ಶನಿವಾರ, ಜೂಲೈ 11, 2020
29 °C

ಕೈಗಾರಿಕೆ ಕ್ಷೇತ್ರ ಅಭಿವೃದ್ಧಿಗೆ ಖರ್ಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹೈದರಾಬಾದ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಕೈಗಾರಿಕೆಗಳು ಸ್ಥಾಪನೆಗೊಳ್ಳಲು ಹೈದರಾಬಾದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಎಚ್‌ಕೆಸಿಸಿಐ) ಹಾಗೂ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಸಲಹೆ ಮಾಡಿದರು.ಇಲ್ಲಿನ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಲಾಗಿದ್ದ 3ನೇ ರಾಜ್ಯಮಟ್ಟದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಹಾಗೂ ಇತರ ಸಂಘ-ಸಂಸ್ಥೆಗಳ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಎಚ್‌ಕೆಸಿಸಿಐ ಹಾಗೂ ಎಫ್‌ಕೆಸಿಸಿಐ ನೇತೃತ್ವದಲ್ಲಿ ಕಾರ್ಯಪಡೆಯೊಂದನ್ನು ರಚಿಸಿಕೊಂಡು ಅದರಡಿಯಲ್ಲಿ ವಿವಿಧ ಕೆಲಸ ನಡೆಸಬೇಕು. ಗುಲ್ಬರ್ಗದಂಥ ನಗರಗಳಲ್ಲಿ ಕೈಗಾರಿಕಾ ವಸ್ತುಪ್ರದರ್ಶನ, ಕಚ್ಚಾ ಸಾಮಗ್ರಿ ಲಭ್ಯತೆ ಹಾಗೂ ಮಾರುಕಟ್ಟೆ ಕಲ್ಪಿಸುವ ಕುರಿತ ಕಾರ್ಯಾಗಾರ ಏರ್ಪಡಿಸಬೇಕು. ಅಂದಾಗ ಮಾತ್ರ ಉದ್ಯಮಿಗಳು ಈ ಭಾಗದಲ್ಲಿ ಕೈಗಾರಿಕೆ ಸ್ಥಾಪಿಸಲು ಇಚ್ಛೆ ವ್ಯಕ್ತಪಡಿಸಬಹುದು ಎಂದು ಅವರು ವಿವರಿಸಿದರು.“ಹೈ-ಕ ಭಾಗದಲ್ಲಿ ಯಾವ ಬಗೆಯ ಕೈಗಾರಿಕೆ ಸ್ಥಾಪನೆ ಸಾಧ್ಯ ಎನ್ನುವುದರ ಕುರಿತು ಅಧ್ಯಯನ ನಡೆಸುವ ಅಗತ್ಯವಿದೆ. ಇದರಿಂದ ಉದ್ಯಮಿಗಳಿಗೆ ಹೆಚ್ಚಿನ ಮಾಹಿತಿ ಸಿಗುತ್ತದೆ. ಬೇರೆ ಬೇರೆ ಸಚಿವಾಲಯದ ಅಧಿಕಾರಿಗಳ ಮನವೊಲಿಸಿ, ಉದ್ಯಮಗಳಿಗೆ ಸರ್ಕಾರದ ಸೌಲಭ್ಯ ಸಿಗುವಂತೆ ಮಾಡಬೇಕು” ಎಂದು ಅವರು ಸಲಹೆ ಮಾಡಿದರು.ಅಸಮಾಧಾನ: ಕೈಗಾರಿಕೋದ್ಯಮಿಗಳ ಸಮಸ್ಯೆ ಆಲಿಸಬೇಕಾದ ಕೈಗಾರಿಕಾ ಸಚಿವ ಮುರುಗೇಶ ನಿರಾಣಿಯಾಗಲೀ, ಇತರ ಅಧಿಕಾರಿಗಳಾಗಲೀ ಸಮ್ಮೇಳನಕ್ಕೆ ಆಗಮಿಸದೇ ಇರುವುದು ಸಚಿವ ಖರ್ಗೆ ಅವರಲ್ಲಿ ಅಸಮಾಧಾನ ಮೂಡಿಸಿತು. “ನಿಮ್ಮ ಗೋಳಿಗೆ ಸ್ಪಂದಿಸಬೇಕಾದವರೇ ಇಲ್ಲಿಲ್ಲ. ಸಮಸ್ಯೆಗೆ ಪರಿಹಾರ ನೀಡುವವರು ಅವರೇ. ಜಮೀನು ಮಂಜೂರು ಮಾಡುವ ಡಿ.ಸಿ., ವಿದ್ಯುತ್ ಪೂರೈಸುವ ಜೆಸ್ಕಾಂ ಸೇರಿದಂತೆ ಯಾವ ಅಧಿಕಾರಿಗಳೂ ಬಂದಿಲ್ಲ. ಇಂಥ ಸಮ್ಮೇಳನದಿಂದ ಏನು ಉಪಯೋಗವಿಲ್ಲ” ಎಂದು ಅವರು ನುಡಿದರು.“ಪವರ್ ಪಾಯಿಂಟ್ ಪ್ರೆಸೆಂಟೇಶನ್, ಉಪನ್ಯಾಸಗಳ ನಂತರ ಊಟ ಮಾಡಿ ಮನೆಗೆ ಹೋಗುವುದೇ ಸಮ್ಮೇಳನ ಅಲ್ಲ. ದಾಖಲೆ ಪುಸ್ತಕದಲ್ಲಿ ಸೇರ್ಪಡೆಯಾಗುವ ಇಂಥ ಸಮ್ಮೇಳನಗಳು ಔಪಚಾರಿಕವಾಗಿ ಬಿಡುತ್ತವೆ. ಹಾಗಾಗಿ, ಮುಂದಿನ ಬಾರಿಯಾದರೂ ವ್ಯವಸ್ಥಿತ ಸಮ್ಮೇಳನ ಮಾಡಿ” ಎಂದು ಖರ್ಗೆ ಕಿವಿಮಾತು ಹೇಳಿದರು.

ಶಾಸಕರಾದ ಖಮರುಲ್ ಇಸ್ಲಾಂ, ಅರುಣಾ ಪಾಟೀಲ ರೇವೂರ, ಶರಣಬಸಪ್ಪ ದರ್ಶನಾಪೂರ, ಡಾ. ಶರಣಪ್ರಕಾಶ ಪಾಟೀಲ, ಉದ್ಯಮಿ ಎಸ್.ಎಸ್.ಪಾಟೀಲ ಇತರರು ವೇದಿಕೆಯಲ್ಲಿ ಇದ್ದರು.ಎಫ್‌ಕೆಸಿಸಿಐ ಅಧ್ಯಕ್ಷ ಎನ್.ಎಸ್.ಶ್ರೀನಿವಾಸಮೂರ್ತಿ ಸಮ್ಮೇಳನದ ಉದ್ದೇಶ ಹಾಗೂ ಗುರಿ ವಿವರಿಸಿದರು. ಎಚ್‌ಕೆಸಿಸಿಐ ಅಧ್ಯಕ್ಷ ಗೋಪಾಲಕೃಷ್ಣ ರಘೋಜಿ ಸ್ವಾಗತಿಸಿದರು. ಸೋಮಶೇಖರ ಟೆಂಗಳಿ ವಂದಿಸಿದರು.ಗೋಷ್ಠಿ:ನಂತರ ವಿದ್ಯುತ್, ಕೈಗಾರಿಕೆ, ಪ್ರವಾಸೋದ್ಯಮ, ನಾಗರಿಕ ಸೌಲಭ್ಯ ಹಾಗೂ ವಾಣಿಜ್ಯ ತೆರಿಗೆ ಎಂಬ ವಿಷಯದ ಕುರಿತು ಗೋಷ್ಠಿಗಳು ನಡೆದವು. ವಿವಿಧ ತಜ್ಞರು ವಿಷಯ ಮಂಡಿಸಿದರು. ರಾಜ್ಯದ ವಿವಿಧೆಡೆಯಿಂದ ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.