ಗುರುವಾರ , ಮೇ 19, 2022
20 °C

ಕೈಕೊಟ್ಟ ಮಳೆ: ಕಂಗಾಲಾದ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಆ ಗ್ರಾಮಗಳಿಗೆ ಅಧಿಕಾರಿಗಳ ಠೀವಿಯಲ್ಲಿ ಯಾರಾದರೂ ಕಾಲಿಡುವುದೇ ತಡ. ಅಲ್ಲಿ ಜನಜಾತ್ರೆ! ಇವರಿಂದಲಾದರೂ ನಮಗೆ ನೆರವು ಸಿಕ್ಕಿತೇ ಎಂಬ ಆಸೆ ಕಂಗಳಿನಿಂದ ವಾಹನಗಳ ಸುತ್ತಮುತ್ತ ಜನ ಮುಗಿಬೀಳುತ್ತಾರೆ.

 

ಅಲ್ಲಿಗೆ ಬಂದವರು ಕೇಳಲಿ ಅಥವಾ ಬಿಡಲಿ `ಅಗಾ ಅಲ್ನೋಡ್ರಿ. ಆ ದಂಡಿಯಿಂದ ಈ ದಂಡಿವರಿಗೆ ಬಾಡಿ ನಿಂತ ತೊಗರಿ, ಹತ್ತಿ~ ಎಂದು ತಮ್ಮ ಹೊಲದೆಡೆಗೆ ಕೈ ಮಾಡಿ ತೋರಿಸುತ್ತಾರೆ. ಹೌದೆಂದು ಗೋಣು ಹಾಕಿದರೆ ಸಾಕು, `ಸ್ವಲ್ಪ ನಮ್ಮ ಹೊಲದ ಕಡಿ ಹೋಗಿ ನೋಡಿ ಬರೋಣ ನಡೀರಿ..~ ಎಂದು ಕೈ ಬಿಡದೆ ಕರೆದೊಯ್ಯುತ್ತಾರೆ.ಇದು ವರುಣನ ಅವಕೃಪೆಗೆ ಒಳಗಾಗಿ ಬರದ ಹೊಡೆತಕ್ಕೆ ತತ್ತರಿಸಿರುವ ಗುಲ್ಬರ್ಗ ಜಿಲ್ಲೆಯ ರೈತರ ಸಂಕಷ್ಟದ ಪಾಡು. ಮಳೆಯ ಅಭಾವದಿಂದ ಈ ವರ್ಷ ಜಿಲ್ಲೆಯ ರೈತರು  ಹತಾಶರಾಗಿದ್ದಾರೆ. ಭೂಮಿಯನ್ನು ನಂಬಿದವನ ತುತ್ತಿಗೆ ಬರವಿಲ್ಲ ಎಂಬ ಗಾದೆ ಮಾತು ಎರಡ್ಮೂರು ವರ್ಷದಿಂದ ಸುಳ್ಳಾಗುತ್ತಿದೆ. ಅನ್ನದಾತನಿಗೆ ಸ್ವತಃ ಅನ್ನದ ಕೊರತೆ ಎದುರಾಗುತ್ತಿದೆ.`ಇರುವ ಎರಡು ಎಕರೆ ಹೊಲದಲ್ಲಿ ತೊಗರಿ ಬಿತ್ತೀನಿ. ಈಗಾಗಲೇ ಎಣ್ಣಿ, ಸದಿ, ಗೊಬ್ಬರಕ್ಕಾಗಿ ಸುಮಾರು ಹತ್ತು ಸಾವಿರ ಖರ್ಚು ಮಾಡಿನ್ರೀ. ಹೊಲದಾಗ ಮನಸ ಬರವಲ್ದು. ಅಲ್ಲಿ ಕಾಲ ನಿಲ್ಲಾವಲ್ದು. ಮನ್ಯಾಗ ಹೆಂಡತಿ ಮೂವರು ಮಕ್ಳು ಇದ್ದಾರೆ. ಅವರಿಗೆಲ್ಲ ಹ್ಯಾಂಗ್ ತಂದಹಾಕಬೇಕು ಎಂಬುದೇ ದೊಡ್ಡ ಚಿಂತ್ಯಾಗ್ಯಾದ~ ಎಂದು ಹೊಲಕ್ಕೊಯ್ದಿದ್ದ ಬುತ್ತಿಯನ್ನು ಮಧ್ಯಾಹ್ನ 12 ಗಂಟೆಯಷ್ಟೊತ್ತಿಗೇ ವಾಪಸ್ ಒಯ್ಯುತ್ತಿದ್ದ ಆಲೂರಿನ ಶರಣಪ್ಪ ಮಾಡಗಿ ಗೋಳಿಟ್ಟರು.ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆ ಆಗದಿರುವುದರಿಂದ ಜೇವರ್ಗಿ ತಾಲ್ಲೂಕಿನ ಸಾಥಖೇಡ, ಆಲೂರ, ಕರ್ಕಿಹಳ್ಳಿ, ಮಲ್ಲಾಬಾದ, ಶಿವಪುರ, ಬಿಳವಾರ, ಗೊಬ್ಬರಡಗಿ, ಯಲಗೋಡ, ನೀರಡಗಿ, ಮಾರಡಗಿ, ಹಂಗರಗಾ, ವರವಿ, ಮುತ್ತಕೋಡ್, ಹರನಾಳ, ಅಫಜಲಪುರ ತಾಲ್ಲೂಕಿನ ರೇವೂರ, ಅಂಕಲಗಾ, ಚಿತ್ತಾಪುರ ತಾಲ್ಲೂಕಿನ ಕಾಳಗಿ, ಗುಂಡಗುರ್ತಿ, ಆಳಂದ ತಾಲ್ಲೂಕಿನ ಸರಸಂಬಾ, ಸಕ್ಕರಗಾ, ಸಾವಳೇಶ್ವರ, ಪಡಸಾವಳಿ, ಚಿಂಚೋಳಿ ತಾಲ್ಲೂಕಿನ ಕೊಡ್ಲಿ, ಹೊಸಳ್ಳಿ, ನಾವದಗಿ, ವಜ್ರಗಾಂವ, ಸುಲೆಪೇಟ ಇನ್ನಿತರ ಗ್ರಾಮಗಳ ಜಮೀನಿನಲ್ಲಿ ಬಿತ್ತಿರುವ ತೊಗರಿ, ಹತ್ತಿ ಬೀಜಗಳು ಮೊಳಕೆಯೊಡೆದು ಹೊರಗೇನೋ ಬಂದಿವೆ. ಆದರೆ ಹೂ ಬಿಡುವ ಹಂತದಲ್ಲೇ ಒಣಗಿವೆ.`ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರವೂ ರೈತರಿಗೆ ನ್ಯಾಯ ಒದಗಿಸಲಿಲ್ಲ. ಎರಡು ವರ್ಷಗಳಿಂದ ರಾಜ್ಯದ ರೈತರು ನಿರಂತರ ನಷ್ಟ ಅನುಭವಿಸುತ್ತಿದ್ದರೂ ರಾಜಕಾರಣಿಗಳು ಇತ್ತ ಕಣ್ಣು ಹಾಯಿಸಲಿಲ್ಲ.ಅಧಿಕಾರಿಗಳನ್ನು ರೈತರ ಮೇಲೆ ಛೂ ಬಿಟ್ಟು ಮೂಲೆಗುಂಪು ಮಾಡಿದರು. ಇದೇ ಕಾರಣಕ್ಕಾಗಿ ರೈತರ ಶಾಪ ರಾಜಕಾರಣಿಗಳನ್ನು ತಟ್ಟಿದೆ. ಒಬ್ಬೊಬ್ಬರೆ ಜೈಲು ಪಾಲಾಗುತ್ತಿದ್ದಾರೆ. ಹರಕೊಲ್ಲಲ್ ಪರ ಕಾಯ್ವನೇ?~ ಎಂದು ಯುವ ರೈತ ಚಂದ್ರಶೇಖರ ಮಲ್ಲಾಬಾದಿ ಮುಗಿಲತ್ತ ಮುಖಮಾಡಿದರು.ಜಿಲ್ಲೆಯ ಮುಖ್ಯ ವಾಣಿಜ್ಯ ಬೆಳೆ ತೊಗರಿಯನ್ನು 3,72,595 ಹೆಕ್ಟೇರ್ ಪ್ರದೇಶದಲ್ಲಿ, ಹತ್ತಿ ಬೆಳೆಯನ್ನು 26,108 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ತೇವಾಂಶದ ಕೊರತೆಯಿಂದಾಗಿ ಶೇ 50ರಿಂದ 60ರಷ್ಟು ತೊಗರಿ, ಶೇ 30ರಿಂದ 40ರಷ್ಟು ಹತ್ತಿ ಇಳುವರಿಯಲ್ಲಿ ನಷ್ಟ ಕಂಡುಬರಲಿದೆ. ಅಂದಾಜು ಹಾನಿಯ ಬಗ್ಗೆ ಸರ್ಕಾರಕ್ಕೆ ಸಮಗ್ರ ವಿವರ ಸಲ್ಲಿಸಲಿದ್ದೇವೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.ಬರ ನಿರ್ವಹಣೆ: ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದ್ದು, ಕುಡಿಯುವ ನೀರಿನ ಅಭಾವವಿರುವ 430 ಕಡೆಗಳಲ್ಲಿ ನೀರು ಸರಬರಾಜಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ವಿದ್ಯುತ್ ಕಾಮಗಾರಿ ಪೂರ್ಣಗೊಳಿಸಲು ಜೆಸ್ಕಾಂಗೆ 1.2 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಎರಡ್ಮೂರು ದಿನಗಳಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು ಎಂದು ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜಿ. ವಿಜಯಕುಮಾರ `ಪ್ರಜಾವಾಣಿ~ಗೆ ತಿಳಿಸಿದರು.ತಕ್ಷಣ ಪರಿಹಾರ ಕೊಡಿ: ಮೂರ‌್ನಾಲ್ಕು ವರ್ಷದಲ್ಲಿ ನೆರೆಹಾವಳಿ, ಬೆಳೆ ಹಾನಿ ಪ್ರಯುಕ್ತ ಸರ್ಕಾರದಿಂದ ಜಿಲ್ಲೆಗೆ ಸುಮಾರು 200 ಕೋಟಿ ರೂಪಾಯಿ ಬಂದಿದೆ. ನಿಜವಾದ ಫಲಾನುಭವಿಗೆ ಹಣ ತಲುಪಿಲ್ಲ. ಬರೀ ದುಡ್ಡು ಎತ್ತಿ ಹಾಕುವ ಕೆಲಸವೇ ನಡೆದಿದೆ. ಈ ಬಾರಿಯಾದರೂ ಸಮರ್ಪಕ ಪರಿಹಾರ, ಬೆಳೆ ವಿಮೆ, ಜಾನುವಾರುಗಳಿಗೆ ಮೇವು ಒದಗಿಸುವ ವ್ಯವಸ್ಥೆ ಕಲ್ಪಿಸಬೇಕಿದೆ ಎಂಬುದು ರೈತ ಹೋರಾಟಗಾರ ಕೇದಾರಲಿಂಗಯ್ಯ ಹಿರೇಮಠ ಅಭಿಮತ.ಆರಂಭದಲ್ಲಿ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಉದ್ದು, ಹೆಸರು ಬಿತ್ತನೆ ಚುರುಕಾಗಿ ನಡೆದಿತ್ತು. ನಂತರ ಮಳೆ ಇಲ್ಲದೇ ಬೆಳೆ ಸಂಪೂರ್ಣ ಹಾನಿಯಾಗಿದೆ. ಕಳೆದ ವರ್ಷ ಬರ- ಪ್ರಾಕೃತಿಕ ಹಾನಿ ಅನುಭವಿಸಿದ್ದ ರೈತರ ಸ್ಥಿತಿ ಇದೀಗ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಮುಂದಿನ ಮುಂಗಾರಿನವರೆಗೆ ತುತ್ತಿನ ಚೀಲಕ್ಕೆ ಏನು ಗತಿ ಎಂಬ ಆತಂಕದ ಪ್ರಶ್ನೆ ರೈತರಲ್ಲಿ ಮೂಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.