ಶುಕ್ರವಾರ, ಏಪ್ರಿಲ್ 23, 2021
30 °C

ಕೈಗೆಟುಕದ ಹೂ-ಹಣ್ಣು!

ವಿನಾಯಕ ಭಟ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜನರು ವಿಜೃಂಭಣೆಯಿಂದ ಆಚರಿಸಬೇಕಾಗಿದ್ದ ದೀಪಾವಳಿ ಹಬ್ಬಕ್ಕೆ ಈ ಬಾರಿ `ಬೆಲೆ ಏರಿಕೆ~ಯ ಕಾರ್ಮೋಡ ಕವಿದಿದೆ. ಹೀಗಾಗಿ ಅದ್ದೂರಿಯಾಗಿ `ಲಕ್ಷ್ಮಿ ಪೂಜೆ~ ಮಾಡಬೇಕು ಎಂದುಕೊಂಡಿದ್ದ ಜನರು, ಕೈ ಬಿಗಿ ಹಿಡಿದು ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ದೀಪಾವಳಿ ಹಬ್ಬದ ಪೂಜೆಗೆ ಬೇಕಾಗಿರುವ ಹೂವು- ಹಣ್ಣಿನ ಬೆಲೆಗಳು ಗಗನಕ್ಕೆ ಮುಟ್ಟಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಸುಮಾರು ಶೇ. 30ರಷ್ಟು ಬೆಲೆ ಏರಿಕೆ ಉಂಟಾಗಿರುವುದರಿಂದ ಜನರ ಸಂಭ್ರಮಕ್ಕೆ ಕಡಿವಾಣ ಬಿದ್ದಂತಾಗಿದೆ.`ಲಕ್ಷ್ಮಿ ಪೂಜೆ~ಗೆ ಎರಡು ದಿನ ಬಾಕಿ ಇರುವಾಗಲೇ ಬೆಳಗಾವಿಯ ಮಾರು ಕಟ್ಟೆಗೆ ಜನಸಾಗರವೇ ಹರಿದು ಬರುತ್ತಿದೆ. ಆದರೆ, ದೀಪಾವಳಿ ಹಬ್ಬಕ್ಕೆ ಅಗತ್ಯ ಇರುವ ಹಣ್ಣನ್ನು ಖರೀದಿಸಲು ಹೋದ ಜನರಿಗೆ ಅವುಗಳ ಬೆಲೆ ಕೇಳಿದಾಗ ಕಾಲ ಬಳಿಯೇ `ಲಕ್ಷ್ಮೀ ಪಟಾಕಿ~ ಸಿಡಿಸಿದಂತೆ ಭಯವಾಗುತ್ತಿದೆ!`ಲಕ್ಷ್ಮಿ ಪೂಜೆ~ಯ ಸಲುವಾಗಿಯೇ ಹಣ್ಣಿನ ಅಂಗಡಿಗಳಲ್ಲಿ `ಪಂಚ ಫಲ~ವನ್ನು ಸಿದ್ಧಪಡಿಸಿ ಇಡಲಾಗುತ್ತದೆ. ಸೇಬು, ದಾಳಿಂಬೆ, ಮೂಸುಂಬೆ, ಕಿತ್ತಳೆ ಹಾಗೂ ಸೀತಾಫಲ, ಚಿಕ್ಕು, ಪೇರಲೆ ಹಣ್ಣುಗಳ ಪೈಕಿ ಐದನ್ನು ಆಯ್ಕೆ ಮಾಡಿದ ಗುಣಮಟ್ಟದ `ಪಂಚ ಫಲ~ಕ್ಕೆ 80ರಿಂದ 100 ರೂಪಾಯಿ! ಕಳೆದ ವರ್ಷ ಇದರ ಬೆಲೆಯು 50ರಿಂದ 60 ರೂಪಾಯಿ ಇತ್ತು.ಒಂದು ಕೆ.ಜಿ. ಸೇಬುಗೆ ರೂ. 100ರಿಂದ 120 ರೂಪಾಯಿ. ಅದೇ ರೀತಿ ಒಂದು ಕೆ.ಜಿ. ದಾಳಿಂಬೆ ಹಣ್ಣಿಗೆ ರೂ. 150ರಿಂದ 220, ಚಿಕ್ಕು ಹಣ್ಣಿಗೆ ರೂ. 50, ಮೊಸುಂಬೆ, ಕಿತ್ತಳೆ ಹಾಗೂ ಸೀತಾಫಲಕ್ಕೆ 60 ರೂಪಾಯಿ. ಒಂದು ಪೈನಾಪಲ್‌ಗೆ 50 ರೂಪಾಯಿ, 25 ಪೇರಲೆ ಹಣ್ಣಿಗೆ 200 ರೂಪಾಯಿಯಂತೆ ಮಾರುಕಟ್ಟೆಯಲ್ಲಿ ಭಾನುವಾರ ಮಾರಾಟವಾಗುತ್ತಿದೆ.`ಕಳೆದ ದೀಪಾವಳಿ ಹಬ್ಬದಲ್ಲಿ ಒಂದು ಕೆ.ಜಿ. ಸೇಬುಗೆ 60ರಿಂದ 80 ರೂಪಾಯಿ ಇತ್ತು. ದಾಳಿಂಬೆಗೆ 100ರಿಂದ 150 ರೂಪಾಯಿಗೆ ಮಾರಿದ್ದೆವು. ಈ ವರ್ಷ ಹಣ್ಣಿನ ಬೆಲೆಯಲ್ಲಿ ಸುಮಾರು ಶೇ. 30ರಿಂದ 40ರಷ್ಟು ಏರಿಕೆಯಾಗಿದೆ. ಹೀಗಾಗಿ ಪೂಜೆಗೆ ಅಗತ್ಯ ಇರುವ `ಪಂಚಫಲ~ವನ್ನಷ್ಟೇ ಜನರು ಹೆಚ್ಚು ತೆಗೆದುಕೊಂಡು ಹೋಗುತ್ತಿದ್ದಾರೆ~ ಎಂದು ನಗರದ ನರಗುಂದಕರ ಭಾವೆ ಚೌಕ್‌ನ ಹಣ್ಣಿನ ವ್ಯಾಪಾರಿ ಸಲೀಂ ಗೋಲವಾಲೆ `ಪ್ರಜಾವಾಣಿ~ಗೆ ತಿಳಿಸಿದರು.ಹಣ್ಣಿನ ಜೊತೆಗೆ ಹೂವಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪೂಜೆಗೆ ಅಗತ್ಯ ಇರುವ ಸೇವಂತಿಗೆ, ಚೆಂಡು ಹೂವುಗಳ ಬೆಲೆಯೂ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಒಂದು ಪಾವು (ಸಣ ಬುಟ್ಟಿ) ಸೇವಂತಿಗೆ ಹಾಗೂ ಚೆಂಡು ಹೂವಿಗೆ ತಲಾ 40ರಿಂದ 50 ರೂಪಾಯಿಗೆ ಮಾರಾಟವಾಗುತ್ತಿದೆ. `ಲಕ್ಷ್ಮೀ~ ಫೋಟೊಕ್ಕೆ ಹಾಕಿ ಪೂಜೆ ಮಾಡುವ ಒಂದು ಪುಟ್ಟ ಸೇವಂತಿಗೆ ಮಾಲೆಗೆ 15 ರೂ, ಸೇವಂತಿಗೆ ಹಾಗೂ ಚಂಡು ಹೂವುಗಳಿಂದ ಅಲಂಕಾರ ಮಾಡಿದ ಹಾರಕ್ಕೆ 40 ರೂಪಾಯಿ ಹೇಳಲಾ ಗುತ್ತಿದೆ. 30ರಿಂದ 40 ರೂಪಾಯಿಗೆ 5 ಕಬ್ಬನ್ನು ನೀಡಲಾಗುತ್ತಿದೆ.ಮಂಗಳವಾರ ಲಕ್ಷ್ಮಿ ಪೂಜೆ ನಡೆಯಲಿರುವುದರಿಂದ ಸೋಮವಾರ ಮಾರುಕಟ್ಟೆಯಲ್ಲಿ ಕೈಕಾಲು ಹಾಕಲೂ ಜಾಗ ಇರುವುದಿಲ್ಲ. ಹೀಗಾಗಿ ಸಹಜ ವಾಗಿಯೇ ಈ ಸಂದರ್ಭದಲ್ಲಿ ಹೂವು- ಹಣ್ಣಿನ ಬೆಲೆಯನ್ನು ವ್ಯಾಪಾರಿಗಳು ಇನ್ನೂ ಹೆಚ್ಚಿಸುತ್ತಾರೆ.`ಬೆಲೆ ಏರಿಕೆಯಿಂದಾಗಿ ದೀಪಾವಳಿ ಹಬ್ಬದಲ್ಲಿ `ಹಣ್ಣು ಹುಳಿಯಾಗಿದೆ, ಹೂವು ಕಂಪನ್ನು ಸೂಸುತ್ತಿಲ್ಲ~ ಎಂದು ನಮ್ಮನ್ನು ನಾವು ಸಮಾಧಾನ ಪಡಿಸಿಕೊಳ್ಳುವಂತಾಗಿದೆ. ಹಬ್ಬಕ್ಕೆ ಸ್ವೀಟ್ಸ್ ಖರೀದಿಸಲು ಹೋದರೆ, ಅದರ ಬೆಲೆಯೂ ದುಬಾರಿ. ಹೀಗಾಗಿ ಸಿಹಿ ತಿನಿಸುಗಳು ಬಾಯಲ್ಲಿ ನೀರೂರಿಸುವುದರ ಬದಲು, ಕಹಿ ಅನುಭವವನ್ನೇ ನೀಡುತ್ತಿದೆ~ ಎನ್ನುತ್ತಾರೆ ಗೃಹಿಣಿ ಸ್ನೇಹಾ ಪಾಟೀಲ.ಲಾಲ್ ಡೈರಿ: ದೀಪಾವಳಿ ಹಬ್ಬ ಬಂತೆಂದರೆ `ಲಕ್ಷ್ಮಿ ಪುತ್ರ~ರಿಗೆ (ವ್ಯಾಪಾರಿ) ಹೊಸ ವರ್ಷ ಬಂದಂತೆ. ತಮ್ಮ ಇಷ್ಟ ದೇವಿ `ಲಕ್ಷ್ಮೀ~ ಪೂಜೆ ಮಾಡುವುದರೊಂದಿಗೆ ವರ್ಷದ ಹೊಸ ಲೆಕ್ಕವನ್ನು ಆರಂಭಿಸುತ್ತಾರೆ! ಇದಕ್ಕಾಗಿ ಲಕ್ಷ್ಮಿ ಭಾವಚಿತ್ರ ಇರುವ `ಲಾಲ್ ಡೈರಿ~ಯನ್ನು ಖರೀದಿಸಿ ಮುಂದಿನ ಒಂದು ವರ್ಷಗಳ ಅವಧಿಯ ವಹಿವಾಟಿನ ಲೆಕ್ಕವನ್ನು ಇದರಲ್ಲೇ ಬರೆದಿಡುತ್ತಾರೆ.ಭಾನುವಾರ ಗಣಪತಿ ಗಲ್ಲಿಯಲ್ಲಿ ಸಂಚರಿಸಿದಾಗ, ಬುಕ್ ಸ್ಟಾಲ್‌ಗಳ ಎದುರು ಹೊಸ `ಲಾಲ್ ಡೈರಿ~ ಖರೀದಿ ಸಲು `ಲಕ್ಷ್ಮಿ ಪುತ್ರ~ರು ಸಾಲುಗಟ್ಟಿ ನಿಂತಿರುವುದು ಕಂಡು ಬಂತು. ಕನಿಷ್ಠ ರೂ. 40ರಿಂದ ಸುಮಾರು 400 ರೂಪಾಯಿವರೆಗಿನ ಬೆಲೆಯ `ಲಾಲ್ ಡೈರಿ~ಗಳನ್ನು ವ್ಯಾಪಾರಿಗಳು ಖರೀದಿಸುತ್ತಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.