ಕೊಂಕಣಿ ಅಭಿವೃದ್ಧಿಗೆ ಸಹಕರಿಸುವೆ: ಸಂಸದ ಅಂಗಡಿ

ಶನಿವಾರ, ಜೂಲೈ 20, 2019
24 °C

ಕೊಂಕಣಿ ಅಭಿವೃದ್ಧಿಗೆ ಸಹಕರಿಸುವೆ: ಸಂಸದ ಅಂಗಡಿ

Published:
Updated:

ಬೆಳಗಾವಿ: ಶ್ರೀಮಂತ ಹಿನ್ನೆಲೆ ಹೊಂದಿರುವ ಕೊಂಕಣಿ ಭಾಷೆ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಪೂರಕ ನೆರವು ದೊರಕಿಸಿಕೊಡಲು ಶ್ರಮಿಸುವುದಾಗಿ ಸಂಸದ ಸುರೇಶ ಅಂಗಡಿ ಭರವಸೆ ನೀಡಿದರು.ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಭಾರತೀಯ ಕೊಂಕಣಿ ಪರಿಷತ್ತಿನ 74ನೇ ಸಂಸ್ಥಾಪನಾ ದಿನದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಶ್ರೀಮಂತ ಹಿನ್ನೆಲೆ ಹೊಂದಿರುವ ಕೊಂಕಣಿ ಭಾಷೆಗೆ ಈಗಾಗಲೇ ಸಾಕಷ್ಟು ಸ್ಥಾನಮಾನ ಸಿಕ್ಕಿದೆ. ಕೊಂಕಣಿ ಭಾಷಿಕರು ಕಠಿಣ ದುಡಿಮೆಗೆ ಹೆಸರಾಗಿದ್ದಾರೆ. ಬೆಳಗಾವಿಯು ಒಂದು ರೀತಿಯಲ್ಲಿ `ಕೋಕಮ್~ ಇದ್ದಂತೆ. ಇಲ್ಲಿ ಕೊಂಕಣಿ, ಕನ್ನಡ ಹಾಗೂ ಮರಾಠಿ ಭಾಷಿಕರು ಇದ್ದಾರೆ” ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಅರವಿಂದ ಭಾಟೀಕರ, “ಭಾರತದಲ್ಲಿ ಕೇವಲ 20 ಲಕ್ಷ ಜನ ಮಾತನಾಡುವ ಕೊಂಕಣಿಯು ಮಾನ್ಯತೆ ಪಡೆದ 22 ಭಾಷೆಗಳಲ್ಲಿ ಒಂದಾಗಿರುವುದೇ ಅದರ ಸಾಮರ್ಥ್ಯವನ್ನು ಸಾರುತ್ತದೆ. ದೇಶದಲ್ಲಿ 72 ಲಕ್ಷ ಇಂಡೋ ಆರ್ಯನ್ ಭಾಷೆ ಮಾತನಾಡುವವರಿದ್ದಾರೆ. ಜೊತೆಗೆ ದ್ರಾವಿಡ ಭಾಷೆಯನ್ನು ಮಾತನಾಡುತ್ತಿದ್ದಾರೆ. ಭಾಷೆ ನಮ್ಮ ತಾಯಿ ಇದ್ದಂತೆ, ಅದನ್ನು ಎಲ್ಲರೂ ಬೆಳೆಸಲು ಶ್ರಮಿಸಬೇಕು” ಎಂದು ಸಲಹೆ ನೀಡಿದರು.ಮಹಾನಗರ ಪಾಲಿಕೆ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, “ಕೊಂಕಣಿ ರಾಜ್ಯ ಮತ್ತು ರಾಷ್ಟ್ರದ ಗಡಿ ಮೀರಿ ಮಾನ್ಯತೆ ಪಡೆಯಬೇಕು. ತನ್ನ ವ್ಯಾಪ್ತಿ ಮೀರಿ ಈ ಭಾಷೆ ಹರಡಬೇಕು” ಎಂದು ಹೇಳಿದರು.ಪುಂಡಲೀಕ ನಾಯಕ ಮಾತನಾಡಿ, ಕೊಂಕಣಿಗರು ಪರಸ್ಪರ ಭೇಟಿಯಾದಾಗ ಕೊಂಕಣಿ ಭಾಷೆಯಲ್ಲೇ ವ್ಯವಹರಿಸಬೇಕು ಎಂದು ಸಲಹೆ ನೀಡಿದರು.ಹಿರಿಯ ಸಾಹಿತಿ ಶಾ. ಮಂ. ಕೃಷ್ಣರಾಯ ಮಾತನಾಡಿ, “ಕೊಂಕಣಿ ಸಾಹಿತ್ಯ ಇತರ ಭಾಷೆಗಳಿಗೂ ಅನುವಾದಗೊಳ್ಳಬೇಕು. ಇತರ ಭಾಷೆಗಳಿಗೆ ಅನುವಾದ ಮಾಡುವವರಿಗೆ ಸೂಕ್ತ ಸಂಭಾವನೆ ಸಿಗುವಂತಾಗಬೇಕು” ಎಂದು ಅಭಿಪ್ರಾಯಪಟ್ಟರು.ತಾನಾಜಿ ಹರ್ಲನಕರ ಮಾತನಾಡಿ, ಗೋವಾ ಕೊಂಕಣಿಯ ತವರೂರಾಗಿದೆ. ಇಂದಿನ ಜಾಗತೀಕರಣ ಸಂದರ್ಭದಲ್ಲಿ ಈ ಭಾಷೆಯನ್ನು ಬೆಳೆಸಬೇಕಾಗಿದೆ” ಎಂದು ಹೇಳಿದರು.ಸಾಹಿತಿ ಶಾ.ಮಂ. ಕೃಷ್ಣರಾಯ, ಪತ್ರಕರ್ತ ಎಂ.ಬಿ. ದೇಸಾಯಿ, ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಯೋಗ ಪಟು ಮುರಳೀಧರ ಪ್ರಭು ಅವರನ್ನು ಸನ್ಮಾನಿಸಲಾಯಿತು.ಗೋಕುಲದಾಸ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ವಿ. ಶೆಣೈ ನಿರೂಪಿಸಿದರು. ಸುನಿತಾ ಕಾಣೇಕರ ವಂದಿಸಿದರು. ಬಳಿಕ ಪುಂಡಲೀಕ ನಾಯಕ ಅಧ್ಯಕ್ಷತೆಯಲ್ಲಿ `ಭಾಷಾ ಬಾಂಧವ ಗೋಷ್ಠಿ~ ಹಾಗೂ ರಮೇಶ ವೇಳುಸ್ಕರ ಅಧ್ಯಕ್ಷತೆಯಲ್ಲಿ `ಕವಿಗೋಷ್ಠಿ~ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry