ಭಾನುವಾರ, ಜೂನ್ 20, 2021
26 °C

ಕೈ,ಕಾಲು ಕಳೆದುಕೊಂಡ ಬಾಲಕರು..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಳಗಿ: ಇಲ್ಲಿನ ಗಾಂಧಿನಗರದ ಮನೆಯ ಮಾಳಿಗೆಯ ಮೇಲೆ ಆಟ ವಾಡಲು ಹೋದ ಬಾಲಕರಿಬ್ಬರು ವಿದ್ಯುತ್  ಪ್ರವಹಿಸುತ್ತಿದ್ದ ತಂತಿ ಹಿಡಿದು  ಕೈ,ಕಾಲುಗಳನ್ನು ಕಳೆದುಕೊಂಡು ಅಂಗವಿಕಲರಾದ ಹೃದಯ ವಿದ್ರಾವಕ ಘಟನೆ ಶನಿವಾರ ಸಂಜೆ ನಡೆದಿದೆ.ಏಳು ವರ್ಷದ ಬಾಲಕ ಕಾರ್ತಿಕ ಕೃಷ್ಣಾ ಮಾರನಬಸರಿ ಎಂಬ ಬಾಲಕನ ಕೈ ವಿದ್ಯುತ್ ಶಾಕ್‌ನಿಂದ ತುಂಡಾಗಿ ಮಾಳಿಗೆಯ ಮೇಲೆ ಬಿದ್ದಿದ್ದರೆ, ಶ್ರೇಯಸ್(8) ಪತ್ರಿಮಠ ಎಂಬಾತನ ಕೈ,ಕಾಲುಗಳು ಮುರುಟಿ ಹೋಗಿವೆ.ಐದು ಜನ ಬಾಲಕರು ಸೇರಿ ಆಟವಾಡಲು ಗಾಂಧಿ ನಗರದ ಜಿಲ್ಲಾ ಪಂಚಾಯಿತಿ  ಎಂಜಿನಿಯರಿಂಗ್ ಕಚೇರಿಯ ಪಕ್ಕದಲ್ಲಿರುವ ಶಿವಾನಂದ ಭೀಮಪ್ಪ ಹೆಳವರ ಎಂಬುವವರ ಮಾಳಿಗೆಯನ್ನೇರಿದ್ದಾರೆ.ಮಾಳಿಗೆಯ ಮೇಲೆ ಬಿದ್ದಿರುವ ಕಬ್ಬಿಣದ ಸರಳೊಂದನ್ನು ಎತ್ತಿ ಮಾಳಿಗೆಯ ಪಕ್ಕದಲ್ಲಿರುವ ವಿದ್ಯುತ್ ತಂತಿಯತ್ತ ಎಸೆದಿದ್ದಾರೆ. ಪರಿಣಾಮವಾಗಿ ಸರಳಿನಲ್ಲಿ ವಿದ್ಯುತ್ ಪ್ರವಹಿಸಿ ಬಾಲಕರಿಬ್ಬರೂ 15 ಅಡಿಯಷ್ಟು ದೂರ ಹಾರಿ ಬಿದ್ದಿದ್ದಾರೆ.  ಜೊತೆಗಿದ್ದ ಮೂವರು ಬಾಲಕರು ಗಾಬರಿಯಾಗಿ ಚೀರಾಡುತ್ತ ಓಡಿ ಹೋಗುತ್ತಿರುವುದನ್ನು ಕಂಡು ಮನೆಯಲ್ಲಿ ಬಾಡಿಗೆಗಿದ್ದವರು ಮಾಳಿಗೆಯ ಮೇಲೆ ಹೋಗಿ ನೋಡುವುದರೊಳಗಾಗಿ ಇಬ್ಬರೂ ಬಾಲಕರು ದಾರುಣವಾಗಿ ಬಿದ್ದು ಒದ್ದಾಡುತ್ತಿದ್ದರು.ಒಬ್ಬ ಬಾಲಕನ ಕೈ ತುಂಡಾಗಿ ಬಿದ್ದಿದೆ. ಇನ್ನೊಬ್ಬ ಬಾಲಕನ ಕೈ, ಕಾಲುಗಳು ಸುಟ್ಟು ತಿರುಚಿಕೊಂಡು ಬಿಟ್ಟು ಗಂಭೀರ ಸ್ವರೂಪದ ಗಾಯಗಳಾಗಿವೆ. ತಕ್ಷಣವೇ ದೂರವಾಣಿಯ ಮೂಲಕ ಆ್ಯಂಬುಲೆನ್ಸ್  ತರಿಸಿ ಬಾಗಲಕೋಟೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳಿಸಲಾಗಿದೆ.ಬೀಳಗಿಯಿಂದ ಬಾಡಗಂಡಿಗೆ ವಿದ್ಯುತ್ ಪೂರೈಕೆ ಮಾಡುವ 33ಕೆ.ವಿ.ಸಾಮರ್ಥ್ಯದ ತಂತಿ ಇಲ್ಲಿ ಮನೆಯ ಮಾಳಿಗೆಗಳ ಪಕ್ಕದಲ್ಲಿಯೇ ಹಾಯ್ದು ಹೋಗಿದೆ. ಈ ಮಾರ್ಗವನ್ನು ಬದಲಿಸಿ ಎಂದು ಹಲವಾರು ಬಾರಿ ಲಿಖಿತವಾಗಿ  ಮನವಿ ಸಲ್ಲಿಸಿದರೂ  ಹೆಸ್ಕಾಂ ಅಧಿಕಾರಿಗಳು ಅದಕ್ಕೆ  ಸ್ಪಂದಿಸಿಲ್ಲ ಎಂದು ಗಾಂಧಿ ನಗರದ ನಿವಾಸಿ ಬಸವರಾಜ ದೇಸಾಯಿ ದೂರಿದ್ದಾರೆ.ಮನೆಗಳ ಮಾಳಿಗೆಗಳ ಹತ್ತಿರ ಹಾಯ್ದು ಹೋಗಿರುವ ಈ ತಂತಿಗಳಿಂದ ಅಪಾಯ ಕಾದಿದೆ.  ಹೆಸ್ಕಾಂ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿಲ್ಲ. ಕೊನೆಗೂ  ದುರಂತ ಸಂಭವಿಸಿಯೇ ಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬೀಳಗಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.