ಕೈಗಾರಿಕೆ ಪ್ರಗತಿ ಕುಸಿತ

7

ಕೈಗಾರಿಕೆ ಪ್ರಗತಿ ಕುಸಿತ

Published:
Updated:

ನವದೆಹಲಿ (ಪಿಟಿಐ): ದೇಶದ ಕೈಗಾರಿಕೆ ಉತ್ಪಾದನಾ ವೃದ್ಧಿ ದರವು (ಐಐಪಿ) ಡಿಸೆಂಬರ್ ತಿಂಗಳಲ್ಲಿ ನಿರಾಶಾದಾಯಕ ಮಟ್ಟವಾದ ಶೇ 1.8ಕ್ಕೆ ಕುಸಿತ ಕಂಡಿದೆ. ತಯಾರಿಕೆ ಮತ್ತು ಗಣಿಗಾರಿಕೆ ವಲಯಗಳು ಈ ಅವಧಿಯಲ್ಲಿ ತೀವ್ರ ಇಳಿಕೆ ದಾಖಲಿಸಿವೆ.ಕಳೆದ ವರ್ಷದ ಇದೇ ಅವಧಿಯಲ್ಲಿ `ಐಐಪಿ~ ದರವು ಶೇ 8.1ರಷ್ಟಿತ್ತು. ಒಟ್ಟಾರೆ `ಐಐಪಿ~ ಸೂಚ್ಯಂಕಕ್ಕೆ ಶೇ 75ರಷ್ಟು ಕೊಡುಗೆ ನೀಡುವ ತಯಾರಿಕೆ ರಂಗ ಈ ಡಿಸೆಂಬರ್ ತಿಂಗಳಲ್ಲಿ ತೀವ್ರ  ಕುಸಿತ ಕಂಡಿದೆ. ಕೈಗಾರಿಕೆ ಪ್ರಗತಿ ಕುಸಿತದ ಜತೆಗೆ ದೇಶದ ಆರ್ಥಿಕ ವೃದ್ಧಿ ದರವೂ (ಜಿಡಿಪಿ) ಶೇ 6.9ಕ್ಕೆ ಕುಸಿಯಲಿದೆ ಎಂದು ಕೇಂದ್ರ ಅಂಕಿ ಅಂಶಗಳ ಸಂಘಟನೆ (ಸಿಎಸ್‌ಒ) ಅಂದಾಜಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮುಂದಿನ ತಿಂಗಳು ಪ್ರಕಟಿಸಲಿರುವ ಮಧ್ಯಂತರ ತ್ರೈಮಾಸಿಕ ವಿತ್ತೀಯ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರ ಇಳಿಕೆಗೆ ಮುಂದಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಪ್ರಣವ್ ವಿಶ್ವಾಸ: ನವೆಂಬರ್ ತಿಂಗಳಲ್ಲಿ `ಐಐಪಿ~ ದರ ಶೇ 5.94 ರಷ್ಟಿತ್ತು. ತಯಾರಿಕೆ ಕ್ಷೇತ್ರದ ಪ್ರಗತಿ ಕುಂಠಿತಗೊಂಡಿರುವುದೇ `ಐಐಪಿ~ ದರ ಕುಸಿಯಲು ಪ್ರಮುಖ ಕಾರಣ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ. ಸದ್ಯದ ಅಂಕಿ ಅಂಶಗಳು ನಿರಾಶಾದಾಯಕವಾಗಿವೆ. ಆದರೆ, ಮುಂಬರುವ ತಿಂಗಳುಗಳಲ್ಲಿ ಇದು ಚೇತರಿಸಿಕೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಕಳೆದ ವರ್ಷಕ್ಕೆ ಹೋಲಿಸಿದರೆ ಡಿಸೆಂಬರ್ ತಿಂಗಳಲ್ಲಿ ಭಾರಿ ಯಂತ್ರೋಪಕರಣ ವಲಯ ಶೇ 16.5ರಷ್ಟು ಮತ್ತು ಗಣಿಗಾರಿಕೆ ಕ್ಷೇತ್ರ ಶೇ 3.7ರಷ್ಟು ಇಳಿಕೆ ಕಂಡಿವೆ.  ವಿದ್ಯುತ್ ರಂಗ ದಾಖಲೆ ಪ್ರಗತಿ ಕಂಡಿದ್ದು, ಶೇ 9ರಷ್ಟು ಏರಿಕೆ ಪಡೆದಿದೆ. ಈ ಅವಧಿಯಲ್ಲಿ ಪ್ರಮುಖ 22 ಕೈಗಾರಿಕೆಗಳಲ್ಲಿ 15 ಉದ್ಯಮಗಳು ಚೇತರಿಸಿಕೊಂಡಿವೆ. ಎಂಟು ಮೂಲಸೌಕರ್ಯ ರಂಗಗಳು ಶೇ 3.1ರಷ್ಟು ಪ್ರಗತಿ ದಾಖಲಿಸಿವೆ. ಮುಂದಿನ ಮೂರು ತಿಂಗಳಲ್ಲಿ ಮತ್ತೆ ಹೂಡಿಕೆ ಚಟುವಟಿಕೆಗಳು ಪ್ರಾರಂಭವಾಗಲಿವೆ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿಯ ಅಧ್ಯಕ್ಷ ಸಿ. ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry