ಕೈ ಬಿರುಕು, ಕಮಲ ಪೆಟ್ಟು, ಸಿಪಿಎಂ ಹಿಡಿತ

7

ಕೈ ಬಿರುಕು, ಕಮಲ ಪೆಟ್ಟು, ಸಿಪಿಎಂ ಹಿಡಿತ

Published:
Updated:

ಚಿಕ್ಕಬಳ್ಳಾಪುರ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ ಸೀಮಿತವಾಗಬೇಕಿದ್ದ ಜಿಲ್ಲಾ ಪಂಚಾಯಿತಿ ಚುನಾವಣೆ ಈ ಬಾರಿ ಜಿಲ್ಲೆಯಲ್ಲಿ ರಾಜಕೀಯ ಕಲಹವನ್ನೇ ಹುಟ್ಟುಹಾಕಿದೆ. ಚುನಾವಣೆ ಸಂದರ್ಭದಲ್ಲಿ ಕಂಡು ಬಂದ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ವಿವಿಧ ರಾಜಕಿಯ ಪಕ್ಷಗಳು, ಚಟುವಟಿಕೆ ಮೇಲೆ ಬೀರಿರುವ ಪರಿಣಾಮಗಳು ಒಂದೆರಡಲ್ಲ.ಚಿಂತಾಮಣಿ ಮತ್ತು ಗೌರಿಬಿದನೂರು ಕ್ಷೇತ್ರಗಳ ಶಾಸಕರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪ ಒಂದೆಡೆ ಕೇಳಿ ಬಂದರೆ, ಮತ್ತೊಂದೆಡೆ ಕಾಂಗ್ರೆಸ್ ಇಬ್ಭಾಗವಾಗುವ ಲಕ್ಷಣಗಳು ಗೋಚರಿಸುತ್ತಿವೆ.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕಾಗಿ ಅತ್ತ ಏಕೈಕ ಬಿಜೆಪಿ ಸದಸ್ಯ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡುವಂತಹ ಪರಿಸ್ಥಿತಿ ನಿರ್ಮಾಣಗೊಂಡರೆ, ಇತ್ತ ಜಿಲ್ಲಾ ಪಂಚಾಯಿತಿಯಲ್ಲಿ ಎರಡು ಸ್ಥಾನ ಹೊಂದಿರುವ ಸಿಪಿಎಂ ನಿರ್ಣಾಯಕ ಪಾತ್ರ ನಿರ್ವಹಿಸಲು ಸಿದ್ಧತೆ ನಡೆಸಿದೆ. ಸಮಾನ ಮನಸ್ಕರೆಂದು ಗುರುತಿಸಿಕೊಂಡಿರುವ ಬಂಡಾಯ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಭವಿಷ್ಯದ ಹಿತದೃಷ್ಟಿಯಿಂದ ಕಾರ್ಯತಂತ್ರಗಳನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದ ಅ.4ರವರೆಗೆ ಯಾರಿಗೂ ಸಹ ಅಂತಿಮ ಹಂತದಲ್ಲಿ ಅನಿರೀಕ್ಷಿತ ಬದಲಾವಣೆಗಳು ನಡೆಯುತ್ತದೆ ಎಂಬುದು ಗೊತ್ತಿರಲಿಲ್ಲ.  ಅಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ 27 ಸದಸ್ಯರ ನಡುವೆ ದೀರ್ಘ ಕಾಲದವರೆಗೆ ಮುಚ್ಚುಮರೆಯಲ್ಲೇ ಮಾತುಕತೆ ನಡೆಯಿತು.14 ಸದಸ್ಯರು ಒಬ್ಬರ ಪರ ಮತ ಚಲಾಯಿಸಿದರೆ, 13 ಸದಸ್ಯರು ಇನ್ನೊಬ್ಬರ ಪರ ಮತ ಚಲಾಯಿಸಿದರು. ಅಧ್ಯಕ್ಷನಾಗುವ ಅವಕಾಶ ದೊರೆಯುವ ಸಾಧ್ಯತೆಯಿದ್ದ ಹಿನ್ನೆಲೆಯಲ್ಲಿ ಏಕೈಕ ಬಿಜೆಪಿ ಸದಸ್ಯ ಸಿ.ಆರ್.ನರಸಿಂಹಮೂರ್ತಿ ಪಕ್ಷಕ್ಕೆ ರಾಜೀನಾಮೆ ನೀಡಿ, ಪಕ್ಷೇತರರಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಸಿ.ಆರ್.ನರಸಿಂಹಮೂರ್ತಿ ಅಧ್ಯಕ್ಷ ಮತ್ತು ಬಂಡಾಯ ಕಾಂಗ್ರೆಸ್ ಸದಸ್ಯ ಎನ್.ಅಶ್ವತ್ಥಪ್ಪ ಉಪಾಧ್ಯಕ್ಷರಾದರು.ನಂತರ ನಡೆದ ಬೆಳವಣಿಗೆಯಲ್ಲಿ  ಶಾಸಕರಾದ ಡಾ.ಎಂ.ಸಿ.ಸುಧಾಕರ್, ಎನ್.ಎಚ್.ಶಿವಶಂಕರ ರೆಡ್ಡಿ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ನಡುವೆ ಬಿರುಕು ಮೂಡಿದ್ದಲ್ಲದೆ, ಜಿಲ್ಲೆಯಲ್ಲಿ ಪರ್ಯಾಯ ಕಾಂಗ್ರೆಸ್ ರೂಪುಗೊಳ್ಳುತ್ತಿರುವುದು ಕೂಡ ಬೆಳಕಿಗೆ ಬಂತು. ಬಿಜೆಪಿ ಸದಸ್ಯರೊಬ್ಬರನ್ನು ಅಧ್ಯಕ್ಷರನ್ನಾಗಿಸುವಲ್ಲಿ ಕೆಲ ಪಕ್ಷಗಳು ತತ್ವ, ಸಿದ್ಧಾಂತಗಳನ್ನೇ ಮರೆಮಾಚಿವೆ ಎಂಬ ಆರೋಪವೂ ಇದರೊಂದಿಗೆ ಕೇಳಿ ಬಂತು.`ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರ ಹಿನ್ನೆಲೆಯಲ್ಲೇ ನರಸಿಂಹಮೂರ್ತಿ ಪರ ಮತ ಚಲಾಯಿಸಿದ್ದೇವೆ. ಅವರು ರಾಜೀನಾಮೆ ನೀಡಿರುವುದನ್ನು ಒಂದು ವೇಳೆ ಬಹಿರಂಗಪಡಿಸದಿದ್ದಲ್ಲಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳುತ್ತೇವೆ. ಅವರಿಗೆ ಒಂದು ವಾರದ ಗಡುವು ನೀಡಿದ್ದೇವೆ~ ಎಂದು ಸಿಪಿಎಂನ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಸಾವಿತ್ರಮ್ಮ ಮತ್ತು ನಾರಾಯಣಮ್ಮ ಎಚ್ಚರಿಕೆ ನೀಡಿದ್ದರು.`ಸಿ.ಆರ್.ನರಸಿಂಹಮೂರ್ತಿ ಬಿಜೆಪಿಗೆ ರಾಜೀನಾಮೆ ನೀಡಿರುವುದು ಅಥವಾ ನೀಡದಿರುವುದು ಅಸ್ಪಷ್ಟತೆಯಿಂದ ಕೂಡಿದೆ. ಪಕ್ಷೇತರ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಾರಣ ನರಸಿಂಹಮೂರ್ತಿ ಬಿಜೆಪಿಯಷ್ಟೇ ಅಲ್ಲ, ಎಲ್ಲ ಪಕ್ಷಗಳಿಂದ ಸಮಾನ ದೂರ ಕಾಯ್ದುಕೊಳ್ಳಬೇಕು. ಪಕ್ಷವೊಂದರ ಅಧಿಕೃತ ಸದಸ್ಯರಾಗಿ ಯಾವುದೇ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವಂತಿಲ್ಲ.

 

ಒಟ್ಟಾರೆ ಈ ಬೆಳವಣಿಗೆಯಿಂದ ಬಿಜೆಪಿಗೆ ಪೆಟ್ಟು ಬಿದ್ದಿರುವುದು ನಿಶ್ಚಿತ. ಬಿಜೆಪಿಯು ಜಿಲ್ಲಾ ಪಂಚಾಯಿತಿಯಲ್ಲಿದ್ದ ತನ್ನ ಏಕೈಕ ಸದಸ್ಯನನ್ನು ಕಳೆದುಕೊಂಡಿದೆ. ಅಲ್ಲದೇ ಪಕ್ಷೇತರ ಅಧ್ಯಕ್ಷನನ್ನು ತಮ್ಮ ಪಕ್ಷದವರೆಂದು ಹೇಳಿಕೊಳ್ಳಲು ಸಹ ಕಷ್ಟವಾಗಲಿದೆ~ ಎಂದು ಮೂಲಗಳು ತಿಳಿಸಿವೆ.

`ಬಿಜೆಪಿಗೆ ರಾಜೀನಾಮೆ ನೀಡಿದ್ದು ಸತ್ಯ~

ಚಿಕ್ಕಬಳ್ಳಾಪುರ: `ನಾನು ಬಿಜೆಪಿಗೆ ರಾಜೀನಾಮೆ ನೀಡಿರುವುದು ಸತ್ಯ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿನಾರಾಯಣರೆಡ್ಡಿಯವರೇ ರಾಜೀನಾಮೆ ಪತ್ರ ಸ್ವೀಕರಿಸಿದ್ದಾರೆ. ರಾಜೀನಾಮೆ ಸಲ್ಲಿಸಿದ ನಂತರವಷ್ಟೇ ಪಕ್ಷೇತರನಾಗಿ ಅಧ್ಯಕ್ಷಸ್ಥಾನಕ್ಕೆ ನಾಮಪತ್ರ ಸಲ್ಲಿಸಿದೆ. ಬಂಡಾಯ ಕಾಂಗ್ರೆಸ್, ಜೆಡಿಎಸ್ ಮತ್ತು ಸಿಪಿಎಂ ಬೆಂಬಲದಿಂದ ಪಕ್ಷೇತರ ಅಧ್ಯಕ್ಷನಾಗಿ ಆಯ್ಕೆಯಾಗಿರುವ ನಾನು ಯಾರಿಗೂ ದ್ರೋಹವೆಸಗುವುದಿಲ್ಲ. ವಿಶ್ವಾಸದ್ರೋಹ ಮಾಡುವುದಿಲ್ಲ~ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಆರ್.ನರಸಿಂಹಮೂರ್ತಿ `ಪ್ರಜಾವಾಣಿ~ಗೆ ತಿಳಿಸಿದರು.`ಬಿಜೆಪಿಯು ನನಗೆ ನೀಡಿದ್ದ ಜವಾಬ್ದಾರಿಗಳಿಂದ ಮುಕ್ತಗೊಂಡಿದ್ದೇನೆ. ಪಕ್ಷದ ಪದಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಬಿಜೆಪಿ ಸಭೆ-ಸಮಾರಂಭಗಳಲ್ಲಿ ಯಾವುದೇ ಕಾರಣಕ್ಕೂ ಪಾಲ್ಗೊಳ್ಳುವುದಿಲ್ಲ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ತಾಂತ್ರಿಕ ಕಾರಣಗಳು ಅಡ್ಡಿಯಾಗುತ್ತವೆ. ಒಂದು ವೇಳೆ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದಲ್ಲಿ ನಾನು ಜಿಲ್ಲಾ ಪಂಚಾಯಿತಿ ಸದಸ್ಯತ್ವ ಕಳೆದುಕೊಳ್ಳಬೇಕಾಗುತ್ತದೆ. ಜಿಲ್ಲಾ ಪಂಚಾಯಿತಿ ಸದಸ್ಯರೆಲ್ಲ ಸಮಾನ ಮನಸ್ಕರಾಗಿ ನನ್ನ ಪರ ಮತ ಚಲಾಯಿಸಿದ್ದಾರೆ. ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ದ್ರೋಹ ಮಾಡುವುದಿಲ್ಲ~ ಎಂದು ಅವರು ತಿಳಿಸಿದರು.`ಜಿಲ್ಲಾ ಪಂಚಾಯಿತಿಯಲ್ಲಿ ರಾಜಕೀಯ ನಿರ್ಣಯಗಳನ್ನು ಕೈಗೊಳ್ಳಲು ಆಗುವುದಿಲ್ಲ. ಸರ್ಕಾರಿ ಯೋಜನೆ ಅನುಷ್ಠಾನಗೊಳಿಸುವುದು ಮತ್ತು ಅನುದಾನ ಸದ್ಬಳಕೆ ಮಾಡುವುದಷ್ಟೇ ನಮ್ಮ ಕೆಲಸ. ಹೀಗಿರುವಾಗ ರಾಜಕೀಯ ಹಸ್ತಕ್ಷೇಪ ಮತ್ತು ಓಲೈಕೆ ಮುಂತಾದ ಪ್ರಶ್ನೆಗಳೇ ಉದ್ಭವಿಸುವುದಿಲ್ಲ~ ಎಂದು ಅವರು ಹೇಳಿದರು.ಜಿಲ್ಲಾ ಪ್ರಗತಿ ರಂಗ ಅಸ್ತಿತ್ವಕ್ಕೆ?

ಚಿಕ್ಕಬಳ್ಳಾಪುರ: ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಬಂಡಾಯವೆದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸೇರಿಕೊಂಡು `ಜಿಲ್ಲಾ ಪ್ರಗತಿ ರಂಗ~ ಎಂಬ ರಾಜಕೀಯ ವೇದಿಕೆ ರಚಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಸಿಪಿಎಂನ ಇಬ್ಬರು ಸದಸ್ಯರು ವೇದಿಕೆಗೆ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.`ಜಿಲ್ಲಾ ಪಂಚಾಯಿತಿ 14 ಮಂದಿ ಸದಸ್ಯರು ಸಮಾನ ಮನಸ್ಕರೆಂದು ಗುರುತಿಸಿಕೊಂಡಿದ್ದು, ಪಕ್ಷೇತರ ಅಧ್ಯಕ್ಷರ ಪರ ಮತ ಚಲಾಯಿದ್ದಾರೆ. ಅದೇ ರೀತಿ ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ಸರ್ಕಾರದಿಂದ ಬರುವ ಅನುದಾನ ಮತ್ತು ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ `ಜಿಲ್ಲಾ ಪ್ರಗತಿ ರಂಗ~ ಅಸ್ತಿತ್ವಕ್ಕೆ ತರಲು ನಿರ್ಧರಿಸಿದ್ದಾರೆ. ಕೆಲವೇ ದಿನಗಳಲ್ಲಿ ಈ ರಂಗವು ರಚನೆಯಾಗಲಿದ್ದು, ಅಂತಿಮ ಸಿದ್ಧತೆಗಳು ಪೂರ್ಣಗೊಂಡಿವೆ~ ಎಂದು ಮೂಲಗಳು ಖಚಿತಪಡಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry