ಭಾನುವಾರ, ಮಾರ್ಚ್ 7, 2021
20 °C

ಕೈತೋಟ ಮಾಡುವವರಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈತೋಟ ಮಾಡುವವರಿಗೆ ಸಲಹೆ

‘ತೋಟಗಾರಿಕೆ ದೊಡ್ಡ ರೋಗವಿದ್ದಂತೆ. ಒಮ್ಮೆ ಅದರ ಸೋಂಕು ತಗುಲಿದರೆ ಸಾಕು, ಅದರಿಂದ ಪಾರಾಗಲು ಸಾಧ್ಯವೇ ಇಲ್ಲ’ ಎಂದಿದ್ದಾರೆ ಪ್ರಸಿದ್ಧ ತತ್ವಜ್ಞಾನಿ ಲೆವೀಸ್ ಗ್ಯಾನ್ನಿಟ್. ಇದು ನಿಜ. ಒಮ್ಮೆ ತೋಟಗಾರಿಕೆ ಹುಚ್ಚು ಹಿಡಿದರೆ ಅದರಿಂದ ಬಿಡಿಸಿಕೊಳ್ಳುವುದು ಕಷ್ಟ. ಅಂಥವರಿಗಾಗಿ ಒಂದಿಷ್ಟು ಟಿಪ್ಸ್‌ಗಳು ಇಲ್ಲಿವೆ.* ಕೈತೋಟ ಮಾಡಲು ಬಿಸಿಲು ಬೇಕು. ಆದ್ದರಿಂದ ತೋಟ ಮಾಡುವ ಜಾಗದಲ್ಲಿ ಬಿಸಿಲಿಗೆ ಅವಕಾಶ ಇದೆಯೇ ಎಂಬುದನ್ನು ನೋಡಿಕೊಳ್ಳಿ. ಆದ್ದರಿಂದ ಆ ಸ್ಥಳದ ಸಮೀಪ ಎತ್ತರಕ್ಕೆ ಬೆಳೆದ ಮರಗಳು, ಕಟ್ಟಡಗಳು ಇಲ್ಲವೆಂದು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಇದರ ನೆರಳು ಬಿದ್ದರೆ ಗಿಡಗಳ ಬೆಳವಣಿಗೆ ಸರಿಯಾಗಿ ಆಗದೇ ಇರಬಹುದು.* ಒಂದು ವೇಳೆ ತೋಟಕ್ಕೆ ಬೇಕಾಗುವಷ್ಟು ನೀರಿನ ಸೌಲಭ್ಯ ಇಲ್ಲದೇ ಹೋದರೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಿ. ಹೀಗೆ ಮಾಡಿದರೆ ನೀರಿನ ಉಳಿತಾಯವೂ ಆಗುತ್ತದೆ, ಗಿಡಗಳಿಗೂ ಸಾಕಷ್ಟು ನೀರು ಸಿಗುತ್ತದೆ.* ನೆಲದ ಇಳಿಜಾರು ಯಾವ ದಿಕ್ಕಿನಲ್ಲಿ ಇದೆ, ಅಲ್ಲಿರುವ ಮಣ್ಣಿನ ಗುಣ ಯಾವುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಏಕೆಂದರೆ ಇದಕ್ಕೆ ಅನುಗುಣವಾಗಿ ಆಯಾ ಮಣ್ಣಿಗೆ ಹೊಂದಿಕೊಳ್ಳುವ ಗಿಡಗಳನ್ನು ಬೆಳೆಯಬಹುದು.* ತೋಟದ ಜಾಗ ಸುಮಾರು 20/10 ಮೀಟರ್ ಅಳತೆಯದ್ದು ಇದ್ದರೆ ಅಲ್ಲಿ ಕಾಂಪೋಸ್ಟ್ ಗುಂಡಿ, ಬಹುವಾರ್ಷಿಕ ಗಿಡಗಳು, ನೀರಿನ ತಾಣ, ಹೂವು ಗಿಡಗಳು ಹಾಗೂ ಹುಲ್ಲುಹಾಸನ್ನು ಸೇರಿಸಬಹುದು.* ಹೊರಭಾಗದಲ್ಲಿ ಜಾಗ ಇಲ್ಲದಿದ್ದರೆ ಒಳಾಂಗಣ ತೋಟಗಾರಿಕೆಯನ್ನೂ ಮಾಡಬಹುದು. ಅಂದರೆ ಮನೆಯ ಒಳಗಡೆ ಗಿಡಗಳನ್ನು ಕುಂಡಗಳಲ್ಲಿ ಇಟ್ಟು ಬೆಳೆಸುವಂಥದ್ದು. ಅಂತಹ ಸಂದರ್ಭಗಳಲ್ಲಿ ಗಿಡಗಳಿಗೆ ಅಗತ್ಯ ಇರುವಷ್ಟು ಸೂರ್ಯನ ಬೆಳಕು ಸಿಗುವುದು ಕಷ್ಟ. ಆದ್ದರಿಂದ ಒಳಾಂಗಣ ತೋಟಗಾರಿಕೆಗೆಂದೇ ಇರುವ ಗಿಡಗಳನ್ನು (ಸೂರ್ಯನ ಬೆಳಕು ಹೆಚ್ಚು ಬೇಡದ ಗಿಡಗಳು) ನೆಡುವುದು ಸೂಕ್ತ.* ಯಾವುದೇ ಗಿಡ ಆಗಿದ್ದರೂ ಅದು ಸೂರ್ಯನ ಬೆಳಕಿನತ್ತ ವಾಲುತ್ತವೆ. ಆದ್ದರಿಂದ ಸ್ವಲ್ಪನಾದರೂ ಸೂರ್ಯನ ಬೆಳಕು ಬರುವ ಕಡೆಗೆ ಅದನ್ನು ತಿರುಗಿಸಿ ಇಡಬೇಕು. ವಾರಕ್ಕೊಮ್ಮೆ ಕುಂಡದ ದಿಕ್ಕನ್ನು ಬದಲಿಸುತ್ತಿರಬೇಕು. ಇದರಿಂದ ಎಲ್ಲ ಭಾಗಗಳಿಗೂ ಸರಿಯಾಗಿ ಸೂರ್ಯನ ಬೆಳಕು ಸಿಗುವುದು.* ಮನೆಯ ಒಳಭಾಗದಲ್ಲಿ ಕುಂಡಗಳಲ್ಲಿ ಗಿಡ ನೆಡುವ ಹಾಗಿದ್ದರೆ ಮಣ್ಣಿನ ಕುಂಡಗಳು ಉತ್ತಮ. ಒಂದು ವೇಳೆ ಕುಂಡದ ಹೊಟ್ಟೆಭಾಗ ಉಬ್ಬಿದ್ದರೆ ಅದರಲ್ಲಿನ ಗಿಡಗಳನ್ನು ಹೊರಕ್ಕೆ ತೆಗೆಯುವುದು ಕಷ್ಟ. ಹಾಗೆಯೇ ಕಂಠಭಾಗ ಬಲಿಷ್ಠವಿಲ್ಲದಿದ್ದರೆ ಅದನ್ನು ಎತ್ತುವಾಗ ಒಡೆದು ಹೋಗುವ ಸಾಧ್ಯತೆ ಇದೆ. ಆದ್ದರಿಂದ ಕುಂಡಗಳು ಚೆನ್ನಾಗಿ ಸುಟ್ಟಿವೆಯೋ ಇಲ್ಲವೋ ಎಂದು ತಿಳಿಯಲು ಎಡಗೈಯಲ್ಲಿ ಕುಂಡವನ್ನು ಮೇಲಕ್ಕೆತ್ತಿ ಹಿಡಿದು ಬಲಗೈ ಮಧ್ಯೆ ಬೆರಳ ಗಣಿಕೆಯಿಂದ ಅದರ ಮೇಲೆ ಬಡಿಯಬೇಕು. ಚೆನ್ನಾಗಿದ್ದರೆ ಲೋಹದ ಶಬ್ದ ಬರುತ್ತದೆ. ಬಳಸುವ ಮುಂಚೆ ಅವುಗಳನ್ನು ನೀರಿನಲ್ಲಿ ಸ್ವಲ್ಪ ಕಾಲ ಮುಳುಗಿಸಿ ಇಡಬೇಕು.* ಕುಂಡಗಳಿಗೆ ನೀರು ಹಾಕಿದರೆ ಅದು ಬಸಿದು ಹೋಗುತ್ತದೆ. ಹೀಗೆ ಆಗಬಾರದು ಎಂದರೆ ಕುಂಡದ ಕೆಳಭಾಗದಲ್ಲಿ ತಟ್ಟೆಯನ್ನಿಡಬೇಕು.* ವರ್ಷಕ್ಕೆ ಒಮ್ಮೆಯಾದರೂ ಕುಂಡಗಳಲ್ಲಿರುವ ಗಿಡಗಳನ್ನು ಹೊರಕ್ಕೆ ತೆಗೆಯಬೇಕು. ಹೀಗೆ ತೆಗೆದ ಗಿಡಗಳಲ್ಲಿನ ಅನಗತ್ಯ ಬೇರನ್ನು ಸವರಿ ಹೊಸ ಗೊಬ್ಬರ, ಮಣ್ಣು ಮಿಶ್ರಣ ತುಂಬಿ ಪುನಃ ನೆಡಬೇಕು.* ಎಲೆಗಳ ಮೇಲೆ ದೂಳು ಕುಳಿತು ಗಿಡದ ದೂಳು ಮಾಯವಾಗುವುದು. ಇಂತಹ ಸಂದರ್ಭದಲ್ಲಿ ನಿಧಾನವಾಗಿ ನೀರನ್ನು ಚಿಮುಕಿಸುತ್ತಿರಬೇಕು.* ಅಂಗಳದಲ್ಲಿ ಹುಲ್ಲು ಹಾಸು ಹಾಕಬೇಕೆಂದುಕೊಂಡಿದ್ದರೆ ಅದನ್ನು ಹಾಕುವ ಜಾಗವನ್ನು ಆಳವಾಗಿ ಅಗೆಯಿರಿ, ಹೆಂಟೆಗಳನ್ನು ಪುಡಿ ಮಾಡಿ, ಕೊಳೆ, ಬೇರು ಕಲ್ಲು ಇತ್ಯಾದಿಗಳನ್ನು ಆರಿಸಿ ತೆಗೆದು ಭೂಮಿ ಸಮ ಮಾಡಿಕೊಳ್ಳಿ. ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರ ಇಲ್ಲವೇ ಕುದುರೆ ಗೊಬ್ಬರ ಹರಡಿ. ತೆಳ್ಳಗೇ ನೀರು ಹಾಕಿದ್ದಲ್ಲಿ ಕಳೆಗಳ ಜೀಜ ಮೊಳೆಯುತ್ತವೆ. ಪುನಃ ಮತ್ತೊಮ್ಮೆ ಮಣ್ಣನ್ನು ಅಗೆದು ಅದರಲ್ಲಿ ಹುಲ್ಲಿನ ಬೀಜ ಬಿತ್ತಿ, ಮಣ್ಣಿನೊಳಗೆ ಸೇರಿಸಬೇಕು. ಹುಲ್ಲಿನ ಬೇರು ತುಂಡುಗಳನ್ನು ಮಣ್ಣಿನಲ್ಲಿ ಚುಚ್ಚಿ ಇಲ್ಲವೇ ತುಂಡುಗಳನ್ನು ಸೆಗಣಿ ಅಥವಾ ಕೆಮ್ಮಣ್ಣಿನ ಬಗ್ಗಡದಲ್ಲಿ ಮಿಶ್ರ ಮಾಡಿ ಹರಡಬೇಕು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.