ಭಾನುವಾರ, ಜೂನ್ 20, 2021
28 °C

ಕೈಗಾರಿಕೆ: ಗಣನೀಯ ಪ್ರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈಗಾರಿಕೆ: ಗಣನೀಯ ಪ್ರಗತಿ

ನವದೆಹಲಿ (ಪಿಟಿಐ): ತಯಾರಿಕೆ ಕ್ಷೇತ್ರದ ಗಣನೀಯ ಚೇತರಿಕೆಯಿಂದ ದೇಶದ ಒಟ್ಟಾರೆ ಕೈಗಾರಿಕೆ ಪ್ರಗತಿಯು ಜನವರಿ ತಿಂಗಳಲ್ಲಿ ಶೇ 6.8ರಷ್ಟಾಗಿದೆ.ಕೈಗಾರಿಕೆ ಪ್ರಗತಿ ಅಳೆಯುವ, ಕೈಗಾರಿಕೆ ಉತ್ಪಾದನೆ ಸೂಚ್ಯಂಕ (ಐಐಪಿ) ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 7.5ರಷ್ಟಿತ್ತು. ಜಾಗತಿಕ ಆರ್ಥಿಕ ಅಸ್ಥಿರತೆ, `ಆರ್‌ಬಿಐ~ ಬಡ್ಡಿ ದರ ಹೆಚ್ಚಳ ಇತ್ಯಾದಿ ಸಂಗತಿಗಳಿಂದ ದೇಶದ ಕೈಗಾರಿಕೆ ರಂಗದ ಪ್ರಗತಿ  ಇತ್ತೀಚಿನ ತಿಂಗಳುಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು.ಆದರೆ, ಕೈಗಾರಿಕೆ ಸೂಚ್ಯಂಕಕ್ಕೆ ಶೇ 75ರಷ್ಟು ಕೊಡುಗೆ ನೀಡುವ ತಯಾರಿಕೆ ವಲಯ ಈ ಅವಧಿಯಲ್ಲಿ ಶೇ 8.5ರಷ್ಟು ಗಮನಾರ್ಹ ಪ್ರಗತಿ ದಾಖಲಿಸಿದೆ. ಇದರಿಂದ ಡಿಸೆಂಬರ್ ತಿಂಗಳಲ್ಲಿ ಶೇ 2.8ರಷ್ಟಿದ್ದ `ಐಐಪಿ~ ಜನವರಿಯಲ್ಲಿ ಶೇ 6.8ಕ್ಕೆ ಏರಿಕೆಯಾಗಿದೆ.ದೇಶದ ಪ್ರಮುಖ 22 ಕೈಗಾರಿಕೆಗಳಲ್ಲಿ 13 ರಂಗಗಳು ಈ ಅವಧಿಯಲ್ಲಿ ಪ್ರಗತಿ ಕಂಡಿರುವುದು ಗಮನಾರ್ಹ. ಭಾರತೀಯ ರಿಸರ್ವ್ ಬ್ಯಾಂಕ್ ಅಲ್ಪಾವಧಿ ಬಡ್ಡಿ ದರ ಹೆಚ್ಚಳ ಕೈಬಿಟ್ಟಿರುವುದು ಕೈಗಾರಿಕೆ ವಲಯದ ಪುನಶ್ಚೇತನಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಹೇಳಿದ್ದಾರೆ.ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 8.3ರಷ್ಟಿದ್ದ ಗ್ರಾಹಕ ಸರಕುಗಳು ಜನವರಿ ತಿಂಗಳಲ್ಲಿ ಶೇ 20 ಪ್ರಗತಿ ದಾಖಲಿಸಿವೆ. ಭಾರಿ  ಯಂತ್ರೋಪಕರಣ ವಲಯ ಶೇ 5.3ರಷ್ಟು ಚೇತರಿಕೆ ಕಂಡಿದೆ. `ಐಐಪಿ~ಗೆ ಮಹತ್ವದ  ಕೊಡುಗೆ ನೀಡುವ ಗಣಿಗಾರಿಕೆ ವಲಯ ಜನವರಿ ತಿಂಗಳಲ್ಲಿ ಶೇ 2.7ರಷ್ಟು ಏರಿಕೆ ಕಂಡಿದೆ. ವಿದ್ಯುತ್ ಉತ್ಪಾದನೆ ಶೇ 3.2ರಷ್ಟು ಇಳಿಕೆ ಕಂಡಿದೆ. ಗರಿಷ್ಠ ಪುನಶ್ಚೇತನ: `ಐಐಪಿ~ ದರವು ಜನವರಿ ತಿಂಗಳಲ್ಲಿ ಶೇ 6.8ಕ್ಕೆ ಏರಿಕೆ ಕಂಡಿರುವುದು ಗರಿಷ್ಠ ಪುನಶ್ಚೇತನ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ. ತಯಾರಿಕೆ ವಲಯ ಈ ಅವಧಿಯಲ್ಲಿ ಗಣನೀಯ ಪ್ರಗತಿ ದಾಖಲಿಸಿದೆ. ಆದರೆ,ಗ್ರಾಹಕಸರಕು, ಭಾರಿ ಯಂತ್ರೋಪಕರಣ, ಗಣಿಗಾರಿಕೆ, ವಿದ್ಯುತ್ ವಲಯಗಳು ಇನ್ನಷ್ಟು ಪ್ರಗತಿ ದಾಖಲಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಕಳೆದ ಡಿಸೆಂಬರ್ ತಿಂಗಳಲ್ಲಿ `ಐಐಪಿ~ ದರ ಕೇವಲ 2.8ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಜನವರಿ ತಿಂಗಳ ಅಂಕಿ ಅಂಶಗಳು ಉತ್ತಮ ಪ್ರಗತಿ ಎನ್ನಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.ತೃಪ್ತಿದಾಯಕ ಮೊಂಟೆಕ್: ಜನವರಿ ತಿಂಗಳ `ಐಐಪಿ~ ಅಂಕಿ ಅಂಶಗಳು ತೃಪ್ತಿದಾಯಕವಾಗಿದೆ.  `ದೇಶದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಹಿಂದಿನ ಸಹಜ ಸ್ಥಿತಿಗೆ ಮರಳುತ್ತಿರುವ ಸೂಚನೆಯೇ ಕೈಗಾರಿಕೆ ವಲಯದ ಪ್ರಗತಿ ಎಂದು ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ.ಏಪ್ರಿಲ್-ಜನವರಿ ಅವಧಿಯ ಒಟ್ಟಾರೆ `ಐಐಪಿ~ ದರ ಶೇ 4ರಷ್ಟಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು ಶೇ 8.3ರಷ್ಟಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.