ಕೈಗಡಿಯಾರದಲ್ಲಿತ್ತು ಚಿನ್ನ!

ಮಂಗಳೂರು: ದುಬೈನಿಂದ ಕಳ್ಳಸಾಗಣೆಯಾದ 1 ಕೆ.ಜಿ ಚಿನ್ನದ ಗಟ್ಟಿ ಹಾಗೂ ಕೈಗಡಿಯಾರದಲ್ಲಿ ಅಡಗಿಸಿ ತಂದ 117 ಗ್ರಾಂ ಚಿನ್ನವನ್ನು ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬುಧವಾರ ವಶಪಡಿಸಿಕೊಂಡಿದ್ದಾರೆ.
ಚಿನ್ನ ಕಳ್ಳಸಾಗಣೆ ಮಾಡಿದ ಆರೋಪಿ ಕಾಸರಗೋಡು ಜಿಲ್ಲೆಯ ಪಲ್ಲಿಂಡಕುಕ್ಕಲ್ನ ಮುಹಮ್ಮದ್ ಮುಸ್ತಾಫ ಎರಿಯಪಾಡಿ ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ ವಶಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ ₨ 34.58 ಲಕ್ಷ ಎಂದು ಅಂದಾಜಿಸಲಾಗಿದೆ.
ದುಬೈನಿಂದ ಬೆಳಿಗ್ಗೆ 7.30ಕ್ಕೆ ಬಂದ ಏರ್ ಇಂಡಿಯ ಎಕ್ಸ್ಪ್ರೆಸ್ ಐಎಕ್ಸ್ 814 ವಿಮಾನದಲ್ಲಿ ಆರೋಪಿ ಪ್ರಯಾಣಿಸಿದ್ದ. ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಿದಾಗ ಆತನ ಬಳಿ 1 ಕೆ.ಜಿ ಚಿನ್ನದ ಗಟ್ಟಿ ಪತ್ತೆಯಾಯಿತು.
ಅದಕ್ಕಾಗಿ ಯಾವುದೇ ಅಧಿಕೃತ ದಾಖಲೆಗಳನ್ನು ಹೊಂದಿರಲಿಲ್ಲ. ಆತ ಧರಿಸಿದ್ದ ಕೈಗಡಿಯಾರದಲ್ಲೂ 117 ಗ್ರಾಂ ಚಿನ್ನವನ್ನು ಅಡಗಿಸಿಟ್ಟಿದ್ದು ಕಂಡು ಬಂತು.
‘ಕೈಗಡಿಯಾರದೊಳಗೆ ಚಿನ್ನವನ್ನು ಅಡಗಿಸಿ ತಂದ ಪ್ರಕರಣ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿರುವುದು ಇದೇ ಮೊದಲು. ಅಚ್ಚರಿ ಎಂದರೆ, ಕೈಗಡಿಯಾರದ ಒಳಗಡೆ ಸಣ್ಣ ಯಂತ್ರವನ್ನು ಅಳವಡಿಸಿ, ಅದು ಸಮರ್ಪಕವಾಗಿ ಸಮಯವನ್ನು ತೋರಿಸುವಂತೆ ರೂಪಿಸಲಾಗಿತ್ತು.
ಕೈಗಡಿಯಾರದ ಒಳಗಿನ ಯಂತ್ರವನ್ನು ತೆಗೆದು ಅದರ ಒಳಗೆ ಬೆಳ್ಳಿ ಲೇಪಿತ ಚಿನ್ನವನ್ನು ಅಡಗಿಸಿಟ್ಟಿದ್ದರು. ಚಿನ್ನವನ್ನು ಕಳ್ಳಸಾಗಣೆ ಮಾಡಲು ಅನುಕೂಲವಾಗುವಂತೆ ಮಾರ್ಪಡಿಸುವಂತಹ ವ್ಯವಸ್ಥಿತ ಜಾಲ ಇಲ್ಲದೇ ಇಂತಹ ಕೃತ್ಯ ನಡೆಸಲು ನಡೆಸಲು ಅಸಾಧ್ಯ’ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.