ಸೋಮವಾರ, ಏಪ್ರಿಲ್ 19, 2021
33 °C

ಕೊಂಕಣಿ ಸಾಹಿತ್ಯ ಸಮ್ಮೇಳನ 29ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಅಖಿಲ ಭಾರತ ಕೊಂಕಣಿ ಪರಿಷತ್ತಿನ 20ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಸಮ್ಮೇಳನ ತಾಲ್ಲೂಕಿನ ಸದಾಶಿವಗಡದ ಸದಿಚ್ಚಾ ಸಭಾಂಗಣದಲ್ಲಿ     ಏ. 29, 30 ಹಾಗೂ ಮೇ 1ರಂದು ನಡೆಯಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ ನಾಯ್ಕ ಹೇಳಿದರು. ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿ ಹಾಗೂ ಕೊಂಕಣಿ ಭಾಷಿಕರಲ್ಲಿ ಸಾಹಿತ್ಯದ ಜಾಗೃತಿ ಮೂಡಿಸುವಲ್ಲಿ ಸಮ್ಮೇಳನ ನೆರವಾಗಲಿದೆ ಎಂದರು.ಕೊಂಕಣಿ ಭಾಷೆ ಅತಿ ಪುರಾತನವಾದ ಭಾಷೆ. ರಾಜಾಶ್ರಯದ ಕೊರತೆ ಹಾಗೂ ಗೋವಾದಲ್ಲಿ ಪೊರ್ಚುಗೀಸ ದೊರೆಗಿದ್ದ ಕೊಂಕಣಿ ಭಾಷೆಯ ಮೇಲಿನ ತಾತ್ಸಾರ ಮನೋಭಾವದಿಂದ ಈ ಭಾಷೆ ಅಭಿವೃದ್ಧಿ ಕಾಣದೆ ಕತ್ತಲೆಯಲ್ಲಿ ಉಳಿಯಿತು ಎಂದರು. ಕೊಂಕಣಿ ಭಾಷೆಯ ಬಗ್ಗೆ 20ನೇ ಶತಮಾನದಲ್ಲಿ ಜಾಗೃತಿ ಉಂಟಾಗಿ ಅನೇಕ ಸಾಹಿತ್ಯದ ಪುಸಕ್ತಗಳು ಪ್ರಕಾಶಿತವಾದವು. ಆದರೆ ಕೊಂಕಣಿ ಭಾಷಿಕರು ಇತ್ತ ಬ್ರಿಟಿಷರ ಆಡಳಿತದಲ್ಲಿ ಮತ್ತು ಅತ್ತ ಗೋವಾದ ಪೋರ್ಚುಗೀಸ್ ಆಳ್ವಿಕೆಯಲ್ಲಿ ವಿಭಜನೆಗೊಂಡು ಭೌಗೋಳಿಕವಾಗಿ ದೂರವಾದರು. ದೇಶದ ನಾನಾ ಭಾಗಗಳ ಕೊಂಕಣಿ ಭಾಷಿಕರು ಒಂದುಕಡೆ ಸಮಾಗಮಗೊಳ್ಳಲು ಇಲ್ಲಿಯವರೆಗೆ ಸಾಧ್ಯವಾಗಲಿಲ್ಲ ಎಂದರು.ಕೊಂಕಣಿ ಭಾಷೆಯ ಬೆಳವಣಿಗೆಯ ಕುಂಠಿತ ಮತ್ತು ಅದರ ನಿರ್ಲಕ್ಷ್ಯತೆಯನ್ನು ಮನಗೊಂಡು ಕೊಂಕಣಿ ಭಾಷಿಕರಲ್ಲಿ ಕೊಂಕಣಿ ಭಾಷೆ ಬೆಳವಣಿಗೆಯ ಬಗ್ಗೆ ಸ್ವಾಭಿಮಾನದ ಕಿಚ್ಚು ಜಾಗೃತಗೊಳಿಸಲು ದೇಶದಲ್ಲಿ ಪ್ರಪ್ರಥಮ ಬಾರಿಗೆ ಕಾರವಾರದಲ್ಲಿ ಕೊಂಕಣಿ ಪರಿಷತ್ತು ಹುಟ್ಟಿಕೊಂಡಿತ್ತು. ನಂತರ ಜು. 8, 1939ರಲ್ಲಿ ಪ್ರಥಮ ಕೊಂಕಣಿ ಪರಿಷತ್ತಿನ ಸಮ್ಮೇಳನ ಕಾರವಾರದಲ್ಲಿ ಜರುಗಿತು ಎಂದು ಅವರು ವಿವರಿಸಿದರು.ಸುಮಾರು 72 ವರ್ಷಗಳ ಕಾಲ ಅಖಿಲ ಭಾರತ ಕೊಂಕಣಿ ಪರಿಷತ್ತು ಕೊಂಕಣಿ ಭಾಷೆ, ಸಂಸ್ಕೃತಿ, ಸಾಹಿತ್ಯ ಹಾಗೂ ಕಲೆಯ ಬಗ್ಗೆ ಜಾಗೃತಿ ಮೂಡಿಸುತ್ತ ಕೊಂಕಣಿ ಭಾಷಿಕರ ಸ್ವಾಭಿಮಾನದ ಬಗ್ಗೆ ಹೋರಾಡುತ್ತ ಬಂದಿದೆ. ಇದರ ಫಲವಾಗಿ ಕೊಂಕಣಿ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಲಾಯಿತು ಎಂದರು.ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ರಾಮಕೃಷ್ಣ ನಾಯ್ಕ ಮಾತನಾಡಿ, ಕೊಂಕಣಿ ಭಾಷೆಯನ್ನು ಒಂದು ವಿಷಯವಾಗಿ ಶಿಕ್ಷಣ ನೀಡಲು ಪಠ್ಯ ಪುಸ್ತಕಗಳನ್ನು ರಚಿಸಬೇಕು ಎಂದು ಕೇರಳ, ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಸರಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದೇವೆ ಎಂದರು.ಸ್ವಾತಂತ್ರ್ಯ ಪೂರ್ವ ಮತ್ತು ಭಾಷಾವಾರು ಪ್ರಾಂತ್ಯಗಳ ರಚನೆ ಪೂರ್ವದಿಂದಲೂ ಕೊಂಕಣಿ ಭಾಷಿಕರು ಬಹು ಸಂಖ್ಯಾತರಾಗಿದ್ದು ಮಾತೃಭಾಷೆ ಮತ್ತು ಸಂಸ್ಕೃತಿಗಳನ್ನು ಉಳಿಸಿಕೊಂಡ ಬಂದಿರುತ್ತಾರೆ. ಕೊಂಕಣಿ ಭಾಷಿಕರು ವಿಶಾಲ ಹೃದಯದಿಂದ ದೇಶದ ನಾನಾ ಭಾಗಗಳಲ್ಲಿ ಅನ್ಯ ಭಾಷೆಯ ಸಾಹಿತ್ಯಕ್ಕೂ ಸೇವೆ ಸಲ್ಲಿಸಿದ್ದಾರೆ ಎಂದರು.ಸಮಿತಿಯ ಕಾರ್ಯದರ್ಶಿ ಜಿ.ಎನ್.ಜಾಂಬಾವಳಿಕರ್, ಖಜಾಂಚಿ ಸುನಿತಾ ಕಾನೇಕರ್, ಜಂಟಿ ಕಾರ್ಯದರ್ಶಿ ವಿಷ್ಣು ಕೊಲಗೆಕರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.