ಕೈಯಲ್ಲಿ ಚೇಳು.. ಮುಖದಲ್ಲಿ ಮಂದಹಾಸ..

7

ಕೈಯಲ್ಲಿ ಚೇಳು.. ಮುಖದಲ್ಲಿ ಮಂದಹಾಸ..

Published:
Updated:
ಕೈಯಲ್ಲಿ ಚೇಳು.. ಮುಖದಲ್ಲಿ ಮಂದಹಾಸ..

ಯಾದಗಿರಿ: ಶ್ರಾವಣ ಮಾಸದ ಆಗಮನ ಆಗುತ್ತಿದ್ದಂತೆಯೇ ಬರುವ ಹಬ್ಬವೇ ನಾಗರ ಪಂಚಮಿ. ಹೆಣ್ಣು ಮಕ್ಕಳ ಹಬ್ಬವೆಂದೇ ಕರೆಯುವ ಈ ಹಬ್ಬದಲ್ಲಿ, ನಾಗಪ್ಪ ಆರಾಧನೆ ಮಾಡಲಾಗುತ್ತದೆ. ನಾಗಪ್ಪನ ಮೂರ್ತಿಗೆ, ಹುತ್ತಕ್ಕೆ ಹಾಲೆರೆದು ಮಹಿಳೆಯರೆಲ್ಲ ಸಂಭ್ರಮದ ಪಂಚಮಿ ಆಚರಿಸುತ್ತಾರೆ. ತಾಲ್ಲೂಕಿನ ಕಂದಕೂರಿನಲ್ಲಿ ಮಾತ್ರ ನಾಗರ ಪಂಚಮಿ ವಿಭಿನ್ನವಾಗಿದೆ.ಕಂದಕೂರಿನಲ್ಲಿ ನಾಗಪ್ಪನ ಬದಲು ಚೇಳುಗಳ ಆರಾಧನೆ ನಡೆಯುತ್ತದೆ. ಕಲ್ಲು ತೆಗೆದಲ್ಲೆಲ್ಲ ಚೇಳುಗಳು ಉದ್ಭವವಾಗುತ್ತವೆ. ಚೇಳುಗಳನ್ನು ಕೈಯಲ್ಲಿ ಹಿಡಿದು ಜನರು ನಲಿದಾಡುತ್ತಾರೆ. ಚೇಳುಗಳಿಗೆ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ. ಇಂತಹ ವಿಶಿಷ್ಟ ಆಚರಣೆ ದಶಕಗಳಿಂದಲೇ ನಡೆದುಕೊಂಡು ಬಂದಿದೆ. ಕಂದಕೂರಿನ ಗ್ರಾಮಸ್ಥರು, ಗುಡ್ಡದ ಮೇಲೆ ಹತ್ತಿ, ಚೇಳುಗಳನ್ನು ಹಿಡಿಯುತ್ತ ಬಂದಿದ್ದಾರೆ. ವಿಶೇಷವಾಗಿ ಪಂಚಮಿಯಂದು ಚೇಳುಗಳು ಕಚ್ಚುವುದಿಲ್ಲ ಎನ್ನುವ ಅಗಾಧ ನಂಬಿಕೆ ಇಲ್ಲಿನ ಜನರದ್ದು.ಗುರುವಾರ ನಾಗರ ಪಂಚಮಿಯಂದು ಕಂದಕೂರಿನ ಗುಡ್ಡದಲ್ಲಿ ಜನರ ಜಾತ್ರೆಯೇ ಸೇರಿತ್ತು. ವಿವಿಧೆಡೆಗಳಿಂದ ಆಗಮಿಸಿದ್ದ ಸಸ್ರಾರು ಭಕ್ತರು, ಎತ್ತರ ಗುಡ್ಡವನ್ನೇರಿ, ಕೊಂಡಮಾಯಿ ದೇವಿಯ ದರ್ಶನ ಪಡೆದರು. ಗುಡ್ಡದ ಸುತ್ತಲೂ ಮಕ್ಕಳು, ಯುವಕರು ದಂಡು ಏನನ್ನೋ ಹುಡುಕುತ್ತಿರುವುದು ಗೋಚರಿಸಿತು. ಏನೆಂದು ತಿಳಿಯಲು ಹೋದವರಿಗೆ ಅಚ್ಚರಿ. ಅಲ್ಲಿ ನೆಲದಲ್ಲಿನ ಕಲ್ಲುಗಳನ್ನು ಕಿತ್ತು ತೆಗೆಯಲಾಗುತ್ತಿತ್ತು. ಕಲ್ಲಿನ ಕೆಳಗೆ ಸಿಗುವ ಚೇಳುಗಳನ್ನು ಕೈಯಲ್ಲಿ ಹಿಡಿದು ಮಕ್ಕಳು ಕೇಕೆ ಹಾಕುತ್ತಿದ್ದುದನ್ನು ಕಂಡು ಎಂಥವರಿಗೂ ಅಚ್ಚರಿ.ಕಂದಕೂರಿನಲ್ಲಿ ಪ್ರತಿ ವರ್ಷ ನಾಗರ ಪಂಚಮಿಯಂದು ನಾಗಪ್ಪನ ಬದಲು ಚೇಳುಗಳ ಆರಾಧನೆ ನಡೆಯುತ್ತದೆ. ಕೊಂಡಮಾಯಿ ದೇವಿಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಪೂಜೆ ನಂತರ ಚೇಳುಗಳನ್ನು ಹಿಡಿದರೆ, ಯಾವುದೇ ತೊಂದರೆ ಆಗುವುದಿಲ್ಲ ಎಂಬುದು ಇಲ್ಲಿನ ಜನರ ನಂಬಿಕೆ. ಒಂದು ವೇಳೆ ಕಚ್ಚಿದರೂ, ಕೊಂಡಮಾಯಿ ದೇವಿ ಭಸ್ಮವನ್ನು ಹಚ್ಚಿದರೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಜನರು ಹೇಳುತ್ತಾರೆ.ಗುರುವಾರ ಕಂದಕೂರಿನ ಬೆಟ್ಟದಲ್ಲಿ ಸೇರಿದ ಅಪಾರ ಭಕ್ತಾದಿಗಳು, ಚೇಳುಗಳನ್ನು ಕೈಯಲ್ಲಿಯೇ ಹಿಡಿದು ಸಂಭ್ರಮಿಸುತ್ತಿದ್ದರು. ಪುಟ್ಟ ಬಾಲಕರಂತೂ ಆಟಿಕೆಗಳಂತೆ ಚೇಳುಗಳನ್ನು ಹಿಡಿದು, ಕೈ, ಮುಖ, ನಾಲಿಗೆಯ ಮೇಲೆ ಇಟ್ಟುಕೊಳ್ಳುತ್ತಿದ್ದರು. ಇದೆಲ್ಲವೂ ಒಂದು ವಿಸ್ಮಯದಂತೆ ಗೋಚರವಾಗುತ್ತಿತ್ತು.ಅಧ್ಯಯನಕ್ಕೆ ಬಂದವರಿಗೂ ಕಚ್ಚಿದ ಚೇಳು: ಕಂದಕೂರಿನ ವಿಶಿಷ್ಟ ಆಚರಣೆಯ ಬಗ್ಗೆ ಅಧ್ಯಯನ ನಡೆಸಲು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ನೇತೃತ್ವದ ತಂಡ ಗುರುವಾರ ಕಂದಕೂರಿಗೆ ಆಗಮಿಸಿತ್ತು.ಪ್ರಾಣಿಶಾಸ್ತ್ರ ವಿಭಾಗದ ಪ್ರೊ. ಕೆ. ವಿಜಯಕುಮಾರ, ಸಸ್ಯಶಾಸ್ತ್ರ ವಿಭಾಗದ ಜಿ.ಎಂ. ವಿದ್ಯಾಸಾಗರ, ಪರಿಸರ ವಿಜ್ಞಾನ ವಿಭಾಗದ ಪ್ರೊ. ಆರ್. ನಿಜಗುಣಪ್ಪ ಅವರನ್ನು ಒಳಗೊಂಡ ತಂಡ, ಬೆಟ್ಟವನ್ನು ಏರಿ, ಕುತೂಹಲದಿಂದ ಮಕ್ಕಳು ಚೇಳು ಹಿಡಿಯುವುದನ್ನು ವೀಕ್ಷಿಸಿತು.ಅಲ್ಲಿಯವರೆಗೂ ಎಲ್ಲವೂ ಸರಿಯಾಗಿಯೇ ಇತ್ತು. ಸುತ್ತಲೂ ಕೈಯಲ್ಲಿ ಚೇಳು ಹಿಡಿದ ಮಕ್ಕಳು, ಅಧ್ಯಯನ ಮಾಡಲು ಬಂದಿದ್ದವರಿಗೆ ತೋರಿಸುತ್ತಿದ್ದರು. ಅಷ್ಟರಲ್ಲಿಯೇ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಅವರ ಬಲಿಗೈಗೆ ಚೇಳೊಂದು ಕಚ್ಚಿಯೇ ಬಿಟ್ಟಿತು. ಕೂಡಲೇ ಅಲ್ಲಿದ್ದವರು. ಕೈಗೆ ಬಟ್ಟೆ ಸುತ್ತಿ, ಪುಟ್ಟಯ್ಯ ಅವರನ್ನು ಬೆಟ್ಟದಿಂದ ಕೆಳಕ್ಕೆ ಕರೆತಂದು ಚಿಕಿತ್ಸೆ ನೀಡಿದರು.ನಂತರ ಅವರು ಗುಲ್ಬರ್ಗಕ್ಕೆ ವಾಪಸಾದರು.ಹೆಚ್ಚಿನ ಅಧ್ಯಯನ ಅವಶ್ಯಕ: ಕಂದಕೂರಿನಲ್ಲಿ ಸಿಗುವ ಚೇಳುಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವುದು ಅತ್ಯವಶ್ಯಕವಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಪರಿಸರ ವಿಜ್ಞಾನ ವಿಭಾಗ ಮುಖ್ಯಸ್ಥ ಆರ್. ನಿಜಗುಣಪ್ಪ ಹೇಳಿದರು.ಗುರುವಾರ ಕಂದಕೂರಿಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಇಲ್ಲಿನ ಪರಿಸರ ಚೇಳುಗಳ ವಾಸ ಹಾಗೂ ಸಂತಾನೋತ್ಪತ್ತಿಗೆ ಹೇಳಿ ಮಾಡಿಸಿದಂತಿದೆ. ಈ ಬೆಟ್ಟದಲ್ಲಿರುವ ಕಲ್ಲು ಸವಕಳಿ ಆಗುತ್ತಿದ್ದು, ಮಣ್ಣು ಆಗುವ ಹಂತ ತಲುಪಿವೆ.ಇದರಿಂದಾಗಿ ಬೆಟ್ಟದಲ್ಲಿ ತೇವಾಂಶವೂ ಹೆಚ್ಚಾಗಿದೆ. ಇದು ಚೇಳುಗಳ ವಾಸಕ್ಕೆ ಅತ್ಯಂತ ಸೂಕ್ತ ವಾತಾವರಣ. ಹೀಗಾಗಿ ಇಲ್ಲಿ ಚೇಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಿವೆ ಎಂದರು.ಇನ್ನು ಚೇಳುಗಳು ಕಚ್ಚದೇ ಇರುವ ಕುರಿತು ಪ್ರತಿಕ್ರಿಯಿಸಿದ ಅವರು, ಇಲ್ಲಿ ಸಿಗುತ್ತಿರುವ ಚೇಳುಗಳು ಇನ್ನೂ ಪ್ರೌಢಾವಸ್ಥೆ ತಲುಪಿಲ್ಲ. ಈಗಷ್ಟೇ ಜನಿಸಿರುವ ಚೇಳುಗಳಲ್ಲಿ ಹೆಚ್ಚಿನ ಪ್ರಮಾಣ ವಿಷ ಇರಲಿಕ್ಕಿಲ್ಲ. ಹಾಗಾಗಿ ಇಲ್ಲಿ ಸಿಗುವ ಚೇಳುಗಳು ಕಚ್ಚಿದರೂ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು.ಚೇಳಿನ ಮರಿಗಳಲ್ಲಿ ಇರುವ ವಿಷದ ಪ್ರಮಾಣ ಹಾಗೂ ಪ್ರೌಢಾವಸ್ಥೆ ತಲುಪಿರುವ ಚೇಳುಗಳಲ್ಲಿ ಇರುವ ವಿಷದ ಪ್ರಮಾಣದ ಬಗ್ಗೆ ಅಧ್ಯಯನ ನಡೆಸಬೇಕಾಗಿದೆ.  ಇಲ್ಲಿ ಸಿಗುವ ಚೇಳುಗಳನ್ನು ಸಂಗ್ರಹಿಸಲಾಗಿದ್ದು, ವಿಶ್ವವಿದ್ಯಾಲಯದಲ್ಲಿ ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುತ್ತದೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry