ಕೈಗಾರಿಕಾ ಲೋಕದ ಮಹಾಸುಳಿಯ ಅನಾವರಣ

7
ವಿಮರ್ಶೆ

ಕೈಗಾರಿಕಾ ಲೋಕದ ಮಹಾಸುಳಿಯ ಅನಾವರಣ

Published:
Updated:
ಕೈಗಾರಿಕಾ ಲೋಕದ ಮಹಾಸುಳಿಯ ಅನಾವರಣ

ಮಹಾಸುಳಿ

ಲೇ: ದ್ವಾರನಕುಂಟೆ ಪಾತಣ್ಣ

ಪ್ರ: ಸ್ನೇಹ ಪ್ರಕಾಶನ, ನಂ. 118, ‘ಹೊಂಬೆಳಕು’, ಎಚ್ಎಂಟಿ ಲೇಔಟ್, ನಾಗಸಂದ್ರ ಅಂಚೆ, ಬೆಂಗಳೂರು– 560 073

ಪು: 304 ರೂ.200

ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಇಂದಿಗೂ ಹೆಚ್ಚು ಜಾಗವನ್ನು ಪಡೆದುಕೊಳ್ಳುತ್ತಿರುವ ಅನುಭವಲೋಕವೆಂದರೆ ಹಳ್ಳಿಯ ಮತ್ತು ಬೇಸಾಯ ಸಮಾಜದ ಅನುಭವಲೋಕವೇ ಆಗಿದೆ. ಇದುವರೆಗೂ ಕನ್ನಡದಲ್ಲಿ ಬಂದಿರುವ ಮೇಜರ್ ಎನ್ನುವ ಕಾದಂಬರಿ ಮತ್ತು ಕತೆಗಳೆಲ್ಲವೂ ಈ ಅನುಭವಲೋಕವನ್ನೇ ಕೇಂದ್ರೀಕರಿಸಿವೆ.

ಮತ್ತು ಹಾಗೆ ಬರೆಯುವಾಗ ಬರಹಗಾರರು ತಮ್ಮ ಬಾಲ್ಯದ ಅನುಭವಗಳಿಗೆ ಮತ್ತೆ ಎಡತಾಕುವ, ಅವುಗಳನ್ನು ಮರುಶೋಧಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಹೀಗೆ ಮರುಶೋಧಿಸಿಕೊಳ್ಳುವ ಪ್ರಯತ್ನವೇ ಕನ್ನಡದಲ್ಲಿ ಶಕ್ತವಾದ ಕಥನ ಸಾಹಿತ್ಯವಾಗಿ ಬೆಳೆದು ಬಂದಿದೆ. ಇದು ಇಂದಿಗೂ ದೊಡ್ಡ ಪ್ರಮಾಣದಲ್ಲಿ ಮುಂದುವರೆದಿರುವುದನ್ನು ಕಾಣಬಹುದಾಗಿದೆ.

ಎಲ್ಲೋ ಕೆಲವರು ಮಾತ್ರ ಈಚೆಗೆ ನಗರ ಸಮಾಜದ ಬದುಕಿನ ಅನುಭವವನ್ನು ಶೋಧಿಸುವ ಕೆಲಸ ಮಾಡುತ್ತಿದ್ದಾರೆ. ಇವರು ಕೂಡ ಮೂಲದಲ್ಲಿ ಹಳ್ಳಿಗಳಿಂದ ನಗರಗಳಿಗೆ ವಲಸೆ ಬಂದಿರುವವರೇ. ಅವರು ಮೊದ ಮೊದಲು ಹಳ್ಳಿಗಳ ಅನುಭವಗಳ ಬಗೆಗೇ ಬರೆದು ನಂತರದಲ್ಲಿ ನಗರದಲ್ಲಿ ದೀರ್ಘಕಾಲ ವಾಸಿಸಿದ ತರುವಾಯ, ಅಲ್ಲಿ ಗಳಿಸಿದ ತಮ್ಮ ಹೊಸ ಅನುಭವವನ್ನು ಕಥನವಾಗಿಸುವ ಕೆಲಸ ಮಾಡಿದ್ದಾರೆ. ಮತ್ತು ಕೆಲವರು ಈಗಲೂ ಮಾಡುತ್ತಿದ್ದಾರೆ. ಒಟ್ಟು ಕನ್ನಡದ ಕಥನ ಸಾಹಿತ್ಯವನ್ನು ನೋಡಿದರೆ ಇದರ ಪ್ರಮಾಣ ತುಂಬಾ ಕಡಿಮೆ ಎಂದೇ ಯಾರಿಗಾದರೂ ಅನ್ನಿಸುತ್ತದೆ.

ಇಲ್ಲಿಯೇ ಗಮನಿಸಬೇಕಾದ ಮತ್ತೊಂದು ಮುಖ್ಯಸಂಗತಿಯೆಂದರೆ ಹಳ್ಳಿಯು ಬೇಸಾಯ ಪ್ರಧಾನವಾದ ಸಮಾಜವಾದರೆ, ನಗರ ಸಮಾಜ ರಚನೆಗೊಂಡಿರುವುದು ಕೈಗಾರಿಕೆಗಳ ಆಧಾರದ ಮೇಲೆ. ಅಂದರೆ ನಮ್ಮಲ್ಲಿ ಯಾವುದನ್ನು ಕೈಗಾರಿಕೀಕರಣ ಎಂದು ಕರೆಯಲಾಗುವುದೋ ಅದರ ಆಧಾರದ ಮೇಲೆ ನಗರ ಸಮಾಜ ನಿರ್ಮಾಣವಾಗಿದೆ. ಇಂತಹ ಕೈಗಾರಿಕಾ ಪ್ರಧಾನವಾದ ನಗರ ಸಮಾಜದ ವ್ಯಾಪ್ತಿ ಈ ಮೊದಲು ಚಿಕ್ಕದಿದ್ದರೂ ಕಳೆದ ನಾಲ್ಕೈದು ದಶಕಗಳಲ್ಲಿ ಇದರ ವ್ಯಾಪ್ತಿ ವಿಸ್ತಾರಗೊಳ್ಳುತ್ತಿದೆ.

ನಗರದಲ್ಲಿ ವಾಸ ಮಾಡುವವರ ಮತ್ತು ಅವರಿಗೆ ಉದ್ಯೋಗದ ನೆಲೆ ಕಲ್ಪಿಸುವ ಉದ್ಯಮಗಳ ಸಂಖ್ಯೆಯೂ ಲಕ್ಷಾಂತರ ಸಂಖ್ಯೆಯಲ್ಲಿ ಬೆಳೆಯುತ್ತಿದೆ. ಇದು ಭಾರತೀಯ ಸಮಾಜವು ಬೇಸಾಯ ಪ್ರಧಾನತೆಯಿಂದ ಕೈಗಾರಿಕೆ ಪ್ರಧಾನತೆಯ ಸಮಾಜವಾಗಿ ಬದಲಾಗುವ ಹಂತದಲ್ಲಿದೆ ಎಂಬುದರ ಸೂಚಕವೂ ಹೌದು. ಅನೇಕ ಸಂಶೋಧನೆಗಳಿಂದ ದೊರಕಿರುವ ಮಾಹಿತಿಗಳು ಇದನ್ನು ಸಮರ್ಥಿಸುತ್ತವೆ.

ಕಳೆದು ನೂರೈವತ್ತು ವರ್ಷಗಳಿಂದಲೂ ಇದು ನಡೆದು ಬರುತ್ತಿದ್ದು ಕಳೆದ ನಾಲ್ಕೈದು ದಶಕಗಳಲ್ಲಿ ತೀವ್ರಗೊಂಡು, ಇಪ್ಪತ್ತೊಂದನೆಯ ಶತಮಾನದ ಎರಡನೆಯ ಈ ದಶಕದಲ್ಲಿ ಭಾರತದಾದ್ಯಂತ ನಗರೀಕರಣ ಮತ್ತು ಕೈಗಾರಿಕೀಕರಣ ಮತ್ತು ತೀವ್ರಗೊಂಡಿರುವುದು ಇಂದು ಎಲ್ಲರ ಅನುಭವಕ್ಕೂ ಬರುತ್ತಿದೆ. ಈ ಹಂತದಲ್ಲಿ ಜನರು ಗ್ರಾಮೀಣ ಮತ್ತು ಬೇಸಾಯ ಪ್ರಧಾನ ಸಮಾಜದ ಅನುಭವ ಲೋಕಗಳಿಂದ ಬಿಡುಗಡೆಗೊಂಡು ಕೈಗಾರಿಕೆ ಪ್ರಧಾನವಾದ ನಗರ ಸಮಾಜದ ಅನುಭವಗಳಿಗೆ ತೆರೆದುಕೊಳ್ಳುತ್ತಿದ್ದಾರೆ ಮತ್ತು ಅದಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಈ ಹಂತದಲ್ಲಿ ವ್ಯಕ್ತಿ ಮತ್ತು ಸಮಾಜದಲ್ಲಿ ಹಲವು ಬಗೆಯ ತಿಕ್ಕಾಟಗಳು ಅನುಭವದ ನೆಲೆಯಲ್ಲಿ ನಡೆಯುತ್ತವೆ. ಇಂತಹ ತಿಕ್ಕಾಟವನ್ನು ಮರುಶೋಧಿಸುವ ಪ್ರಯತ್ನವನ್ನು ಕನ್ನಡದ ಕಥನ ಸಾಹಿತಿಗಳನೇಕರು ಮಾಡಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಕನ್ನಡ ಕಥನ ಸಾಹಿತ್ಯವು ಶೋಷಣೆಯ ಭಿನ್ನಮುಖಗಳನ್ನು ಅನಾವರಣಗೊಳಿಸಿದೆ. ಹಾಗೆ ಅನಾವರಣಗೊಳಿಸುವಾಗ ಅದು ಬಹುತೇಕವಾಗಿ ಗ್ರಾಮೀಣ ಸಮಾಜದ ಬದುಕಿನ ಬಹುಮುಖಗಳನ್ನು ತೋರಿಸಿಕೊಟ್ಟಿದೆ. ಆದರೆ ಬಹಳ ವ್ಯಾಪಕವಾಗಿ ಬೆಳೆಯುತ್ತಿರುವ ಕೈಗಾರಿಕೆ ಪ್ರಧಾನವಾದ ನಗರ ಸಮಾಜದ ಬದುಕಿನ ಭಿನ್ನನೆಲೆಗಳನ್ನು ಇನ್ನೂ ವ್ಯಾಪಕವಾಗಿ ಶೋಧನೆಗೆ ಒಳಪಡಿಸಿಲ್ಲವೆಂದೇ ಹೇಳಬೇಕು.

ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿ ಮೊದಲಾದವರು ಮುಂಬೈ ಕೇಂದ್ರಿತವಾದ ಬದುಕಿನ ಭಿನ್ನಮುಖಗಳನ್ನು ತೋರಿಸಿಕೊಡುವ ಕೆಲಸ ಮಾಡಿದ್ದಾರೆ. ಬಲ್ಲಾಳರ ‘ಬಂಡಾಯ’ ಕಾದಂಬರಿಯು ನಗರದ ಸಮಾಜ, ಕಾರ್ಮಿಕ ಚಳವಳಿ, ಅದರ ಬೇರೆ ಬೇರೆ ಸಮಸ್ಯೆಗಳನ್ನು ಇತ್ಯಾದಿಗಳನ್ನು ಪರಿಚಯಿಸುತ್ತದೆ. ‘ಬಂಡಾಯ’ದ ರಾಜೀವ ನೆನಪುಳಿಯುವ ಪಾತ್ರ. ಹಾಗಿದ್ದರೂ ಕೂಡ ಅದು ಅದು ಕೈಗಾರಿಕೆಯೊಂದರ ಒಳಗಿನ ಮತ್ತು ಅದು ರಾಜಕೀಯ ವ್ಯವಸ್ಥೆಯ ಜೊತೆಗೆ ಹೊಂದಿಕೊಂಡಿರುವ ನಂಟನ್ನು ಹೆಚ್ಚು ವಿವರಿಸುವುದಿಲ್ಲ. ಅದೇ ಅದರ ಪ್ರಧಾನ ಭಿತ್ತಿಯಲ್ಲ. ಕೈಗಾರಿಕೆಗಳು ಇಂದು ಬಹಳ ದೊಡ್ಡ ಕಾರ್ಯಕ್ಷೇತ್ರವಾದರೂ ಆ ಬಗೆಗಿನ ಸಾಹಿತ್ಯ ಅಷ್ಟಾಗಿ ಸೃಷ್ಟಿಯಾಗುತ್ತಿಲ್ಲ. ಯಾಕೆ ಸೃಷ್ಟಿಯಾಗುತ್ತಿಲ್ಲ ಎಂಬುದರ ಬಗೆಗೆ ಯೋಚಿಸಬೇಕಾದ ಅಗತ್ಯವಿದೆ.

ಕೈಗಾರಿಕೆಗಳು ಇಂದು ವ್ಯಾಪಕವಾಗಿ ಸ್ಥಾಪನೆಗೊಂಡು ಕೋಟ್ಯಂತರ ಜನರು ಅವುಗಳನ್ನು ಆಧರಿಸಿ ಜೀವಿಸುತ್ತಿದ್ದರೂ ಆ ಬಗೆಗಿನ ಮತ್ತು ಅವುಗಳೊಳಗಿನ ಜೀವನ ಸಂಘರ್ಷವನ್ನು ಕಟ್ಟಿಕೊಡುವ ಶಕ್ತವಾದ ಸಾಹಿತ್ಯ ಕನ್ನಡದಲ್ಲಿ ಇನ್ನೂ ರೂಪುಗೊಂಡಿಲ್ಲವೆಂದೇ ಹೇಳಬೇಕು. ಸದ್ಯ ಇಂತಹ ಸಾಹಿತ್ಯದ ಕೊರತೆಯನ್ನು ನೀಗಿಸಲು ಮುಂದಾಗಿರುವವರೆಂದರೆ ದ್ವಾರನಕುಂಟೆ ಪಾತಣ್ಣನವರು. ಈ ಮೊದಲು ಕವಿಯಾಗಿ, ಕನ್ನಡ ಕಾರ್ಯಕರ್ತರಾಗಿ ತಮ್ಮನ್ನು ಗುರುತಿಸಿಕೊಂಡಿರುವ ಪಾತಣ್ಣನವರು ಈಗ ‘ಮಹಾಸುಳಿ’ಯ ಮೂಲಕ ಕಾದಂಬರಿಕಾರರಾಗಿ ಹೊರಹೊಮ್ಮಿದ್ದಾರೆ.

ಇಲ್ಲಿನ ವಿಶೇಷ ಸಂಗತಿಯೆಂದರೆ ಅವರು ಇತರೆ ವೃತ್ತಿಪರ ಬರಹಗಾರರಂತೆ ಅಲ್ಲ. ಸದಾ ಅಧ್ಯಯನ – ಅಧ್ಯಾಪನದಲ್ಲಿಯೂ ತೊಡಗಿದವರಲ್ಲ. ಬದಲಿಗೆ ಕಾರ್ಮಿಕರಾಗಿದ್ದು– ಕನ್ನಡ ಚಳವಳಿಯಲ್ಲಿ, ವಿವಿಧ ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದವರು. ತಮ್ಮ ಅನಿಸಿಕೆಗಳನ್ನು ಕವಿತೆಗಳ ರೂಪದಲ್ಲಿ ಕೂಡಿಡಲು ಯತ್ನಿಸುತ್ತಿದ್ದರು. ತಮ್ಮ ನಿವೃತ್ತಿಯ ನಂತರ ತಾವು ಕೆಲಸ ಮಾಡುತ್ತಿದ್ದ ಕೈಗಾರಿಕೆಯಲ್ಲಿ ಪ್ರತ್ಯಕ್ಷ ಕಂಡ, ಅನುಭವಿಸಿದ ಅನುಭವಗಳನ್ನು ಕಾದಂಬರಿಯಾಗಿ ನಿರೂಪಿಸಲು ತೊಡಗಿ ಯಶಸ್ವಿಯಾಗಿದ್ದಾರೆ. ಸುಮಾರು ಮುನ್ನೂರು ಪುಟಗಳಷ್ಟು ವಿಸ್ತಾರವಾದ ಕಾದಂಬರಿಯನ್ನು ಕಟ್ಟುವ ಮೂಲಕ ತಾವು ಕಥನ ಕಟ್ಟುವುದರಲ್ಲಿ ಸಿದ್ಧಹಸ್ತರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಪಾತಣ್ಣನವರು ಪ್ರವಾಸ ಸಾಹಿತ್ಯ ರಚನೆಯನ್ನೂ ಮಾಡುತ್ತಿದ್ದಾರೆ.

‘ಮಹಾಸುಳಿ’ ಕಾದಂಬರಿಯು ಬೆಂಗಳೂರಿನಲ್ಲಿರುವ ಕೇಂದ್ರ ಸರ್ಕಾರದ ನಿಯಂತ್ರಣದ ಸಾರ್ವಜನಿಕ ಉದ್ಯಮವೊಂದರ ಒಳರಾಜಕಾರಣವನ್ನು ಪರಿಚಯಿಸುತ್ತದೆ. ಕಾರ್ಮಿಕ ಸಂಘದ ಚುನಾವಣೆಯಿಂದ ಇಲ್ಲಿನ ಕಥೆ ಆರಂಭವಾಗುತ್ತದೆ. ಅದು ಎರಡು ಕಾರ್ಮಿಕ ಸಂಘಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿ ಮಾರಣ್ಣ ಎಂಬ ಕಾರ್ಮಿಕನ ಕೊಲೆಯಾಗುತ್ತದೆ. ಚುನಾವಣೆಯಲ್ಲಿ ಜಯರಾಜ ಎಂಬುವನು ಕಾರ್ಮಿಕ ಸಂಘದ ಅಧ್ಯಕ್ಷನಾಗಿ ಆಯ್ಕೆಯಾಗುತ್ತಾನೆ. ಇವನೇ ಈ ಕಾದಂಬರಿಯ ನಾಯಕ. ನಂತರದಲ್ಲಿ ಕೊಲೆಯಾದ ಮಾರಣ್ಣನ ಹೆಂಡತಿ ಹೇಮಾಳಿಗೆ ಫ್ಯಾಕ್ಟರಿಯಲ್ಲಿ ಸಹಾಯಕ ಪಿಆರ್‌ಓ ಕೆಲಸ ಸಿಗುವಂತೆ ಮಾಡುತ್ತಾನೆ. ನಂತರ ಇವರಿಬ್ಬರಲ್ಲಿ ಅನುರಾಗ ಮೂಡಿ ಇಬ್ಬರೂ ಒಟ್ಟಿಗೆ ಕೊನೆಯವರೆಗೂ ಬಾಳುತ್ತಾರೆ.

ಈ ನಡುವೆ ಹೇಮಾಳನ್ನು ಬಯಸುವ ಹಲವರು ಇದೇ ಕೈಗಾರಿಕೆಯಲ್ಲಿರುತ್ತಾರೆ. ಅಲ್ಲದೆ ಕೇಂದ್ರ ಮಂತ್ರಿಯವರೆಗೂ ಇದು ಹಬ್ಬಿರುತ್ತದೆ. ಕೇಂದ್ರದವನೊಬ್ಬ ಹೇಮಾಳನ್ನು ಬಯಸಿ ಆಕೆಯನ್ನು ಪಡೆಯಲು ಪ್ರಯತ್ನಿ ವಿಫಲನಾತ್ತಾನೆ. ಅವರೆಲ್ಲರಿಂದ ನಾಜೂಕಾಗಿ ಹೇಮಾ ಪಾರಾಗುತ್ತಾಳೆ. ಇದೆಲ್ಲವನ್ನು ದಾಟಿ ಆಕೆ ಅಖಿಲ ಭಾರತ ಮಟ್ಟದ ಕಾರ್ಮಿಕ ಸಂಘದ ನಾಯಕಿಯಾಗಿಯೂ ಬೆಳೆಯುತ್ತಾಳೆ. ಸಾಧಾರಣ ನೆಲೆಯಿಂದ ಅಸಾಧಾರಣ ನೆಲೆಗೆ ಏರುವ ಪಾತ್ರವೆಂದರೆ ಈಕೆಯದೇ. ಬೇಡಿಕೆ ಹಕ್ಕುಗಳನ್ನು ಪಡೆದುಕೊಳ್ಳುವ ದೀರ್ಘ ಪ್ರತಿಭಟನೆಯಲ್ಲಿ ಕಾರ್ಮಿಕರ ನಂಬಿ ಕೈಸುಟ್ಟುಕೊಂಡ ಜಯರಾಜ ಹತಾಶನಾಗಿ ಹಾಸಿಗೆ ಹಿಡಿಯುತ್ತಾನೆ. ಅದೇ ಅವನ ಅವಸಾನದ ದಾರಿಯೂ ಆಗುತ್ತದೆ. ಹೀಗೆ ಕಾದಂಬರಿಯೂ ಬೆಂಗಳೂರಿನಿಂದ ದೆಹಲಿಯ ಸಂಸತ್ತಿನವರೆಗೂ ಹಬ್ಬಿ ಅದರ ಸುಳಿಯಲ್ಲಿ ಹೇಮಾಳು ಸಿಕ್ಕಿಕೊಳ್ಳುವುದನ್ನು ಕಟ್ಟಿಕೊಟ್ಟಿದೆ. ಮೇಲೆ ಹೇಳಿದಂತೆ ಸಾಧಾರಣ ಪಾತ್ರವಾದ ಹೇಮಾ ರಾಷ್ಟ್ರಮಟ್ಟದ ಕಾರ್ಮಿಕ ನಾಯಕಿಯಾಗಿ ಬೆಳೆಯುವುದನ್ನು ಕಾದಂಬರಿ ತೋರಿಸಿಕೊಡುತ್ತದೆ.

‘ಮಹಾಸುಳಿ’ಯ ಒಟ್ಟು ಕಥಾಹಂದರದಲ್ಲಿ ಕೈಗಾರಿಕೆ ಒಳಗಿನ ಶೋಷಣೆಯ, ರಾಜಕಾರಣದ ಒಳಸುಳಿಗಳನ್ನು ಮಹಾಸುಳಿಯಾಗಿ ಚಿತ್ರಿಸಿದ್ದಾರೆ. ಅದರಲ್ಲಿಯೂ ಒಂದು ಸಾರ್ವಜನಿಕ ಉದ್ದಿಮೆ ಮತ್ತು ಅದು ಕೇಂದ್ರ ಸರ್ಕಾರದ ಹಿಡಿತದಲ್ಲಿದ್ದು, ಹೇಗೆ ನಿಯಂತ್ರಣಗೊಳ್ಳುತ್ತದೆ ಎಂಬುದನ್ನು ತೋರಿಸಿಕೊಡುತ್ತಲೇ ಪ್ರಮುಖವಾದ ವೃತ್ತಿನೆಲೆಯಾದ ಕೈಗಾರಿಕೆಗಳ ಒಳಗಿನ ಬದುಕಿನ ತಿಕ್ಕಾಟದ ಬಗೆಯನ್ನು ಪರಿಚಯಿಸಲು ಕಾದಂಬರಿಕಾರರು ಯತ್ನಿಸಿದ್ದಾರೆ. ಕಾರ್ಮಿಕರ ದುಡಿಮೆಯ ಬದ್ಧತೆ, ಸಣ್ಣತನ, ವಂಚನೆಗಳು, ಕಾರ್ಮಿಕ ಸಂಘಗಳ ಕಚ್ಚಾಟ–ಹೊಡೆದಾಟ, ಭ್ರಷ್ಟ ಆಡಳಿತ ಮಂಡಳಿ, ಸಾರ್ವಜನಿಕ ಉದ್ದಿಮೆಗಳನ್ನು ನಯವಾಗಿ ಮುಳುಗಿಸುವ ಬಗೆ ಇತ್ಯಾದಿಗಳನ್ನು ಕಟ್ಟಿಕೊಟ್ಟಿದ್ದಾರೆ. ಸ್ವತಃ ಕಾರ್ಮಿಕರಾಗಿದ್ದು ಕಾರ್ಮಿಕರ ಸಣ್ಣತನವನ್ನು ವಿಮರ್ಶಾತ್ಮಕವಾಗಿಯೇ ಚಿತ್ರಿಸಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯದಲ್ಲಿ ಇದುವರೆಗೂ ಅಷ್ಟಾಗಿ ನಿರೂಪಿತಗೊಳ್ಳದ ಕಾರ್ಮಿಕ ಲೋಕದ ಜೀವನ ಕ್ರಮವೊಂದು ಪಾತಣ್ಣನವರಿಂದ ರೂಪುಗೊಂಡಿರುವುದು ವಿಶಿಷ್ಟ ಸಂಗತಿ.

ಹೀಗೆ ಅನುಭವವನ್ನು ಕಟ್ಟಿಕೊಡುವಾಗ ಯಾವುದೇ ಆಡಂಬರವಿಲ್ಲದೆ, ಕೃತಕ ಗಾಂಭೀರ್ಯವಿಲ್ಲದೆ ವಸ್ತುವನ್ನು ಸರಳ, ನೇರ ಮತ್ತು ಸ್ಪಷ್ಟವಾಗಿ ಚಿತ್ರಿಸಿರುವುದು ಆಕರ್ಷಕವಾಗಿದೆ. ಓದುಗರನ್ನು ನಿರಾಸೆಗೊಳಿಸದೆ ಕೃತಿ ಸರಾಗವಾಗಿ ಓದಿಸಿಕೊಳ್ಳುತ್ತದೆ. ಕೃತಿಯ ನಿರೂಪಣೆಯಲ್ಲಿ ಬಳಕೆಯಾಗಿರುವ ಭಾಷೆ ಮತ್ತು ವಸ್ತು ಪೂರಕವಾಗಿ ಹೆಣಿಗೆಗೊಂಡಿದ್ದು ತಮ್ಮ ಉದ್ದೇಶವನ್ನು ಸಂವಹನಗೊಳಿಸಲು ಯಾವುದೇ ತೊಡಕನ್ನು ಸೃಷ್ಟಿಸಿಕೊಂಡಿಲ್ಲ. ‘ಮಹಾಸುಳಿ’ ತೀರಾ ಕಲಾತ್ಮಕವಾದ ಮತ್ತು ಮನುಷ್ಯ ಸಂಬಂಧವನ್ನು ಆಳವಾಗಿ ಶೋಧಿಸುವ ಪ್ರಯತ್ನ ಮಾಡಿರುವ ಕೃತಿ ಎಂದು ಅನ್ನಿಸದಿದ್ದರೂ ವಸ್ತುವನ್ನು ಘಟನೆಗಳನ್ನು ನೇರವಾಗಿ ಉದ್ವಿಗ್ನತೆ ಗೊಂದಲಗಳಿಲ್ಲದೆ ಕಟ್ಟಿಕೊಡುತ್ತದೆ. ಎಲ್ಲಿಯೂ ಕತೆಯ–ವಸ್ತುವಿನ ಓಘಕ್ಕೆ ತೊಂದರೆಯಾಗಿಲ್ಲ.

ಸ್ವತಃ ಕಾರ್ಮಿಕರಾಗಿ ಕೈಗಾರಿಕೆಯ ಒಳಹೊರಗನ್ನು ನೇರವಾಗಿ ಕಂಡಿರುವುದು ಮತ್ತು ಆ ಅನುಭವವನ್ನು ಯಾವುದೇ ಪೋಸುಗಳಿಲ್ಲದೆ ಪ್ರಾಮಾಣಿಕವಾಗಿ ಕಟ್ಟಿಕೊಟ್ಟಿರುವುದು ಪಾತಣ್ಣನವರ ಹೆಚ್ಚುಗಾರಿಕೆ. ಬಹುಶಃ ಕಾರ್ಮಿಕರಲ್ಲದವರಿಗೆ ಈ ಬಗೆಯ ಅನುಭವನ್ನು ಕಟ್ಟಿಕೊಡಲು ಸಾಧ್ಯ ಇಲ್ಲವೇನೋ ಎನ್ನಿಸುತ್ತದೆ. ಇಲ್ಲವೇ ಇಂತಹದನ್ನು ಕಟ್ಟಿಕೊಡಬೇಕು ಎಂಬ ಪ್ರೇರಣೆ ಇತರರಿಗೆ ಮೂಡದೇನೋ ಎನ್ನಿಸುತ್ತದೆ. ಹಾಗಾಗಿ ಸ್ವತಃ ಕಾರ್ಮಿಕರಾಗಿದ್ದು ತಮ್ಮ ದುಡಿಮೆಯ ಲೋಕದ ಅನುಭವವನ್ನು ತಾವೇ ಅನಾವರಣಗೊಳಿಸಿದ ಪಾತಣ್ಣನವರು ಕನ್ನಡ ಓದುಗರ ಸಂವೇದನೆಯನ್ನು ವಿಸ್ತರಿಸುವ ಕೆಲಸ ಮಾಡಿದ್ದಾರೆ. ಕನ್ನಡ ಓದುಗರಿಂದ ನಿಜವಾಗಿಯೂ ಪಾತಣ್ಣನವರು ಅಭಿನಂದನಾರ್ಹರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry