ಬುಧವಾರ, ಮೇ 18, 2022
23 °C

ಕೈವಾರದಲ್ಲಿ ವೈಭವದ ಬ್ರಹ್ಮರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಪ್ರಸಿದ್ಧ ಯಾತ್ರಾಸ್ಥಳವಾದ ಕೈವಾರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಪಾಲ್ಗುಣ ಮಾಸದ ಹುಣ್ಣಿಮೆ ದಿನವಾದ ಶನಿವಾರ ಅಮರನಾರೇಯಣಸ್ವಾಮಿ ಬ್ರಹ್ಮ ರಥೋತ್ಸವ ವೈಭವದಿಂದ ಜರುಗಿತು.ಸುತ್ತಮುತ್ತಲ ಗ್ರಾಮಗಳ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಶ್ರದ್ಧಾಭಕ್ತಿಗಳಿಂದ ರಥವನ್ನು ಎಳೆದು ಭಕ್ತಿಗೆ ಪಾತ್ರರಾದರು. ಅಮರನಾರೇಯಣಸ್ವಾಮಿ ಉತ್ಸವ ವಿಗ್ರಹಗಳನ್ನು ಸಂಪ್ರದಾಯದಂತೆ ಮಂಗಳವಾದ್ಯಗಳ ಸಮೇತ ಮೆರವಣಿಗೆಯಲ್ಲಿ ತಂದು ವಿಶೇಷವಾಗಿ ಅಲಂಕರಿಸಿದ್ದ ರಥದಲ್ಲಿ ಕುಳ್ಳರಿಸಿ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಇದೇ ಸಂದರ್ಭದಲ್ಲಿ ಶ್ರೀಕೃಷ್ಣ ಗಂಧೋತ್ಸವವನ್ನು ಅರ್ಪಿಸಲಾಯಿತು ಭಕ್ತಾದಿಗಳು ಬಾಳೆಹಣ್ಣು ಮತ್ತು ದವನವನ್ನು ರಥದ ಮೇಲೆ ಎಸೆದು ಭಕ್ತಿ ಮೆರೆದರು. ಯತೀಂದ್ರರ ಮಠದಲ್ಲಿ, ವಾಸವಿ ಛತ್ರದಲ್ಲಿ, ಗವಿ ನರಸಿಂಹಸ್ವಾಮಿ ಬಳಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.ಯತೀಂದ್ರರ ಆಶ್ರಮ, ಭೀಮಲಿಂಗೇಶ್ವರಸ್ವಾಮಿ ದೇವಸ್ಥಾನ, ಗವಿನರಸಿಂಹಸ್ವಾಮಿ ದೇವಸ್ಥಾನ ಸೇರಿದಂತೆ ಗ್ರಾಮದ ಎಲ್ಲ ದೇವಾಲಯಗಳಲ್ಲೂ ವಿಶೇಷ ಅಲಂಕಾರ ಪೂಜೆ ವ್ಯವಸ್ಥೆ ಮಾಡಲಾಗಿತ್ತು.ರಾತ್ರಿ ಮದನಪಲ್ಲಿಯ ರಮಾದೇವಿ ಭಾಗವತಾರಿಣಿ ಅವರಿಂದ ಹರಿಕಥೆ ಮತ್ತು ಎ.ಎಲ್.ವೆಂಕಟೇಶ್ ತಂಡದವರಿಂದ ಬುರ್ರ ಕಥೆ, ಭಜನೆ. ಕೋಲಾಟ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ತಹಶೀಲ್ದಾರ್ ಕೃಷ್ಣಮೂರ್ತಿ, ಕಂದಾಯ ನಿರೀಕ್ಷಕ ಕರೆಣ್ಣನವರ್, ಗ್ರಾಮಾಂತರ ಠಾಣೆ ಸಬ್‌ಇನ್ಸ್‌ಪೆಕ್ಟರ್ ಸತೀಶ್, ಗ್ರಾ.ಪಂ.ಅಧ್ಯಕ್ಷ ನಾಗರಾಜ್, ಯತೀಂದ್ರರ ಆಶ್ರಮದ ಟ್ರಸ್ಟ್ ಪದಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಸ್ಥರು, ಮುಖಂಡರು ಭಾಗವಹಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.