ಕೈದಿಗಳ ಬಿಡುಗಡೆಗೆ ಮಾರ್ಗಸೂಚಿ

7

ಕೈದಿಗಳ ಬಿಡುಗಡೆಗೆ ಮಾರ್ಗಸೂಚಿ

Published:
Updated:

ಬೆಂಗಳೂರು: 14 ವರ್ಷ ಕಾರಾಗೃಹ ಶಿಕ್ಷೆ ಪೂರ್ಣಗೊಳಿಸಿದ ಕೈದಿಗಳನ್ನು ಬಿಡುಗಡೆ ಮಾಡುವ ಸಂಬಂಧ ಹೊಸ ಮಾರ್ಗಸೂಚಿ ರೂಪಿಸಲಾಗುತ್ತಿದೆ. ರಾಜ್ಯಪಾಲರಿಗೆ ಪಟ್ಟಿ ಕಳುಹಿಸಿ ಅಕ್ಟೋಬರ್ 2ರಂದು ಕೈದಿಗಳ ಬಿಡುಗಡೆಗೆ ಕ್ರಮಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಗುರುವಾರ ಇಲ್ಲಿ ತಿಳಿಸಿದರು.ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಎಲ್ಲ ಕಾರಾಗೃಹಗಳನ್ನು ಆಧುನೀಕರಣಗೊಳಿಸಲಾಗುವುದು. ನಗರದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಅದನ್ನು ವಿಸ್ತರಿಸಲಾಗುವುದು. ಇದಕ್ಕಾಗಿ 20 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.ಕಾರಾಗೃಹಗಳಲ್ಲಿ ಸ್ಕ್ಯಾನರ್, ಬಯೊಮೆಟ್ರಿಕ್, ಸಿಸಿಟಿವಿ ಅಳವಡಿಸಲಾಗುವುದು. ಕೇಂದ್ರ ಕಾರಾಗೃಹದಲ್ಲಿ 22 ಸಿಸಿಟಿವಿಗಳಿದ್ದು, ಐದು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದೆ ಇರುವುದು ಮನವರಿಕೆಯಾಗಿದೆ. ಈ ಲೋಪಗಳನ್ನು ಆದಷ್ಟು ಬೇಗ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.ಬೆಂಗಳೂರಿನಲ್ಲಿ ಮಂಜೂರಾದ ಪೊಲೀಸ್ ಹುದ್ದೆಗಳ ಸಂಖ್ಯೆ 12,700. ಈ ಪೈಕಿ 2.393 ಹುದ್ದೆಗಳು ಖಾಲಿ ಇವೆ. ಕೊರತೆ ನೀಗಿಸುವ ಉದ್ದೇಶದಿಂದ ತಾತ್ಕಾಲಿಕವಾಗಿ ಹೋಂಗಾಡ್ಸ್‌ಗಳ ಸೇವೆಯನ್ನು ಭದ್ರತಾ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು. ಅವರಿಗೆ ನಿತ್ಯ 300 ರೂಪಾಯಿ ಭತ್ಯೆ ನೀಡಲಾಗುವುದು ಎಂದು ತಿಳಿಸಿದರು.ಪೊಲೀಸ್ ಸಿಬ್ಬಂದಿಗೆ ಈ ವರ್ಷ ಹತ್ತು ಸಾವಿರ ಮನೆಗಳನ್ನು ನಿರ್ಮಿಸಲಾಗುವುದು. ಮುಂದಿನ ಐದು ವರ್ಷಗಳಲ್ಲಿ ಎಲ್ಲ ಪೊಲೀಸರಿಗೂ ವಸತಿ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry