ಕೈಗಾರಿಕಾ ತ್ಯಾಜ್ಯ: ವೀರನಂಜೀಪುರ ಕೆರೆಗೆ ನಂಜು

ಶುಕ್ರವಾರ, ಜೂಲೈ 19, 2019
22 °C

ಕೈಗಾರಿಕಾ ತ್ಯಾಜ್ಯ: ವೀರನಂಜೀಪುರ ಕೆರೆಗೆ ನಂಜು

Published:
Updated:

ನೆಲಮಂಗಲ:  ತಾಲ್ಲೂಕಿನ ವಿಶ್ವೇಶ್ವರಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವೀರನಂಜೀಪುರದ ಕೆರೆಗೆ ಸುತ್ತಮುತ್ತಲ ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯ ಸೇರಿ ನೀರು ಕಲುಷಿತಗೊಂಡಿದೆ.ಪಟ್ಟಣಕ್ಕೆ ಸಮೀಪವೇ ಇರುವ ಈ ಕೆರೆಗೆ ಪಟ್ಟಣದ ಕಾರ್ಖಾನೆಯಿಂದ ರಾತ್ರಿ ವೇಳೆ ಮಲಿನ ನೀರನ್ನು ಹರಿಸಲಾಗುತ್ತಿದೆ. ಇದಲ್ಲದೆ ಸುತ್ತಮುತ್ತಲ ಕಾರ್ಖಾನೆಗಳಲ್ಲಿ ಉತ್ಪತ್ತಿಯಾಗುವ ವಿಷಕಾರಿ ರಾಸಾಯನಿಕ ತ್ಯಾಜ್ಯಗಳನ್ನು ಹಗಲಿನಲ್ಲೇ ರಾಜಾರೋಷವಾಗಿ ತಂದು ಸುರಿಯಲಾಗುತ್ತಿದೆ. ಇದರಿಂದ ಕೆರೆಯ ನೀರು ಸಂಪೂರ್ಣ ಮಲಿನಗೊಂಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.`ಕೆರೆಯ ನೀರು ಮಲಿನಗೊಂಡಿರುವುದರಿಂದ ವೀರನಂಜೀಪುರ, ಗಂಗಾಧರಯ್ಯನಪಾಳ್ಯ, ಕಣೇಗೌಡನಹಳ್ಳಿ, ಅನಂತಪುರ, ದಿಣ್ಣೇಪಾಳ್ಯ, ಪಾಪಾಬೋವಿಪಾಳ್ಯ ಸೆರಿದಂತೆ ಸುತ್ತಮುತ್ತಲ ಹಲವು ಹಳ್ಳಿಗಳ ಕೊಳವೆಬಾವಿಗಳ ನೀರು ಮಲಿನಗೊಂಡು ಬಳಸಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ.ಈಗಾಗಲೇ ನೆಲಮಂಗಲ ತಾಲ್ಲೂಕಿನಾದ್ಯಂತ ಕೊಳವೆ ಬಾವಿಗಳಲ್ಲಿ ಫ್ಲೊರೈಡ್‌ಯುಕ್ತ ನೀರು ಸಿಗುತ್ತಿದ್ದು, ಗ್ರಾಮದಲ್ಲಿ ಫ್ಲೊರೈಡ್ ಜೊತೆಗೆ ವಿಷಪೂರಿತ ನೀರನ್ನು ಕುಡಿಯಬೇಕಿದೆ. ಕೆರೆಯ ನೀರನ್ನು ಕುಡಿದ ಜಾನುವಾರುಗಳು, ಕುರಿಗಳು ಸಾಯುತ್ತಿವೆ. ಜನರು ಹಲವು ಬಗೆಯ ರೋಗಗಳಿಗೆ ತುತ್ತಾಗಿದ್ದಾರೆ. ನಿತ್ಯವೂ ಆಸ್ಪತ್ರೆಗಳಿಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ' ಎಂದು ವೀರನಂಜೀಪುರದ ವೀರಮಾರೇಗೌಡ ಆಕ್ರೋಶ ವ್ಯಕ್ತಪಡಿಸಿದರು.`ಕೆರೆಗಳ ನಿರ್ವಹಣೆ ಹೊತ್ತಿರುವ ಸಣ್ಣ ನೀರಾವರಿ ಇಲಾಖಾ ಅಧಿಕಾರಿಗಳು, ಪಂಚಾಯ್ತಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಇತ್ತ ಸುಳಿದಿಲ್ಲ. ಅಗತ್ಯ ಕ್ರಮ ಕೈಗೊಂಡಿಲ್ಲ' ಎಂದು ಅನಂತಪುರದ ಮಂಜುನಾಥಸ್ವಾಮಿ, ಅಶ್ವತ್ಥಪ್ಪ, ರಾಜಣ್ಣ ದೂರಿದ್ದಾರೆ.  `ಎಲ್ಲೆಡೆ ಕೆರೆಗಳು ಪ್ರಭಾವಿಗಳ ಒತ್ತುವರಿಗೆ ತುತ್ತಾಗಿ ಕ್ಷೀಣಿಸುತ್ತಿವೆ. ಇರುವ ಕೆರೆಗಳು ನೀರಿಲ್ಲದೆ ಬತ್ತುತ್ತಿವೆ. ನೀರಿರುವ ಕೆರೆಗಳನ್ನಾದರೂ ಉಳಿಸಿಕೊಳ್ಳುವ ಪ್ರಯತ್ನ ನಮ್ಮದಾಗಬೇಕಿದೆ. ಶೀಘ್ರವೇ ಸುತ್ತಮುತ್ತಲಿನ ಕಾರ್ಖಾನೆಗಳಿಗೆ ನೋಟಿಸ್ ಜಾರಿ ಮಾಡಿ, ಕೆರೆಯನ್ನು ದುರಸ್ತಿ ಮಾಡಿ ಸ್ಥಳೀಯರ ಆರೋಗ್ಯದ ರಕ್ಷಣೆಗೆ ಮುಂದಾಗಬೇಕು' ಎಂದು ಕಲ್ಯಾಣ ಕರ್ನಾಟಕ ಕ್ರಾಂತಿ ವೇದಿಕೆಯ ಅಧ್ಯಕ್ಷ ಸಿ.ಹನುಮಂತರಾಜು, ವಕೀಲ ಗಂಗರಾಜು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry