ಕೈಕೊಟ್ಟ ಯಂತ್ರ; ಪರೀಕ್ಷೆ ಮುಂದಕ್ಕೆ

ಭಾನುವಾರ, ಜೂಲೈ 21, 2019
21 °C

ಕೈಕೊಟ್ಟ ಯಂತ್ರ; ಪರೀಕ್ಷೆ ಮುಂದಕ್ಕೆ

Published:
Updated:

ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣದಲ್ಲಿ ಸೋಮವಾರದಿಂದ ನಡೆಯುತ್ತಿರುವ ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆ (ಡಿಆರ್) ಭರ್ತಿಗೆ ಅಭ್ಯರ್ಥಿಗಳ ಪರೀಕ್ಷೆ ವೇಳೆಗೆ ಆರ್‌ಎಫ್‌ಐ ಕಂಪ್ಯೂಟರ್ ಯಂತ್ರದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ಪರೀಕ್ಷೆಯನ್ನೇ ಮುಂದೂಡಲಾಯಿತು. ಇದರಿಂದಾಗಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಅಭ್ಯರ್ಥಿಗಳು ಹಿಡಿಶಾಪ ಹಾಕುತ್ತಾ ನಿರಾಸೆಯಿಂದ ಮರಳಬೇಕಾಯಿತು. ಜಿಲ್ಲೆಯಲ್ಲಿ ಡಿಆರ್ 56 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. 1,449 ಅಭ್ಯರ್ಥಿಗಳು ಪರೀಕ್ಷೆಗೆ ಆಯ್ಕೆಯಾಗಿದ್ದರು. ಸೋಮವಾರ ಬೆಳಿಗ್ಗೆಯಿಂದ ಅಭ್ಯರ್ಥಿಗಳ ಸಹಿಷ್ಣುತೆ ಹಾಗೂ ದೇಹದಾರ್ಢ್ಯ ಪರೀಕ್ಷೆ ಆರಂಭಗೊಂಡಿತ್ತು.

ವಿಜಾಪುರ, ಬಾಗಲಕೋಟೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅಭ್ಯರ್ಥಿಗಳ ಕಾಲಿಗೆ ಟ್ಯಾಗ್ ಕಟ್ಟಲಾಗುತ್ತದೆ. ಇದರ ಆಧಾರದಲ್ಲಿ ಯಾವ ಹೊತ್ತಿಗೆ ಓಟ ಆರಂಭಿಸಿದ್ದರು, ಪ್ರತಿ ಹಂತದ ವಿವರ, ಪೂರೈಸಿದ ಸಮಯ ಹಾಗೂ ಫಲಿತಾಂಶ ಆರ್‌ಎಫ್‌ಐ ಯಂತ್ರದಲ್ಲಿ ಗೊತ್ತಾಗುತ್ತದೆ. ಯಂತ್ರದ ಸಮಸ್ಯೆಯಿಂದ ಅಭ್ಯರ್ಥಿಗಳು ದಿಕ್ಕೆಟ್ಟು ಕೂತಿದ್ದರು. ಮಂಗಳವಾರ ಮಧ್ಯಾಹ್ನದವರೆಗೆ ಎರಡು ಬಾರಿ ಜಿಲ್ಲಾ ಎಸ್‌ಪಿ ಬಳಿ ಸಮಸ್ಯೆ ಹೇಳಿಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಾಹ್ನದ ಬಳಿಕ ಪರೀಕ್ಷೆ ಮುಂದೂಡಿದ ವಿಚಾರವನ್ನು ಎಸ್‌ಪಿ ತಿಳಿಸಿದರು. ಸೋಮವಾರ 1000 ಸಾವಿರ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯಬೇಕಿತ್ತು. ಈ ಪೈಕಿ 769 ಮಂದಿ ಆಯ್ಕೆ ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 51 ಮಂದಿ ಪರೀಕ್ಷೆ ಪೂರ್ಣಗೊಳಿಸಿದ್ದರು. ಮಂಗಳವಾರ 449 ಅಭ್ಯರ್ಥಿಗಳು ಹಾಜರಾಗಿದ್ದರು. ಎರಡು- ಮೂರು ಸುತ್ತು ಓಡುವಾಗ ಸಮಸ್ಯೆ ಕಾಣಿಸಿಕೊಂಡಿತು. ಯಂತ್ರದ ಸಮಸ್ಯೆಯಿಂದಾಗಿ ಹೆಚ್ಚಿನವರು ಸ್ಪರ್ಧೆಯನ್ನೇ ಪೂರ್ಣಗೊಳಿಸಲಿಲ್ಲ. ಯಂತ್ರದಲ್ಲಿ ಅಪೂರ್ಣ ಎಂದು ತೋರಿಸಿದ ಕೂಡಲೇ ಕೆಲವರು ತಾವು ಅನುತ್ತೀರ್ಣರಾಗಿದ್ದೇವೆ ಎಂದು ಬಗೆದು ತಮ್ಮೂರಿಗೆ ವಾಪಸಾದರು ಎಂದು ಹೆಸರು ಹೇಳಲಿಚ್ಛಿಸದ ಅಭ್ಯರ್ಥಿಯೊಬ್ಬರು ಮಂಗಳವಾರ `ಪ್ರಜಾವಾಣಿ~ ಬಳಿ ಅಳಲು ತೋಡಿಕೊಂಡರು.`ನಾನು ಸೋಮವಾರ ಓಟ ಆರಂಭಿಸುವಾಗ ಯಂತ್ರದಲ್ಲಿ 9.40 ಎಂದು ತೋರಿಸಿತ್ತು. ನಾನು ಓಟ ಪೂರ್ಣಗೊಳಿಸಿದ್ದು 9.20ಕ್ಕೆ. ಹಲವರಿಗೆ ಇಂಥ ಅನುಭವವಾಗಿದೆ. ಮಂಗಳವಾರ ಪರೀಕ್ಷೆ ಮುಗಿಯುತ್ತದೆ ಎಂದು ನಂಬಿ ಸಾಲ ಸೋಲ ಮಾಡಿ ಪರೀಕ್ಷೆಗೆ ಹಾಜರಾಗಿದ್ದೇವೆ. ಎರಡು ದಿನಕ್ಕೆ ಬೇಕಾಗುವಷ್ಟು ಮಾತ್ರ ಹಣ ತಂದಿದ್ದೇವೆ. ಇನ್ನೊಬ್ಬ ಪರೀಕ್ಷೆ ನಡೆಸಿದರೆ ಹಾಜರಾಗುವುದು ಕಷ್ಟ~ ಎಂದು ಮತ್ತೊಬ್ಬ ಅಭ್ಯರ್ಥಿ ಅಸಹಾಯಕತೆ ತೋಡಿಕೊಂಡರು.`1600 ಮೀಟರ್ ಓಟದಲ್ಲಿ ಮೂರು ಸುತ್ತು ಓಡುವವರೆಗೆ ಸರಿಯಾದ ಸಮಯವನ್ನು ಯಂತ್ರ ತೋರಿಸುತ್ತದೆ. ನಾಲ್ಕನೇ ಸುತ್ತು ಓಡುವಾಗ ಸಮಸ್ಯೆ ಶುರುವಾಗುತ್ತದೆ. ಹೀಗೆ ಸೋಮವಾರ ನಾಲ್ಕು ಬಾರಿ ಹಾಗೂ ಮಂಗಳವಾರ ಮೂರು ಬಾರಿ ಓಡಿದ್ದೇನೆ. ಈ ಮಳೆಯಲ್ಲಿ ಒಂದೆರಡು ಬಾರಿ ಓಡುವುದೇ ಕಷ್ಟ. ಇನ್ನು ಎಷ್ಟು ಬಾರಿ ಓಡಬೇಕು~ ಎಂದು ಅಭ್ಯರ್ಥಿಯೊಬ್ಬರು ಪ್ರಶ್ನಿಸಿದರು. `ಕಳೆದ ವರ್ಷವೂ ಪರೀಕ್ಷೆಗೆ ಹಾಜರಾಗಿದ್ದೆ. 1600 ಮೀಟರ್ ಓಟ ಪೂರ್ಣಗೊಳಿಸಲು 6.30 ನಿಮಿಷ ಅವಧಿ ಕೊಟ್ಟಿದ್ದರು. ಈ ಬಾರಿ ಆರು ನಿಮಿಷ ಅವಧಿ ಮಾತ್ರ. ಅದರ ನಡುವೆ ಮಳೆಗಾಲದಲ್ಲೇ ಪರೀಕ್ಷೆ ಇಟ್ಟಿದ್ದಾರೆ. ಮೇ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಆಯ್ಕೆ ಪರೀಕ್ಷೆ ಇಟ್ಟಿದ್ದರೆ ಚೆನ್ನಾಗಿತ್ತು. ಇದರ ನಡುವೆ ಯಂತ್ರದ ರಗಳೆ. ಪರೀಕ್ಷೆ ವೇಳೆ ಉತ್ತಮ ಗುಣಮಟ್ಟದ ಯಂತ್ರ ಬಳಸಲಿಕ್ಕೆ ಏನು ಸಮಸ್ಯೆ~ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.  `ಬೆಂಗಳೂರಿನ ಸಂಸ್ಥೆ ಈ ಯಂತ್ರ ಪೂರೈಕೆ ಮಾಡಿದ್ದು ಅವರೇ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ರಾಜ್ಯದ ಬೇರೆ ಕಡೆಗಳಲ್ಲೂ ಸಮಸ್ಯೆಯಾಗಿದೆ. ಈ ಯಂತ್ರ ವಿಚಿತ್ರ ಫಲಿತಾಂಶ ನೀಡುತ್ತಿದೆ. ನಾವು ಕಳೆದ ಬಾರಿ ಉಡುಪಿಯಲ್ಲಿ ಮಾನವ ಶ್ರಮದ ಮೂಲಕವೇ 160 ಹುದ್ದೆಗಳ ಆಯ್ಕೆಗೆ 7500ಕ್ಕೂ ಅಧಿಕ ಅಭ್ಯರ್ಥಿಗಳ ಪರೀಕ್ಷೆ ಯಶಸ್ವಿಯಾಗಿ ನಡೆಸಿದ್ದೆವು. ನಾವೇ ಮಾನವ ಶ್ರಮ ಬಳಸಿ ಸುಲಲಿತವಾಗಿ ಪರೀಕ್ಷೆ ನಡೆಸುತ್ತಿದ್ದೆವು~ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು. `ಬೇರೆ ಇಲಾಖೆಗಳಲ್ಲಿ ನೇಮಕಾತಿ ಕಡಿಮೆಯಾಗಿದೆ. ಪೊಲೀಸ್ ಇಲಾಖೆಯಲ್ಲಿ ಕಾಲಕಾಲಕ್ಕೆ ನೇಮಕ ಆಗುತ್ತದೆ. ಹಾಗಾಗಿ ಇಲ್ಲಿ ನೇಮಕಾತಿ ನಡೆಯುವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಬರುತ್ತಾರೆ. ಕೆಲವರು ದೂರದ ಊರಿನಿಂದ ಬಂದಿದ್ದಾರೆ. ಅವರ ಪಡಿಪಾಟಲು ನಮಗೆ ನೋಡಲಿಕ್ಕೆ ಆಗುವುದಿಲ್ಲ~ ಎಂದು ಅವರು ತಿಳಿಸಿದರು.

ನಮ್ಮಲ್ಲಿ ಮಾತ್ರ ಅಲ್ಲ

ಆರ್‌ಎಫ್‌ಐ ಯಂತ್ರ ಸರಿಪಡಿಸಲು ಸೂಚಿಸಲಾಗಿತ್ತು. ಮಧ್ಯಾಹ್ನದವರೆಗೆ ಕಾಯಲಾಯಿತು. ರಾಜ್ಯದ ನಾನಾ ಭಾಗದಿಂದ ಅಭ್ಯರ್ಥಿಗಳು ಆಗಮಿಸಿದ್ದರು. ಅವರಿಗೆ ತೊಂದರೆಯಾಗಬಾರದು ಎಂಬುದು ನಮ್ಮ ಆಶಯ. ಪರೀಕ್ಷೆಯನ್ನು ಮುಂದೂಡಲಾಗಿದ್ದು, ಪರೀಕ್ಷೆ ದಿನಾಂಕವನ್ನು ಅವರಿಗೆ ತಿಳಿಸಲಾಗುವುದು. ಸಮಸ್ಯೆ ನಮ್ಮಲ್ಲಿ ಮಾತ್ರ ಅಲ್ಲ. ಸೋಮವಾರ ಚಿಕ್ಕಮಗಳೂರು ಹಾಗೂ ಕಾರವಾರದಲ್ಲೂ ಯಂತ್ರ ಕೈಕೊಟ್ಟಿತ್ತು.

ಲಾಬೂರಾಮ್

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry