ಕೈ ಬೀಸಿ ಕರೆಯುತ್ತಿವೆ ಬೋನ್ಸಾಯಿ ಗಿಡ

7

ಕೈ ಬೀಸಿ ಕರೆಯುತ್ತಿವೆ ಬೋನ್ಸಾಯಿ ಗಿಡ

Published:
Updated:

ಗೋಣಿಕೊಪ್ಪಲು: ಜನಸಂಖ್ಯೆ ಹೆಚ್ಚಳದಿಂದ ವರ್ಷದಿಂದ ವರ್ಷಕ್ಕೆ ಅರಣ್ಯ ಪ್ರದೇಶ  ಗಣನೀಯ ಪ್ರಮಾಣದಲ್ಲ ಕ್ಷೀಣಿಸುತ್ತಿದೆ.  ಆಕಾಶದೆತ್ತರಕ್ಕೆ ಬೆಳೆಯುತ್ತಿದ್ದ, ಆಲ, ಗೋಣಿ, ಅರಳಿ, ಶ್ರೀಗಂಧ ಮರಗಳು ಕಣ್ಣಿನಿಂದ ದೂರವಾಗಿವೆ.  ಪ್ರಾಣಿ. ಪಕ್ಷಿಗಳಿಗೆ ಆಸರೆ ನೀಡುತ್ತಿದ್ದ  ಹಾಗೂ ಪರಿಸರ ರಕ್ಷಿಸಿ  ಮನುಷ್ಯನಿಗೆ ನೆರಳು ನೀಡುತ್ತಿದ್ದ ಈ ಮರಗಳೆಲ್ಲ  ಮರೆಯಾಗಿವೆ.ಇಂತಹ ಮರಗಳನ್ನು  ಇಂದಿನ ಮಕ್ಕಳು ನೋಡಲು ಸಿಗುತ್ತಲೇ ಇಲ್ಲ. ಆದರೆ, ಪ್ರಕೃತಿ ಪ್ರಿಯರು ಈ ಎಲ್ಲ ಮರಗಳನ್ನು ತಮ್ಮ ಮನೆಯ  ಮೇಲ್ಚಾವಣಿ ಮತ್ತು  ಆವರಣದಲ್ಲಿ  ಬೋನ್ಸಾಯಿ ರೂಪದಲ್ಲಿ ಬೆಳೆಸಿ  ಸಂತಸ ಪಡುತ್ತಿದ್ದಾರೆ. ಪ್ರಕೃತಿ  ಪ್ರೇಮ ಮೆರೆಯುತ್ತಿದ್ದಾರೆ. ಅಂತಹ ಪ್ರಕೃತಿ ಪ್ರಿಯರಲ್ಲಿ ಗೋಣಿಕೊಪ್ಪಲಿನ ವಿ.ಟಿ. ಶ್ರೀನಿವಾಸ್‌ ಒಬ್ಬರು.ಸಂಗೀತ ಗಾಯಕರಾಗಿರುವ ಶ್ರೀನಿವಾಸ್‌  ತಮ್ಮ ಮನೆಯ ಮೇಲ್ಚಾವಣಿ ಮೇಲೆ ಹತ್ತಾರು ಜಾತಿಯ 180 ಬೋನ್ಸಾಯಿ ಗಿಡಗಳನ್ನು ಬೆಳೆಸಿದ್ದಾರೆ.  ಆಲ, ಅರಳಿ, ಹುಣಸೆ, ನೀಲಗಿರಿ, ಮಾವು. ಬೇವು, ಸ್ಪೆಥೋಡಿಯಾ, ಅಂಟುವಾಳ, ಕತ್ತಿಮರ,  ಛತ್ರಿಮರ, ನೇರಳೆ, ಸುರಗಿ, ನೆಲ್ಲಿ ಮುಂತಾದ ಬಗೆ ಬಗೆಯ ಗಿಡಗಳು  ಪ್ರಕೃತಿ ಪ್ರಿಯರನ್ನು ಕೈ ಬೀಸಿ ಕರೆಯುತ್ತಿವೆ.ಇವುಗಳ ಜತೆಗೆ  ಅಸ್ಸಾಂ, ಸಿಂಗಾಪುರ ಹಾಗೂ  ಸ್ಥಳೀಯ  ಜಾತಿಯ ಬಿದಿರು ಸೊಂಪಾಗಿ ಬೆಳೆದಿವೆ. ಕಳ್ಳಿಜಾತಿಯ ಕ್ಯಾಕ್ಟಸ್‌, ಪಾಪಸ್‌ ಕಳ್ಳಿ ಗಿಡಗಳು ಸುಂದರವಾಗಿ ಬೆಳೆದಿವೆ.  ಶ್ರೀನಿವಾಸ್‌ ಮನೆಯ ಮುಂಭಾಗದಲ್ಲಿ ಜಾಗವಿಲ್ಲ. ಮನೆಯ ಮೇಲ್ಚಾವಣಿ ಮೇಲೆ ವಿಶಾಲವಾದ ಆವರಣವಿದೆ. ಅಲ್ಲಿ ಸಣ್ಣಪುಟ್ಟ ಕುಂಡಗಳನ್ನು ಮಾಡಿ ಅವುಗಳಿಗೆ ಮಣ್ಣು ಗೊಬ್ಬರ ತುಂಬಿಸಿ   ಸುಂದರ ಅರಣ್ಯವನ್ನೇ ನಿರ್ಮಿಸಿದ್ದಾರೆ.ಆಕಾಶದೆತ್ತರಕ್ಕೆ ಬೆಳೆಯುವ ಬೃಹತ್‌ ಆಲದ ಮರ ಕುಂಡಿಕೆಯಲ್ ಸುತ್ತಿಕೊಂಡಿದೆ. ಅರಳಿ, ಗೋಣಿಮರಗಳು ಕೂಡ  ನೆಲದಲ್ಲಿಯೇ ನಗುತ್ತಿವೆ.  ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಬಂದು ನೋಡಿ  ಸಂತಸ ಪಡುತ್ತಿದ್ದಾರೆ.ಈಗಿನ ಮಕ್ಕಳಿಗೆ ಕಾಡಿನ ಮರಗಳ ಬಗ್ಗೆ ಅರಿವೇ ಇಲ್ಲ. ಇದ್ದರೂ ಹತ್ತಿರದಿಂದ ನೋಡಲಾಗುವುದಿಲ್ಲ. ಆದರೆ, ಬೋನ್ಸಾಯಿಯಲ್ಲಿ ತೀರ ಹತ್ತಿರದಿಂದ ನೋಡಬಹುದು.  ವಿವಿಧ ಜಾತಿಯ ಸಸ್ಯಗಳು ಅವುಗಳ  ಎಲೆ, ರೆಂಬೆ ಬೇರುಗಳನ್ನು ನೋಡಿ ತಿಳಿದುಕೊಳ್ಳುವುದಕ್ಕೆ ಸಹಕಾರಿಯಾಗುತ್ತಿದೆ.ಈಚೆಗೆ  ಇಲ್ಲಿನ ಅನುದಾನಿತ ಪ್ರೌಢಶಾಲೆಯ 31 ವಿದ್ಯಾರ್ಥಿಗಳು  ವಿಜ್ಞಾನ ಶಿಕ್ಷಕ ಡಿ.ಕೃಷ್ಣ ಚೈತನ್ಯ ಅವರ ಮಾರ್ಗದರ್ಶನದಲ್ಲಿ  ತೆರಳಿ  ಒಂದರಿಂದ ಎರಡು ಅಡಿಗಳಷ್ಟೇ ಎತ್ತರಕ್ಕೆ ಬೆಳೆದಿರುವ ಬೋನ್ಸಾಯಿ ಗಿಡಗಳನ್ನು ನೋಡಿ ಅಚ್ಚರಿ ಪಟ್ಟರು.   ಅವುಗಳನ್ನು ಬೆಳೆಸುವ ವಿಧಾನದ ಬಗ್ಗೆ  ತಿಳಿದುಕೊಂಡರು.ಮನಸಿಗೆ ಸಂತೋಷ

ಪ್ರತಿದಿನ ಒಂದು ಗಂಟೆ ಅವಧಿಯನ್ನು ಇವುಗಳ ಆರೈಕೆಗೆ ಮೀಸಲಿಡುತ್ತೇನೆ.   ದಿನಕ್ಕೆ ಒಂದು ಬಾರಿ ಬೆಳಗಿನ ವೇಳೆ ನೀರು ಹಾಕಲಾಗುತ್ತದೆ. ವರ್ಷಕ್ಕೆ ಒಂದು  ಸಲ ಮಣ್ಣು ಬದಲಾಯಿಸಿ ಕೊಟ್ಟಿಗೆ ಗೊಬ್ಬರ, ಮರಳು ಹಾಗೂ ಮಣ್ಣು ಮಿಶ್ರಣಮಾಡಿ ಹಾಕಲಾಗುತ್ತದೆ.   ಹೊರಗೆ ಹೆಚ್ಚು ಜಾಗವಿಲ್ಲದ್ದರಿಂದ  ಬೋನ್ಸಾಯಿ  ಗಿಡಗಳ ಬೆಳೆಸಲು ಮನಸು ಮಾಡಲಾಯಿತು. ಈ ಮರಗಳನ್ನು ವಿದ್ಯಾರ್ಥಿಗಳು ಹೊರಗೆ ನೋಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ  ಅವರಿಗೆ ಗಿಡಮರಗಳ ಬಗ್ಗೆ ಅರಿವು ಮೂಡಿಸುವುದಕ್ಕಾಗಿ   ಈ ಕಾರ್ಯಕ್ಕೆ ಕೈಹಾಕಲಾಗಿದೆ.  ಇದರಿಂದ ಮನಸಿಗೆ ನೆಮ್ಮದಿ ಸಂತೋಷ ಲಭಿಸುತ್ತಿದೆ ಎಂದರು.

-– ವಿ.ಟಿ. ಶ್ರೀನಿವಾಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry