ಕೈಹಿಡಿದ `ಬೈಫ್'

7

ಕೈಹಿಡಿದ `ಬೈಫ್'

Published:
Updated:

ಕೆಲ ವರ್ಷಗಳ ಹಿಂದಿನ ಮಾತು. ಉತ್ತರ ಕರ್ನಾಟಕದಲ್ಲಿ ಮುಂಗಾರು ಮುನಿದಿತ್ತು.  ಹುಬ್ಬಳ್ಳಿ ಸಮೀಪದ ಕಾಮಧೇನು-ಕಂಪ್ಲಿಕೊಪ್ಪ ಗ್ರಾಮದ ರೈತರು ಪರಿಹಾರಕ್ಕಾಗಿ ಜಿಲ್ಲಾಧಿಕಾರಿಯ ಮೊರೆ ಹೋಗಲು ತಯಾರಿ ನಡೆಸಿದ್ದರು. ಅವರ ಮಧ್ಯದಲ್ಲಿ ಕುಳಿತಿದ್ದ ನಾಗಪ್ಪ ಅದರಗುಂಚಿ ಅವರಿಗೆ ಮನವಿ ಪತ್ರಕ್ಕೆ ಸಹಿ ಹಾಕಲು ಮನಸ್ಸಾಗಲಿಲ್ಲ. ಬಿದ್ದ ಮಳೆಯನ್ನು ತನ್ನೊಡಲಲ್ಲಿ ಹಿಡಿದಿಟ್ಟುಕೊಂಡಿದ್ದ ಅವರ ಹೊಲಕ್ಕೆ ಬರಗಾಲದ ಬಿಸಿ ತಟ್ಟಿರಲಿಲ್ಲ. ಬೆಳೆ ತನ್ನ ಕೈಹಿಡಿದಿರುವಾಗ ಇತರರಂತೆ ತಾನೂ ಪರಿಹಾರ ಪಡೆಯುವುದು ಸರಿಯಲ್ಲ ಎಂಬುದು ಅವರ ಭಾವನೆ.ನಾಗಪ್ಪ ಅವರಿಗೆ ಬರಕ್ಕೇ ಸೆಡ್ಡು ಹೊಡೆಯುವ ಧೈರ್ಯ ನೀಡಿದ್ದು ಅವರು ರೂಢಿಸಿಕೊಂಡ `ಮರ ಆಧರಿತ ಸಮಗ್ರ ಕೃಷಿ'  ಕ್ರಮ. ತಮ್ಮ ಎರಡೂವರೆ ಎಕರೆ ಹೊಲದಲ್ಲಿ  ಅಗತ್ಯಕ್ಕನುಗುಣವಾಗಿ ಬೆಳೆ ಬೆಳೆದಿದ್ದಾರೆ. ಚಿಕ್ಕು, ಮಾವು ಇತ್ಯಾದಿ ಗಿಡಗಳ ನಡುವೆ ಜಾನುವಾರುಗಳಿಗೆ ಬೇಕಾದ ಮೇವಿನ ಹುಲ್ಲು ಬೆಳೆದಿದ್ದಾರೆ. ಬದುವಿನ ಸುತ್ತಲೂ ನೆಟ್ಟ 2 ಸಾವಿರಕ್ಕೂ ಅಧಿಕ ಕಾಡು ಗಿಡಗಳು ಇಂದು ಮುಗಿಲೆತ್ತರ ಬೆಳೆದು ನಿಂತಿವೆ.ಅವು ಹೊಲಕ್ಕೆ ಜೀವಂತ ಬೇಲಿಯೂ ಹೌದು, ಅಗತ್ಯ ಬಿದ್ದಾಗ ಹಣ ನೀಡುವ ಉಳಿತಾಯ ಖಾತೆ ಕೂಡಾ ಹೌದು. ಇವುಗಳ ನಡುವೆ ಜೋಳ, ಅಲಸಂದೆ, ಉದ್ದು, ಗುರೆಳ್ಳು ಮುಂತಾದ ಬೇಳೆಕಾಳುಗಳನ್ನು ಹಿಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ ಬೆಳೆಯುತ್ತಾರೆ. ಜಾಗ ಖಾಲಿ ಇದ್ದಲ್ಲಿ ತರಕಾರಿ ಗಿಡ, ಬಳ್ಳಿ ಹಬ್ಬಿಸುತ್ತಾರೆ. ಒಂದೇ ಬೆಳೆಯನ್ನು ನೆಚ್ಚಿಕೊಳ್ಳದೆ ವೈವಿಧ್ಯತೆಯತ್ತ ಒಲವು ತೋರಿದ್ದು ಬದುಕಿನ ಹಾದಿಯಲ್ಲಿ ಸ್ಥಿರತೆ ತಂದಿದೆ.ವ್ಯವಸಾಯದಲ್ಲಿ ರಾಸಾಯನಿಕಗಳ ಬಳಕೆಯನ್ನು ನಿಲ್ಲಿಸಿದ್ದು ಮಣ್ಣಿನ ಗುಣಮಟ್ಟ ಹಾಗೂ ಪರಿಸರದ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳುವಲ್ಲಿ ಅವರ ಪ್ರಮುಖ ಹೆಜ್ಜೆ. ಹಟ್ಟಿಗೊಬ್ಬರ, ಎರೆಗೊಬ್ಬರ ಉಂಡ ಭೂಮಿ ಫಲವತ್ತಾಗಿದೆ. ಸಾವಯವ ಕೃಷಿಯಲ್ಲಿ ನೀರಿನ ಬಳಕೆಯೂ ಕಡಿಮೆ. ಹೊಲದಲ್ಲೇ ಇರುವ ಮರಗಳು ನೀರನ್ನೂ ಹಿಡಿದಿಡುವುದರಿಂದ ಬಹುಕಾಲ ತೇವಾಂಶ ಉಳಿಯುತ್ತದೆ.ಮರ ಆಧರಿತ ಸಮಗ್ರ ಕೃಷಿ: `ಬೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆ'ಯ ಮಹತ್ವಾಕಾಂಕ್ಷೆಯ ಯೋಜನೆ ಇದು. ಹಳ್ಳಿಗರ ಸಹಭಾಗಿತ್ವದಲ್ಲಿ ಡಾ. ಪ್ರಕಾಶ್ ಭಟ್ ಅವರು ಇದಕ್ಕೆ ಚಾಲನೆ ನೀಡಿದ್ದಾರೆ. ಈ ಯೋಜನೆ ಕುರಿತು ರೈತರಿಗೆ ಮನದಟ್ಟು ಮಾಡುವುದು ಅವರಿಗೆ ಅಷ್ಟು ಸುಲಭ ಆಗಿರಲಿಲ್ಲ. ಆದರೂ ಪ್ರಯತ್ನ ಬಿಡದೇ ತಮ್ಮ ಪರಿಕಲ್ಪನೆಯನ್ನು ರೈತರ ಚಿಂತನೆಯನ್ನಾಗಿಸುವಲ್ಲಿ ಸಫಲರೂ ಆದರು. ಹೀಗೆ ಪ್ರಾರಂಭವಾದ ಭೂಮಿಗೆ ಹಸಿರುಡಿಸುವ ಸಂಕಲ್ಪ ಮಾಡುವ `ಹಸಿರು ಹಬ್ಬ' ಈಗ ಅಷ್ಟೂ ಊರುಗಳಲ್ಲಿ ಸಂಪ್ರದಾಯವಾಗಿ ಮುಂದುವರಿದಿದೆ.ಅಲ್ಲಿಂದೀಚೆಗೆ ಲಕ್ಷಾಂತರ ಮರಗಳು ಜೋಳದ ಹೊಲಗಳ ಮಧ್ಯೆ ಜಾಗ ಪಡೆದುಕೊಂಡಿವೆ.ಯೋಜನೆ ಮುಗಿದ ಹಲವು ವರ್ಷಗಳ ನಂತರವೂ ನಾಗಪ್ಪ ಅವರಂತಹ ಹಲವು ರೈತರು ಹತಾಶೆಯಲ್ಲಿರುವವರಿಗೆ ದೀವಟಿಗೆಯಾಗಿದ್ದಾರೆ. ಸಂಸ್ಥೆಯೊಂದು ಪರಿಚಯಿಸಿದ ವಿಧಾನಕ್ಕೆ ಇದೀಗ ರೈತರೇ ಒಡೆಯರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry