ಬುಧವಾರ, ಜೂಲೈ 8, 2020
26 °C

ಕೈ ಕುಲುಕಿದ ಮತದಾರ: ಜೆಡಿಎಸ್ ದೂಳೀಪಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯಾದ ನಂತರ ಪ್ರಥಮ ಬಾರಿಗೆ ನಡೆದ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯ ಮತದಾರರು ಕಾಂಗ್ರೆಸ್‌ನ ‘ಕೈ’ ಕುಲುಕಿದ್ದು, ಬಿಜೆಪಿ ಅಲ್ಪ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಜೆಡಿಎಸ್ ಸಂಪೂರ್ಣ ದೂಳೀಪಟವಾಗಿದ್ದು, ಖಾತೆ ತೆರೆಯುವಲ್ಲಿ ವಿಫಲವಾಗಿದೆ.ಜಿಲ್ಲಾ ಪಂಚಾಯಿತಿಯ 22 ಸ್ಥಾನಗಳ ಪೈಕಿ 15 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿ ಕೇವಲ ಏಳು ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. 20 ಸ್ಥಾನಗಳಿಗೆ ಸ್ಪರ್ಧಿಸಿದ್ದ ಜೆಡಿಎಸ್ ಸಂಪೂರ್ಣ ನೆಲಕಚ್ಚಿದೆ.ಯಾದಗಿರಿ ತಾಲ್ಲೂಕಿನ ಏಳು ಜಿ.ಪಂ. ಕ್ಷೇತ್ರಗಳಲ್ಲಿ 6 ಕಾಂಗ್ರೆಸ್ ಪಾಲಾಗಿದ್ದರೆ, ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಜಯಗಳಿಸಿದೆ. ಶಹಾಪುರ ತಾಲ್ಲೂಕಿನ ಏಳು ಜಿ.ಪಂ. ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದ್ದರೆ, ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿದೆ. ಸುರಪುರ ತಾಲ್ಲೂಕಿನ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದು, ಮೂರು ಸ್ಥಾನಗಳು ಬಿಜೆಪಿಗೆ ಒಲಿದಿವೆ.ಹತ್ತಿಕುಣಿ, ಪುಟ್‌ಪಾಕ್, ಕಂದಕೂರ, ಕೊಂಕಲ್, ಬಳಿಚಕ್ರ, ಸೈದಾಪುರ, ದೋರನಳ್ಳಿ, ಹಯ್ಯಾಳ ಬಿ, ಸಗರ, ಗೋಗಿ ಕೆ, ಖಾನಾಪುರ ಎಸ್.ಎಚ್, ಕಕ್ಕೇರಾ, ದೇವತಕಲ್, ಅರಕೇರಾ ಜೆ, ಕೆಂಭಾವಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ರಾಮಸಮುದ್ರ, ನಾಯ್ಕಲ್, ವಡಗೇರಾ, ಶಿರವಾಳ, ಕೊಡೇಕಲ್, ರಾಜನಕೊಳ್ಳೂರು, ಹುಣಸಗಿ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ವಿಜಯಮಾಲೆ ಧರಿಸಿದ್ದಾರೆ.ಜಿ.ಪಂ.ನ ಮಾಜಿ ಸದಸ್ಯರಿಬ್ಬರೂ ಸ್ಪರ್ಧಿಸಿದ್ದ ಕಂದಕೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿದ್ದು, ಮಾಜಿ ಸದಸ್ಯರಿಬ್ಬರೂ ಸೋಲು ಅನುಭವಿಸಿದ್ದಾರೆ. ಬಿ. ಫಾರ್ಮ್ ಹಂಚಿಕೆ ಗೊಂದಲದಿಂದಾಗಿ ಅಭ್ಯರ್ಥಿಗಳೇ ಇಲ್ಲದೇ ದೋರನಳ್ಳಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿದ್ದ ಬಿಜೆಪಿಗೆ ಮುಖಭಂಗವಾಗಿದೆ. ದೋರನಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರೆಮ್ಮ ಶಂಕ್ರಪ್ಪ ಜಯಗಳಿಸಿದ್ದಾರೆ. ಸುರಪುರದಲ್ಲಿ ಕೊಲೆಗೀಡಾದ ಆನಂದ ಸಾಹುಕಾರ ಪತ್ನಿ ಶರಣಮ್ಮ ಸಾಹುಕಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ದೇವತಕಲ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.ಎಲ್ಲರೂ ಹೊಸಬರೇ: ಜಿಲ್ಲಾ ಪಂಚಾಯಿತಿ 22 ಸ್ಥಾನಗಳಿಗೆ ಆಯ್ಕೆಯಾಗಿರುವ ಸದಸ್ಯರೆಲ್ಲರೂ ಹೊಸಬರಾಗಿರುವುದು ವಿಶೇಷವಾಗಿದೆ. ಹಾಲಿ ಸದಸ್ಯರಾದ ಖಂಡೆಪ್ಪ ದಾಸನ್ ಕಂದಕೂರ ಕ್ಷೇತ್ರದಲ್ಲಿ ಹಾಗೂ ಕಸ್ತೂರಿಬಾಯಿ ಬಡಿಗೇರ ದೋರನಳ್ಳಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ.ಮೀಸಲಾತಿಯಿಂದಾಗಿ ಬಹುತೇಕ ಹಾಲಿ ಸದಸ್ಯರಿಗೆ ಕ್ಷೇತ್ರಗಳೇ ಇಲ್ಲದಂತಾಗಿತ್ತು. ಇದರಿಂದಾಗಿ ಹೊಸ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವುದು ರಾಜಕೀಯ ಪಕ್ಷಗಳಿಗೆ ಅನಿವಾರ್ಯವಾಗಿತ್ತು. ಆದರೂ ಕಂದಕೂರ ಕ್ಷೇತ್ರದಿಂದ ಖಂಡೆಪ್ಪ ದಾಸನ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ದೋರನಳ್ಳಿ ಕ್ಷೇತ್ರದಲ್ಲಿ ಕಸ್ತೂರಿಬಾಯಿ ಬಡಿಗೇರ ಅವರು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿದ್ದರು. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದ್ದು, ಹೊಸ ಜಿಲ್ಲೆಯ ಜಿ.ಪಂ.ನಲ್ಲಿಯೂ ಎಲ್ಲರೂ ಹೊಸ ಸದಸ್ಯರೇ ಆಯ್ಕೆಯಾಗಿದ್ದಾರೆ.ಈ ಬಾರಿಯ ಮೀಸಲಾತಿಯಿಂದಾಗಿ ಜಿಲ್ಲೆಯ ಒಟ್ಟು 13 ಕ್ಷೇತ್ರಗಳು ಮಹಿಳೆಯರ ಪಾಲಾಗಿದ್ದು, 13 ಮಹಿಳಾ ಸದಸ್ಯರು ಜಿ.ಪಂ. ಪ್ರವೇಶಿಸಿದ್ದಾರೆ. ಜಿಲ್ಲೆಯಾದ್ಯಂತ ತೀವ್ರ ಕುತೂಹಲಕ್ಕೆ ಎಡೆಮಾಡಿದ್ದ ಜಿ.ಪಂ. ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ಗೆ ಬೆಂಬಲಿಸಿದ್ದು, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.ತಾ.ಪಂ.ನಲ್ಲೂ ಕಾಂಗ್ರೆಸ್ ಜಯಭೇರಿ: ಜಿಲ್ಲೆಯ ಮೂರೂ ತಾಲ್ಲೂಕು ಪಂಚಾಯಿತಿಗಳ ಪೈಕಿ ಎರಡು ತಾಲ್ಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದ್ದು, ಶಹಾಪುರ ತಾಲ್ಲೂಕು ಪಂಚಾಯಿತಿಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.ಯಾದಗಿರಿ ತಾಲ್ಲೂಕು ಪಂಚಾಯಿತಿಯ ಒಟ್ಟು 26 ಸ್ಥಾನಗಳ ಪೈಕಿ ಕಾಂಗ್ರೆಸ್ 15 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿ 10 ಸ್ಥಾನಗಳನ್ನು ಪಡೆದಿದ್ದು, ಜೆಡಿಎಸ್ ಒಂದು ಸ್ಥಾನ ಗಳಿಸಿದೆ.ಸುರಪುರ ತಾ.ಪಂ.ನ 30 ಸ್ಥಾನಗಳಲ್ಲಿ ಕಾಂಗ್ರೆಸ್ 18 ಸ್ಥಾನಗಳನ್ನು ಪಡೆಯುವ ಮೂಲಕ ನಿಚ್ಚಳ ಬಹುಮತ ಪಡೆದಿದೆ. ಬಿಜೆಪಿ 12 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಶಹಾಪುರ ತಾ.ಪಂ.ನ ಒಟ್ಟು 25 ಕ್ಷೇತ್ರಗಳಲ್ಲಿ ಕಾಂಗ್ರೆಸ್ 12 ಸ್ಥಾನಗಳಲ್ಲಿ ಜಯಗಳಿಸಿದ್ದು, ಬಿಜೆಪಿ 10, ಜೆಡಿಎಸ್ 2, ಒಬ್ಬ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಹೀಗಾಗಿ ಶಹಾಪುರ ತಾಲ್ಲೂಕು ಪಂಚಾಯಿತಿಯಲ್ಲಿ ಬಹುಮತ ಗಳಿಸಲು ಕಾಂಗ್ರೆಸ್‌ಗೆ ಒಬ್ಬ ಸದಸ್ಯರ ಕೊರತೆ ಕಾಡುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.