ಶುಕ್ರವಾರ, ಏಪ್ರಿಲ್ 23, 2021
22 °C

ಕೈವಾರ: ಚತುರ್ವೇದ ಪಾರಾಯಣಕ್ಕೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಪುರಾಣ ಪ್ರಸಿದ್ಧ ಕೈವಾರ ಕ್ಷೇತ್ರದಲ್ಲಿ ನ.19 ರಿಂದ 23ರವರೆಗೆ ತಿರುಮಲ ತಿರುಪತಿ ದೇವಸ್ಥಾನದ ಸಹಯೋಗದೊಂದಿಗೆ ನಡೆಯಲಿರುವ ಚತುರ್ವೇದ ಪಾರಾಯಣ ಮತ್ತು ಯಜುರ್ವೇದ ಹೋಮ ಹವನಕ್ಕೆ ಭರದ ಸಿದ್ಧತೆಗಳು ನಡೆದಿವೆ.ಯೋಗನರಸಿಂಹಸ್ವಾಮಿ ಗವಿ ವೈಕುಂಠ ಯಾಗ ಶಾಲೆಯು ಸುಣ್ಣ ಬಣ್ಣಗಳಿಂದ, ನವ ವಧುವಿನಂತೆ ಹೋಮಕ್ಕೆ ಸಿದ್ಧವಾಗುತ್ತಿದೆ. ಕಾಲಜ್ಞಾನವನ್ನು ಕೊಡುಗೆಯಾಗಿ ನೀಡಿದ ಯೋಗಿನಾರೇಯಣ ಯತೀಂದ್ರರು ತಮ್ಮ ಸಿದ್ಧಿ ಸಾಧನೆಗಾಗಿ ಇಲ್ಲಿ ತಪಸ್ಸು ಮಾಡಿ ಸಿದ್ಧಿ ಪಡೆದರೆಂದು ಕ್ಷೇತ್ರದ ಇತಿಹಾಸದಿಂದ ತಿಳಿದು ಬರುತ್ತದೆ.ಸಾಧು ಸತ್ಪುರುಷರಿಗೆ ತಪಸ್ಸು, ಹೋಮ, ಯಾಗಗಳಿಗಾಗಿ ಯೋಗಿನಾರೇಯಣ ಮಠದ ಮಾಜಿ ಧರ್ಮಾಧಿಕಾರಿ ಎಂ.ಎಸ್.ರಾಮಯ್ಯ ಸಾಕ್ಷಾತ್ ವೈಕುಂಠದಂತೆ ಯಾಗಶಾಲೆಯನ್ನು ನಿರ್ಮಾಣ ಮಾಡಿದ್ದರು. ತಿರುಪತಿ ತಿರುಮಲ ದೇವಸ್ಥಾನದ ವತಿಯಿಂದ ನಡೆಯುತ್ತಿರುವ ಪಾರಾಯಣ ಮತ್ತು ಯಾಗಕ್ಕೆ ವೈಕುಂಠ ಸ್ಥಳವನ್ನು ಟಿಟಿಡಿ ಆಡಳಿತ ಮಂಡಳಿ ಆಯ್ಕೆ ಮಾಡಿದೆ. ಯಾಗಕ್ಕಾಗಿ ಸಕಲ ಸಿದ್ದತೆಗಳು ಭರದಿಂದ ನಡೆಯುತ್ತಿದ್ದು, ಯಾಗಶಾಲೆ ಮತ್ತು ಸುತ್ತ-ಮುತ್ತಲಿನ ಪ್ರಾಂಗಣವನ್ನು ಸುಣ್ಣ ಬಣ್ಣಗಳಿಂದ ಸಿಂಗರಿಸಲಾಗುತ್ತಿದೆ. ಈ ಬೃಹತ್ ಯಾಗದಲ್ಲಿ ತಿರುಮಲದ ಸುಮಾರು 60 ವೇದಪಂಡಿತರು ಭಾಗವಹಿಸಲಿದ್ದು, ಈ ಹೋಮವನ್ನು ಲೋಕ ಕಲ್ಯಾಣ ಮತ್ತು ವಿಶ್ವಶಾಂತಿಗಾಗಿ ಆಯೋಜಿಸಲಾಗಿದೆ. ಸಿದ್ದತೆಗಳ ಬಗ್ಗೆ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಮಾತನಾಡಿ, ಚತುರ್ವೇದ ಪಾರಾಯಣ ಮತ್ತು ಯಜುರ್ವೇದ ಯಾಗವನ್ನು ಭಾರತದಲ್ಲಿಯೇ ಮೊದಲ ಬಾರಿಗೆ ತಿರುಮಲ ತಿರುಪತಿ ದೇವಸ್ಥಾನದವರು ಕೈವಾರ ಕ್ಷೇತ್ರದಲ್ಲಿ ಏರ್ಪಡಿಸಿರುವುದು ಇದು ನಮ್ಮ ಭಾಗ್ಯ ಎಂದರು.ನ.19 ರಂದು ಸೋಮವಾರ ಬೆಳಿಗ್ಗೆ 9.30 ಕ್ಕೆ ವೇದಸ್ವಸ್ತಿ, ಮಹಾಗಣಪತಿ ಪೂಜೆ, ಮಂಟಪಾರಾಧನಾ, ವೇದಪುರುಷ ಆವಾಹನೆಯೊಂದಿಗೆ ಹವನ ಹೋಮಗಳು ಆರಂಭವಾಗುತ್ತದೆ. ಐದು ದಿನಗಳಕಾಲ ನಡೆಯುವ ಈ ಹೋಮ ಪ್ರತಿದಿನ ಸಂಜೆ 6 ಗಂಟೆವರೆಗೆ ನಡೆಯುತ್ತದೆ. 23.11.12 ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಪುರ್ಣಾಹುತಿಯೊಂದಿಗೆ ಮುಕ್ತಾಯವಾಗುತ್ತದೆ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.