ಶುಕ್ರವಾರ, ಜೂನ್ 18, 2021
23 °C

ಕೈಗಾರಿಕೆಗಳ ಸಬ್ಸಿಡಿ: ರೂ.200 ಕೋಟಿ ನಿಗದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಕಳೆದ ಐದು ವರ್ಷಗಳಿಂದ ಬಾಕಿ ಉಳಿದುಕೊಂಡಿರುವ 4,200 ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳ ಸಬ್ಸಿಡಿ ಬಿಡುಗಡೆಗೆ ಈ ಸಲದ ಬಜೆಟ್‌ನಲ್ಲಿ ರೂ.200 ಕೋಟಿ ಮೊತ್ತ  ಕಾದಿರಿಸಲಾಗುತ್ತಿದೆ~ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಪ್ರಕಟಿಸಿದರು.ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಬಂಡವಾಳ ಹೂಡಿಕೆದಾರರ ಸಮಾವೇಶದ ಪೂರ್ವಭಾವಿ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.`ಬೆಳಗಾವಿ ವಿಭಾಗದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸ್ಥಾಪಿಸಲು ಸುಮಾರು 700 ಕಂಪೆನಿಗಳು ಮುಂದೆ ಬಂದಿದ್ದು, ಈಗಾಗಲೇ ರೂ.4,800 ಕೋಟಿ ಬಂಡವಾಳ ಹರಿದು ಬರುವುದು ಖಚಿತವಾಗಿದೆ~ ಎಂದರು.

`ರಾಜ್ಯದ ಎಲ್ಲ ಕೈಗಾರಿಕಾ ಪ್ರದೇಶಗಳಿಗೆ ಅಗತ್ಯವಾದ ಮೂಲ ಸೌಕರ್ಯ ಒದಗಿಸಲು ನಾಲ್ಕು ವರ್ಷಗಳ ಅವಧಿಯಲ್ಲಿ ರೂ.1,000 ಕೋಟಿ ಖರ್ಚು ಮಾಡಲು ಉದ್ದೇಶಿಸಲಾಗಿದೆ~ ಎಂದರು.`ಪೋಸ್ಕೊ ಸೇರಿದಂತೆ ರೈತರು ವಿರೋಧಿಸುವ ಯಾವ ಕೈಗಾರಿಕೆಗಳನ್ನೂ ಬಲವಂತಾಗಿ ತರುವುದಿಲ್ಲ. ಪೋಸ್ಕೊ ಸಂಸ್ಥೆಯ ಅಧಿಕಾರಿಗಳು ಹಾಗೂ ರೈತರ ಸಭೆ ಕರೆದು ಚರ್ಚೆ ನಡೆಸಲು ಸರ್ಕಾರ ತೀರ್ಮಾನಿಸಿದೆ~ ಎಂದರು.`ಎರಡು ವರ್ಷಗಳ ಹಿಂದೆ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದಾಗ ನಮ್ಮ ಬಳಿ ಭೂಮಿ ಲಭ್ಯವಿರಲಿಲ್ಲ. ಟಾಟಾ ನ್ಯಾನೊ ಘಟಕ ಧಾರವಾಡದ ಕೈತಪ್ಪಿದ್ದಕ್ಕೂ ಇದೇ ಕಾರಣ. ಈ ಸಲ ಎಲ್ಲ ಸಿದ್ಧತೆ ಮಾಡಿಕೊಂಡೇ ಸಮಾವೇಶ ನಡೆಸಲಾಗುತ್ತಿದ್ದು, ಕಂಪೆನಿಗಳ ಅಗತ್ಯವನ್ನು ಅತ್ಯಂತ ತ್ವರಿತವಾಗಿ ಪೂರೈಸಲಾಗುತ್ತದೆ~ ಎಂದು ಹೇಳಿದರು.`ಜೂನ್ 7 ಮತ್ತು 8ರಂದು ಬೆಂಗಳೂರಿನಲ್ಲಿ ನಡೆಯುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಎಲ್ಲೆಡೆಯಿಂದ ಅಭೂತಪೂರ್ವವಾದ ಬೆಂಬಲ ವ್ಯಕ್ತವಾಗುತ್ತಿದೆ ಎಂದೂ ನಿರಾಣಿ ನುಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.