ಕೈಗಾರಿಕೆಗಳಿಗೆ ವಿದ್ಯುತ್ ಕೊರತೆ ಇಲ್ಲ: ಶಿವಕುಮಾರ್

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಸ್ಥಾಪನೆ ಆಗುವ ಕೈಗಾರಿಕೆಗಳಿಗೆ ವಿದ್ಯುತ್ ಪೂರೈಸಲು ತೊಂದರೆ ಇಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.
ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಸಾಧನೆ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಾಗಿದೆ. ಹೊಸದಾಗಿ ಸ್ಥಾಪನೆ ಆಗುವ ಕೈಗಾರಿಕೆಗಳಿಗೆ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಸಲಾಗುವುದು ಎಂದು ಅವರು ಹೇಳಿದರು.
ಕಡಿಮೆ ದರದಲ್ಲಿ ವಿದ್ಯುತ್ ಪೂರೈಸಲು ಖಾಸಗಿ ಕಂಪನಿಗಳು ಮುಂದೆ ಬರುತ್ತಿವೆ. ಸೋಲಾರ್ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗಿದ್ದು, ಹೊಸದಾಗಿ 5 ಸಾವಿರ ಮೆಗಾವಾಟ್ ಸೋಲಾರ್ ಆಧಾರಿತ ವಿದ್ಯುತ್ ಉದ್ಪಾದನೆ ಮಾಡಲಾಗುತ್ತಿದೆ. ಪಾವಗಡದಲ್ಲಿ ಅತೀ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಆಗುತ್ತಿದೆ ಎಂದು ವಿವರಿಸಿದರು.
ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿ ಜಾರಿಗೆ ತಂದಿದೆ. ಆ ಮೂಲಕ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. 15 ಕಡೆ ಹೊಸದಾಗಿ ಕೈಗಾರಿಕಾ ವಲಯ ಸ್ಥಾಪನೆಗೆ ಕೈಗಾರಿಕಾ ಅಭಿವೃದ್ಧಿ ನಿಗಮ ಮುಂದಾಗಿದೆ. ಮುಂದಿನ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯುವ ‘ಪ್ರವಾಸಿ ಭಾರತೀಯ ದಿವಸ’ ಆಚರಣೆಗೂ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಸಚಿವರು ಹೇಳಿದರು.
ಮುಖ್ಯಾಂಶಗಳು
* ಬೇಡಿಕೆಗೆ ಅನುಗುಣವಾಗಿ ಕೈಗಾರಿಕೆಗಳಿಗೆ ವಿದ್ಯುತ್
* ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯ ಸ್ವಾವಲಂಬನೆ
* ಆಸಕ್ತಿ ತೋರಿಸುತ್ತಿರುವ ಖಾಸಗಿ ಕಂಪನಿಗಳು
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.