ಬುಧವಾರ, ಏಪ್ರಿಲ್ 14, 2021
31 °C

ಕೈ ಬೀಸಿ ಕರೆಯುತ್ತಿದೆ ಪುಷ್ಪಲೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: ಕೊಡಗು ಸದಾ ಹಸಿರಿನಿಂದ ಕಂಗೊಳಿಸುವ ಸುಂದರ ಬೆಡಗು. ಋತುಗಳ ರಾಜ ವಸಂತ ಕಾಲಿಡುತ್ತಿದ್ದಂತೆ ಈ ಬೆಡಗಿನ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಒಂದು ಕಡೆ ಕಾಫಿ ಹೂ ಅರಳಿ ಸುವಾಸನೆ ಬೀರಿದರೆ, ಮತ್ತೊಂದು ಕಡೆ ಮನೆಯಂಗಳದಲ್ಲಿರುವ ಹೂ ಆರಳಿ ಚೆಲುವಿನ ಚಿತ್ತಾರ ಬಿಡಿಸುತ್ತವೆ. ಈಗ ಕೊಡಗಿನಲ್ಲಿ ಕಣ್ಣುಹಾಯಿಸಿದ ಕಡೆಯಲ್ಲೆಲ್ಲ ಹೂಗಳದೆ ದರಬಾರು. ಕೊಡಗಿನ ಪರಿಸರ ಪುಷ್ಪಲೋಕದ ಬಣ್ಣದ ಲೋಕದಲ್ಲಿ ಮಿಂದೇಳುತ್ತಿದೆ. ಪೊನ್ನಂಪೇಟೆ ಪಕ್ಕದ ಆಲೆಮಾಡ ಶ್ರೀನಿವಾಸ್ ಅವರ ಪ್ರಶಾಂತವಾದ ಕಾಫಿ ತೋಟದ ನಡುವಿನ ಎಸ್ಟೇಟ್ ಬಂಗಲೆಯ ಅಂಗಳದಲ್ಲಿ ಅರಳಿರುವ ಹೂಗಳಿಗೆ ಲೆಕ್ಕವಿಲ್ಲ. ಇಲ್ಲಿ ಪುಷ್ಪಲೋಕದ ಎಲ್ಲ ಬಗೆಯ ಹೂಗಳಿವೆ. ಕ್ಯಾಕ್ಟಸ್, ಕ್ರೋಟಾನ್ಸ್, ಹಿಪೋಬಿಯಾ, ಬೋಗನ್‌ವಿಲ್ಲಾ, ಆರ್ಕಿಡ್, ಆ್ಯಸರ್ಗಸ್, ಆ್ಯಂಥೋರಿಯಂ, ಮೊಸಾಂಡ, ಬ್ರಹ್ಮಕಮಲ, ದಾಸವಾಳ, ಸೀತೆ ಹೂ ಜತೆಗೆ ಇನ್ನೂ ಹಲವು ಬಗೆಯ ಹೆಸರೇ ಗೊತ್ತಿಲ್ಲದ ಪುಷ್ಪಗಳಿವೆ. ವಿಶಾಲವಾದ ಮನೆ ಅಂಗಳದಲ್ಲಿ ಅರಳಿರುವ ಹೂಗಳು ಒಂದಕ್ಕಿಂತ ಒಂದು ಸುಂದರ. ಮನೆಯ ಅಂಗಳದ ತುಂಬ ಒಡತಿ ಲಲಿತಾ ಆಯಾ ಜಾತಿಯ ಹೂ ಕುಂಡಗಳನ್ನು ಒಂದೆ ಕಡೆಯಲ್ಲಿ  ಒಪ್ಪ ಓರಣವಾಗಿ ಜೋಡಿಸಿದ್ದಾರೆ. ಅಂಗಳದಲ್ಲಿರುವ ಬಾವಿ ಕಟ್ಟೆ ವಿವಿಧ ಹೂಕುಂಡಗಳಿಂದ ಅಲಂಕೃತಗೊಂಡಿದೆ. ಆ್ಯಂಥೋರಿಯಂ ಹೂರಾಶಿ ನೋಡುಗರ ಮನ ಸೆಳೆಯುತ್ತವೆ. ಮನೆಯ ಮೇಲೂ ಹೂ. ಮನೆಯ ಒಳಗೂ ಹೂ. ಹೊರಗು ಹೂ. ಮಣ್ಣಿನ ಕುಂಡ, ಗೊಬ್ಬರದ ಪ್ಲಾಸ್ಟಿಕ್ ಚೀಲ, ಹಳೆಯ ಪ್ಲಾಸ್ಟಿಕ್ ಕ್ಯಾನ್, ಹಳೆಯ ಬೇಸಿನ್, ಬಿದಿರಿನ ಪಟ್ಟಿ ಗಳೆಲ್ಲವೂ ಇಲ್ಲಿ ಹೂ ಕುಂಡಗಳು. ಅವುಗಳಿಗೆಲ್ಲ ಬಣ್ಣ ಬಳಿದು  ಸುಂದರವಾಗಿ ವಿನ್ಯಾಸ ಗೊಳಿಸಲಾಗಿದೆ.ಮತ್ತೊಂದು ಬದಿಯ ಪಾಟ್‌ಗಳಲ್ಲಿ ಬೆಳೆಸಿರುವ ಆಲ, ಗೋಣಿ, ಸಪೋಟ, ನೇರಳೆ ಮೊದಲಾದ ಬೋನ್‌ಸಾಯಿ ಮರಗಳು ವಿವಿಧ ಬಗೆಯ ಆಕಾರ ತಾಳಿ ಗಮನ ಸೆಳೆಯುತ್ತಿವೆ. ಇಲ್ಲಿರುವ ಕ್ಯಾಕ್ಟಸ್ ಲೋಕ ಸಸ್ಯಲೋಕಕ್ಕೆ ಬೆರಗು ಮೂಡಿಸುತ್ತದೆ. ವೈವಿಧ್ಯಮಯ ಕ್ಯಾಕ್ಟಸ್ ಕವಲೊಡೆದು ಸೌತೆ, ಕುಂಬಳ, ಹಾಗಲಕಾಯಿ, ಟೊಮ್ಯಾಟೊ, ಸೋರೆಕಾಯಿ, ಮೊಲ, ಬೆಕ್ಕು, ಜಿಂಕೆ, ಅಳಿಲು, ನರಿ, ತೋಳ ಮೊದಲಾದ ಪ್ರಾಣಿಗಳ ಆಕಾರಗಳಿಸಿವೆ. ಮತ್ತೆ ಕೆಲವು ಆನೆ ಸೊಂಡಿಲಿನ ರೂಪ ಹೊಂದಿವೆ. ಕೆಲವು ಕ್ಯಾಕ್ಟಸ್ ದುಂಡಾಗಿ ಮುಳ್ಳಿನಿಂದ ಕೂಡಿವೆ.

ಮರದ ಮೇಲೆ ಬೆಳೆಯುವ ಬಂದಲಿಕೆಗಳು ಕೂಡ ಇಲ್ಲಿ ಹೂವಾಗಿ ಅರಳಿವೆ. ಇರುವೆ ಗೂಡು, ಪಕ್ಷಿಗಳ ಗೂಡು, ಕಲ್ಲಿನ ಮೇಲಿನ ಹಾವಸೆ, ಪಾಚಿ ಮೊದಲಾದವೆಲ್ಲ ಲಲಿತಾ ಶ್ರೀನಿವಾಸ್ ಅವರ ಆರೈಕೆಯ ಪ್ರೀತಿಯಲ್ಲಿ ಮಿಂದಿವೆ. ಮನೆಯ ಮುಂದಿನ ಹೂ ಗಿಡಗಳಲ್ಲಿ ಪಿಕಳಾರ, ಗುಬ್ಬಚ್ಚಿ ಮೊದಲಾದವು ಗೂಡು ಕಟ್ಟಿ ಆಶ್ರಯ ಪಡೆದಿವೆ.ಇವುಗಳ ಜತೆಗೆ ನೂರಾರು ಬಗೆಯ ಆರ್ಕಿಡ್‌ಗಳು ಹೂಬಿಟ್ಟು ನಗುತ್ತಿವೆ. ಮನೆಯ ಮಹಡಿ ಹತ್ತಿದರೂ ಹೂಗಳ ಸಾಲೇ ಸಾಲು. ಯಾವಕಡೆ ನೋಡಿದರೂ ಹೂಗಳ ರಾಶಿ. ಹತ್ತಾರು ಬಗೆಯ ದಾಸವಾಳ ಮೊರದಗಲ ಅರಳಿವೆ.  ಇಂತಹ ಅಪರೂಪದ ಪುಷ್ಪಲೋಕ ದೇಶ ವಿದೇಶದ ಜನತೆಯನ್ನು ಕೈಬೀಸಿ ಕರೆಯುತ್ತಿದೆ. ಹೂಗಳ ರಾಶಿ ತಿಳಿದ ಜನತೆ ಲಲಿತಾ ಶ್ರೀನಿವಾಸ್ ಅವರ ಪುಷ್ಪಲೋಕದಲ್ಲಿ ಮಿಂದು ಆನಂದಿಸಿ ತೆರಳುತ್ತಾರೆ. ಲಲಿತಾ ಅವರ ಮನೆಯ ಒಳಾಂಗಣವೂ ವಿವಿಧ ಬಗೆಯ ಚಿತ್ತಾರಗಳಿಂದ ಕಂಗೊಳಿಸುತ್ತಿದೆ. ತೆಂಗಿನ ಚಿಪ್ಪು, ಒಣಗಿದ ಸಪೋಟ ಗಿಡದ ಎಲೆ, ಮರದ ಬೇರು ಮುಂತಾದ ವಸ್ತುಗಳು ಅವರ ಕಲಾಕುಂಚದಲ್ಲಿ ಸುಂದರ ರೂಪ ಪಡೆದಿವೆ. ಹೂ ಗಿಡ ಮತ್ತು ಹೆಚ್ಚಿನ ವಿವರಗಳಿಗೆ 98867 02101, 08274- 249033ರಲ್ಲಿ ಸಂಪರ್ಕಿಸಬಹುದು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.