ಶನಿವಾರ, ಫೆಬ್ರವರಿ 27, 2021
21 °C
ದಾವಣಗೆರೆ ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿ ಸಭೆಯಲ್ಲಿ ಅಧಿಕಾರಿಗಳ ನಿರ್ಧಾರ

ಕೈಗಾರಿಕೆಗಳಿಗೆ ಸಮರ್ಪಕ ವಿದ್ಯುತ್: ಸಮಿತಿ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈಗಾರಿಕೆಗಳಿಗೆ ಸಮರ್ಪಕ ವಿದ್ಯುತ್: ಸಮಿತಿ ರಚನೆ

ದಾವಣಗೆರೆ: ನಗರದ ಕೈಗಾರಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಅಧಿಕಾರಿಗಳು ಯಾವುದೇ ಮಾಹಿತಿ ನೀಡಿದೆ ಏಕಾಏಕಿ ವಿದ್ಯುತ್ ಕಡಿತ ಗೊಳಿಸಿ, ಉದ್ಯಮಕ್ಕೆ ನಷ್ಟವುಂಟು ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ಅಧಿ ಕಾರಿಗಳ ಎದುರು ಕೈಗಾರಿ ಕೋದ್ಯಮಿಗಳು ಅಲವತ್ತುಕೊಂಡರು.ಜಿಲ್ಲಾ ಕೈಗಾರಿಕೆ ಕೇಂದ್ರದಲ್ಲಿ ಶುಕ್ರವಾರ ಇಲಾಖೆ ಜಂಟಿ ನಿರ್ದೇಶಕ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿ ಸಭೆಯಲ್ಲಿ ಉದ್ಯಮಿಗಳು ವಿದ್ಯುತ್ ಅಭಾವ ಕುರಿತು ಅಧಿಕಾರಿಗಳ ಗಮನ ಸೆಳೆದರು.

‘ಪ್ರತಿ ಸಭೆಯಲ್ಲೂ ಈ ವಿಷಯ ಪ್ರಸ್ತಾವ ಮಾಡುತ್ತಲೇ ಇದ್ದೇವೆ. ಆದರೆ, ಸಮಸ್ಯೆ ಮಾತ್ರ ಬಗೆಹರಿದಿಲ್ಲ’ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಭೆಯಲ್ಲಿ ಹಾಜರಿದ್ದ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಜ್ಞಾನಪ್ಪ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ವಿದ್ಯುತ್ ಅಭಾವ ಇರುವುದು ನಿಜ; ನಗರದ ಕೈಗಾರಿಕೆಗಳಿಗೆ ಯಾವುದೇ ಸಮಸ್ಯೆ ಆಗದಂತೆ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಇದಕ್ಕೆ ತೃಪ್ತರಾಗದ ಕೈಗಾರಿ ಕೋದ್ಯಮ ಸಂಘದ ಪ್ರತಿನಿಧಿಗಳು, ವಿದ್ಯುತ್ ಕಡಿತದ ಬಗ್ಗೆ ಅಧಿಕಾರಿಗಳು ಮೊದಲೇ ಮಾಹಿತಿ ನೀಡಬೇಕು; ಇದರಿಂದ ಪರ್ಯಾಯ ಕ್ರಮ ಹಾಗೂ ಮುನ್ನೆಚ್ಚರಿಕೆ ವಹಿಸಲು ಸಾಧ್ಯ ವಾಗುತ್ತದೆ. ಇಲ್ಲದಿದ್ದರೆ ಕೈಗಾರಿಕೆಗಳು ನಷ್ಟದತ್ತ ಸಾಗಲು ಬೆಸ್ಕಾಂ ಕಾರಣವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕೈಗಾರಿಕೋದ್ಯಮ ಸಂಘದ ಪ್ರತಿನಿಧಿಗಳ ಸಮಿತಿ ರಚನೆ ಮಾಡಿ ಸಮಿತಿಗೆ ಮೊದಲೇ ವಿದ್ಯುತ್ ಕಡಿತದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುವ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.ಆನಗೋಡು ಸಮೀಪ 25ಎಕರೆ ಪ್ರದೇಶದಲ್ಲಿ ಮತ್ತೊಂದು ಟೆಕ್ಸ್ ಟೈಲ್ ಪಾರ್ಕ್ ನಿರ್ಮಾಣಕ್ಕೆ ಜಮೀನು ಒದಗಿಸ ಬೇಕೆಂದು ಹರಿಹರ ಟೆಕ್ ಪಾರ್ಕ್ ಸಂಘದ ರಘು ಎಂ.ಎನ್ ಒತ್ತಾಯಿಸಿದರು. 23 ಮಂದಿ ಹೂಡಿಕೆ ದಾರರು  ₹120 ಕೋಟಿ ಹೂಡಿಕೆಗೆ ಮುಂದೆ ಬಂದಿದ್ದಾರೆ. ಈಗಾಗಲೇ ಜಿಲ್ಲಾ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.ಉದ್ಯಮ ಉತ್ತೇಜನಕ್ಕಾಗಿ ಸೂಕ್ತ ಸ್ಥಳದಲ್ಲೇ ಜಾಗ ನೀಡುವುದಾಗಿ ಜಂಟಿ ನಿರ್ದೇಶಕ ಜಯಪ್ರಕಾಶ್ ನಾರಾಯಣ್ ಭರವಸೆ ನೀಡಿದರು. ಜಿಲ್ಲೆಯ ಜಗಳೂರು, ಹರಪನಹಳ್ಳಿ ಕಡೆಗೂ ಸಾಕಷ್ಟು ಜಮೀನು ಲಭ್ಯವಿದ್ದು, ಪರಿಶೀಲನೆ ನಡೆಸಬಹುದು ಎಂದು ಉದ್ಯಮಿಗಳಿಗೆ ಸಲಹೆ ನೀಡಿದರು.   ಕರೂರು ಕೈಗಾರಿಕೆ ಪ್ರದೇಶದಲ್ಲಿ 72 ಟೆಕ್ಸ್ ಟೈಲ್ ಉದ್ಯಮಗಳಿಗೆ ಪ್ರತ್ಯೇಕ ಸೈಜಿಂಗ್ ಘಟಕ ನಿರ್ಮಾಣಕ್ಕೆ ಒಂದೂವರೆ ಎಕರೆ ಜಮೀನು ಒದಗಿಸುವಂತೆ ಉದ್ಯಮಿ ಮಂಜುನಾಥ್ ನಾಯ್ಕ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.109 ಕಾಯ್ದೆ ಅಡಿ ಭೂ ಸ್ವಾಧೀನ ಹಾಗೂ ಭೂಮಿ ಖರೀದಿಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ, ಸರ್ಕಾರದ ವಿವಿಧ ಹಂತಗಳಲ್ಲಿ ನಿರಾಕ್ಷೇಪಣಾ ಪತ್ರ (ಎನ್ ಒಸಿ) ನೀಡಲು ಅಧಿಕಾರಿಗಳು ವರ್ಷಾನುಗಟ್ಟಲೇ ಸತಾಯಿಸುತ್ತಾರೆ ಎಂದು ಉದ್ಯಮಿಗಳು ಬೇಸರ ವ್ಯಕ್ತಪಡಿಸಿದರು. ಪ್ರಕ್ರಿಯೆ ಸರಳಗೊಳಿಸಿ, ಜಿಲ್ಲಾ ಕೈಗಾರಿಕೆ ಕೇಂದ್ರದಲ್ಲೇ ಅಧಿಕಾರಿಗಳ ಸಮ್ಮುಖದಲ್ಲಿ ನಿರಾಕ್ಷೇಪಣಾ ಪತ್ರ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ಅನುಮೋದನೆ:  ಜಿಲ್ಲೆಯ ಕೈಗಾರಿಕೆಗಳ ಬೆಳವಣಿಗಾಗಿ ಮಲೇಬೆನ್ನೂರು ಸಮೀಪ ರೈಸ್ ಮಿಲ್ ಘಟಕ ಸ್ಥಾಪನೆಗಾಗಿ 6.7 ಎಕರೆ ಜಮೀನು ಒದಗಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಅಲ್ಲದೆ, ಶಿರಮಗೊಂಡನಹಳ್ಳಿ ಗ್ರಾಮದ ಸರ್ವೆ ನಂ. 88/2ಎಪಿರಲ್ಲಿ 0.28 ಗುಂಟೆ ಹಾಗೂ 88/1ಬಿರಲ್ಲಿ 0.14 ಗುಂಟೆ ಜಾಗ ಭೂ ಪರಿವರ್ತನೆಯಾಗದೆ ಉಳಿದಿದ್ದು,109 ಕಾಯ್ದೆ ಅಡಿ ಭೂಮಿ ಖರೀದಿಸಲು ಸಭೆ ಅನುಮತಿ ನೀಡಿತು.  ಸಭೆಯಲ್ಲಿ ಜಿಲ್ಲಾ ಕೈಗಾರಿಕೆ ಕೇಂದ್ರ ಉಪ ನಿರ್ದೇಶಕಿ ವಿಜಯಲಕ್ಷ್ಮಿ, ಕೈಗಾ ರಿಕಾ ವಿಸ್ತರಣಾಧಿಕಾರಿ ಮಲ್ಲಿನಾಥ್, ಪರಿಸರ ಇಲಾಖೆ ಅಧಿಕಾರಿ ಮಹೇಶ್ವ ರಪ್ಪ, ಜವಳಿ ಇಲಾಖೆ ಅಧಿಕಾರಿ ಸಫಾರಿ ಶ್ರೀನಿವಾಸ್, ಸಣ್ಣ ಕೈಗಾರಿಕೆ ಇಲಾಖೆ ಸಹಾಯಕ ವ್ಯವಸ್ಥಾಪಕ ನಿರಂಜನ್, ಜಿಲ್ಲಾ ಚೇಂಬರ್ ಆಫ್ ಕಾರ್ಮಸ್ ನ ಶಂಭುಲಿಂಗಪ್ಪ  ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.