ಭಾನುವಾರ, ಮೇ 22, 2022
22 °C

ಕೈಗಾರಿಕೆ ಮೂಲ ಸೌಕರ್ಯ ಸುಧಾರಣೆಗೆ ರೂ 1030 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಕೈಗಾರಿಕಾ ವಲಯದ ಮೂಲ ಸೌಕರ್ಯಗಳಲ್ಲಿ ಸುಧಾರಣೆಯ(ಐಐಯುಎಸ್) ಪರಿಷ್ಕೃತ ಯೋಜನೆಗೆ ಕೇಂದ್ರ ಸರ್ಕಾರ ಗುರುವಾರ ಅನುಮೋದನೆ ನೀಡಿದೆ.ಕೈಗಾರಿಕಾ ವಲಯಕ್ಕೆ ಹಲವು ಬಗೆ ಯಲ್ಲಿ ನೆರವಾಗುವಂತಹ ರೂ 1,030 ಕೋಟಿ ವೆಚ್ಚದ ಈ ಕಾರ್ಯಕ್ರಮ 12ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ (2017ರ ಮಾರ್ಚ್‌ಗೂ ಮುನ್ನ) ಜಾರಿಗೆ ಬರಲಿದೆ.ಈ ಪರಿಷ್ಕೃತ ಯೋಜನೆಗೆ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಇಎ) ಗುರುವಾರ ಒಪ್ಪಿಗೆ ನೀಡಿದೆ. ಮೂಲ ಸೌಕರ್ಯ ಸುಧಾರಣೆಯ ಹೊಸದಾದ 14-16 ಯೋಜನೆಗಳಿಗೆ  ಹಾಗೂ ಈಗಾಗಲೇ ನಿಗದಿಯಾಗಿ ರುವ  ಯೋಜನೆಗಳಿಗೆ ರೂ 450 ಕೋಟಿ ವೆಚ್ಚ ಮಾಡಲಾಗುವುದು ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಮನೀಷ್ ತಿವಾರಿ ಸುದ್ದಿಗಾರರಿಗೆ ವಿವರಿಸಿದರು.ಈ ಯೋಜನೆಯ ಪ್ರಯೋಜನವನ್ನು ಬಹುತೇಕ ಎಲ್ಲ ರಾಜ್ಯಗಳೂ ಪಡೆದುಕೊಳ್ಳಬೇಕಿದ್ದರೂ, ಯೋಜನೆಯ ಮಿತಿಯ ಕಾರಣದಿಂದಾಗಿ ಸದ್ಯ 14ರಿಂದ 16 ರಾಜ್ಯಗಳ ಆಯ್ದ ಜಿಲ್ಲೆಗಳಿಗೆ ಹೆಚ್ಚು ಅನುಕೂಲವಾಗಲಿದೆ. ಒಟ್ಟಾರೆ ಯೋಜನೆಯಲ್ಲಿ ಕನಿಷ್ಠ ಶೇ 10ರಷ್ಟು ಹಣವನ್ನು ಈಶಾನ್ಯ ಭಾರತದಲ್ಲಿನ ಕೈಗಾರಿಕಾ ವಲಯದಲ್ಲಿ ಬಳಸಲು ಯೋಜಿಸಲಾಗಿದೆ ಎಂದರು.ದೇಶದ ಕೈಗಾರಿಕಾ ವಲಯವನ್ನು ಸ್ಪರ್ಧಾತ್ಮಕ ಮಾರುಕಟ್ಟೆಗೆ ತಕ್ಕಂತೆ ಸಜ್ಜುಗೊಳಿಸುವ ಸಲುವಾಗಿ 2003ರಲ್ಲಿಯೇ `ಐಐಯುಎಸ್' ರೂಪಿಸಲಾಗಿದ್ದಿತು. ಈಗ ಅದರ ಪರಿಷ್ಕೃತ ಯೋಜನೆ ಜಾರಿಯಾಗುತ್ತಿದೆ.ಐಟಿಡಿಸಿ ಷೇರು ವಿಕ್ರಯಕ್ಕೆ ಅನುಮತಿ

`ಸರ್ಕಾರಿ ವಾಣಿಜ್ಯ ವಹಿವಾಟು ನಿಗಮ'(ಸ್ಟೇಟ್ ಟ್ರೇಡಿಂಗ್ ಕಾರ್ಪೊರೇಷನ್-ಎಸ್‌ಟಿಸಿ) ಮತ್ತು `ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ'(ಇಂಡಿಯಾ ಟೂರಿಸಂ ಡೆವಲಪ್‌ಮೆಂಟ್ ಕಾರ್ಪೊರೇಷನ್-ಐಟಿಡಿಸಿ)ಗಳಲ್ಲಿ ಇರುವ ಕೇಂದ್ರ ಸರ್ಕಾರದ ಷೇರು ಪಾಲನ್ನು ಮಾರಾಟ ಮಾಡಲು `ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ'(ಸಿಸಿಇಎ) ಅನುಮತಿ ನೀಡಿದೆ.`ಐಟಿಡಿಸಿ'ಯ 42.88 ಕೋಟಿ(ಶೇ 5) ಮತ್ತು `ಎಸ್‌ಟಿಸಿ'ಯ 6.13 ಕೋಟಿ(ಶೇ 1.02) ಷೇರುಗಳನ್ನು ವಿಕ್ರಯಿಸುವ ಮೂಲಕ ಕ್ರಮವಾಗಿ ರೂ 23.58 ಕೋಟಿ ಮತ್ತು ರೂ 10 ಕೋಟಿ ಸಂಗ್ರಹಿಸುವ ಉದ್ದೇಶ ಸರ್ಕಾರದ್ದಾಗಿದೆ. ಆಗಸ್ಟ್ 8ಕ್ಕೂ ಮುನ್ನ ಈ ಎರಡೂ ಕಂಪೆನಿಗಳ ಷೇರುಗಳ ಮಾರಾಟ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.