ಬುಧವಾರ, ನವೆಂಬರ್ 13, 2019
23 °C

`ಕೈ' ಟಿಕೆಟ್ ವಂಚಿತರು ಜೆಡಿಎಸ್‌ಗೆ

Published:
Updated:

ಬೆಂಗಳೂರು: ನಾಮಪತ್ರ ಸಲ್ಲಿಕೆ ಅವಧಿ ಅಂತ್ಯಗೊಂಡಿದ್ದರೂ ಕಾಂಗ್ರೆಸ್‌ನಲ್ಲಿ ಬಂಡಾಯ ಶಮನಗೊಂಡಿಲ್ಲ. ಕಾಪು ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಕೊನೆಯ ಕ್ಷಣದಲ್ಲಿ ಜೆಡಿಎಸ್‌ಗೆ ಜಿಗಿದು, ಆ ಪಕ್ಷದಿಂದ ಕಣಕ್ಕಿಳಿದಿದ್ದಾರೆ.ದಾವಣಗೆರೆ ಉತ್ತರ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳೆರಡರಲ್ಲೂ ಶಾಮನೂರು ಶಿವಶಂಕರಪ್ಪ ಮತ್ತು ಅವರ ಮಗ ಮಲ್ಲಿಕಾರ್ಜುನ್‌ಗೆ ಟಿಕೆಟ್ ದೊರೆತಿರುವುದು ಖಚಿತವಾಗುತ್ತಿದ್ದಂತೆ ಮತ್ತೊಬ್ಬ ಆಕಾಂಕ್ಷಿ ಸೈಯದ್ ಸೈಫುಲ್ಲಾ ಅವರಿಗೆ ಜೆಡಿಎಸ್ ಗಾಳ ಹಾಕಿ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ನೀಡಿದೆ. ಭದ್ರಾವತಿಯಲ್ಲಿ ಸಿ.ಎಂ.ಇಬ್ರಾಹಿಂ ವಿರುದ್ಧ ಹಾಲಿ ಶಾಸಕ ಬಿ.ಕೆ.ಸಂಗಮೇಶ್ವರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.ಕೆಜಿಎಫ್‌ನಲ್ಲಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಪುತ್ರಿ ರೂಪಕಲಾ ಅವರಿಗೆ ಟಿಕೆಟ್ ನಿರಾಕರಿಸಿದ್ದನ್ನು ವಿರೋಧಿಸಿ ಅವರ ಬೆಂಬಲಿಗರಾದ ಜೈಪಾಲ್, ಸಂಪತ್‌ಕುಮಾರ್, ಬಾಲಕೃಷ್ಣ ಮತ್ತು ಸುಬ್ರಮಣಿ ಪಕ್ಷೇತರರಾಗಿ ಅಖಾಡಕ್ಕೆ ಇಳಿದಿದ್ದಾರೆ. ಮುಳಬಾಗಿಲಲ್ಲಿ ಶಾಸಕ ಅಮರೇಶ್ ವಿರುದ್ಧ ಕೊತ್ತೂರು ಜಿ.ಮಂಜುನಾಥ್ ನಾಮಪತ್ರ ಸಲ್ಲಿಸಿದ್ದಾರೆ.

ಬೆಂಗಳೂರಿನ ಕೆ.ಆರ್.ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದ ಮಾಜಿ ಸಚಿವ ಎ.ಕೃಷ್ಣಪ್ಪ ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ರಾಮನಗರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲುಯತ್ನಿಸಿ ವಿಫಲರಾದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದು ಅಚ್ಚರಿ ಮೂಡಿಸಿದ್ದಾರೆ.ಅಂಬರೀಷ್ ಒತ್ತಡದಿಂದ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕಳೆದುಕೊಂಡ ಎ.ಎಸ್.ರವೀಂದ್ರ 2 ಕ್ಷೇತ್ರಗಳಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮಂಡ್ಯದಲ್ಲಿ ಅಂಬರೀಷ್ ಎದುರು ಮತ್ತು ಶ್ರೀರಂಗಪಟ್ಟಣದಲ್ಲಿ ಲಿಂಗರಾಜು ಎದುರು ಅಖಾಡಕ್ಕಿಳಿದಿದ್ದಾರೆ. ಹನೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಆರ್.ನರೇಂದ್ರ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಬಂಡೆದ್ದಿರುವ ಮತ್ತೊಬ್ಬ ಆಕಾಂಕ್ಷಿ  ಡಾ.ದತ್ತೇಶ್‌ಕುಮಾರ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ವಿರುದ್ಧ ಯಳುವನಹಳ್ಳಿ ಎನ್.ರಮೇಶ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಮೂಲಕ ಬಂಡಾಯ ಸಾರಿದ್ದಾರೆ.ಗೌರಿಬಿದನೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಶಿವಶಂಕರ ರೆಡ್ಡಿ ಅವರಿಗೆ ಟಿಕೆಟ್ ನೀಡಿರುವುದನ್ನು ಪ್ರತಿಭಟಿಸಿ ಎಚ್.ಆನಂದಕುಮಾರ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕುಣಿಗಲ್‌ನಲ್ಲಿ ಹಾಲಿ ಶಾಸಕ ಬಿ.ರಾಮಸ್ವಾಮಿಗೌಡರ ವಿರುದ್ಧ ಮತ್ತೊಬ್ಬ ಆಕಾಂಕ್ಷಿ ರವಿಕಿರಣ್ ಪಕ್ಷೇತರರಾಗಿ ಅಖಾಡಕ್ಕೆ ಧುಮುಕಿದ್ದಾರೆ. ರವಿಕಿರಣ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಸಿ.ಎಂ.ನಾಗರಾಜ್ ಪುತ್ರ.ಬೆಂಗಳೂರಿನ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರೊ.ಬಿ.ಕೆ.ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡಿರುವುದನ್ನು ಪಾಲಿಕೆ ಸದಸ್ಯ ಕೆ.ಚಂದ್ರಶೇಖರ್ ವಿರೋಧಿಸಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು. ಗಾಂಧಿನಗರ ಕ್ಷೇತ್ರದಲ್ಲಿ ಪಾಲಿಕೆ ಸದಸ್ಯ ಟಿ.ಮಲ್ಲೇಶ್, ರಾಜಾಜಿನಗರದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಜಿ.ಪದ್ಮಾವತಿ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸುಷ್ಮಾ ರಾಜಗೋಪಾಲ ರೆಡ್ಡಿ ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)