ಸೋಮವಾರ, ಡಿಸೆಂಬರ್ 16, 2019
17 °C

`ಕೈ'ಕೋಟೆಯಲ್ಲಿ ಅರಳಿದ `ಕಮಲ'ಕ್ಕೆ ಹೊಸ ಸವಾಲ್

ಮಂಜುನಾಥ ಯಲ್ಲಾಪುರದ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಇತಿಹಾಸದ ಕಾಲಗರ್ಭದಲ್ಲಿ ಪಾಳೇಗಾರರ ಪಾಳೇಪಟ್ಟಿನ ಆಳ್ವಿಕೆಗೆ ಒಳಪಟ್ಟಿದ್ದ ಹರಪನಹಳ್ಳಿ ಕ್ಷೇತ್ರ, ಸ್ವಾತಂತ್ರ್ಯನಂತರ ನಡೆದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುತೇಕ ಚುನಾವಣೆಯಲ್ಲಿ ಕಾಂಗ್ರೆಸ್ ಪಾರುಪತ್ಯ ಮೆರೆಯುವ ಮೂಲಕ ರಾಜಕೀಯ ವಲಯದಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಜನಜನಿತ. ಆದರೆ, 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಭೇದಿಸುವ ಮೂಲಕ ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿಯ `ಕೇಸರಿ ಪತಾಕೆ'ಯ ಮುಂದೆ ಹೊಸ ಸವಾಲುಗಳ ಕಂತೆ ಇದೆ.ತಾಲ್ಲೂಕಿನ ಸರಹದ್ದಿನಲ್ಲಿಯೇ ಜೀವನಾಡಿಯಾಗಿರುವ ತುಂಗಭದ್ರೆ ಹರಿದುಹೋಗಿದ್ದರೂ, ಕ್ಷೇತ್ರದಾದ್ಯಂತ ಕುಡಿಯುವ ಹನಿ ನೀರಿಗಾಗಿ ನಿತ್ಯವೂ ಪರದಾಡಬೇಕಾದ ಸ್ಥಿತಿ. ಮಳೆಯಾಶ್ರಿತ ಕೃಷಿಯನ್ನೇ ಅವಲಂಬಿಸಿರುವ ತಾಲ್ಲೂಕಿನಲ್ಲಿ ನೆತ್ತಿಯ ಮೇಲೆ ನಾಲ್ಕು ಹನಿ ಮಳೆ ಸುರಿದರೆ ಮಾತ್ರ ಹೊಟ್ಟೆಗೆ ಒಪ್ಪೊತ್ತಿನ ಗಂಜಿ. ಇಲ್ಲವಾದಲ್ಲಿ; ಕಾಫಿಸೀಮೆ ಮಲೆನಾಡು ಪ್ರದೇಶ, ಬೆಂಗಳೂರು, ಪಣಜಿಯಂತ ಬೃಹತ್ ನಗರಗಳಲ್ಲಿ ಗಾರೆ ಕೆಲಸವೇ ಇಲ್ಲಿನ ಬಹುಪಾಲು ಜನರ ತುತ್ತಿನ ಚೀಲಕ್ಕೆ ಆಸರೆ ಹರಿಗೋಲು. ಕಣ್ಣು ಹಾಯಿಸಿದಷ್ಟು ಬಟಾಬಯಲಿನ ಮರುಭೂಮಿಯಂತೆ ಹರಡಿಕೊಂಡಿರುವ ಕ್ಷೇತ್ರದಲ್ಲಿ ಈಗ ಚುನಾವಣೆಯ ಕಾವು ರಂಗೇರತೊಡಗಿದೆ.ಮೂಲತಃ ಬಳ್ಳಾರಿ ಜಿಲ್ಲೆಯಲ್ಲಿದ್ದ ಸಂದರ್ಭದಲ್ಲಿ 10ಚುನಾವಣೆ ಹಾಗೂ ಬೇರ್ಪಟ್ಟು ದಾವಣಗೆರೆ ಜಿಲ್ಲೆಗೆ ಸೇರ್ಪಡೆಯಾದ ನಂತರದ ಮೂರು ಚುನಾವಣೆ ಸೇರಿದಂತೆ ಇದುವರೆಗೂ ವಿಧಾನಸಭೆಗೆ 13 ಚುನಾವಣೆಗಳು ಕ್ಷೇತ್ರದಲ್ಲಿ ನಡೆದಿವೆ. ಇಲ್ಲಿ 10ಚುನಾವಣೆಗಳಲ್ಲಿಯೂ ಕಾಂಗ್ರೆಸ್ ವಿಜಯಮಾಲೆ ಧರಿಸಿಕೊಳ್ಳುವ ಮೂಲಕ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಉಳಿದಂತೆ ಪಿಎಸ್‌ಪಿ, ಪಕ್ಷೇತರ ಹಾಗೂ ಬಿಜೆಪಿ ಅಭ್ಯರ್ಥಿಗಳು ತಲಾ ಒಂದೊಂದು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.ಮೊದಲ ಒಂದು ದಶಕ ಅಂದರೆ, 1952, 1957 ಹಾಗೂ 1962ರಲ್ಲಿ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರವಾಗಿದ್ದ ಹರಪನಹಳ್ಳಿಯನ್ನು, 1967ರಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿರಿಸಿ ಆಯೋಗ ಅಧಿಸೂಚನೆ ಹೊರಡಿಸಿತು. ಆದಾಗ್ಯೂ ತಾಲ್ಲೂಕಿನ ನಾಲ್ಕು ಹೋಬಳಿ ಪೈಕಿ, ಚಿಗಟೇರಿ ಹೋಬಳಿ ಹೂವಿನಹಡಗಲಿ ಸಾಮಾನ್ಯ ಕ್ಷೇತ್ರ ವ್ಯಾಪ್ತಿಗೆ ಸೇರ್ಪಡೆಯಾಗಿತ್ತು. ಬಳಿಕ, 2008ರಲ್ಲಿ ನಡೆದ ಕ್ಷೇತ್ರ ಪುನರ್‌ವಿಂಗಡನೆಯ ನಂತರ ಪುನಃ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಮಾರ್ಪಡಾಗಿದ್ದರೂ, ತಾಲ್ಲೂಕಿನ ಅರಸೀಕೆರೆ ಹೋಬಳಿಯ 7ಗ್ರಾಮ ಪಂಚಾಯ್ತಿಯ ವ್ಯಾಪ್ತಿಯನ್ನು ಜಗಳೂರು ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಲ್ಲಿ ವಿಲೀನಗೊಳಿಸಲಾಯಿತು.1952ರಲ್ಲಿ ಹರಪನಹಳ್ಳಿ- ಹೂವಿನಹಡಗಲಿ ತಾಲ್ಲೂಕುಗಳನ್ನು ಒಳಗೊಂಡ ದ್ವಿಸದಸ್ಯ ಕ್ಷೇತ್ರಕ್ಕೆ ನಡೆದ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಇಜಾರಿ ಸಿರಸಪ್ಪ ಅವರು ತಮ್ಮ ಪ್ರತಿಸ್ಪರ್ಧಿ ಅರಸನಾಳು ಎ.ಬಿ.ಆರ್. ಕೊಟ್ರಗೌಡ ಅವರನ್ನು ಸೋಲಿಸುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ `ಹೊಸಶಕೆ' ಆರಂಭಿಸಿದರು. ಮಠದ ಪಾಟೀಲ್ ಮರಿಸ್ವಾಮಯ್ಯ (ದಿ.ಎಂ.ಪಿ. ಪ್ರಕಾಶ್ ಅವರ ತಂದೆ) ಸಹ ಇದೇ ಚುನಾವಣೆಯಲ್ಲಿ ಆಯ್ಕೆಯಾದರು.1957ರಲ್ಲಿ ಹರಪನಹಳ್ಳಿ- ಹೂವಿನಹಡಗಲಿ ದ್ವಿಸದಸ್ಯ ಕ್ಷೇತ್ರ ಬದಲಾಗಿ ಹರಪನಹಳ್ಳಿ- ಕೂಡ್ಲಿಗಿ ದ್ವಿಸದಸ್ಯ ಕ್ಷೇತ್ರವಾಗಿ ಮಾರ್ಪಟ್ಟು, ಚುನಾವಣೆ ನಡೆಯಿತು. ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ (ಪಿಎಸ್‌ಪಿ)ಸ್ಪರ್ಧಿಸಿದ್ದ ಎಂ. ದಾಸಪ್ಪ ಹಾಗೂ ಎಂ.ಎಂ.ಜೆ. ಸದ್ಯೋಜಾತಯ್ಯ ಅವರು ಕ್ರಮವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಚಿಕ್ಕಜೋಗಿಹಳ್ಳಿಯ ಎಂ. ಮುನಿಯನಾಯಕ ಹಾಗೂ ಇಜಾರಿ ಸಿರಸಪ್ಪ ವಿರುದ್ಧ ಜಯಗಳಿಸಿದರು.1962ರಲ್ಲಿ ಸ್ವತಂತ್ರ ಕ್ಷೇತ್ರವಾಗಿ ಘೋಷಣೆಯಾದ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪುನಃ ಜಯಭೇರಿ ಬಾರಿಸುವ ಮೂಲಕ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಕಾಂಗ್ರೆಸ್ ಪಕ್ಷದ ಇಜಾರಿ ಸಿರಸಪ್ಪ ಅವರು ತಮ್ಮ ಪ್ರತಿಸ್ಪರ್ಧಿ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಅಭ್ಯರ್ಥಿ ಮುದೇನೂರು ಸಂಗಣ್ಣ ಅವರನ್ನು ಸೋಲಿಸಿದರು.1967ರಲ್ಲಿ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಘೋಷಣೆಯಾಯಿತು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಎಚ್. ಯಂಕಾನಾಯ್ಕ ಅವರು ತಮ್ಮ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ವಿ. ಶಿವಣ್ಣ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದರು.

1972 ಹಾಗೂ 1978ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ. ನಾರಾಯಣದಾಸ್ ಅವರು ಒಮ್ಮೆ ಭಾರತ ರಾಷ್ಟ್ರೀಯ ಕಾಂಗ್ರೆಸ್(ಒ) ಹಾಗೂ ಮತ್ತೊಮ್ಮೆ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ವೈ. ನೇಮಾನಾಯ್ಕ ಅವರನ್ನು ಸೋಲಿಸಿದರು.1983ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ಎಚ್. ಯಂಕಾನಾಯ್ಕ ಪುನಃ ಆಯ್ಕೆಯಾಗುವ ಮೂಲಕ ಜನತಾ ಪಕ್ಷದ ಡಿ. ಶೀಲಾನಾಯ್ಕ ಅವರನ್ನು ಸೋಲಿಸಿದರು. ಅಲ್ಲಿಂದ ನಡೆದ ಮೂರು  ಚುನಾವಣೆಯಲ್ಲಿಯೂ ಅಂದರೆ, 1985ರಲ್ಲಿ ಜನತಾ ಪಕ್ಷದ ಅಭ್ಯರ್ಥಿ ಡಿ. ನಾರಾಯಣದಾಸ್, 1989ರಲ್ಲಿ ಜನತಾದಳ ಅಭ್ಯರ್ಥಿ ಬಿ. ಚಂದ್ರಾನಾಯ್ಕ ಅವರನ್ನು ಸೋಲಿಸಿ ಸತತ ಮೂರು ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ ಬಿ.ಎಚ್. ಯಂಕಾನಾಯ್ಕ `ಹ್ಯಾಟ್ರಿಕ್' ಸಾಧಿಸಿದರು.1994ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಡಿ. ನಾರಾಯಣದಾಸ್ ಅವರು ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್. ಯಂಕಾನಾಯ್ಕ ಅವರನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಭದ್ರಕೋಟೆಯಲ್ಲಿ ಮೊದಲ ಬಾರಿಗೆ ಬಿರುಕು ಮೂಡಿಸುವ ಮೂಲಕ ಕಾಂಗ್ರೆಸ್ ನಾಗಲೋಟಕ್ಕೆ ಕಡಿವಾಣ ಹಾಕಿದರು. ಪಕ್ಷೇತರ ಸದಸ್ಯರಾಗಿದ್ದ ನಾರಾಯಣದಾಸ್ ಅವರು ಜೆಡಿಎಸ್ ಸಹ ಸದಸ್ಯರಾಗಿ, ಅವಧಿ ಪೂರೈಸುವ ಆರೆಂಟು ತಿಂಗಳ ಕೊನೆಯ ಗಳಿಗೆಯಲ್ಲಿ ಜೆ.ಎಚ್. ಪಟೇಲ್ ಸಂಪುಟದಲ್ಲಿ ಸಮಾಜ ಕಲ್ಯಾಣ ರಾಜ್ಯಸಚಿವರಾಗಿ ಅಧಿಕಾರ ನಡೆಸುವ ಮೂಲಕ ಕ್ಷೇತ್ರ ಪ್ರತಿನಿಧಿಸಿದ ಮೊದಲ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.1999 ಹಾಗೂ 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಬದಲಾಯಿಸುವ ಮೂಲಕ ಕೋಟೆಯಲ್ಲಿ ಕಾಣಿಸಿಕೊಂಡಿದ್ದ ಬಿರುಕಿನ ತೇಪೆಹಾಕುವ ಕೆಲಸ ಮಾಡಿತು. ಹೀಗಾಗಿ ಎರಡು ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಪಿ.ಟಿ. ಪರಮೇಶ್ವರನಾಯ್ಕ ಕ್ರಮವಾಗಿ ಒಮ್ಮೆ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್. ಯಂಕಾನಾಯ್ಕ ಅವರನ್ನು ಹಾಗೂ ಮೊತ್ತೊಮ್ಮೆ ಪಕ್ಷೇತರ ಅಭ್ಯರ್ಥಿ ಡಿ. ನಾರಾಯಣದಾಸ್ ಅವರನ್ನು ಸೋಲಿಸುವ ಮೂಲಕ ಪುನಃ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾರುಪತ್ಯಕ್ಕೆ ಮುನ್ನುಡಿ ಬರೆದರು.2008ರ ಕ್ಷೇತ್ರ ಪುನರ್‌ವಿಂಗಡನೆ ನಂತರ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಘೋಷಣೆಯಾಯಿತು. ಕಸಬಾ, ಅರಸೀಕೆರೆ ಹಾಗೂ ತೆಲಿಗಿ ಹೋಬಳಿ ಹೊಂದಿದ್ದ ಕ್ಷೇತ್ರ ವಿಂಗಡನೆಯ ನಂತರ, ಅರಸೀಕೆರೆ ಹೋಬಳಿ ಜಗಳೂರು ಕ್ಷೇತ್ರಕ್ಕೆ ವೀಲನವಾಯಿತು. ಹೂವಿನಹಡಗಲಿ ಕ್ಷೇತ್ರದಲ್ಲಿದ್ದ ಚಿಗಟೇರಿ ಹೋಬಳಿ ಹರಪನಹಳ್ಳಿ ಸಾಮಾನ್ಯ ಕ್ಷೇತ್ರಕ್ಕೆ ಸೇರ್ಪಡೆಯಾಯಿತು. ಈ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೂವಿನಹಡಗಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಎಂ.ಪಿ. ಪ್ರಕಾಶ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತು. ಅಸ್ತಿತ್ವವೇ ಇಲ್ಲದ ಬಿಜೆಪಿ ಗಣಿಧಣಿ ಜಿ. ಕರುಣಾಕರರೆಡ್ಡಿ ಅವರನ್ನು ಸ್ಪರ್ಧೆಗೆ ಧುಮುಕಿಸಿತು. ಇಬ್ಬರ ನಡುವೆ ನಡೆದ ಕದನ ಕಾಳಗದಲ್ಲಿ . ಕರುಣಾಕರರೆಡ್ಡಿ ಜಯಭೇರಿ ಬಾರಿಸುವ ಮೂಲಕ ಕಾಂಗ್ರೆಸ್ ಭದ್ರಕೋಟೆಯನ್ನು ನುಚ್ಚುನೂರು ಮಾಡಿದರು.ಜತೆಗೆ, ಕ್ಷೇತ್ರ ಪುರ್ನವಿಂಗಡೆಯ ನಂತರ ಬಿಜೆಪಿ ಸರ್ಕಾರದಲ್ಲಿ ಕಂದಾಯ ಖಾತೆ ಮಂತ್ರಿಯಾಗಿದ್ದು ವಿಶೇಷ.

ಕ್ಷೇತ್ರದಲ್ಲಿ ವೀರಶೈವ, ವಾಲ್ಮೀಕಿ, ಲಂಬಾಣಿ, ಆದಿ ಕರ್ನಾಟಕ ಸಮುದಾಯ ಮತದಾರರು ಹೆಚ್ಚಾಗಿದ್ದಾರೆ. ಉಳಿದಂತೆ ಕುರುಬ, ಮುಸ್ಲಿಂ ಹಾಗೂ ಯಾದವ ಸೇರಿದಂತೆ ಇತರೆ ಹಿಂದುಳಿದ ವರ್ಗಗಳ ಸಮುದಾಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ.ಇದುವರೆಗೆ ಆಯ್ಕೆಯಾದವರ ವಿವರ

ವರ್ಷ                    ಆಯ್ಕೆಯಾದವರು                               ಪಕ್ಷ

1952 ಇಜಾರಿ ಸಿರಸಪ್ಪ, ಮರಿಸ್ವಾಮಯ್ಯ ಮಠದ ಪಾಟೀಲ್    ಕಾಂಗ್ರೆಸ್

1957 ಎಂ. ದಾಸಪ್ಪ ಮತ್ತು ಎಂ.ಎಂ.ಜೆ. ಸದ್ಯೋಜಾತಯ್ಯ     ಪಿಎಸ್‌ಪಿ

1962      ಇಜಾರಿ ಸಿರಸಪ್ಪ                                          ಕಾಂಗ್ರೆಸ್

1967   ಬಿ.ಎಚ್. ಯಂಕಾನಾಯ್ಕ                                  ಕಾಂಗ್ರೆಸ್

1972   ಡಿ. ನಾರಾಯಣದಾಸ್                                     ಕಾಂಗ್ರೆಸ್

1978   ಡಿ. ನಾರಾಯಣದಾಸ್                                     ಕಾಂಗ್ರೆಸ್

1983  ಬಿ.ಎಚ್. ಯಂಕಾನಾಯ್ಕ                                   ಕಾಂಗ್ರೆಸ್

1985  ಬಿ.ಎಚ್. ಯಂಕಾನಾಯ್ಕ                                   ಕಾಂಗ್ರೆಸ್

1989  ಬಿ.ಎಚ್. ಯಂಕಾನಾಯ್ಕ                                  ಕಾಂಗ್ರೆಸ್

1994   ಡಿ. ನಾರಾಯಣದಾಸ್                                     ಪಕ್ಷೇತರ

1999  ಪಿ.ಟಿ. ಪರಮೇಶ್ವರನಾಯ್ಕ                                ಕಾಂಗ್ರೆಸ್

2004  ಪಿ.ಟಿ. ಪರಮೇಶ್ವರನಾಯ್ಕ                                ಕಾಂಗ್ರೆಸ್

2008     ಜಿ. ಕರುಣಾಕರರೆಡ್ಡಿ                                      ಬಿಜೆಪಿ  

              

2010ರ  ಉಪ ಚುನಾವಣೆಯ ಫಲಿತಾಂಶದ ವಿವರ

ಕ್ರ.ಸಂ.         ಅಭ್ಯರ್ಥಿ             ಪಕ್ಷ                    ಪಡೆದ ಮತ

1.  ಜಿ. ಕರುಣಾಕರರೆಡ್ಡಿ           ಬಿಜೆಪಿ                   69,235

2.  ಎಂ.ಪಿ. ಪ್ರಕಾಶ್             ಕಾಂಗ್ರೆಸ್                44,017

3.  ಮಹೇಶ್ವರಸ್ವಾಮಿ            ಬಿಎಸ್‌ಪಿ                1,147  

4. ಪಿ. ರಾಮನಗೌಡ              ಜೆಡಿಎಸ್                4,479

5. ಹೊಸಳ್ಳಿ ಮಲ್ಲೇಶ್            ಸಿಪಿಐ                    1,086

6. ಇದ್ಲಿ ರಾಮಪ್ಪ                  ಸಿಪಿಐ(ಎಂಎಲ್)      381

7. ಎಸ್.ಆರ್. ಹನುಮಂತ       ಪಕ್ಷೇತರ               247

8.   ಆಲೂರು ಎಂ.ಜಿ. ಸ್ವಾಮಿ   ಪಕ್ಷೇತರ               336

9.     ಕೆ.ಎಂ. ವೀರಭದ್ರಯ್ಯ     ಪಕ್ಷೇತರ               515

10.  ಬಿ. ಹನುಮಂತಪ್ಪ          ಪಕ್ಷೇತರ                1,690

ಪ್ರತಿಕ್ರಿಯಿಸಿ (+)