ಶುಕ್ರವಾರ, ನವೆಂಬರ್ 15, 2019
21 °C

ಕೈಗೆ ಬಂದ ತುತ್ತು ಬಾಯಿಗಿಲ್ಲ

Published:
Updated:

ಶಿವಮೊಗ್ಗ: ಜಿಲ್ಲೆಯ ಕೆ.ಎಸ್. ಈಶ್ವರಪ್ಪ ಉಪ ಮುಖ್ಯಮಂತ್ರಿಯಾಗಿದ್ದಾರೆ. ಸಂಭವನೀಯ ಹೊಸ ಸಚಿವರ ಪಟ್ಟಿಯಲ್ಲಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ.

ಕೊನೆ ಗಳಿಗೆಯ ಚಮತ್ಕಾರದಿಂದ ಅವಕಾಶ ತಪ್ಪಿದ ಬೇಳೂರು ಹತಾಶರಾಗಿದ್ದಾರೆ.ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಬೇಳೂರು ಅಭಿಮಾನಿಗಳಿಗೆ ಬೇಸರ ದುಪ್ಪಟ್ಟಾಗಿದೆ. ಆದರೆ, ಬೇಳೂರು ಮಾತ್ರ ಇದುವರೆಗೂ ಎಲ್ಲೂ ತಮ್ಮ ಅಸಮಾಧಾನವನ್ನು ಹೊರ ಹಾಕಿಲ್ಲ. ಅಭಿಮಾನಿಗಳೆಲ್ಲ ಬೆಂಗಳೂರಿನಲ್ಲಿ ಜಮಾಯಿಸಿದ್ದರಿಂದ ಪ್ರತಿರೋಧಕ್ಕೂ ಸಾಗರದಲ್ಲಿ ಜನ ಇಲ್ಲದಂತಾಗಿದೆ.ಅಪಸ್ವರ ಹೊರಡಿಸದಂತೆ ಪ್ರಮಾಣವಚನ ಸಮಾರಂಭಕ್ಕೂ ಮಂಚೆಯೇ ಬೇಳೂರು ಅವರನ್ನು ಬಿ.ಎಸ್. ಯಡಿಯೂರಪ್ಪ- ಕೆ.ಎಸ್. ಈಶ್ವರಪ್ಪ ಇಬ್ಬರೂ ಸೇರಿ ಸಮಾಧಾನಪಡಿಸಿದ್ದಾರೆಂಬ ಮಾತುಗಳೂ ಇವೆ.

ಬೇಳೂರು ಅವರ ಬದಲಿಗೆ ಜಾತಿ ಲೆಕ್ಕಾಚಾರದಲ್ಲಿ ಶಾಸಕ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಮಂತ್ರಿ ಮಾಡಲಾಗಿದೆ ಎಂದು ಬಿಜೆಪಿ ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಪೂಜಾರಿಗಳು ದಕ್ಷಿಣ ಕನ್ನಡದಲ್ಲೇ ಅಲ್ಪಸಂಖ್ಯಾತರು; ಶಿವಮೊಗ್ಗದಲ್ಲಿ ಅವರ ಸಂಖ್ಯೆ ತೀರಾ ಅತ್ಯಲ್ಪ ಎಂಬ ವಿಶ್ಲೇಷಣೆಗಳಿವೆ.ಜಿಲ್ಲೆಯಲ್ಲಿ ನಾವು ಬಹುಸಂಖ್ಯಾತರು; ಬಂಗಾರಪ್ಪ ಜತೆ ಬಿಜೆಪಿಗೆ ಬಂದವರಿಂದ ಹಿಡಿದು, ವಿಧಾನಸಭೆ, ವಿಧಾನ ಪರಿಷತ್, ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಹಾಗೂ ಅದಕ್ಕಿಂತಲೂ ಹೆಚ್ಚಾಗಿ ಲೋಕಸಭಾ ಚುನಾವಣೆಯಲ್ಲಿ ಇಡೀ ಸಮುದಾಯ ಬಿಜೆಪಿ ಪರವಾಗಿ ನಿಂತಿದೆ. ಆದರೂ, ಬಿಜೆಪಿ ಮಾತ್ರ ಸಮುದಾಯಕ್ಕೆ ಯಾವುದೇ ಸ್ಥಾನಮಾನ ನೀಡಿಲ್ಲ. ಈಗ ಮತ್ತೆ ಪುನರ್ ವರ್ತನೆಯಾಗಿದೆ ಎನ್ನುವುದು ಈಡಿಗ ಸಮುದಾಯದ ಮುಖಂಡರ ಅಸಮಾಧಾನ.ವಿಧಾನ ಪರಿಷತ್‌ಗೆ ಸಮುದಾಯದ ಯಾರನ್ನೂ ನೇಮಕ ಮಾಡಿಲ್ಲ; ನಿಗಮ-ಮಂಡಳಿಗೂ ಸಮುದಾಯದವರನ್ನೂ ಆಯ್ಕೆ ಮಾಡಿಲ್ಲ. ಕೊನೆ ಪಕ್ಷ ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸ್ಥಾನಗಳಿಗೂ ಯಾರನ್ನೂ ನಾಮಕಾರಣ ಮಾಡಿಲ್ಲ. ಜಿಲ್ಲೆಯಲ್ಲಿ ಇಡೀ ಸಮುದಾಯವನ್ನು ಬಳಸಿಕೊಂಡು ಈಗ ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಈ ಪಕ್ಷವನ್ನು ಬೆಂಬಲಿಸಬೇಕೆ ಎಂದು ಈಡಿಗರ ಸಮಾಜದ ಮುಖಂಡರು ಲೆಕ್ಕಾಚಾರ ಹಾಕುತ್ತಿದ್ದಾರೆ.ಬೇಳೂರು, ಸದ್ಯಕ್ಕೆ ತಣ್ಣಗಾಗಿರುವುದಕ್ಕೆ ಮೇಲ್ನೋಟಕ್ಕೆ ಅನೇಕ ಕಾರಣಗಳಿವೆ. ಸಾಗರ ತಾಲ್ಲೂಕು ಬಿಜೆಪಿಯಲ್ಲಿ ಈಗ ಎಲ್ಲವೂ ಸರಿ ಇಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಎಂಬ ಭಯ ಅವರನ್ನು ಈಗ ಕಾಡುತ್ತಿದೆ. ಹಾಗಾಗಿ, ಅವರೀಗ ಮೌನವ್ರತ ಕೈಗೊಂಡಿದ್ದಾರೆಂಬ ಮಾತುಗಳು ಅವರ ಆತ್ಮೀಯ ವಲಯದಲ್ಲಿ ಹರಿದಾಡುತ್ತಿದೆ.    ಜಿಲ್ಲೆಗೆ ಈಶ್ವರಪ್ಪ ಅವರೇ ಉಸ್ತುವಾರಿ ಸಚಿವರು ಎಂಬುದು ನಿಶ್ಚಿತ. ಜಿಲ್ಲೆಯ ಸಂಪೂರ್ಣ ಆಡಳಿತ ಅವರ ಹಿಡಿತಕ್ಕೆ ಬರುತ್ತದೆ. ಸ್ವತಃ ಮುಖ್ಯಮಂತ್ರಿಯೇ ಉಸ್ತುವಾರಿ ಸಚಿವರಾಗಿದ್ದ ಕಳೆದ 11 ತಿಂಗಳು ಜಿಲ್ಲೆಯ ಆಡಳಿತ ಸೂತ್ರ ಸಸೂತ್ರವಾಗಿರಲಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ.ಈಶ್ವರಪ್ಪ ಅವರ ಉಸ್ತುವಾರಿಯಲ್ಲಿ ಇನ್ನಾದರೂ ಅರ್ಧಕ್ಕೆ ನಿಂತ ಕಾಮಗಾರಿಗಳು, ಅನುದಾನ ಎದುರು ನೋಡುತ್ತಿರುವ ಯೋಜನೆಗಳು ಚಾಲನೆ ಪಡೆಯುತ್ತವೆಂದು ನಿರೀಕ್ಷಿಸಬಹುದೇ ಎಂದು ಜನ ಈಗ ಕೇಳಿಕೊಳ್ಳುತ್ತಿದ್ದಾರೆ.

ಪ್ರತಿಕ್ರಿಯಿಸಿ (+)