ಗುರುವಾರ , ಫೆಬ್ರವರಿ 25, 2021
24 °C

ಕೈಚೀಲದಲ್ಲಿ ವಿನ್ಯಾಸದ ಕೈ ಚಳಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈಚೀಲದಲ್ಲಿ ವಿನ್ಯಾಸದ ಕೈ ಚಳಕ

ಎಲ್ಲೇ ಹೋದರೂ ಕೈಯಲ್ಲೊಂದು ಪುಟ್ಟ ಬ್ಯಾಗ್ ಇಲ್ಲದೆ ಹೋಗುವವರು ಕಡಿಮೆ. ಅದರಲ್ಲೂ ಹುಡುಗಿಯರ ವಿಷಯದಲ್ಲಿ ಬ್ಯಾಗ್ ಎನ್ನುವುದು ಅವಶ್ಯಕತೆ ಎನ್ನುವುದಕ್ಕಿಂತ ಫ್ಯಾಷನ್ ಆಗಿ ಹೆಸರು ಗಳಿಸಿದ್ದೇ ಹೆಚ್ಚು.ಬಟ್ಟೆಯೊಂದಿಗೆ ಹೊಂದಿಕೊಳ್ಳುವ ವಿವಿಧ ಬಣ್ಣಗಳ, ಬೇರೆ ಶೈಲಿಯ, ಆದ್ಯತೆಗನುಸಾರ ಥರಾವರಿ ಬ್ಯಾಗ್‌ಗಳೇ ಬಂದವು. ಕಪ್ಪು ಬಿಳುಪು ಕಾಲದಿಂದ ಹಿಡಿದು ಇಂದಿಗೂ ಪ್ರಸ್ತುತವಿರುವ, ‘ಔಟ್‌ಡೇಟೆಡ್’ ಎನ್ನಿಸಿಕೊಳ್ಳದ ಫ್ಯಾಷನ್ ವಸ್ತು ಎಂದರೆ ಕೈ ಚೀಲ.ಬ್ಯಾಗ್‌ಗಳ ಈ ಮರ್ಮ ಅರಿತ ಬೆಂಗಳೂರಿನ ಕೃಷ್ಣಮೂರ್ತಿ ಅವರಿಗೆ ವಸ್ತ್ರ ವಿನ್ಯಾಸಕ್ಕಿಂತ ಹೆಚ್ಚು ಆಕರ್ಷಕವಾಗಿ ಕಂಡಿದ್ದು ಬ್ಯಾಗ್‌ಗಳ ವಿನ್ಯಾಸ. ಓದಿದ್ದೆಲ್ಲಾ ವಸ್ತ್ರ ವಿನ್ಯಾಸ ಕ್ಷೇತ್ರವಾದರೂ ಅವರಿಗೆ ಒಲಿದಿದ್ದು ಬ್ಯಾಗ್‌ ವಿನ್ಯಾಸವೇ.ಬ್ಯಾಗ್‌ಗಳ ವಿನ್ಯಾಸದಲ್ಲಿ ಈಗ ಸಾಕಷ್ಟು ಆಯ್ಕೆಗಳಿವೆ. ಆದರೆ ಆ ಆಯ್ಕೆಗಳನ್ನು ಮೀರಿ ತಮ್ಮದೇ ಗುರುತು ಉಳಿಸಿಕೊಳ್ಳುವ ಹಂಬಲ ಕೃಷ್ಣ ಅವರನ್ನು ಓರ್ವ ಕುಶಲಕರ್ಮಿಯಾಗಿ ರೂಪಿಸಿತು. ‘ಹ್ಯಾಂಡ್‌ಮೇಡ್‌’ ಬ್ಯಾಗ್‌ಗಳ ಬಗ್ಗೆ ಜನರಲ್ಲಿ ಹೆಚ್ಚು ಪ್ರೀತಿ ಇರುವುದನ್ನು ಅರಿತು ಯಾವುದೇ ಯಂತ್ರ ಬಳಸದೇ ಬ್ಯಾಗ್‌ಗಳ ವಿನ್ಯಾಸ– ಉತ್ಪಾದನೆ ಆರಂಭಿಸಿದರು.ಕಾಲೇಜಿನಿಂದಲೇ ಈ ಹವ್ಯಾಸ ಅವರ ಜೊತೆಗಿತ್ತು. ಸ್ನೇಹಿತರಿಗೆ ಥರಾವರಿ ಬ್ಯಾಗ್‌ಗಳನ್ನು ಮಾಡಿಕೊಡುತ್ತಿದ್ದ ಅವರು,  ಅದನ್ನೇ ಹಣದ ಮೂಲವಾಗಿಯೂ ಬದಲಾಯಿಸಿಕೊಂಡರು. ಇದಕ್ಕೆಂದೇ ತಮ್ಮದೇ ಸ್ಟುಡಿಯೊವನ್ನು 2007ರಲ್ಲಿ ಶುರುಮಾಡಿದರು. ತಮ್ಮ ಸಂಗ್ರಹಗಳಿಗೆ ‘ಕ್ರಿಸ್’ ಎಂದು ಹೆಸರಿಟ್ಟರು. ‘ವಿನ್ಯಾಸ ಸರಳವಾಗಿರಬೇಕು’ ಎಂಬ ಸಿದ್ಧಾಂತವೂ ಅವರ ಬ್ಯಾಗ್‌ಗಳಲ್ಲಿ ಎದ್ದು ಕಾಣುವಂತೆ ಮಾಡಿದ್ದಾರೆ.ಇವರ ಸ್ಟುಡಿಯೊ ವಿಶೇಷತೆ ಇರುವುದು, ಇಲ್ಲಿ ಕೆಲಸ ಮಾಡುವವರು ಸಂಪೂರ್ಣ ಮಹಿಳೆಯರು ಎನ್ನುವುದರಲ್ಲಿ. ವಸಂತಪುರದಲ್ಲಿನ ಕ್ರಿಸ್ ಸ್ಟುಡಿಯೊದಲ್ಲಿ ಮಹಿಳೆಯರಿಗೆ ಬ್ಯಾಗ್‌ ವಿನ್ಯಾಸದ ತರಬೇತಿ ನೀಡುತ್ತಿದ್ದಾರೆ. ಹತ್ತು ಮಹಿಳೆಯರು ಇಲ್ಲಿದ್ದಾರೆ. ಮಹಿಳೆಯರಿಗೆ ಆದ್ಯತೆ ಕೊಡಬೇಕು ಎಂಬ ಉದ್ದೇಶ ಇದರ ಹಿಂದೆ ಇದೆಯಂತೆ.‘ವಿನ್ಯಾಸ ಸರಳ ಹಾಗೂ ಶುದ್ಧವಾಗಿರಬೇಕು. ಬಣ್ಣ, ಗೆರೆ, ಪ್ರಕಾರ ಎಲ್ಲವೂ ಸರಳ. ಹ್ಯಾಂಡ್ ಬ್ಲಾಕ್ ಸಾಮಗ್ರಿಗಳನ್ನೇ ಬಳಸುತ್ತೇವೆ. ದಿನವೂ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಈ ಬ್ಯಾಗ್‌ಗಳನ್ನು ಅಧಿಕ ಮಟ್ಟದಲ್ಲಿ ತಯಾರಿಸುವುದಿಲ್ಲ.  ಗ್ರಾಹಕರ ಆದ್ಯತೆಗೆ ತಕ್ಕಂತೆ ಮಾಡಿಕೊಡುತ್ತೇವೆ. ನನ್ನ   ವೈಯಕ್ತಿಕ ಶೈಲಿಯನ್ನೇ ವಿನ್ಯಾಸಗಳೂ  ಪ್ರತಿಪಾದಿಸುತ್ತವೆ’ ಎಂದು ವಿವರಿಸಿದರು ಕೃಷ್ಣಮೂರ್ತಿ.ಬ್ಯಾಗ್‌ ಮಾತ್ರವಲ್ಲದೆ  ಪಾದರಕ್ಷೆ, ಬೆಲ್ಟ್, ನೆಕ್‌ವೇರ್‌ಗಳನ್ನು ತಯಾರಿಸುತ್ತಾರೆ. ಕುಶಲಕರ್ಮಿಗಳಿಂದ ತಯಾರಾಗುವ ಕಾರಣಕ್ಕೆ, ಜೊತೆಗೆ ಲೆದರ್ ಆಗಿರುವುದರಿಂದ ಇವುಗಳ ಬೆಲೆ ಎಲ್ಲ ಪ್ರಕಾರದ ಬ್ಯಾಗ್‌ಗಳಿಗಿಂತ ಸ್ವಲ್ಪ ಹೆಚ್ಚೇ ಇರುತ್ತದೆ. ಆರಂಭಿಕ ಬೆಲೆ ₹ 3000  ಆಗಿದೆ. ಇವರು ಬ್ಯಾಗ್‌ಗಳ ಪ್ರದರ್ಶನ ಮತ್ತು ಮಾರಾಟ  ಇದೇ ಆಗಸ್ಟ್ 6ರವರೆಗೆ ನಡೆಯಲಿದೆ.ಸ್ಥಳ: ಬಸವ ಅಂಬರ, 93, ಕನಕಪುರ ರಸ್ತೆ,  ನ್ಯೂ ಜೆನೆರೇಷನ್ ಸ್ಕೂಲ್ ಸಮೀಪ, ಕೃಷ್ಣ ರಾವ್ ಪಾರ್ಕ್, ಬಸವನಗುಡಿ. ಬೆಳಿಗ್ಗೆ 10.30 ರಿಂದ ಸಂಜೆ 7. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.