ಕೈಗಾರಿಕೆಗೆ ಕೃಷಿ ಭೂಮಿ ಕೊಡಲ್ಲ:ಸಭೆಯಲ್ಲಿ ಅಧಿಕಾರಿಗಳೊಂದಿಗೆ ರೈತರ ವಾಗ್ವಾದ

7

ಕೈಗಾರಿಕೆಗೆ ಕೃಷಿ ಭೂಮಿ ಕೊಡಲ್ಲ:ಸಭೆಯಲ್ಲಿ ಅಧಿಕಾರಿಗಳೊಂದಿಗೆ ರೈತರ ವಾಗ್ವಾದ

Published:
Updated:

ಹಗರಿಬೊಮ್ಮನಹಳ್ಳಿ: ಕೈಗಾರಿಕೆ ಸ್ಥಾಪನೆಗಾಗಿ 184 ಎಕರೆ ಜಮೀನು ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಗುರುವಾರ ಧಾರವಾಡ ಕೆಐಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಎಸ್.ಎಸ್. ಸಂಪಗಾವ ಅವರನ್ನು ತಾಲ್ಲೂಕಿನ ಪಂಪಾಪಟ್ಟಣ, ವ್ಯಾಸಾಪುರ ಮತ್ತು ವರದಾಪುರ ಗ್ರಾಮಗಳ ರೈತರು ತೀವ್ರ ತರಾಟೆಗೆ ತೆಗೆದುಕೊಂಡರು.ಮೆ.ಆರ್‌ಬಿಎಸ್‌ಎಸ್‌ಎನ್ ಕಾರ್ಖಾನೆಗಾಗಿ ತಾಲ್ಲೂಕಿನ ಮೂರು ಗ್ರಾಮಗಳ 47 ರೈತರ 184 ಎಕರೆ ಕೃಷಿ ಜಮೀನಿನ ಭೂ ಸ್ವಾಧೀನ ಪಡೆಯುವ ಹಿನ್ನೆಲೆಯಲ್ಲಿ ಧಾರವಾಡದ ವಿಶೇಷ ಭೂಸ್ವಾಧೀನಾಧಿಕಾರಿಗಳು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ರೈತರಿಂದ ವಿವರಣೆ ಪಡೆಯಲು ಆಯೋಜಿಸಿದ್ದ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.ಡಣಾಯಕನಕೆರೆಯ ಮೂಲಕ ಹಂಪಾಪಟ್ಟಣ, ವ್ಯಾಸಾಪುರ ಮತ್ತು ವರದಾಪುರ ಗ್ರಾಮಗಳ ಕೆರೆಗಳಿಗೆ ನೀರುಣಿಸುವ ಕಾಮಗಾರಿಗೆ ನಡೆಯುತ್ತಿದೆ. ಈ ಕಾಮಗಾರಿ ಪೂರ್ಣಗೊಂಡರೆ ಫಲವತ್ತಾದ 184.82 ಎಕರೆ ಕೃಷಿ ಭೂಮಿಯನ್ನು ನೀರಾವರಿಗೆ ಒಳಪಡಲಿದೆ. ಈ ಸಂದರ್ಭದಲ್ಲಿ ರೈತರ ಕೃಷಿ ಭೂಮಿಗೆ ಕೈಹಾಕಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ತಾ.ಪಂ. ಮಾಜಿ ಅಧ್ಯಕ್ಷ ಪಿ.ಸೂರ್ಯಬಾಬು ಎಚ್ಚರಿಸಿದರು.ತುಂಗಭದ್ರಾ ಜಲಾಶಯ ನಿರ್ಮಾಣವಾದಾಗ ತಮ್ಮ ಫಲವತ್ತಾದ ಗದ್ದೆ ತೋಟಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇತ್ತೀಚೆಗೆ ತಮ್ಮ ಬದುಕು ಕಟ್ಟಿಕೊಂಡು ಚೇತರಿಸಿಕೊಳ್ಳುತ್ತಿರುವಾಗ ಕೈಗಾರಿಕೆಯ ನೆಪದಲ್ಲಿ ರೈತನ್ನು ಇನ್ನೊಮ್ಮೆ ಒಕ್ಕೆಲೆಬ್ಬಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎಂದು ಕಿಡಿ ಕಾರಿದರು.ಕಬ್ಬಿಣದ ಕಾರ್ಖಾನೆಗ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವುದರಿಂದ ಕೇವಲ ಈ ಪ್ರದೇಶಕ್ಕಷ್ಟೇ ಅಲ್ಲ. ಸುತ್ತಮುತ್ತಲಿನ ಪ್ರದೇಶಕ್ಕೂ ಹಾನಿಯಾಗುತ್ತದೆ. ಜನ ಸಾಮಾನ್ಯರ ಮತ್ತು ರೈತರ ನೆಮ್ಮದಿಯನ್ನು ಕಸಿದುಕೊಳ್ಳುವ ಕಾರ್ಖಾನೆಗಳ ಅಗತ್ಯವಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರೈತ ಮುಖಂಡ ಗೋಣಿಬಸಪ್ಪ ಮತ್ತು ಹಂಪಾಪಟ್ಟಣ ಗ್ರಾ.ಪಂ. ಅಧ್ಯಕ್ಷ ಬಿ.ನಾಗರಾಜ, ಕೈಗಾರಿಕೆಗಾಗಿ ರೈತರು ಒಂದಿಂಚು ಭೂಮಿಯನ್ನು ಕೊಡುವುದಿಲ್ಲ. ರೈತರ ಮನವೊಲಿಸಲು ಸಮಯ ವ್ಯರ್ಥ ಮಾಡಬೇಡಿ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಸಭೆಯಲ್ಲಿದ್ದ ರೈತರೆಲ್ಲಾ ಕಾರ್ಖಾನೆ ನಿರ್ಮಾಣಕ್ಕಾಗಿ ಕೃಷಿ ಭೂಮಿ ನೀಡಲು ತಮ್ಮ ಒಪ್ಪಿಗೆ ಇಲ್ಲ ಎಂದು ಕೆಐಎಡಿಬಿ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ನೀಡಿದರು. ಒಂದು ಗಂಟೆಯ ಕಾಲ ರೈತರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಕುಪಿತ ರೈತರನ್ನು ಕಂಡು ತಬ್ಬಿಬ್ಬಾದ ಅಧಿಕಾರಿಗಳು ರೈತರಿಂದ ಲಿಖಿತ ಪತ್ರ ಪಡೆದು ಸಭೆಯನ್ನು ಬರಕಾಸ್ತುಗೊಳಿಸಿದರು.ರೈತ ಮುಖಂಡರಾದ ಎಸ್. ನಾಗರಾಜ, ಎಸ್. ಬಸವರಾಜ, ಎಂ.ಅಬ್ದುಲ್‌ಸಾಬ್, ಎಂ. ಖಾಸೀಂಸಾಬ್, ವಸ್ತ್ರದ ಶಿವಶಂಕ್ರಪ್ಪ, ಕೆ. ಬಿದ್ದಪ್ಪ, ದುರುಗಮ್ಮ, ಟಿ. ತಿಂದಮ್ಮ, ಬಿ.ಎಸ್. ಹನಮಂತಪ್ಪ, ಕೊಟ್ರೇಶ್, ಎಚ್. ಬಸವರಾಜ ಹಾಗೂ ಕನಕಪ್ಪ ಮತ್ತಿತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry