಟರ್‌ ಮಾರುತಿ ನಾಯಕ್‌ ಅವರು ಸೇಂಟ್‌ ಮೇರಿಸ್‌ ದ್ವೀಪದಲ್ಲಿ ಗೋಪಾಲ ಖಾರ್ವಿ ಅವರ ಕಾಲುಗಳನ್ನು ಕಟ್ಟಿ ಎರಡು ಕೈಗಳಿಗೆ ಕೋಳ ತೊಡಿಸಿದರು. ಬೆಳಿಗ್ಗೆ 7.37ಕ್ಕೆ ಸೇಂಟ್‌ ಮೇರಿಸ್‌ ದ್ವೀಪದಿಂದ ಈಜಲು ಆರಂಭಿಸಿದ ಅವರು ಸರಿಯಾಗಿ 10.20ಕ್ಕೆ ಮಲ್ಪೆ ಸಮುದ್ರ ಕಿನಾರೆ ತಲುಪಿದರು.ಈ ಪ್ರಕ್ರಿಯೆಗಳನ್ನು ವಿಡಿಯೋ ಚಿತ್ರೀಕರಣ ಮಾಡಲಾಯಿತು. ಒಟ್ಟು ದೂರವನ್ನು ನಿಖರವಾಗಿ ಅಳೆಯಲು ಜಿಪಿಎಸ್‌ ಬಳಸಲಾಯಿತು.

ದ್ವೀಪದಿಂದ ಈಜಲು ಆರಂಭಿಸಿದಾಗ ಶೀರೂರು ಮಠದ ಲಕ್ಷ್ಮೀವರ ಸ್ವಾಮೀಜಿ ದೋಣಿಯಲ್ಲಿ ಸಾಗಿ ಅವರನ್ನು ಹುರಿದುಂಬಿಸಿದರು. ಮಲ್ಪೆ ಸಮುದ್ರ ಕಿನಾರೆಗೆ ಬಂದಾಗ ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ ಕುಮಾರ್‌ ಸೊರಕೆ, ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ, ಶಾಸಕ ಪ್ರಮೋದ್‌ ಮಧ್ವರಾಜ್‌ ಸ್ವಾಗತಿಸಿದರು.ವೃತ್ತಿಯಲ್ಲಿ ಮೀನುಗಾರರಾಗಿರುವ ಗೋಪಾಲ್‌ ಖಾರ್ವಿ ಅವರು ಸಹಜವಾಗಿಯೇ ಈಜಿನಲ್ಲಿ ಆಸಕ್ತಿ ಬೆಳೆಸಿಕೊಂಡವರು. ಈಜುತ್ತ ಅದರಲ್ಲೇ ಹಲವು ಪ್ರಯೋಗಗಳನ್ನು ಮಾಡಿ ಒಂದೊಂದೇ  ಮೆಟ್ಟಿಲೇರಿ ಈಗ ಗಿನ್ನೆಸ್ ದಾಖಲೆ ಮಾಡಿದ್ದಾರೆ. ವಿಭಿನ್ನ ರೀತಿಯಲ್ಲಿ ಈಜಿ ಸಾಹಸ ಮಾಡಿರುವ ಅವರು ‘ಲಿಮ್ಕಾ ನ್ಯಾಷ­ನಲ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್ಸ್‌ 2011’ರಲ್ಲಿ ಹೆಸರು ದಾಖಲಿಸಿದ್ದಾರೆ.

ಪ್ರತಿಕ್ರಿಯಿಸಿ (+)