ಸೋಮವಾರ, ಮಾರ್ಚ್ 8, 2021
30 °C

ಕೈಗಾರಿಕೆ ಉತ್ಪಾದನೆ ಕುಸಿತ ಎಚ್ಚರಿಕೆಯ ನಡೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈಗಾರಿಕೆ ಉತ್ಪಾದನೆ ಕುಸಿತ ಎಚ್ಚರಿಕೆಯ ನಡೆ ಅಗತ್ಯ

ನವೆಂಬರ್‌ ತಿಂಗಳ ಕೈಗಾರಿಕೆ ಉತ್ಪಾದನೆಯು ನಾಲ್ಕು ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಿರುವುದು (ಶೇ 3.2) ಕಳವಳಕಾರಿ. ಹಾಗೆಯೇ ಡಿಸೆಂಬರ್‌ ತಿಂಗಳ ಹಣದುಬ್ಬರ ಶೇ 5.6ಕ್ಕೆ ಏರಿಕೆಯಾಗಿರುವುದು ತ್ವರಿತಗತಿಯಲ್ಲಿ ಆರ್ಥಿಕ ಪ್ರಗತಿಯತ್ತ ಹೆಜ್ಜೆ ಹಾಕಲು ಹೆಣಗುತ್ತಿರುವ ದೇಶಿ ಅರ್ಥ ವ್ಯವಸ್ಥೆಯ ಪಾಲಿಗೆ ನಿರಾಶೆಯುಂಟು ಮಾಡುವ ಬೆಳವಣಿಗೆ.ಜಾಗತಿಕ ವಿದ್ಯಮಾನಗಳು ಪ್ರತಿಕೂಲವಾಗಿದ್ದರೂ, ಗರಿಷ್ಠ ಮಟ್ಟದ ವೃದ್ಧಿ ದರ ಕಾಯ್ದುಕೊಳ್ಳುವ ನಿರೀಕ್ಷೆ ಇರಿಸಿಕೊಂಡಿದ್ದ ದೇಶಿ ಆರ್ಥಿಕತೆ ಮೇಲೆ ಈ ಎರಡೂ ಬೆಳವಣಿಗೆಗಳು ನಿರಾಶೆಯ ಕಾರ್ಮೋಡ ಕವಿಯುವಂತೆ ಮಾಡಿವೆ. ಶೇ 5.61ರಷ್ಟು ಏರಿಕೆ ದಾಖಲಿಸಿರುವ ಹಣದುಬ್ಬರವು  ಕಳೆದ ಐದು ತಿಂಗಳಿನಿಂದ ಏರುಗತಿಯಲ್ಲಿಯೇ ಇದೆ.  ಹೀಗಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌, ಫೆಬ್ರುವರಿಯಲ್ಲಿ ಬಡ್ಡಿ ದರಗಳನ್ನು ತಗ್ಗಿಸುವ ಸಾಧ್ಯತೆ ದೂರವಾದಂತಾಗಿದೆ.ಇದರಿಂದ ಅರ್ಥ ವ್ಯವಸ್ಥೆಯ ಸುಸ್ಥಿರ ಬೆಳವಣಿಗೆಗೆ ಬೇಕಾಗಿದ್ದ ಬೇಡಿಕೆ ಹೆಚ್ಚಳ ಸಾಕಾರಗೊಳ್ಳುವುದು ಇನ್ನಷ್ಟು ಮುಂದಕ್ಕೆ ಹೋಗಲಿದೆ. ಅಕ್ಟೋಬರ್‌ ತಿಂಗಳಲ್ಲಷ್ಟೇ  ಶೇ 9.8ರಷ್ಟು ಪ್ರಗತಿ ದಾಖಲಿಸಿದ್ದ ಕೈಗಾರಿಕಾ ಉತ್ಪಾದನೆಯು ನವೆಂಬರ್‌ನಲ್ಲಿ ಅನಿರೀಕ್ಷಿತ ಕುಸಿತ ದಾಖಲಿಸಿದೆ.  ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಆಧರಿಸಿ ಲೆಕ್ಕ ಹಾಕಲಾಗುವ ಕೈಗಾರಿಕಾ ಬೆಳವಣಿಗೆಯು  ಚೆನ್ನೈ ಪ್ರವಾಹದ ಪರಿಣಾಮದಿಂದಾಗಿ ಮುಂಬರುವ ದಿನಗಳಲ್ಲಿಯೂ ಇನ್ನಷ್ಟು ಕುಸಿತಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.ನವೆಂಬರ್ ತಿಂಗಳಲ್ಲಿ ದೀಪಾವಳಿ ಹಬ್ಬದ ಕಾರಣಕ್ಕೆ ಕೆಲಸ ಮಾಡುವ ದಿನಗಳು ಕಡಿಮೆಯಾಗಿ ಕೈಗಾರಿಕಾ ಉತ್ಪಾದನೆ ಕಡಿಮೆಯಾಗಿದೆ ಎಂಬುದನ್ನೂ ಇಲ್ಲಿ ನಿರ್ಲಕ್ಷಿಸುವಂತಿಲ್ಲ. ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸು ಜಾರಿ ಮತ್ತು ನಿವೃತ್ತ ಸೈನಿಕರಿಗೆ ‘ಒಂದು ಹುದ್ದೆ, ಒಂದು ಪಿಂಚಣಿ’ ಯೋಜನೆ ಜಾರಿಗೊಳಿಸುವುದರಿಂದ ಸರ್ಕಾರಿ ವೆಚ್ಚಗಳಿಗೆ ಹಣದ ಕೊರತೆ ಎದುರಾಗಲಿದೆ. ಈ ಕಾರಣಕ್ಕೆ ಸರ್ಕಾರವು ವಿತ್ತೀಯ ಕೊರತೆ ಗುರಿ ಹೆಚ್ಚಿಸಿದರೆ ಅದರಿಂದ ಹಣದುಬ್ಬರ ಇನ್ನಷ್ಟು ಹೆಚ್ಚಳಗೊಳ್ಳಲಿದೆ. ಇದು ಆರ್‌ಬಿಐನ ಆಶಯಕ್ಕೆ ವಿರುದ್ಧವಾಗಿರುವುದರಿಂದ ಬಡ್ಡಿ ದರ ಕಡಿತ ಮಾಡುವ ಸಾಧ್ಯತೆ ಇಲ್ಲ.ನವೆಂಬರ್‌ ತಿಂಗಳ ಐಐಪಿಯನ್ನು ಕೈಗಾರಿಕಾ ಪುನಶ್ಚೇತನದ ಅಂತ್ಯ ಎಂದು ವ್ಯಾಖ್ಯಾನಿಸಿ ಅಂತಿಮ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಆದರೆ ಅರ್ಥ ವ್ಯವಸ್ಥೆಯು ಗೊಂದಲದ ಸಂಕೇತಗಳನ್ನು ನೀಡುತ್ತಿರುವುದು ಕಳವಳಕ್ಕೆ ಎಡೆಮಾಡಿಕೊಟ್ಟಿದೆ. ಆರ್ಥಿಕತೆಯಲ್ಲಿ ಬೆಳವಣಿಗೆ ಕಂಡುಬರುತ್ತಿಲ್ಲ ಎಂಬುದು ಸರ್ಕಾರದ ನೀತಿನಿರೂಪಕರು ಹಾಗೂ ವಾಣಿಜ್ಯೋದ್ಯಮಿಗಳನ್ನು ಕಾಡುತ್ತಿರುವ ಮುಖ್ಯ ಸಮಸ್ಯೆಯಾಗಿದೆ. ಸಾಕಷ್ಟು ಹಣ ಹೂಡಿಕೆಯಾಗುತ್ತಿಲ್ಲ ಎಂಬುದನ್ನು ಇದು ಧ್ವನಿಸುತ್ತದೆ.ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಇದು ದೊಡ್ಡ ರಾಜಕೀಯ ಸವಾಲೂ ಆಗಿದೆ. ಬರಗಾಲದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಹಕ ಉತ್ಪನ್ನಗಳಿಗೆ ಬೇಡಿಕೆಯೂ ಕುಸಿದಿರುವುದು ನಿರಾಶಾದಾಯಕ. ಕಚ್ಚಾ ತೈಲದ ಬೆಲೆ 13 ವರ್ಷಗಳ ಹಿಂದಿನ ಮಟ್ಟಕ್ಕೆ (ಪ್ರತಿ ಬ್ಯಾರೆಲ್‌ಗೆ 27.33 ಡಾಲರ್‌) ಕುಸಿದಿರುವುದು, ಚೀನಾದ ಕರೆನ್ಸಿ ಅಪಮೌಲ್ಯಗೊಂಡಿರುವುದು ಕೂಡ ದೇಶದ ಅರ್ಥ ವ್ಯವಸ್ಥೆಗೆ ಪ್ರತಿಕೂಲವಾಗಿರಲಿದೆ. ಈ ಬೆಳವಣಿಗೆಗಳು ಪೆಟ್ರೋಲಿಯಂ ಉತ್ಪನ್ನಗಳೂ ಸೇರಿದಂತೆ ರಫ್ತು ವಹಿವಾಟನ್ನು ಕಡಿಮೆ ಮಾಡಲಿವೆ.ಈ ಕಾರಣಕ್ಕೆ ಹಣಕಾಸು ನೀತಿ ಪರಾಮರ್ಶಿಸಲು ಕೇಂದ್ರ ಸರ್ಕಾರ ಮುಂದಾಗಬೇಕಾಗಿದ್ದು, ವಿವೇಚನೆಯಿಂದಲೇ ಪ್ರತಿಕ್ರಿಯಿಸುವ ಅಗತ್ಯ ಇದೆ. ಈ ಸಮಸ್ಯೆಗಳಿಗೆ ಹಣಕಾಸು ಮತ್ತು ವಿತ್ತೀಯ ನೀತಿ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು. ಹಣಕಾಸು ಸಚಿವ ಅರುಣ್ ಜೇಟ್ಲಿ, ಮುಂದಿನ ತಿಂಗಳು ಮಂಡಿಸಲಿರುವ 2016–17ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸುವ ನೀತಿ ನಿರ್ಧಾರಗಳನ್ನು ಆಧರಿಸಿ ಆರ್‌ಬಿಐ ತನ್ನ ಹಣಕಾಸು ನೀತಿ ಅಂತಿಮಗೊಳಿಸಬಹುದು. ಖಾಸಗಿ ಬಂಡವಾಳ ಹೂಡಿಕೆಗೆ ಬಜೆಟ್‌ನಲ್ಲಿ ಗಮನಾರ್ಹ ಪ್ರಮಾಣದಲ್ಲಿ ಉತ್ತೇಜನ ದೊರೆತರೆ, ನಿರಾಶಾದಾಯಕ ಆರ್ಥಿಕ ಪರಿಸ್ಥಿತಿ ಖಂಡಿತವಾಗಿಯೂ ಬದಲಾದೀತು. ಕೃಷಿ ಕ್ಷೇತ್ರದ ಕುರಿತೂ ಗಮನ ಕೇಂದ್ರೀಕರಿಸಬೇಕಾದ ಅಗತ್ಯವನ್ನು ಅರ್ಥಶಾಸ್ತ್ರಜ್ಞರು ಪ್ರತಿಪಾದಿಸಿದ್ದಾರೆ. ಕೃಷಿ–ಕೈಗಾರಿಕೆ ಹಾಗೂ ಮಾರುಕಟ್ಟೆ ಸುಧಾರಣೆ– ಸಾಮಾಜಿಕ ಭದ್ರತೆ ಕ್ರಮಗಳ ಸಮತೋಲನ ಸರ್ಕಾರದ ಮುಂದಿರುವ ದೊಡ್ಡ ಸವಾಲು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.