ಕೈಗಾ ಅಣು ಸ್ಥಾವರಕ್ಕೆ ವ್ಯಾನೊ ಭೇಟಿ

7

ಕೈಗಾ ಅಣು ಸ್ಥಾವರಕ್ಕೆ ವ್ಯಾನೊ ಭೇಟಿ

Published:
Updated:

ಕಾರವಾರ: ತಾಲ್ಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಅಣುಶಕ್ತಿ ನಿರ್ವಾಹಕರ ವಿಶ್ವ ಸಂಘಟನೆಯ (ವರ್ಲ್ಡ್ ಆರ್ಗನೈಸೇಷನ್ ಆಫ್ ನ್ಯೂಕ್ಲಿಯರ್ ಆಪರೇಟರ್ಸ್‌- ವ್ಯಾನೊ) ತಂಡ ಭೇಟಿ ನೀಡಿದ್ದು, ಸ್ಥಾವರದ ತಾಂತ್ರಿಕತೆ, ನಿರ್ವಹಣೆ, ಸುರಕ್ಷತೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.ವ್ಯಾನೊ ತಂಡವು ಕಳೆದೊಂದು ವಾರದಿಂದ ಅಣು ಸ್ಥಾವರದ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ ಸ್ಥಾವರದಲ್ಲಿ ಅಳವಡಿಸಿರುವ, ಅಭಿವೃದ್ಧಿಪಡಿಸಿರುವ ತಾಂತ್ರಿಕತೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ. ತಂಡವು ಈ ತಿಂಗಳ ಅಂತ್ಯದವರೆಗೆ ಇಲ್ಲಿದ್ದು ವಿವರಗಳನ್ನು ಕಲೆ ಹಾಕಲಿದೆ ಎಂದು ಗೊತ್ತಾಗಿದೆ.ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವ್ಯಾನೊ ತಂಡ ಅಣು ವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡುತ್ತದೆ. ಕೈಗಾಕ್ಕೆ ಆಗಮಿಸಿರುವ ತಂಡವು ಅಣು ವಿದ್ಯುತ್ ಸ್ಥಾವರದ ಕಾರ್ಯವೈಖರಿಯ ಬಗ್ಗೆ ಅಧ್ಯಯನ ನಡೆಸಿ ಸರಿ ಮತ್ತು ತಪ್ಪು ಎರಡೂ ಅಂಶಗಳ ಬಗ್ಗೆ ತಂಡ ವರದಿ ನೀಡಲಿದೆ. ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿರುವ ವಿಜ್ಞಾನಿಯೊಬ್ಬರು ವ್ಯಾನೊದ ಸದಸ್ಯರಾಗಿದ್ದಾರೆ ಎನ್ನುವುದು ವಿಶೇಷ.ವ್ಯಾನೊ: ಉನ್ನತ ತಂತ್ರಜ್ಞಾನ ಬಳಸಿಕೊಂಡು ಅಣು ಸ್ಥಾವರಗಳು ಸುರಕ್ಷಿತವಾಗಿ ಕಾರ್ಯ ನಿರ್ವಹಿಸಲು ಪ್ರೋತ್ಸಾಹ ನೀಡುವುದು ವ್ಯಾನೊದ ಮುಖ್ಯ ಉದ್ದೇಶವಾಗಿದೆ.ಚೆರ್ನೊಬಿಲ್ ದುರಂತದ ನಂತರ ವ್ಯವಹಾರಿಕ ದೃಷ್ಟಿಯಿಂದ ಅಣು ಸ್ಥಾವರಗಳನ್ನು ಹೊಂದಿರುವ ದೇಶಗಳು ಈ ಸಂಘಟನೆಯನ್ನು ಹುಟ್ಟುಹಾಕಿದವು. ವ್ಯವಹಾರಿಕ ದೃಷ್ಟಿಯಿಂದ ಅಣು ವಿದ್ಯುತ್ ಸ್ಥಾವರಗಳನ್ನು ಹೊಂದಿರುವ ಎಲ್ಲ ದೇಶಗಳ ಒಬ್ಬ ಸದಸ್ಯರು ವ್ಯಾನೊದಲ್ಲಿರುತ್ತಾರೆ.ಅಣು ವಿದ್ಯುತ್ ಸ್ಥಾವರಗಳಲ್ಲಿ ಯಾವ ರೀತಿಯ ರಿಯಾಕ್ಟರ್‌ಗಳಿರಬೇಕು ಮತ್ತು ಅದರ ವಿನ್ಯಾಸ ಹೇಗಿರಬೇಕು ಎನ್ನುವ ಬಗ್ಗೆ  ವ್ಯಾನೊ ಯಾವುದೇ ರೀತಿಯ ಸಲಹೆಗಳನ್ನು ನೀಡುವುದಿಲ್ಲ.ತಾಂತ್ರಿಕತೆ ಮತ್ತು ಕಾರ್ಯವೈಖರಿಯ ಬಗ್ಗೆ ಮಾತ್ರ ಅಧ್ಯಯನ ನಡೆಸಿ ವರದಿ ನೀಡುತ್ತದೆ. ಲಂಡನ್‌ನಲ್ಲಿ ಪ್ರಧಾನ ಕಚೇರಿ ಮತ್ತು ಅಟ್ಲಾಂಟ್, ಮಾಸ್ಕೊ, ಟೋಕಿಯೊ ಹಾಗೂ ಪ್ಯಾರಿಸ್‌ನಲ್ಲಿ ವ್ಯಾನೊ ಪ್ರಾದೇಶಿಕ ಕಚೇರಿಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry