ಸೋಮವಾರ, ಮೇ 17, 2021
23 °C
ಶೇ2.3ಕ್ಕೆ ಜಾರಿದ ಏಪ್ರಿಲ್ `ಐಐಪಿ'

ಕೈಗಾರಿಕಾ ಉತ್ಪಾದನೆ ಸೂಚ್ಯಂಕ ಮತ್ತೆ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ದೇಶದ ಕೈಗಾರಿಕಾ ಉತ್ಪಾದನೆ ಕ್ಷೇತ್ರ ಸುಧಾರಿಸಿಕೊಳ್ಳುವ ಯಾವ ಸೂಚನೆಯೂ ಸದ್ಯಕ್ಕೆ ಕಾಣಬರುತ್ತಿಲ್ಲ. ಏಪ್ರಿಲ್ ತಿಂಗಳಲ್ಲಿನ `ಕೈಗಾರಿಕಾ ಉತ್ಪಾದನೆ ಸೂಚ್ಯಂಕ'(ಐಐಪಿ) ಮತ್ತಷ್ಟು ಕುಸಿತ ಕಂಡಿದ್ದು, ಶೇ 2.3ರಷ್ಟು ಕಳಪೆ ಮಟ್ಟಕ್ಕೆ ಜಾರಿದೆ.ಇದೇ ವೇಳೆ, ಕೈಗಾರಿಕಾ ಕ್ಷೇತ್ರದಲ್ಲಿನ ಈಗಿನ ನಿರಾಶಾದಾಯಕ ಪರಿಸ್ಥಿತಿಯಿಂದ `ಭಾರತೀಯ ರಿಸರ್ವ್ ಬ್ಯಾಂಕ್'(ಆರ್‌ಬಿಐ) ಬಡ್ಡಿದರ ತಗ್ಗಿಸುವ ಚಿಂತನೆ ನಡೆಸುವ ಸಂಭವವಿದೆ. ಇನ್ನೊಂದೆಡೆ ಬಂಡವಾಳ ಹೂಡಿಕೆ ಪ್ರಮಾಣ ಹೆಚ್ಚಿಸುವ ಸಲುವಾಗಿಯಾದರೂ ಬಾಕಿಯಾಗಿರುವ ಬೃಹತ್ ಯೋಜನೆಗಳಿಗೆ ಶೀಘ್ರ ಅನುಮತಿ ದೊರೆಯಬಹುದೆಂಬ ಆಶಾಭಾವ ಉದ್ಯಮ ಕ್ಷೇತ್ರದ್ದಾಗಿದೆ.ಮಾರ್ಚ್‌ನಲ್ಲಿ ಶೇ 3.4ರಷ್ಟು ಸಾಧಾರಣ ಮಟ್ಟದಲ್ಲಿದ್ದ `ಐಐಪಿ', ಪರಿಕರ ತಯಾರಿಕೆ, ಗಣಿಗಾರಿಕೆ ವಿಭಾಗದ ಕಳಪೆ ಸಾಧನೆಯಿಂದಾಗಿ ಏಪ್ರಿಲ್ ವೇಳೆಗೆ ಗಮನಾರ್ಹ ಕುಸಿತ ಕಂಡಿತು. ಆದರೆ, 2012ರ ಏಪ್ರಿಲ್‌ನಲ್ಲಿದ್ದ ಶೇ 1.3ರಷ್ಟು `ಐಐಪಿ'ಗೆ ಹೋಲಿಸಿದರೆ ಈ ಬಾರಿಯ ಸ್ಥಿತಿ ಕೊಂಚ ಉತ್ತಮವಾಗಿದೆ ಎಂಬುದೇ ಸಮಾಧಾನದ ಅಂಶ.`ಐಐಪಿ'ಯಲ್ಲಿ ಪರಿಕರ ತಯಾರಿಕಾ ಕ್ಷೇತ್ರದ್ದು ಶೇ 75ರಷ್ಟು ದೊಡ್ಡ ಪಾಲಿದೆ. ಆದರೆ, ಈ ವಿಭಾಗದ ಕೊಡುಗೆ ಏಪ್ರಿಲ್ ಕೇವಲ ಶೇ 2.8ರಷ್ಟಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಶೇ 1.8ರಷ್ಟು ಇದ್ದಿತು.ವಿದ್ಯುತ್ ಉತ್ಪಾದನೆ ವಿಭಾಗದ ಸಾಧನೆ ಶೇ 0.7ರಷ್ಟು ತೀರಾ ಕಡಿಮೆ ಇದೆ. ವರ್ಷಕ್ಕೂ ಹಿಂದೆ ಶೇ 4.6ರಷ್ಟು ಉತ್ತಮ ಕೊಡುಗೆ ಈ ಕ್ಷೇತ್ರದಿಂದ ಬಂದಿತ್ತು. ಗಣಿಗಾರಿಕೆ ವಿಭಾಗ ಈ ಬಾರಿ `ಐಐಪಿ'ಗೆ ಶೇ 3ರಷ್ಟು ಕೊಡುಗೆ  ನೀಡಿದೆ.ನಿರಾಶಾದಾಯಕ-ಪ್ರತಿಕ್ರಿಯೆ

ಕೈಗಾರಿಕಾ ಉತ್ಪಾದನೆ ಕ್ಷೇತ್ರದ ಏಪ್ರಿಲ್ ಸಾಧನೆ ಎಷ್ಟು ಕಳಪೆ ಎಂಬುದನ್ನು `ಐಐಪಿ' ಅಲ್ಪ ಮಟ್ಟಕ್ಕಿಳಿದಿರುವುದೇ ಎತ್ತಿತೋರುತ್ತಿದೆ. ಇದು ತೀರಾ ನಿರಾಶಾದಾಯಕ ಸ್ಥಿತಿ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಪ್ರತಿಕ್ರಿಯಿಸಿದ್ದಾರೆ.`ಭಾರತೀಯ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಸಂಘಟನೆಗಳ ಒಕ್ಕೂಟ'    (ಎಫ್‌ಐಸಿಸಿಐ) ಸಹ `ಐಐಪಿ' ಕಳಪೆ ಸಾಧನೆಗೆ ನಿರಾಶೆ ವ್ಯಕ್ತಪಡಿಸಿದ್ದು, ಈಗಲಾದರೂ `ಆರ್‌ಬಿಐ' ಬಡ್ಡಿದರ ಕಡಿತ ಮಾಡಲಿ ಎಂದು ಆಗ್ರಹಿಸಿದೆ.ಪರಿಕರ ತಯಾರಿಕೆ ಉದ್ಯಮ ಮತ್ತು ಮೂಲಸೌಕರ್ಯ ವೃದ್ಧಿ ಕ್ಷೇತ್ರದಲ್ಲಿನ ಬಂಡವಾಳ ಹೂಡಿಕೆ ವಾತಾವರಣ ಅಷ್ಟೇನೂ ವಿಶ್ವಾಸ ಮೂಡಿಸುವಂತಿಲ್ಲ ಎಂದು `ಎಫ್‌ಐಸಿಸಿಐ' ಅಧ್ಯಕ್ಷೆ ನೈನಾಲಾಲ್ ಕಿದ್ವಾಯಿ ಅವರು ವಿಶ್ಲೇಷಿಸಿದ್ದಾರೆ.ಸಚಿವಾಲಯಗಳ ಮಧ್ಯೆ ಸಿಕ್ಕಿಕೊಂಡಿರುವ ಬೃಹತ್ ಯೋಜನೆಗಳಿಗೆ ತ್ವರಿತವಾಗಿ ಅನುಮತಿ ಲಭಿಸದೇ ಇದ್ದರೆ ಬಂಡವಾಳ ಹೂಡಿಕೆ ವಿಭಾಗದಲ್ಲಿ ಪ್ರಗತಿಯಾಗದು. ಆಗ ಕೈಗಾರಿಕಾ ಉತ್ಪಾದನಾ ಕ್ಷೇತ್ರದ ಪರಿಸ್ಥಿತಿ ಈಗಿನಂತೆಯೇ ಮುಂದುವರಿಯುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.`ಜೂ.17ರಂದು `ಆರ್‌ಬಿಐ' ಅನುಕೂಲಕಾರಿ ಹಣಕಾಸು ನಿಯಂತ್ರಣ ನೀತಿ ಪ್ರಕಟಿಸಲಿದೆ ಎಂಬ ನಿರೀಕ್ಷೆ ಇದೆ' ಎಂದು ಭಾರತೀಯ ಕೈಗಾರಿಕೆಗಳ ಮಹಾಸಂಘ(ಸಿಐಐ)ದ ಮಹಾ ನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಸೂಚ್ಯವಾಗಿ ಪ್ರತಿಕ್ರಿಯಿಸಿದ್ದಾರೆ.`ಕಳವಳಕಾರಿ ಪರಿಸ್ಥಿತಿ'

ಒಂದೆಡೆ `ಐಐಪಿ' ಭಾರಿ ಇಳಿಕೆ, ಇನ್ನೊಂದೆಡೆ ಚಿಲ್ಲರೆ ಧಾರಣೆ ಆಧರಿಸಿದ ಹಣದುಬ್ಬರದಲ್ಲಿ ಏರಿಕೆ. ನಿಜಕ್ಕೂ ಕಳವಳಕಾರಿ ಪರಿಸ್ಥಿತಿ. ಇದು ಭಾರತದ ಆರ್ಥಿಕ ಸ್ಥಿತಿ ಬಹಳ ಕಷ್ಟದ ಸನ್ನಿವೇಶದಲ್ಲಿದೆ ಎಂಬುದರ ಪ್ರತಿಬಿಂಬವೇ ಆಗಿದೆ ಎಂದು `ಅಸೋಚಾಂ' ಅಧ್ಯಕ್ಷ ರಾಜ್‌ಕುಮಾರ್ ಎನ್.ಧೂತ್ ಭಿನ್ನವಾದ ಅಭಿಪ್ರಾಯ ಪ್ರಕಟಿಸಿದ್ದಾರೆ.ಹಣದುಬ್ಬರ ಶೇ9.31

ನವದೆಹಲಿ(ಪಿಟಿಐ
): ದೇಶದಲ್ಲಿನ ಚಿಲ್ಲರೆ ಹಣದುಬ್ಬರ ಮೇ ತಿಂಗಳಲ್ಲಿ ಶೇ 9.31ರಷ್ಟು ಮೇಲ್ಮಟ್ಟದಲ್ಲೇ ಉಳಿದಿದೆ. ಖಾದ್ಯತೈಲ, ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಮತ್ತು ತರಕಾರಿ ಧಾರಣೆಯಲ್ಲಿ ಭಾರಿ ಏರಿಕೆ ಆಗಿದ್ದರಿಂದ ಹಣದುಬ್ಬರ ಈ ಬಾರಿಯೂ ಕೆಳಕ್ಕಿಳಿಯಲು ಅವಕಾಶವಾಗಲಿಲ್ಲ.ಗ್ರಾಹಕ ಬಳಕೆ ವಸ್ತುಗಳನ್ನು ಆಧರಿಸಿದ `ಗ್ರಾಹಕ ವಸ್ತು ಧಾರಣೆ ಸೂಚ್ಯಂಕ'(ಸಿಪಿಐ) ಏಪ್ರಿಲ್‌ನಲ್ಲಿ ಶೇ 9.39ರಲ್ಲೂ, ಮಾರ್ಚ್‌ನಲ್ಲಿ ಶೇ 10.39ರಷ್ಟು ಗರಿಷ್ಠ ಮಟ್ಟದಲ್ಲೂ ಇದ್ದಿತು. ಅದಕ್ಕೆ ಹೋಲಿಸಿದರೆ ಮೇ ತಿಂಗಳಲ್ಲಿನ ಹಣದುಬ್ಬರದಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.