ಕೈಗಾರಿಕಾ ವಿರೋಧಿ ಜಿಲ್ಲೆ ಅಪಖ್ಯಾತಿ ಕಿತ್ತೆಸೆಯಲು ಸಲಹೆ

7

ಕೈಗಾರಿಕಾ ವಿರೋಧಿ ಜಿಲ್ಲೆ ಅಪಖ್ಯಾತಿ ಕಿತ್ತೆಸೆಯಲು ಸಲಹೆ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಗೆ ಅಂಟಿಕೊಂಡಿರುವ `ಕೈಗಾರಿಕಾ ವಿರೋಧಿ ಜಿಲ್ಲೆ~ ಎನ್ನುವ ಅಪಖ್ಯಾತಿಯನ್ನು ಈ ತಿಂಗಳಾಂತ್ಯಕ್ಕೆ ನಡೆಯಲಿರುವ ಹೂಡಿಕೆದಾರರ ಸಮಾವೇಶವನ್ನು ಯಶಸ್ವಿಗೊಳಿಸುವ ಮೂಲಕ ಕಿತ್ತೆಸೆಯೋಣ ಎಂದು ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಕರೆ ನೀಡಿದರು.ನಗರದ ಕೋಟೆ ವಿಧಾನಸಭಾಂಗಣದಲ್ಲಿ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮಂಗಳವಾರ ಆಯೋಜಿಸಿದ್ದ ಹೂಡಿಕೆದಾರರ ಸಮಾವೇಶದ ಸಿದ್ಧತೆ ಕುರಿತಾದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಅಕ್ಟೋಬರ್ 31ರಂದು ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಲಾಗಿರುವ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಯಶಸ್ವಿಗೊಳಿಸೋಣ. ಹೂಡಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸೋಣ ಎಂದರು.ಕೊಡಗಿನಲ್ಲಿ ಎಲ್ಲದಕ್ಕೂ ವಿರೋಧವಿದೆ ಎನ್ನುವ ಅಭಿಪ್ರಾಯ ಉದ್ಯಮಿಗಳಲ್ಲಿ ಮನೆಮಾಡಿದೆ. ನಾವು ಉದ್ಯಮಕ್ಕೆ ಹಾಗೂ ಅಭಿವೃದ್ಧಿಗೆ ವಿರೋಧಿಗಳಲ್ಲ ಎನ್ನುವ ಸಂದೇಶವನ್ನು ಕಳುಹಿಸೋಣ. ಬದ್ಧತೆಯಿಂದ ಕೆಲಸ ಆರಂಭಿಸಿದರೆ ವಿರೋಧಿಸುವವರು ಕೂಡ ಸುಮ್ಮನಾಗುತ್ತಾರೆ ಎಂದು ಹೇಳಿದರು.ಕೊಡಗು ಕೃಷಿ ಆಧಾರಿತ ಜಿಲ್ಲೆಯಾಗಿರುವ ಕಾರಣ, ಹೂಡಿಕೆಯೂ ಸಹ ಕೃಷಿ, ತೋಟಗಾರಿಕಾ ಬೆಳೆ ಹಾಗೂ ಪರಿಸರ ಸ್ನೇಹಿ ಉದ್ಯಮಗಳಲ್ಲಾಗಲಿ.ಈ ಮೂಲಕ ಇಲ್ಲಿನ ಜನರಿಗೆ ಜೀವನೋಪಾಯಕ್ಕೆ ಹಲವು ಮಾರ್ಗಗಳು ರೂಪುಗೊಳ್ಳಲಿ ಎಂದು ಹಾರೈಸಿದರು.

ಪ್ರಸ್ತುತ ಜಿಲ್ಲೆಯಲ್ಲಿ ಜನರು ಕಾಫಿ ಹಾಗೂ ಹೋಂಸ್ಟೇಗಳತ್ತ ಆಕರ್ಷಿತರಾಗಿ, ಉಳಿದ ಕಡೆ ನಿರ್ಲಕ್ಷ ವಹಿಸುತ್ತಿದ್ದಾರೆ.ಏಲಕ್ಕಿ, ಜೇನು ಕೃಷಿ, ಕಿತ್ತಳೆ, ತೋಟಗಾರಿಕಾ ಬೆಳೆಗಳಲ್ಲಿಯೂ ಲಾಭವಿದೆ. ಇದಲ್ಲದೇ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹಲವು ರೀತಿಯ ಸಬ್ಸಿಡಿಗಳನ್ನು ನೀಡುತ್ತಿವೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಕೃಷಿ, ತೋಟಗಾರಿಕಾ ಕ್ಷೇತ್ರ ಸೇರಿದಂತೆ ಪರಿಸರ ಸ್ನೇಹಿ ಉದ್ಯಮಗಳಲ್ಲಿ ಹೂಡಿಕೆಗೆ ಉತ್ತಮ ಅವಕಾಶಗಳಿವೆ. ಇದಕ್ಕೆ ಪ್ರೋತ್ಸಾಹಿಸೋಣ ಎಂದು ತಿಳಿಸಿದರು.ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಚಿದ್ವಿಲಾಸ್ ಮಾತನಾಡಿ, ಹೂಡಿಕೆದಾರರ ಸಮಾವೇಶವನ್ನು ಸ್ವಾಗತಿಸುವುದು, ಬಂಡವಾಳ ಹೂಡಲು ಪ್ರೋತ್ಸಾಹಿಸುವುದು, ಕೃಷಿ, ಕಾಫಿ, ಐಟಿ/ಬಿಟಿ, ಜೇಣು ಕೃಷಿ, ಗಾಳಿ ವಿದ್ಯುತ್ ಯೋಜನೆ ಸೇರಿದಂತೆ ಪರಿಸರ ಸ್ನೇಹಿ ಉದ್ಯಮಗಳನ್ನು ಸ್ವಾಗತಿಸುವುದು ಹಾಗೂ ಸಮ್ಮೇಳನ ಆರಂಭವಾಗುವುದಕ್ಕೆ ಮೊದಲು ಜಿಲ್ಲೆಯ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವ ಬಗ್ಗೆ ಸಭೆ ಕೈಗೊಂಡ ನಿರ್ಣಯಗಳನ್ನು ವಾಚಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಪ್ರದೀಪ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಡಿ. ಮಂಜುನಾಥ್, ಮಾಜಿ ಸಚಿವೆ ಸುಮಾ ವಸಂತ್, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸುನೀಲ್ ಸುಬ್ರಮಣಿ, ಮಾಜಿ ಶಾಸಕ ಎಸ್.ಜಿ. ಮೇದಪ್ಪ, ಕೈಗಾರಿಕಾ ವಾರ್ತೆ ಪತ್ರಿಕೆಯ ಸಂಪಾದಕ ಹರೀಶ್ ಡಿಸೋಜಾ, ಕಾಫಿ ಬೆಳೆಗಾರರ ಸಂಘದ ಎಂ.ಬಿ. ದೇವಯ್ಯ, ಪತ್ರಕರ್ತ ಜಿ. ರಾಜೇಂದ್ರ, ರಾಜಶೇಖರ್ ಯಲವತ್ತಿ, ಕೇಶವ ಪ್ರಸಾದ್ ಮುಳಿಯ, ಇತರರು ಅಭಿಪ್ರಾಯ ವ್ಯಕ್ತಪಡಿಸಿದರು.ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ನ ಬಿ.ಎನ್. ಪ್ರಕಾಶ್, ಕೆ.ಬಿ. ಗಿರೀಶ್ ಗಣಪತಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಜಿಲ್ ಕೃಷ್ಣ, ನಗರಸಭೆ ಅಧ್ಯಕ್ಷ ಎಚ್.ಎಂ. ನಂದಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry