ಕೈಲಾಸಂ ಕಲಿಸಿದ ಆಲ್ಜೀಬ್ರಾ

7

ಕೈಲಾಸಂ ಕಲಿಸಿದ ಆಲ್ಜೀಬ್ರಾ

Published:
Updated:
ಕೈಲಾಸಂ ಕಲಿಸಿದ ಆಲ್ಜೀಬ್ರಾ

ಹೇಳಿಕೊಡುವ ವಿಧಾನ ಸರಳವಾಗಿದ್ದರೆ ಗಣಿತ ಸುಲಭವಾಗಿ ತಲೆಗೆ ಹತ್ತುತ್ತದೆ. ಕೈಲಾಸಂ ಅವರ `ಅಮ್ಮಾವ್ರ ಗಂಡ' ನಾಟಕದಲ್ಲಿ ಕಮಲು ತನ್ನ ಮಗ ರಾಮುವಿನ ಉಡಾಫೆತನಕ್ಕೆ ಬೈಯುತ್ತಲ್ಲೇ ಬೀಜ ಗಣಿತವನ್ನು ಅವನ ತಲೆಗೆ ಹತ್ತಿಸುವ ವೈಖರಿ ಇಲ್ಲಿದೆ. ನೀವೂ ಪ್ರಯೋಗ ಮಾಡಿ ನೋಡಬಹುದು.ಟಿ.ಪಿ.ಕೈಲಾಸಂ ಅವರ ಪರಿಚಯ ಮಾಡಿಕೊಡಬೇಕಾಗಿಲ್ಲ. ದಿವಂಗತ ಬಿ.ಎಸ್.ರಾಮರಾಯರು ಅವರ ಬಲಗೈ ಆಗಿದ್ದವರು; ಎಲ್ಲವನ್ನೂ ಬರೆದಿಟ್ಟುಕೊಂಡವರು. ಬಹಳ ವರ್ಷಗಳ ಕಾಲ (ಅವರ ಗಂಟಲು ಕುಸಿಯುವವರೆಗೂ) ಎಲ್ಲ ಕಡೆಯೂ ಹೋಗಿ ಈ ನಾಟಕಗಳನ್ನು ಓದುವ ಪರಿಪಾಠ ಇಟ್ಟುಕೊಂಡಿದ್ದರು.

ಅವರ ಬಳಿ ಮೂಲ ನಾಟಕಗಳು ಇದ್ದವು; ಇವನ್ನು ಹೊಸ ಹೊದ್ದಿಗೆ ಹೊತ್ತು ಹೊರಬಂದಿರುವ `ಕೈಲಾಸಂ ಹೊತ್ತಿಗೆಗಳು' ಎಂದು 1968ರಲ್ಲಿ ಪ್ರಕಟಿಸಿದರು. (ಇದರಲ್ಲಿ ನೆಹರು ಅವರೊಡನೆ ಈ ನಾಟಕದ ತಂಡ ತೆಗೆಸಿಕೊಂಡ ಅಪರೂಪದ ಚಿತ್ರವಿದೆ).

`ಅಮ್ಮೋವ್ರ ಗಂಡ' ಪುಸ್ತಕದಲ್ಲಿ ಮೂಲತಃ ಇರಬೇಕಾಗಿದ್ದ ಅಂಕಗಳೆರಡು ಇಂದು ಲಭ್ಯವಿರುವ ಪ್ರತಿಗಳಲ್ಲಿ ಇಲ್ಲ. ಒಂದರಲ್ಲಿ ಯಜಮಾನ್ರ ಹೆಂಡ್ತಿ (ಕಮಲು) ಮಗನಿಗೆ ಪಾಠ ಹೇಳಿಕೊಡುವ ಸಂದರ್ಭವಿದೆ; ಇನ್ನೊಂದು ಅಂಕದಲ್ಲಿ ಅಮ್ಮೋವ್ರ (ಸರೋಜ) ತನ್ನ ಮಗು ತನ್ನನ್ನೇ ಗುರುತಿಸುತ್ತದೆಯೋ ಇಲ್ಲವೋ ಎಂದು ಪರಿತಾಪ ಪಡುವ ಚಿತ್ರಣ ಬಹಳ ಮಾರ್ಮಿಕವಾಗಿ ಮೂಡಿ ಬಂದಿದೆ.

ಹೀಗೆ ಪಾಠ ಹೇಳಿ ಕೊಡುವುದನ್ನು ಆ ನಾಟಕದಲ್ಲಿ ಮೊದಲ ಬಾರಿ ನಾನು ಓದಿದಾಗ ಅದೇನೆಂದು ನನಗೆ ಅರ್ಥವಾಗಲೇ ಇಲ್ಲ. ಆಮೇಲೊಂದು ದಿನ ನಿಧಾನವಾಗಿ ಓದಿ ಪಕ್ಕದಲ್ಲಿ ಸ್ಕೇಲು ಮತ್ತು ಪೆನ್ಸಿಲ್ ಇಟ್ಟುಕೊಂಡು ರಚಿಸುತ್ತಾ ಹೋದೆ. ಆಲ್ಜೀಬ್ರಾದ ಪ್ರೂಫ್ ಜಾಮಿಟ್ರಿಯಿಂದ ದೊರಕಿದ್ದನ್ನು ಕಂಡು ನನಗೆ ಬಹಳ ಆಶ್ಚರ್ಯವಾಯಿತು.

ಅದದೇ ವಾಕ್ಯಗಳು ಹೀಗಿವೆ:

ರಾಮು: ಇಕೋಮ್ಮೋ ಈಕ್ವೇಷನ್ನು ಅಂತ ಪ್ರೂವ್ ಮಾಡಬೇಕಮ್ಮೋ

ಕಮಲು: ಮಾಡು... ಏನು ಕಷ್ಟಾ?

ರಾಮು:ಅದೇನಮ್ಮೋ ನಾನಂದದ್ದು ಮೇಷ್ಟ್ರಿಗೇ ಬರ್ಲಿಲ್ಲಾಂತ

ಕಮಲು: ಮೇಷ್ಟ್ರ ಮಾತಿರಲಿ... ಎಲ್ಲಿ ಒಂದು ಲೈನು ಎಳಿ- ಒಂದು ತ್ರೀ ಇಂಚಸ್ ಲೆಂತು.. ಅದನ್ನ `ಅ' ಅನ್ನು. ಈಗ ಅದನ್ನ ಇನ್ನೊಂದು ಫೋರ್ ಇಂಚಸ್ ಎಕ್ಸ್‌ಟೆಂಡ್ ಮಾಡು. ಹಾ! ರೈಟ್... ಈವಾಗ ಆ `ಎ' ಮೇಲೆ, ಅಂದ್ರೆ ತ್ರೀ ಇಂಚಸ್ ಬೇಸ್...

ಒಂದು ಸ್ಕ್ವೇರ್ ಕನ್‌ಸ್ಟ್ರಕ್ಟ್ ಮಾಡು. ಎಲ್ಲೋ ಪ್ರೊಟ್ರ್ಯಾಕ್ಟರ‌್ರು ತೆಗಿಯೋ.

ಈಡಿಯಟ್, ಮೇಷ್ಟ್ರಿಗೇ ಬರೊಲ್ಲವಂತೆ. ಅವರು ಹೇಳಿಕೊಡುವಾಗ ಬಳಪದಾಟಾ ಆಡ್ತಿದ್ದೆಯೋ? ಇಲ್ಲಾ ನಾವೆಲ್ಲು ಓದ್ತಾ ಇದ್ದೆಯೋ. ಈಗ ಫೋರ್ ಇಂಚಸ್ ಬೇಸ್‌ನ `ಬಿ' ಅನ್ನು. ಅದರ ಮೇಲೆ ಇನ್ನೊಂದು ಸ್ಕ್ವೇರು. ಈವಾಗ ನೋಡು ತ್ರೀ ಇಂಚಸ್ ಲೈನ್ `ಎ' ಅದರ ಮೇಲಿನ ಸ್ಕ್ವೇರೂ???

ರಾಮು : ಎ ಸ್ಕ್ವೇರ್ಡ್‌

ಕಮಲು: ಗುಡ್, ಈಗ `ಬಿ' ಮೇಲಿನ ಸ್ಕ್ವೇರೂ?

ರಾಮು : `ಬಿ' ಸ್ಕ್ವೇರ‌್ಡು

ಕಮಲು: ಸರಿ, ನಿನಗೆ ಬೇಕಾದ್ದೇನು ಈವಾಗ?

ರಾಮು:  ಎ ಪ್ಲಸ್ ಬಿ ಹೋಲ್ ಸ್ಕ್ವೇರ‌್ಡು ಎಷ್ಟೂ ಅಂತ

ಕಮಲು: ಸರಿ ಎ ಪ್ಲಸ್ ಬಿ ಅಂದ್ರೆ ಎಷ್ಟು ? ಫೋರ್ ಪ್ಲಸ್ ತ್ರೀ ಈಕ್ವಲ್ಸ್?

ರಾಮು: ಫೋರ್ ಪ್ಲಸ್ ತ್ರೀ... ಸೆವೆನ್ ಇಂಚಸ್ಸೂ!

ಕಮಲು: ಸದ್ಯ, ನಾಲ್ಕು ಮೂರೂ ಏಳು ಅಂತಲಾದ್ರೂ ಗೊತ್ತಿದೆಯಲ್ಲಾ ಈ ಬೃಹಸ್ಪತೀಗೆ. ಈಗ ಎ ಪ್ಲಸ್ ಬಿ ಸ್ಕ್ವೇರ‌್ಡು ಅಂದ್ರೆ ಎಷ್ಟು ಸ್ಕ್ವೇರ‌್ಡು ಅಂತ?

ರಾಮು: ಅದೇನಮ್ಮೋ ಬೇಕಾಗಿರೋದು

ಕಮಲು: ಅದಕ್ಕೇನ್ಮಾಡ್ಬೇಕೀಗ? ಫಿಗರ್ ನೋಡಿ ಹೇಳೋ!

ರಾಮು: (ಮೆಲ್ಲನೆ) ಫೋರ್ ಪ್ಲಸ್ ತ್ರೀ . .. ಸೆವೆನ್ ಇಂಚಸ್ ಮೇಲೆ ಸ್ಕ್ವೇರ್ ಕನ್‌ಸ್ಟ್ರಕ್ಟ್ ಮಾಡ್ಬೇಕು

ಕಮಲು: ಮಾಡು ಅದನ್ನ.. (ರಾಮು ಮಾಡುವನು) ಈಗ ಆ ಹೊಸಾ ಸ್ಕ್ವೇರ್ ನೋಡು. ಏನೇನಿದೆ ಅದರಲ್ಲಿ?

ರಾಮು: ಎ ಸ್ಕ್ವೇರ್ಡ್‌ ಇದೆ, ಬಿ ಸ್ಕ್ವೇರ್ಡ್‌ ಇದೆ   

ಕಮಲು: ಅಷ್ಟೇನೋ?

ರಾಮು: ಓ ಎರಡು ರೆಕ್ಟಾಂಗಲ್ ಹೆಚ್ಚಾಗಿದೇಮ್ಮೋ

ಕಮಲು: ಈಗ ಅದರ ಏರಿಯಾ ಹೇಳು

ರಾಮು: ಎ ಇನ್ ಟು ಬಿ, ಬಿ ಇನ್ ಟು ಎ ಅಂದರೆ ಎಬಿ  ಬಿಎ

ಕಮಲು: ಅಂದರೇ?

ರಾಮು: ಅಂದರೇ ಟೂ ಎಬಿ

ಕಮಲು: ಈಗ ಹೇಳು ಫಿಗರ್ ನೋಡ್ತಾ ಬಾಯಲ್ಲಿ. ಎ ಪ್ಲಸ್ ಬಿ ಹೋಲ್ ಸ್ಕ್ವೇರ‌್ಡು..?

ರಾಮು: ಎ ಪ್ಲಸ್ ಬಿ ಹೋಲ್ ಸ್ಕ್ವೇರ‌್ಡು ಈಕ್ವಲ್ಸ್ ಎ ಸ್ಕ್ವೇರ‌್ಡು ಪ್ಲಸ್ ಬಿ ಸ್ಕ್ವೇರ‌್ಡು

ಕಮಲು: ಹೂಂ ಆಮೇಲೆ?

ರಾಮು: ಟೂ ಎಬೀ

ಕಮಲು: ಈಗ ಒಟ್ಟಿಗೇ ಸೇರ‌್ಸಿ ಹೇಳು ನೋಡೋಣ, ಫಿಗರ್ ನೋಡ್ಕೊಂಡು

ರಾಮು: (ನಿಧಾನವಾಗಿ ಫಿಗರ್ ಮೇಲೆ ಬೆರಳೋಡಿಸುತ್ತಾ) ಎ ಪ್ಲಸ್ ಬಿ ಹೋಲ್ ಸ್ಕ್ವೇರ‌್ಡು ಈಕ್ವಲ್ಸ್ ಎ ಸ್ಕ್ವೇರ‌್ಡು ಪ್ಲಸ್ ಬಿ ಸ್ಕ್ವೇರ‌್ಡು ಪ್ಲಸ್ ಟೂ ಎಬೀ ಅಯ್ಯಯ್ಯೋ ಬಂದೇ ಬಿಡ್ತಲ್ಲಾ, ಅಮ್ಮೋ ನೀನೇ ನಮ್ಮ ಸ್ಕೂಲಿಗೆ ಮೇಷ್ಟ್ರಾಗಿ ಬಂದು ಬಿಡಮ್ಮೋ!

ಕಮಲು : (ನಗುತ್ತಾ) ಹೌದು ಇಲ್ಲಿ ಅಡುಗೆ, ಮನೆ ಕೆಲ್ಸ ಎಲ್ಲ ಯಾರು ಮಾಡೋರು? ನಿಮ್ಮ ತಂದೇನೋ? ಅದಿರ್ಲೀ ನಿಮ್ಮ ಮೇಷ್ಟ್ರು ಹೀಗೆ ಹೇಳ್ಲಿಲ್ವೋ?

ರಾಮು: ಅವರೂ ಹೀಗೆ ಎರಡೂ ಮೂರೂ ಲೈನು ಎಳೀತಿದ್ರೂಮ್ಮೋ. ಇದೇನು ಇವರು ಆಲ್ಜೀಬ್ರಾಗೆ ಬ್ರಾಕೆಟ್ಸ್ ಹಾಕೋದು ಬಿಟ್ಟು ಸ್ಟ್ರೈಟ್ ಲೈನು ಎಳೀತಿದಾರೆ ಜಾಮಿಟ್ರೀಲಿ ಬಂದ್ಹಾಗೇಂತ ನಾವು ಅತ್ತ ಕಡೇ...

ಕಮಲು: ನೋಡಲೇ ಇಲ್ಲಾ ತಾನೇ? ಅದಕ್ಕೇ ಮೇಷ್ಟ್ರಿಗೇ ಪಾಠ ಹೇಳ್ಕೊಡಕ್ಕೆ ಬರಲ್ಲಾಂತ ಅನ್ನೋಷ್ಟು ಬಲಿತುಬಿಟ್ಟೆ ನೀನು. ಬಲಿ ಹಾಕ್ಬಿಡ್ತೇನ್ನೋಡೂ .. ಇನ್ನೊಂದ್ಸಲ ಕ್ಲಾಸ್ನಲ್ಲಿ ಇನ್ ಅಟೆಂಟಿವ್ ಆಗದೆ ಮೇಷ್ಟ್ರನ್ನ ಅಂದರೆ. ಮುಂದಕ್ಕೆ ಮಾಡು ನಿನ್ನ ಆಲ್ಜೀಬ್ರಾ ಪ್ಲಸ್ ಜಾಮಿಟ್ರೀನ. 

ಕಮಲು ರಾಮೂಗೆ ಇನ್ನು ಒಂದು ಸಲ ಬೈಯ್ಯುತ್ತಾಳೆ. ಅವನು ಮರುದಿನ ಕ್ಲಾಸ್ನಲ್ಲಿ ಮೇಷ್ಟ್ರನ್ನ ದಂಗುಬಡಿಸುವ ಪ್ಲಾನ್ ಹಾಕುತ್ತಾನೆ ಅದಕ್ಕೆ. ಈಗ ನಿನಗೆ ಅರ್ಥವಾಗಿದೆಯೋ ಇಲ್ಲವೋ, ನಾಳೆ ಕ್ಲಾಸಿನಲ್ಲಿ ಮಾಡಿ ತೋರಿಸು ಎನ್ನುತ್ತಾಳೆ.

ಕೈಲಾಸಂ ವಿವರಿಸಿರುವ ಈ ವಿಧಾನಕ್ಕೆ `ಡಿಸಕ್ಷನ್ ಪ್ರೂಫ್' ಎಂದು ಕರೆಯುತ್ತಾರೆ. ಬೇರೆ ಬೇರೆ ಪ್ರಮೇಯಗಳನ್ನು ಹೀಗೆ ಸಾಧಿಸಿ ತೋರಿಸಬಹುದು.

ಪೈಥಾಗೊರಸ್ ಪ್ರಮೇಯವನ್ನಂತೂ ಹಲವಾರು ಬಗೆಗಳಿಂದ ಸಾಧಿಸಿ ತೋರಿಸಬಹುದು. ಒಂದು ವಿಧಾನವನ್ನು 12ನೆಯ ಶತಮಾನದ ಭಾಸ್ಕರ ಕಂಡುಹಿಡಿದದ್ದು.

ಚಿತ್ರಗಳನ್ನು ರಚಿಸಿ ಕತ್ತರಿಸಿ ಪುನಃ ಜೋಡಿಸುತ್ತಾ ಹೋಗುವುದು ಬಹಳ ಆಸಕ್ತಿಪೂರ್ಣವಾಗಿರುತ್ತದೆ. ಚೌಕವನ್ನು ತ್ರಿಕೋಣವನ್ನಾಗಿ ಮಾಡುವುದು, ಪಂಚಕೋಣಾಕೃತಿಯನ್ನಾಗಿ ಮಾಡುವುದು- ಹೀಗೆ ಬೇಕಾದಷ್ಟು ಸವಾಲುಗಳಿವೆ.

ಇಂತಹ ಡಿಸೆಕ್ಷನ್ ಕುರಿತ ಪುಸ್ತಕವೊಂದಿದೆ. ಜೋ ಕಿಂಗ್‌ಸ್ಟನ್ ಮತ್ತು ಡೆಸ್ ಮೆಕ್ಹಲ್ ಎಂಬುವವರು ಬರೆದಿದ್ದಾರೆ.

ಅವರು ಆರಂಭದಲ್ಲಿ ಒಂದು ಎಚ್ಚರಿಕೆ ಕೊಟ್ಟಿದ್ದಾರೆ. ಅದೆಂದರೆ `ಈ ಪುಸ್ತಕ ಒಂದು ವ್ಯಸನವಾಗುವ ಸಾಧ್ಯತೆ ಇದೆ. ಕೆಲಸ ಕಾರ್ಯಕ್ಕೆ, ಮಾನಸಿಕ ಆರೋಗ್ಯಕ್ಕೆ, ಸೌಹಾರ್ದ ಕುಟುಂಬ ಜೀವನಕ್ಕೆ ಧಕ್ಕೆ ತರುವ ಸಾಧ್ಯತೆ ಇದೆ. ಇದನ್ನು ಓದಿದ ವ್ಯಕ್ತಿಗಳ ಸ್ವಭಾವದಲ್ಲಿ ಉಂಟಾಗುವ ಬದಲಾವಣೆಗಳಿಗೆ ಲೇಖಕರು ಜವಾಬ್ದಾರರಲ್ಲ!'

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry