ಸೋಮವಾರ, ಮೇ 23, 2022
21 °C

ಕೈಕೊಟ್ಟ ವಿದ್ಯುತ್, ಬಾಡಿದ ಬಾಳೆ: ಆರ್ಥಿಕ ಸಂಕಷ್ಟದಲ್ಲಿ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಬಾದ: ಚಿತ್ತಾಪುರ ತಾಲ್ಲೂಕು ಭಂಕೂರ ಗ್ರಾಮದ ರೈತ ಶಿವಲಿಂಗ ಗುತ್ತೇದಾರ ಎಂಬುವವರ ಎರಡು ಎಕರೆ ತೋಟದಲ್ಲಿ ಬೆಳೆದಿದ್ದ ಮೂರು ಸಾವಿರಕ್ಕೂ ಅಧಿಕ ಸಂಖ್ಯೆಯ ಬಾಳೆಯ ಗಿಡಗಳು ನೀರಿಲ್ಲದೆ ಒಣಗಿ ನಿಂತಿವೆ. ಸಾಲಸೋಲ ಮಾಡಿ ಬೆಳೆದಿದ್ದ ಬಾಳೆ ಹೂವು, ಕಾಯಿ ಕಟ್ಟುವ ಸಮಯಕ್ಕೆ ವಿದ್ಯುತ್ ಕೈಕೊಟ್ಟಿದ್ದು ಅವರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ.ಸ್ವಂತ ಬಾವಿಯ ಉತ್ತಮ ನೀರಿನ ಸೌಲಭ್ಯ ಹೊಂದಿರುವ ಶಿವಲಿಂಗ ಅವರು, ಕಳೆದ ವರ್ಷದಿಂದ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಕಳೆದ ವರ್ಷ ಸ್ವಲ್ಪ ಜಾಗದಲ್ಲಿ ಉತ್ತಮ ಇಳುವರಿಯ ಬಾಳೆ ಬೆಳೆ ಬೆಳೆದು ಲಾಭ ಪಡೆದಿದ್ದರು. ಅದೇ ಅಂದಾಜಿನ ಮೇಲೆ ಈ ಬಾರಿ ಒಟ್ಟು 3.35 ಎಕರೆ ಪ್ರದೇಶದ ತಮ್ಮ ತೋಟದ 2 ಎಕರೆಯಲ್ಲಿ, ಸಸಿಗೆ ನೂರು ರೂಪಾಯಿ ದರದಲ್ಲಿ ಮೂರು ಸಾವಿರ ಬಾಳೆ ಸಸಿ ಖರೀದಿಸಿ ನೆಟ್ಟರು. ಅದಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ನಾಲ್ಕು ಲಕ್ಷ ರೂಪಾಯಿ ಸಾಲ ಸಹ ಮಾಡಿದ್ದರು.`ಈ ಬಾರಿ ವಿದ್ಯುತ್ ಕೈಕೊಟ್ಟ ಕಾರಣ ನೀರಿಲ್ಲದೆ ಬೆಳೆ ಒಣಗಿದೆ. ಬಾಳೆ ಎತ್ತರಕ್ಕೆ ಬೆಳೆದು ನಿಂತಿದ್ದರೂ  ಹೂವು ಬಿಟ್ಟು ಕಾಯಿ ಕಟ್ಟುವ ಹಂತದಲ್ಲಿ ನೀರಿನ ಕೊರತೆಯಾಗಿ ಬಾಳೆ ಗಿಡಗಳು ಒಣಗಿದವು. ಸಣ್ಣಗಿದ್ದ ಕಾಯಿಗಳು ಬೆಳೆಯ ಬೇಕಾದ ಸಮಯದಲ್ಲಿ ಸುಮಾರು 8-10 ಗಂಟೆ ಸತತ ನೀರು ಬೇಕು. ಆದರೆ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ದಿನಕ್ಕೆ 6 ಗಂಟೆಯಷ್ಟೂ ನಿಯಮಿತವಾಗಿ ವಿದ್ಯುತ್ ಒದಗಿಸಲಿಲ್ಲ.ಈಗ ಕಸದಂತಾಗಿರುವ ಈ ಬಾಳೆ ಬೆಳೆಯನ್ನು ಕಿತ್ತೆಸೆಯುವುದೊಂದೆ ಬಾಕಿ~ ಎಂದು ಬೇಸರದಿಂದ ಶಿವಲಿಂಗ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.

ಈ ಬಗ್ಗೆ ರೈತ ಶಿವಲಿಂಗ ಗುತ್ತೆದಾರ, ಕೃಷಿ ಇಲಾಖೆಯ ಮತ್ತಿತರ ಸಂಬಂಧಿಸಿದ ಅಧಿಕಾರಿಗಳಿಗೆ ಮೊರೆ ಹೋಗಿದ್ದರೂ ಯಾವುದೇ ಪ್ರಯೋಜನವಾಗದೇ ಕಂಗಾಲಾಗಿರುವ ಅವರು ತಲೆಗೆ ಕೈ ಕೊಟ್ಟು ಕುಳಿತಿದ್ದಾರೆ.

- ಮಂಡಲಗಿರಿ ಪ್ರಸನ್ನ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.